ಮೀಸಲಾತಿ ಪ್ರಮಾಣ ಪ್ರಕಟ: ಲಿಂಗಾಯತರಿಗೆ ಶೇ 7; ಎಸ್​ಸಿ ಒಳಮೀಸಲಾತಿ, ಒಕ್ಕಲಿಗರಿಗೆ ಶೇ 6: ಮುಸ್ಲಿಮರ ಓಬಿಸಿ ಕೋಟಾ ಇಡಬ್ಲ್ಯೂಎಸ್‌ ಗೆ ವರ್ಗ

ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯ ಸರ್ಕಾರ ದಲಿತ ಸಮುದಾಯಕ್ಕೆ ಒಳಮೀಸಲಾತಿ ಪ್ರಮಾಣವನ್ನು ಬಿಡುಗಡೆಗೊಳಿಸಿದ್ದು, ಅವಕಾಶ ವಂಚಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಒಳಮೀಸಲಾತಿ ಪ್ರಕಟಿಸಿದೆ.

ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಸ್ಸಿ ಸಮುದಾಯಕ್ಕೆ ಒಳ ಮೀಸಲಾತಿ ನೀಡಲು ಸಂಪುಟ ನಿರ್ಧಾರ ಕೈಗೊಂಡಿದೆ. ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಜನಸಂಖ್ಯೆಗೆ ಅನುಗುಣವಾಗಿ ನೀಡಲಾಗಿದೆ ಎಂದರು.

ಇದಲ್ಲದೇ, ವೀರಶೈವ ಲಿಂಗಾಯತರ 2ಡಿ ಮತ್ತು ಒಕ್ಕಲಿಗರ 2ಸಿ ಪ್ರವರ್ಗಕ್ಕೆ ಮೀಸಲಾತಿ ನೀಡಿ ಒಪ್ಪಿಗೆ ನೀಡಲಾಗಿದೆ. ಇತ್ತ 2ಬಿ ಅಡಿಯಲ್ಲಿನ ಮುಸ್ಲಿಂ ಸಮುದಾಯದ 2ಡಿ ಮತ್ತು 2ಸಿ ಮೀಸಲಾತಿಗಾಗಿ ಸರ್ಕಾರ ಕತ್ತರಿ ಹಾಕಿದೆ. ಒಕ್ಕಲಿಗರಿಗೆ 2ಸಿ ಯಡಿ 6% ಮತ್ತು ವೀರಶೈವ ಲಿಂಗಾಯತರಿಗೆ 2ಡಿ ಯಡಿ 7% ಮೀಸಲಾತಿ ನೀಡಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಒಳಮೀಸಲಾತಿ

ಒಳಮೀಸಲಾತಿ ಸಂಬಂಧ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ದರ್ಜೆ ಮಟ್ಟದ ಸಮಿತಿ ರಚಿಸಲಾಗಿತ್ತು. ಅದರ ಪ್ರಕಾರ ಎಸ್​ಸಿ ಮೀಸಲಾತಿಯಡಿ ಎಲ್ಲರಿಗೂ ನ್ಯಾಯ ಸಿಗಬೇಕು. ಅವರ ಜನಸಂಖ್ಯೆ ಆಧಾರದಲ್ಲಿ ಒಳಮೀಸಲಾತಿ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದನ್ನು ಓದಿ: ಪರಿಶಿಷ್ಟ ಜಾತಿಗಳ ಒಳಮೀಸಲಾತಿ: ಸಚಿವ ಸಂಪುಟದ ಉಪ ಸಮಿತಿ ರಚನೆ

ಆರ್ಟಿಕಲ್‌ 342 ಅನ್ವಯ ಎಸ್​ಸಿಗಳನ್ನು ನಾಲ್ಕು ಗುಂಪಲ್ಲಿ ವರ್ಗೀಕರಿಸಲಾಗಿದೆ. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯ ಪ್ರಕಾರ ಪರಿಶಿಷ್ಟ ಜಾತಿಯ 101 ಉಪಜಾತಿಗಳನ್ನು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡುವಂತೆ ಶಿಫಾರಸು ಮಾಡಲಾಗಿದೆ. ಎಸ್​ಸಿ ಎಡ, ಎಸ್​ಸಿ ಬಲ, ಸ್ಪರ್ಶಿಯರು, ಇತರರೆಂದು ನಾಲ್ಕು ವರ್ಗಗಳಾಗಿ ವಿಂಗಡನೆ ಮಾಡಲಾಗಿದೆ. ಸಂಪುಟ ಉಪಸಮಿತಿ ವರದಿಯ ಆಧಾರದಲ್ಲಿ ಎಡಕ್ಕೆ 6%, ಬಲಕ್ಕೆ 5.5%, ಸ್ಪರ್ಶಿಯರು 4.5%, ಇತರರಿಗೆ 1% ಒಳ ಮೀಸಲಾತಿ ನೀಡಲು ಒಪ್ಪಿಗೆ ನೀಡಲಾಗಿದೆ.

ಶೇ.33.4ರಷ್ಟಿರುವ ಒಂದನೇ ಗುಂಪಿಗೆ (ಎಡಗೈ ಪ.ಜಾ) ಶೇ.6, ಶೇ.32ರಷ್ಟಿರುವ (ಬಲಗೈ ಪ.ಜಾ) ಎರಡನೇ ಗುಂಪಿಗೆ ಶೇ.5, ಶೇ.23.64ರಷ್ಟಿರುವ (ಸ್ಪರ್ಶ ಪರಿಶಿಷ್ಟ ಜಾತಿ) ಮೂರನೇ ಗುಂಪಿಗೆ ಶೇ.3 ಮತ್ತು ಶೇ.4.65 ರಷ್ಟಿರುವ ಇತರ ಪರಿಶಿಷ್ಟ ಜಾತಿಯವರಿಗೆ ಶೇ.1ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡುವಂತೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಶಿಫಾರಸು ಮಾಡಿತ್ತು.

ಇದನ್ನು ಓದಿ: ʻಒಳ ಮೀಸಲಾತಿʼ ಮತ್ತು ದಲಿತರು: ಸಾಧಕ ಬಾಧಕಗಳು

ಇದೇ ವೇಳೆ ಸ್ಪರ್ಶ್ಯ ಜಾತಿಗಳಾದ ಲಂಬಾಣಿ, ಬೋವಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿಯ ಗುಂಪಿನಿಂದ ಹೊರಗಿಡಬೇಕೆಂಬ ಬೇಡಿಕೆಯನ್ನು ಆಯೋಗ ತಿರಸ್ಕರಿಸಿದೆ. ಸಮೀಕ್ಷೆಯ ಪ್ರಕಾರ ಎಡಗೈ ಗುಂಪಿನ (ಮಾದಿಗ ಜಾತಿ) ಜನಸಂಖ್ಯೆ 32,35,517 (ಶೇ. 33.47), ಬಲಗೈ ಗುಂಪಿನ (ಹೊಲೆಯ ಜಾತಿ) ಜನಸಂಖ್ಯೆ 30,93,693 (ಶೇ. 32.01), ಇತರೆ ಪರಿಶಿಷ್ಟ ಜಾತಿಗಳು 4,49,879 (ಶೇ. 46.5) ಮತ್ತು ಸ್ಪೃಶ್ಯ ಜಾತಿಗಳ ಜನಸಂಖ್ಯೆ 22,84,642 (ಶೇ. 23.64) ಇದೆ. ಸರ್ಕಾರ ಪರಿಶಿಷ್ಟ ಜಾತಿಗಿರುವ 17% ಮೀಸಲಾತಿಯನ್ನು ಸಂಪುಟ ಉಪಸಮಿತಿ ವರದಿಯ ಆಧಾರದಲ್ಲಿ ಎಡಕ್ಕೆ 6%, ಬಲಕ್ಕೆ 5.5%, ಸ್ಪರ್ಶಿಯರು 4.5%, ಇತರರಿಗೆ 1%ರಂತೆ ಒಳ ಮೀಸಲಾತಿ ನೀಡಲು ಒಪ್ಪಿಗೆ ನೀಡಲಾಗಿದೆ.

ಮುಸ್ಲಿಂ ಮೀಸಲಾತಿಗೆ ಕತ್ತರಿ

2ಬಿ ಅಡಿಯಲ್ಲಿದ್ದ ಮುಸ್ಲಿಂ ಸಮುದಾಯದ 4% ಮೀಸಲಾತಿಗೆ ಬಿಜೆಪಿ ಸರ್ಕಾರ ಸಂಪೂರ್ಣ ಕತ್ತರಿ ಹಾಕಿದೆ. ಈ 4% ಮೀಸಲಾತಿಯನ್ನು ಹೊಸದಾಗಿ ಸೃಷ್ಟಿ ಮಾಡಲಾಗಿರುವ ಒಕ್ಕಲಿಗರಿಗಾಗಿನ 2ಸಿ ಪ್ರವರ್ಗ ಹಾಗೂ ವೀರಶೈವ ಲಿಂಗಾಯತರಿಗಾಗಿನ 2ಡಿ ಪ್ರವರ್ಗಕ್ಕೆ ತಲಾ 2%ರಂತೆ ಹಂಚಿಕೆ ಮಾಡಿ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ.

ಆ ಮೂಲಕ ಒಕ್ಕಲಿಗರಿಗೆ 2ಸಿ ಅಡಿಯಲ್ಲಿ ಶೇ. 6 ಮತ್ತು ವೀರಶೈವ ಲಿಂಗಾಯತರಿಗೆ 2ಡಿ ಅಡಿಯಲ್ಲಿ ಶೇ. 7 ಮೀಸಲಾತಿ ನೀಡಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. 2ಸಿ ಅಡಿ ಒಕ್ಕಲಿಗರಿಗೆ 4% ಇದ್ದ ಮೀಸಲಾತಿಗೆ 2% ಸೇರ್ಪಡೆಯಾಗಿ 6%ಗೆ ಏರಿಕೆಯಾಗಿದೆ‌. ಇನ್ನು 2ಡಿ ಅಡಿಯಲ್ಲಿ ಶೇ.5ರಷ್ಟು ಇದ್ದ ಮೀಸಲಾತಿಗೆ 2% ಸೇರ್ಪಡೆಯಾಗಿ ಶೇ. 7ಕ್ಕೆ ಮೀಸಲಾತಿ ಏರಿಕೆ ಮಾಡಲಾಗಿದೆ.

ಮುಸ್ಲಿಂ ಮೀಸಲಾತಿ ಇಡಬ್ಲ್ಯೂಎಸ್‌ ಗೆ ವರ್ಗಾವಣೆ

2ಬಿ ಅಡಿಯಲ್ಲಿ ಇದ್ದ 4% ಮುಸ್ಲಿಂ ಮೀಸಲಾತಿಗೆ ಸಂಪೂರ್ಣ ಕತ್ತರಿ ಹಾಕಲಾಗಿದೆ. ಈಗ ಅದರಲ್ಲಿ ಇರುವ ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯದವರನ್ನು ಇಡಬ್ಲ್ಯೂಎಸ್‌ ನ ಶೇ.10 ಮೀಸಲಾತಿಗೆ ವರ್ಗಾ ಮಾಡಲು ನಿರ್ಧರಿಸಲಾಗಿದೆ.

ಇದನ್ನು ಓದಿ: ರಾಜ್ಯ ಸರ್ಕಾರ ಲಿಂಗಾಯತ-ಒಕ್ಕಲಿಗರ ಮೀಸಲಾತಿಯನ್ನು ತಿರುಗಾಮುರಗಾ ಮಾಡಿದೆ: ಶಾಮನೂರು ಶಿವಶಂಕರಪ್ಪ

2ಬಿ ಧಾರ್ಮಿಕ ಅಲ್ಪಸಂಖ್ಯಾತರರಿಗೆ ಮೀಸಲಾತಿ ನೀಡುವ ಅವಕಾಶ ಇಲ್ಲ. ಆಂಧ್ರಪ್ರದೇಶ ಹೈಕೋರ್ಟ್ ಧಾರ್ಮಿಕ ಅಲ್ಪಸಂಖ್ಯಾತ ಮೀಸಲಾತಿಯನ್ನು ವಜಾಗೊಳಿಸಿತ್ತು. ಮುಸ್ಲಿಂ ಸಮುದಾಯದ ಕೆಲ ಉಪಜಾತಿಗಳು 2ಎ ಯಡಿ, ಪ್ರವರ್ಗ 1ರಲ್ಲೂ ಮೀಸಲಾತಿ ಪಡೆಯುತ್ತಿದ್ದರು.

2ಬಿ ಅಡಿಯಲ್ಲಿ ಮುಸ್ಲಿಮರಿಗೆ ನೀಡಲಾಗುತ್ತಿರುವ ಸಂಪೂರ್ಣ 4% ಮೀಸಲಾತಿಗೆ ಕತ್ತರಿ ಹಾಕಲಾಗಿದೆ. ಅದರಲ್ಲಿನ ಬಡ ಮುಸ್ಲಿಂಮರಿಗೆ ಇಡಬ್ಲ್ಯೂಎಸ್ ನಡಿ ಮೀಸಲಾತಿ ನೀಡಲಾಗುವುದು ಎಂದಿದ್ದಾರೆ.

ಮುಸ್ಲಿಮರ ಮೀಸಲಾತಿ ರದ್ದು-ರಾಜಕೀಯ ಲಾಭದ ದುರುದ್ದೇಶ: ಸಿದ್ದರಾಮಯ್ಯ

ಇತರ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾದಡಿಯಲ್ಲಿದ್ದ ಮುಸ್ಲಿಮರ ಶೇಕಡಾ 4 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, “ರಾಜ್ಯ ಸರ್ಕಾರ ಘೋಷಿಸಿರುವ ಪರಿಷ್ಕೃತ ಮೀಸಲಾತಿ ನೀತಿ ‘ಕನ್ನಡಿಯೊಳಗಿನ ಗಂಟು’ ಅಷ್ಟೆ. ಚುನಾವಣೆಯಲ್ಲಿ ರಾಜಕೀಯ ಲಾಭದ ದುರುದ್ದೇಶದ ಈ ಮೀಸಲಾತಿ ನೀತಿಯಿಂದ ಯಾವ ಸಮುದಾಯಕ್ಕೂ ಲಾಭ ಇಲ್ಲ. ಇಂತಹ ಗಿಮಿಕ್ ಗಳಿಗೆ ಜನ ಬಲಿಯಾಗಬಾರದು’’ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ: ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶ: ಒಳ ಮೀಸಲಾತಿ ಜಾರಿ ಸೇರಿ 15 ನಿರ್ಣಯ

ಹಿಂದುಳಿದ ಜಾತಿಗುಂಪಿನಲ್ಲಿದ್ದ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇಕಡಾ 4 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ ಒಕ್ಕಲಿಗ ಮತ್ತು ಲಿಂಗಾಯತರಿಗೆ ಹಂಚಲಾಗಿದೆ. ಒಬ್ಬರಿಂದ ಕಿತ್ತು ಇನ್ನೊಬ್ಬರಿಗೆ ನೀಡುವ ಮೂಲಕ ಸಮುದಾಯಗಳ ನಡುವೆ ವೈಮನಸ್ಸು ಬೆಳೆಯುವಂತೆ ಮಾಡುವುದು ಬಿಜೆಪಿಯ ದುರುದ್ದೇಶ. ಮುಸ್ಲಿಮರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲಾಗಿರುವ ಮೀಸಲಾತಿಯನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರೂ ಇದು ಸುಲಭ ಸಾಧ್ಯ ಅಲ್ಲ. ಬೇರೆ ರಾಜ್ಯಗಳಲ್ಲಿಯೂ ಮುಸ್ಲಿಮರು ಇರುವ ಕಾರಣ ಒಂದು ರಾಜ್ಯದ ವ್ಯಾಪ್ತಿಯಲ್ಲಿ ಮೀಸಲಾತಿ ಮರುಹಂಚಿಕೆ ಮಾಡಲು ಸಾಧ್ಯ ಇಲ್ಲ ಎಂದು ಉಲ್ಲೇಖಿಸಿದ್ದಾರೆ.

ಒಳಮೀಸಲಾತಿ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ, ʻʻಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿಯ ಅನುಷ್ಠಾನ ಒಂದು ದೀರ್ಘ ಪ್ರಕ್ರಿಯೆ. ಇದಕ್ಕಾಗಿ ಸಂವಿಧಾನದ ಪರಿಚ್ಛೇದ 341ಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ಈ ಬಗ್ಗೆ ಸಂಪುಟ ಕೈಗೊಂಡಿದ್ದ ತೀರ್ಮಾನವನ್ನು ಇಲ್ಲಿಯ ವರೆಗೆ ಕೇಂದ್ರ ಸರ್ಕಾರಕ್ಕೆ ಕಳಿಸದೆ ಇರುವುದು ರಾಜ್ಯ ಸರ್ಕಾರದ ಅಪ್ರಾಮಾಣಿಕತೆಗೆ ಸಾಕ್ಷಿʼʼ ಎಂದಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *