ಒಳ ಮೀಸಲಾತಿ ಜಾರಿ : ತೀವ್ರಗೊಂಡ ಪ್ರತಿಭಟನೆ

ಕೆ.ಶಶಿಕುಮಾರ್ ಮೈಸೂರ್

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಳ ಮೀಸಲಾತಿಯಿಂದ ಅನ್ಯಾಯಕ್ಕೊಳಗಾಗಿರುವ ತಳ ಸಮುದಾಯದವರ ಆಕ್ರೋಶ ಹೆಚ್ಚಾಗುತ್ತಿದ್ದು ರಾಜ್ಯದ ವಿವಿಧೆಡೆ ಪ್ರತಿಭಟನೆ, ರಸ್ತೆ ತಡೆ ಮುಂತಾದ ಹೋರಾಟಗಳು ನಡೆಯುತ್ತಿವೆ. 

ಮೀಸಲಾತಿ ಜಾರಿಗೆ ತರುವುದಕ್ಕೆ ಪೂರಕವಾಗಿ ಹಲವು ಸಂವಿಧಾನಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನಂತರವಷ್ಟೇ ಮೀಸಲಾತಿಯ ಹಂಚಿಕೆ ಮಾಡಬೇಕು. ಆದರೆ ಯಾವುದೇ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದೆ ಚುನಾವಣೆಯ ಉದ್ದೇಶದಿಂದ ತರಾತುರಿಯಲ್ಲಿ ನಿರ್ಧಾರಗಳನ್ನು ರಾಜ್ಯದ ಬಿಜೆಪಿ ಸರ್ಕಾರ ಕೈಗೊಂಡಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. 

ತಳ ಸಮುದಾಯಗಳು ಹಾಗೂ ಅಲ್ಪಸಂಖ್ಯಾತ ವರ್ಗದವರು ತಮಗೆ ಮೀಸಲಾತಿಯ ವಿಭಜನೆಯಿಂದ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ ಎಂದು ಆರೋಪಿಸಿ ಹೋರಾಟಗಳನ್ನು ನಡೆಸುತ್ತಿವೆ. ಶಿಕಾರಿಪುರದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ ಜನರು ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಸೋಮವಾರ ನಡೆದಿದ್ದು ಇಂದೂ ಸಹ ಶಿವಮೊಗ್ಗ, ಬಾಗಲಕೋಟೆ ಮುಂತಾದೆಡೆ ಪ್ರತಿಭಟನೆಗಳು, ರಸ್ತೆ ತಡೆ ಚಳುವಳಿಗಳು ನಡೆಯುತ್ತಿವೆ. 

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ ಪ್ರಕರಣವು ಬಿಜೆಪಿಯ ಆಂತರಿಕ ಕುತಂತ್ರ ಎಂದು ಟೀಕಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೊಂದಲ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಮನೆ ಮೇಲೆ ಕಲ್ಲು ಹೊಡೆದಿದ್ದರೆ ಪರವಾಗಿಲ್ಲ. ಆದರೆ ಬಿಎಸ್‌ವೈ ಮನೆ ಮೇಲೆ ಕಲ್ಲು ಹೊಡೆಯುತ್ತಾರೆ ಅಂದರೆ ಇದು ಬಿಜೆಪಿಯ ಆಂತರಿಕ ಸಮಸ್ಯೆ. ಬಿಎಸ್‌ವೈ ಅವರನ್ನು ರಾಜಕೀಯವಾಗಿ ಮುಗಿಸಬೇಕು ಎಂಬ ತಂತ್ರ ಇದಾಗಿದೆ ಎಂದು ಕಿಡಿಕಾರಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ ಒಳ ಮೀಸಲಾತಿಯಿಂದ ಕೆಲವು ಸಮುದಾಯಗಳಿಗೆ ಅನ್ಯಾಯವಾಗಿದ್ದು ಅವರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟಿಸುವುದು ಅವರ ಹಕ್ಕು ಎಂದರು. 

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹುಡುಗಾಟದ ಮೀಸಲಾತಿಯನ್ನು ಜಾರಿಗೆ ತರುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಿದೆ. ಜಾತಿ ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸುವ ಮೂಲಕ ಚುನಾವಣೆಯ ಸಂದರ್ಭದಲ್ಲಿ ಲಾಭ ಪಡೆಯಲು ಹವಣಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. 

ಹೀಗೆ ಒಳ ಮೀಸಲಾತಿಯ ಉರಿಬೆಂಕಿ ರಾಜ್ಯದೆಲ್ಲೆಡೆ ವ್ಯಾಪಿಸುವ ಆತಂಕ ಸೃಷ್ಟಿಯಾಗಿದ್ದು ರಾಜ್ಯ ಸರ್ಕಾರ ಪ್ರತಿಭಟನೆಗಳನ್ನು ಹತ್ತಿಕ್ಕುವ ಭರದಲ್ಲಿ ಮತ್ತಷ್ಟು ಅನಾಹುತಗಳನ್ನು ಸೃಷ್ಟಿಸಲಿದೆಯೇ ಎಂಬ ಆತಂಕ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ. 

ಶಿವಮೊಗ್ಗಒಳ ಮೀಸಲಾತಿಯನ್ನು ವಿರೋಧಿಸಿ ಸೋಮವಾರ ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್‌ ಹಾಕಬೇಡಿ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಆದರೂ ಸಹ ತನಿಖೆ ನಡೆಸುತ್ತೇವೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. 

ಈ ಘಟನೆಗೆ ಸಂಬಂಧಿಸಿದಂತೆ ಕೇಸ್ ಹಾಕಬೇಡಿ ಎಂದು ಯಡಿಯೂರಪ್ಪ ಹೇಳಿದ್ದಾರೆ. ಆದರೆ ಕೆಲವು ಪೊಲೀಸರಿಗೆ ಕಲ್ಲು ತೂರಾಟದಿಂದ ಗಾಯಗಳಾಗಿರುವುದರಿಂದ ಘಟನೆ ಕುರಿತು ತನಿಖೆ ಮಾಡುತ್ತೇವೆ ಎಂದು ಅವರು ತಿಳಿಸಿದರು. 

ಸೋಮವಾರ ನಡೆದ ಘಟನೆ ಸಂಬಂಧ ಇಂದು ಆರಗ ಜ್ಞಾನೇಂದ್ರ ಅವರು ಶಿಕಾರಿಪುರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪ  ಕೇಸ್ ಹಾಕಬೇಡಿ ಎಂದಿದ್ದಾರೆ. ಆದರೆ ಕಲ್ಲು ತೂರಾಟದ ವೇಳೆ ಕೆಲವು ಪೊಲೀಸರಿಗೆ ಗಾಯಗಳಾಗಿವೆ. ಗಲಾಟೆಯಲ್ಲಿ ಕೆಲವರು ಕ್ರಿಮಿನಲ್ ಹಿನ್ನಲೆಯುಳ್ಳವರು ಸಹ ಭಾಗಿಯಾಗಿದ್ದಾರೆಆದ್ದರಿಂದ ಘಟನೆ ಕುರಿತು ತನಿಖೆ ಮಾಡುತ್ತೇವೆ ಎಂದರು

ಸಮಾಜದಲ್ಲಿ ಜಾತಿ ಜಾತಿಗಳ ನಡುವೆ ಸಂಘರ್ಷ ಉಂಟುಮಾಡುವಂತಹ ಹೇಳಿಕೆಗಳನ್ನು ನೀಡುವ ಹಾಗೂ ಬೆದರಿಕೆ ಹಾಕುವ ಬೆಳವಣಿಗೆಗಳು ಹಲವಾರು ನಡೆಯುತ್ತಿದ್ದರೂ ಅಂತಹವುಗಳ ಬಗ್ಗೆ ತುಟಿ ಬಿಚ್ಚದ ನಮ್ಮ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಯಡಿಯೂರಪ್ಪ ಅವರ ನಿವಾಸದ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಯಾರೂ ದೂರು ನೀಡದಿದ್ದರೂ ಸ್ವಯಂ ಪ್ರೇರಿತರಾಗಿ ತನಿಖೆ ನಡೆಸಲು ಉತ್ಸುಕತೆ ತೋರುತ್ತಿರುವ ಬಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. 

ಮತ್ತೆ ಪ್ರತಿಭಟನೆ : ಮೀಸಲಾತಿಯಲ್ಲಿ ಕಡಿತ ಖಂಡಿಸಿ ಕೆಲವು ಸಮುದಾಯಗಳು ನಡೆಸುತ್ತಿರುವ ಹೋರಾಟ ಇಂದು ಸಹ ಮುಂದುವರಿದಿದೆ.

ಮೀಸಲಾತಿ ಅಸಮಾಧಾನದ ಕಿಚ್ಚು ಶಿವಮೊಗ್ಗಕ್ಕೂ ಹಬ್ಬಿದ್ದು ಶಿವಮೊಗದ ಕುಂಚೇನಹಳ್ಳಿ ಗ್ರಾಮದ ನಿವಾಸಿಗಳು ಶಿಕಾರಿಪುರ-ಶಿವಮೊಗ್ಗ ಹೆದ್ದಾರಿಯ ಮಧ್ಯದಲ್ಲಿ ತೆಂಗಿನ ಗರಿಗಳು ಹಾಗೂ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. 

ಈ ದಿಢೀರ್‌ ಪ್ರತಿಭಟನೆಯಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು ಸಂಚಾರ ಅಸ್ತ್ಯವ್ಯಸ್ತವಾಗಿದೆ. ಶಿವಮೊಗ್ಗ ಮತ್ತು ಶಿಕಾರಿಪುರದ ನಡುವೆ ಸಂಚರಿಸುವ ವಾಹನಗಳು ಮುಂದೆ ಚಲಿಸಲಾಗಿದೆ ಎರಡು ಕಿಲೋಮೀಟರ್‌ವರೆಗೂ ಸಾಲುಗಟ್ಟಿ ನಿಂತಿವೆ. 

ಬಾಗಲಕೋಟೆಯಲ್ಲೂ ಆಕ್ರೋಶ 

ಒಳಮೀಸಲಾತಿ ಕುರಿತು ಸಿಡಿದೆದ್ದಿರುವ ಬಂಜಾರ ಸಮುದಾಯದವರು ಇಂದು ಬಾಗಲಕೋಟೆಯ ಅಮೀನಗಢ ಹಾಗೂ ಹುನಗುಂದ ಗಿರಿಜನ ತಾಂಡಾಗಳಲ್ಲಿ ಪ್ರತಿಭಟನೆ ನಡೆಸಿದರು. 

ರಸ್ತೆ ಮಧ್ಯೆ ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದ ಅವರು ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. 

ಇದಲ್ಲದೆ ಬಾಗಲಕೋಟೆ ತಾಲ್ಲೂಕಿನ ಮುಚಖಂಡಿ ತಾಂಡಾದಲ್ಲಿ ಮನೆಗಳು ಹಾಗೂ ವಿದ್ಯುತ್‌ ಕಂಬಗಳಿಗೆ ಕಟ್ಟಿದ್ದ ಬಿಜೆಪಿ ಧ್ವಜಗಳನ್ನು ತೆರವುಗೊಳಿಸಿ ಲಂಬಾಣಿ ಸಮುದಾಯಕ್ಕೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿದರಲ್ಲದೆ ತಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು. 

 

Donate Janashakthi Media

Leave a Reply

Your email address will not be published. Required fields are marked *