ಬಸವರಾಜ, ಪೂಜಾರ, ಹಾವೇರಿ.
ಸಂಪುಟ – 06, ಸಂಚಿಕೆ 42, ಅಕ್ಟೋಬರ್ 14, 2012
ನೀ ಉತ್ತಿ ಬಿತ್ತಿ ಬೆಳೆದ
ಫಲವ ನೀನು ಉಣಲಿಲ್ಲ
ಬೆವರ, ರಕ್ತ ಬಸಿದರೂ
ನಿನಗೆ ನೇಣ ಕುಣಿಕೆ ತಪ್ಪಲಿಲ್ಲ
ಅವರು ಬದುಕಲು ನೀ ಬೆಳಿಬೇಕಲ್ಲ
ನಿನ್ನ ಬದುಕು ಅವರಿಗೆ ಬೇಕಿಲ್ಲ……..
ನಿನ್ನಿಂದ ಸಂಭ್ರಮದಿ ಉಣತಾರ
ಕಣ್ಣೀರಾಗ ನಿನ ಕೈಯ ತೊಳಿಸ್ತಾರ
ನೀನು ಬದುಕುವ ಜೊತೆಗೆ
ಜಗ ಬದುಕಲಿ ಎಂಬ ನಿನ ಧರ್ಮ
ನೀನೇ ಬದುಕದಂಗಾಗೈತಿ
ಅವರ ಪಾಲಸಿಗಳ ಮರ್ಮ
ನೀನೆ ಈ ರಾಷ್ಟ್ರದ ಬೆನ್ನೆಲುಬು
ಹೆಮ್ಮೆಯಿಂದಲೆ ಹೇಳತಾರ
ನಿನ್ನ ಬೆನ್ನಿಗಂಟಿದ ಹೊಟ್ಟೆನೋಡಿ
ಚೆ ಚೆ ಹಿಂಗಾಗಬಾರದಿತ್ತು ಅಂತಾರ
ನೀನು ಬೆಳೆವುದು ಎಲ್ಲರಿಗಾಗಿ ಅಂತಾರ
ನಿನ್ನ ಬೆಳೆಯ ನಿನಗಿಲ್ದಂಗ ಮಾಡ್ಯಾರ
ಮಕ್ಕಳ ಸಾಲಿ, ಮನಿ ಸಂಗತಿ
ನೀ ಚಿಂತಿ ಮಾಡಾಂಗಾಯ್ತು
ಬಡ್ಡಿರೊಕ್ಕ ತಂದು ಸಾಲ ತೀರಿಸ್ದ
ಸಾವಿಗೆ ಶರಣಾಗುವಂಗಾಯ್ತು
ನೀ ಸತ್ತರೂ ಇವರಿಗೇನಾಗಲ್ಲ
ಆದರೂ ಚುನಾವಣೆಗೊಮ್ಮೆ
ನಿನ್ನ ಇವರು ಮರೆಯೊಂಗಿಲ್ಲ
ನಾವಿರೋದೆ ರೈತರಿಗಾಗಿ ಅಂತಾರ
ನೀ ಗೊಬ್ಬರ ಬೀಜ ಕೇಳಿದರ……….
ನಿನ ಮ್ಯಾಲ ಗೋಲಿಬಾರ್ ಮಾಡ್ತಾರ
ನಿನಗ ಹಿಂಗಾದ್ರ ಜಗದ ಗತಿ ಏನು
ನೇಣಿಗೆ ತಳ್ಳುವರನ, ನೀ ತಳ್ಳಿ ಏಳು
ನಿನ ಜಗದ ಬೆಳೆಗೆ ತೊಡಕಾದ………
ಈ ಕಳೆ ಕಸವ ಕಿತ್ತೊಗೆದು ನೀ ಬಾಳು
0