UPSC ಯಿಂದ ನೇಮಕವಾದ ಅಧಿಕಾರಿಗಳು ದರೋಡೆಕೋರರು : ಕೇಂದ್ರ ಸಚಿವ ಬಿಶ್ವೇಶ್ವರ್‌ ತುಡು ವಿವಾದಾತ್ಮಕ ಹೇಳಿಕೆ

ಹೊಸದಿಲ್ಲಿ : ದೇಶದ ಉನ್ನತಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಯುಪಿಎಸ್‌ಸಿಯಿಂದ ನೇಮಕವಾಗುತ್ತಾರೆ. ಭಾರತದ ಕಾರ್ಯಾಂಗದಲ್ಲಿ ಯುಪಿಎಸ್‌ಸಿಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ಆದರೆ, ಇದರ ಬಗ್ಗೆ ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಬಿಶ್ವೇಶ್ವರ್‌ ತುಡು ವಿವಾದಾತ್ಮಕ ಹೇಳಿಕೆ ನೀಡಿದ್ದು, ಯುಪಿಎಸ್‌ ಮೂಲಕ ನೇಮಕಗೊಂಡಿರುವ ಹಲವು ಅಧಿಕಾರಿಗಳನ್ನು ದರೋಡೆಕೋರರು ಎಂದು ಕರೆದಿದ್ದಾರೆ.

ನಮ್ಮ ದೇಶದಲ್ಲಿ ಕೋಳಿ ಕಳ್ಳನಿಗೆ ಶಿಕ್ಷೆಯಾಗುತ್ತದೆ. ಆದರೆ, ಖನಿಜ ಮಾಫಿಯಾ ನಡೆಸುವ ಅಧಿಕಾರಿಯನ್ನು ಮುಟ್ಟಲು ಸಾಧ್ಯವಿಲ್ಲ. ಏಕೆಂದರೆ ವ್ಯವಸ್ಥೆ ಅವನನ್ನು ರಕ್ಷಿಸುತ್ತದೆ ಎಂದು ಬಿಶ್ವೇಶ್ವರ್‌ ತುಡು ಆರೋಪಿಸಿದರು. ವೈರಲ್‌ ಆಗಿರುವ ವಿಡಿಯೋದಲ್ಲಿ ಅವರು ವಿವಾದಾತ್ಮಕ ಹೇಳಿಕೆ ನೀಡಿರುವುದು ಕಂಡುಬಂದಿದೆ. ಕೇಂದ್ರ ಬುಡಕಟ್ಟು ವ್ಯವಹಾರಗಳು ಮತ್ತ ಜಲಶಕ್ತಿ ಮಂತ್ರಾಲಯದ ರಾಜ್ಯ ಸಚಿವರಾಗಿರುವ ಬಿಶ್ವೇಶ್ವರ್‌ ತುಡು, ಓಡಿಶಾದ ಬಾಲಸೋರ್ ಜಿಲ್ಲೆಯ ಬಲಿಪಾಲ್‌ನಲ್ಲಿರುವ ಸರ್ಕಾರಿ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಯುಪಿಎಸ್‌ಸಿ ಮೂಲಕ ನೇಮಕಗೊಂಡವರು ಅಧಿಕಾರಿಗಳು ಅತ್ಯಂತ ಜ್ಞಾನವುಳ್ಳ ವ್ಯಕ್ತಿಗಳು ಮತ್ತು ಯಾವಾಗಲೂ ಉನ್ನತ ಹುದ್ದೆಗಳಲ್ಲಿರುತ್ತಾರೆ ಎಂಬ ಕಲ್ಪನೆ ನನಗಿತ್ತು. ಆದರೆ ಈಗ ಯುಪಿಎಸ್‌ಸಿಯಿಂದ ನೇಮಕವಾದವರಲ್ಲಿ ಹೆಚ್ಚಿನವರು ದರೋಡೆಕೋರರು ಎಂದು ನಾನು ಭಾವಿಸುತ್ತೇನೆ. ಆದರೆ, ಶೇ.100ಕ್ಕೆ 100 ಅಧಿಕಾರಿಗಳು ಅದೇ ರೀತಿ ಇದ್ದಾರೆ ಎಂದು ನಾನು ಹೇಳುವುದಿಲ್ಲ. ಹಲವರು ದರೋಡೆಕೋರರು ಇದ್ದಾರೆ ಎಂದು ಬಿಶ್ವೇಶ್ವರ್‌ ತುಡು ಹೇಳಿದ್ದಾರೆ.

ಇದನ್ನೂ ಓದಿ : UPSC ಯಿಂದ ನೇಮಕವಾದ ಅಧಿಕಾರಿಗಳು ದರೋಡೆಕೋರರು : ಕೇಂದ್ರ ಸಚಿವ ಬಿಶ್ವೇಶ್ವರ್‌ ತುಡು ವಿವಾದಾತ್ಮಕ ಹೇಳಿಕೆ

ಭಾರತದ ಪ್ರಮುಖ ನೇಮಕಾತಿ ಸಂಸ್ಥೆ : ಯುಪಿಎಸ್‌ಸಿ ದೇಶದ ಪ್ರಧಾನ ಕೇಂದ್ರ ನೇಮಕಾತಿ ಆಯೋಗವಾಗಿದ್ದು, ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಉನ್ನತ ಅಧಿಕಾರಿಗಳನ್ನು ನೇಮಿಸುತ್ತದೆ. ಪ್ರತಿ ವರ್ಷ ವಿವಿಧ ನೇಮಕಾತಿ ಪರೀಕ್ಷೆಗಳನ್ನು ನಡೆಸುವ ಯುಪಿಎಸ್‌ಸಿ ಪ್ರಮುಖವಾಗಿ ನಾಗರೀಕ ಸೇವಾ ಪರೀಕ್ಷೆಯನ್ನು ನಡೆಸುತ್ತದೆ. ಇದರ ಮೂಲಕವೇ ಐಎಎಸ್‌, ಐಪಿಎಸ್‌, ಐಎಫ್‌ಎಸ್‌, ಐಆರ್‌ಎಸ್‌ ಅಧಿಕಾರಿಗಳು ನೇಮಕವಾಗುತ್ತಾರೆ. ಓಡಿಶಾದ ಸಂಸದರಾಗಿರುವ ಬಿಶ್ವೇಶ್ವರ್‌ ತುಡು ಅವರ ದಿಲ್ಲಿ ನಿವಾಸದ ಹಿಂದೆಯೇ ಯುಪಿಎಸ್‌ಸಿ ಕಚೇರಿ ಇದೆ. ಆರಂಭದಲ್ಲಿ ಯುಪಿಎಸ್‌ಸಿ ಬಗ್ಗೆ ನಾನು ಹೆಚ್ಚಿನ ಗೌರವ ಹೊಂದಿದ್ದೆ. ಆದರೆ, ಅದು ಈಗ ಬದಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕತೆಯ ಕೊರತೆ : ಇನ್ನು, ತಮ್ಮ ಭಾಷಣದಲ್ಲಿ ಮುಂದುವರೆದು ಬಿಶ್ವೇಶ್ವರ್‌ ತುಡು ಅವರು, ನಮ್ಮ ದೇಶದಲ್ಲಿ ಇಂತಹ ವಿದ್ಯಾವಂತರು ಇದ್ದರು ನಮ್ಮ ಸಮಾಜ ಏಕೆ ಭ್ರಷ್ಟಾಚಾರ ಮತ್ತು ಅನ್ಯಾಯದಲ್ಲಿ ಮುಳುಗಿದೆ ಎಂದು ಮಕ್ಕಳನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಕಾರಣ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ನೈತಿಕತೆಯ ಕೊರತೆ. ನಮ್ಮಲ್ಲಿ ಆಧ್ಯಾತ್ಮಿಕ ಶಿಕ್ಷಣ ಮತ್ತು ಆಲೋಚನೆಗಳ ಕೊರತೆ ಎಂದು ಹೇಳಿದ್ದಾರೆ. ಅದಲ್ಲದೇ, 2021ರಲ್ಲಿ ಮಯೂರ್‌ಭಂಜ್‌ನ ತಮ್ಮ ಕ್ಷೇತ್ರದಲ್ಲಿ ಓಡಿಶಾದ ಸರ್ಕಾರಿ ಅಧಿಕಾರಿಗಳು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಬಿಶ್ವೇಶ್ವರ್‌ ತುಡು ವಿವಾದವನ್ನು ಸೃಷ್ಟಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *