ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರವು ನಂಜನಗೂಡಿನ ಶ್ರೀನಂಜುಂಡೇಶ್ವರನ ಹುಂಡಿಯನ್ನು ಎಗರಿಸುವ ಶಾಸಕರ ಧೂರ್ತ ಪ್ರಯತ್ನಕ್ಕೆ ತಡೆ ಹಾಕಬೇಕು. ಈ ಬಗ್ಗೆ ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ದೇವರ ದುಡ್ಡನ್ನು ದೇವಾಲಯದ ಅಭಿವೃದ್ಧಿಗೇ ಬಳಸಬೇಕು ಎಂದು ಒತ್ತಾಯಿಸಿದ್ದಾರೆ.
ಸ್ವಯಂ ಘೋಷಿತ ಧರ್ಮೋದ್ಧಾರಕರು, ಹಿಂದೂ ಧರ್ಮವನ್ನು ಗುತ್ತಿಗೆಗೆ ಪಡೆದುಕೊಂಡವರೆಂದು ಬೀಗುವವರಿಗೆ ಧರ್ಮವೆಂದರೆ ಅಧಿಕಾರಕ್ಕಿರುವ ರಾಜಮಾರ್ಗವಾಗಿದೆ. ದೇವರ ಹುಂಡಿ ಎಂಬುದು ಲಜ್ಜೆಗೆಟ್ಟು ಹೊಡೆದುಕೊಳ್ಳುವ ಇವರಿಗೆ ನಾಚಕೆ, ಸಂಕೋಚ ಎನ್ನುವುದು ಕನಿಷ್ಠಕ್ಕಿಂತ ಕಡಿಮೆ ಎನ್ನುವುದಕ್ಕೆ ಇಲ್ಲಿದೆ ಸಾಕ್ಷಿ ಎಂದು ಟೀಕಾಪ್ರಹಾರ ನಡೆಸಿದ್ದಾರೆ. ನಾಡಿಗೆ ನಾಡೇ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುವ ನಂಜನಗೂಡಿನ ಶ್ರೀನಂಜುಂಡೇಶ್ವರ ದೇವರ ಹುಂಡಿಗೆ ಬಿಜೆಪಿ ಶಾಸಕ ಬಿ.ಹರ್ಷವರ್ದನ್ ಅವರು ಕೈ ಹಾಕಿರುವುದು ದೈವಕ್ಕೆ ಎಸಗಿದ ಅಪಮಾನ. ಇದು ಯೋಜನೆಗಳ ಹೆಸರಿನಲ್ಲಿ ದೇವರ ಹುಂಡಿಗೂ ಕನ್ನ ಕೊರೆಯುವ ಬಿಜೆಪಿಯ ನೈಜ ಜಾಯಮಾನ. ಕಮಲ ಪಕ್ಷ ಮತ್ತೊಮ್ಮೆ ಬೆತ್ತಲಾಗಿದೆ ಎಂದು ಆರೋಪಿಸಿದ್ದಾರೆ.
ಮುಜರಾಯಿ ದೇವಾಲಯದ ಆದಾಯ ಆಯಾ ದೇಗುಲದ ಅಭಿವೃದ್ಧಿಗೇ ಬಳಸಬೇಕು ಎನ್ನುವುದು ಕಾನೂನು. ಬಿಜೆಪಿ ಸರ್ಕಾರ ಕಾನೂನನ್ನು ಗಾಳಿಗೆ ಬಿಟ್ಟು ಶೇ.40 ಕ್ಕಾಗಿ ದೇವರ ದುಡ್ಡನ್ನೇ ನುಂಗಿನೀರು ಕುಡಿದು, ಆ ಹಣವನ್ನೂ ಚುನಾವಣೆಗೆ ಸುರಿಯಲು ಹೊರಟಿದೆ. ಪಾಪದ ಪಕ್ಷಕ್ಕೆ ಪ್ರಾಯಶ್ಚಿತ್ತ ತಪ್ಪದು. ಶ್ರೀನಂಜುಂಡೇಶ್ವರನ ಶಾಪ ತಟ್ಟದೆ ಇರದು ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಏಪ್ರಿಲ್ 19ರಂದು ನಾನು ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಸುತ್ತೇನೆ : ಹೆಚ್ಡಿಕೆ
ಹೇಳುವುದು ಒಂದು, ಮಾಡುವುದು ಇನ್ನೊಂದು. ಧರ್ಮ, ದೇವರು ಎನ್ನುವುದು ಬಿಜೆಪಿಗೆ ಮತಫಸಲು ಕೊಡುವ ಸಾಧನಗಳಷ್ಟೇ. ಶ್ರದ್ಧೆ, ಭಕ್ತಿ ಜನರದ್ದು. ಭುಕ್ತಿ ಮಾತ್ರ ಬಿಜೆಪಿಯದ್ದು. ನೀಚತನದ ಪರಮಾವಧಿ ಇದು. ಸಮುದಾಯ ಭವನಗಳ ನಿರ್ಮಾಣಕ್ಕೆ ದೇವರ ದುಡ್ಡೇ ಬೇಕೆ? ಕ್ಷೇತ್ರಕ್ಕೆ ಸರ್ಕಾರ ಕೊಟ್ಟ ಹಣ, ಶಾಸಕರ ವಿಶೇಷ ಅನುದಾನ ಇತ್ಯಾದಿಗಳೆಲ್ಲ ಎಲ್ಲಿ ಹೋದವು ಎಂದು ಅವರು ಪ್ರಶ್ನಿಸಿದ್ದಾರೆ.