ಮೈಸೂರು: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅಸಂಬದ್ಧ ಪ್ರತಿಕ್ರಿಯೆ ನೀಡಿರುವುದನ್ನು ಖಂಡಿಸಿ ಒಕ್ಕಲಿಗ ಸಂಘಟನೆಗಳು ಇಂದು ರಂಗಾಯಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ಒಕ್ಕಲಿಗ ಸಂಘಟನೆಗಳ ನೂರಕ್ಕೂ ಹೆಚ್ಚು ಕಾರ್ಯಕರ್ತರು ಇಂದು ರಂಗಾಯಣದ ಮುಂದೆ ಪ್ರತಿಭಟನೆ ನಡೆಸಿ ಅಡ್ಡಂಡ ಕಾರ್ಯಪ್ಪ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಂಗಾಯಣದ ನಿರ್ದೇಶಕರಾಗಿದ್ದುಕೊಂಡು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಿರುವ ಹಾಗೂ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುತ್ತಿರುವ ಅಡ್ಡಂಡ ಕಾರ್ಯಪ್ಪ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಬೇಕು. ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿರುವ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಟಿಪ್ಪು ಸುಲ್ತಾನನನ್ನು ಉರಿಗೌಡ ಹಾಗೂ ನಂಜೇಗೌಡ ಎಂಬುವವರು ಕೊಂದರು ಎಂದು ಬಿಂಬಿಸಲಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಿನಿಮಾ ಮಾಡಲು ಮುಂದಾಗಿದ್ದ ಸಚಿವ ಮುನಿರತ್ನ ಅವರನ್ನು ನಿರ್ಮಲಾನಂದನಾಥ ಸ್ವಾಮೀಜಿ ಅವರು ಕರೆದು ಆ ಪ್ರಯತ್ನ ಕೈಬಿಡುವಂತೆ ಸಲಹೆ ನೀಡಿದ ಬೆಳವಣಿಗೆಗೆ ಸಂಬಂಧಿಸಿ ಅಡ್ಡಂಡ ಕಾರ್ಯಪ್ಪ ಹೇಳಿಕೆ ನೀಡಿದ್ದರು.
ಒಕ್ಕಲಿಗ ಸಮುದಾಯದ ರಕ್ಷಣೆ ಮಾಡುವುದು ಆ ಸಮುದಾಯದ ಸ್ವಾಮೀಜಿಗಳ ಕೆಲಸ. ಹಾಗೆಂದು ಉರಿಗೌಡ ಮತ್ತು ನಂಜೇಗೌಡರ ಕುರಿತು ಚರ್ಚೆ ನಡೆಯಲೇಬಾರದು ಎಂದು ಅವರು ಹೇಳಿದ್ದು ಸರಿಯಲ್ಲ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದ್ದರು.
ನಿರ್ಮಲಾನಂದನಾಥ ಸ್ವಾಮೀಜಿಗೆ ಹೆಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಮಾತ್ರ ಒಕ್ಕಲಿಗ ನಾಯಕರು. ಬಿಜೆಪಿಯ ಸಿ.ಟಿ.ರವಿ, ಅಶ್ವತ್ಥ ನಾರಾಯಣ ಅವರೆಲ್ಲ ಒಕ್ಕಲಿಗ ಸಮುದಾಯದವರಾದರೂ ಸ್ವಾಮೀಜಿಗೆ ಅವರು ಬೇಕಿಲ್ಲ ಎಂಬ ರಾಜಕೀಯಪ್ರೇರಿತ ಹೇಳಿಕೆಯನ್ನು ಸಹಾ ಅಡ್ಡಂಡ ಕಾರ್ಯಪ್ಪ ನೀಡಿದ್ದರು.
ನಿರ್ಮಲಾನಂದನಾಥ ಸ್ವಾಮೀಜಿ ಒಕ್ಕಲಿಗ ಸಮುದಾಯಕ್ಕಾಗಿ ಮಾತ್ರ ಇದ್ದಾರೆ. ಬೇರೆಯವರಿಗೆ ಅವರು ಸ್ವಾಮೀಜಿ ಅಲ್ಲ. ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿಕೆ ನೀಡಿದ್ದರು. ಕಾರ್ಯಪ್ಪ ನೀಡಿರುವ ಈ ಹೇಳಿಕೆಯಿಂದ ನಮ್ಮ ಸಮುದಾಯದ ಸ್ವಾಮೀಜಿಗಳಿಗೆ ಅಗೌರವ ಉಂಟಾಗಿದ್ದು ನಮ್ಮ ಸಮುದಾಯದವರ ಮನಸಿಗೆ ನೋವಾಗಿದೆ ಎಂದು ಪ್ರತಿಭಟನೆಯ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯದ ಮುಖಂಡರು ಆರೋಪಿಸಿದರು.
ನಂತರ ರಂಗಾಯಣ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಇದೀಗ ರಂಗಾಯಣವನ್ನು ಒಳಗೊಂಡಿರುವ ಕಲಾಮಂದಿರದ ಆವರಣದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ ಮಾಡಲಾಗಿದೆ.