ರ‍್ಯಾಪಿಡೋ ಬೈಕ್‌ ಟ್ಯಾಕ್ಸಿ ನಿಷೇಧಕ್ಕೆ ಜಗ್ಗದ ಸರ್ಕಾರ; ಆಟೋ ಚಾಲಕರ ಆಕ್ರೋಶ-ನೂರಾರು ಮಂದಿ ಬಂಧನ

ಬೆಂಗಳೂರು: ಆಪ್‌ ಆಧಾರಿತ ರ‍್ಯಾಪಿಡೋ ಬೈಕ್‌ ಟ್ಯಾಕ್ಸಿ ಸೇವೆ ರದ್ದುಪಡಿಸಬೇಕೆಂದು ಇಂದು(ಮಾರ್ಚ್‌ 20) ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟದಿಂದ ಆಟೋ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಹೋರಾಟದ ಹಿನ್ನೆಲೆಯಲ್ಲಿ ಆಟೋಗಳಿಗೆ ಕಪ್ಪು ಬಾವುಟಗಳನ್ನು ಕಟ್ಟಿಕೊಂಡು ನಗರದ ರೈಲ್ವೇ ನಿಲ್ದಾಣದಿಂದ ಮುಖ್ಯಮಂತ್ರಿ ಮನೆ ಮುತ್ತಿಗೆ ಹಾಕಲು ಮುಂದಾಗುತ್ತಿದ್ದತೆಯೇ ಪೊಲೀಸರು ಬಂಧಿಸಿದ್ದಾರೆ.

ನಗರದ ವಿವಿಧ ಭಾಗಗಳಿಂದ ರೈಲ್ವೇ ನಿಲ್ದಾಣದಲ್ಲಿ ಚಾಲಕರು ಜಮಾವಣೆಗೊಳ್ಳುತ್ತಿದ್ದಂತೆ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲವೆಂದು ಪೊಲೀಸರು ಚಾಲಕರನ್ನು ಬಂಧಿಸಿ ಕರೆದೊಯೈದರು. ಈ ಸಂದರ್ಭದಲ್ಲಿ ಮಾತನಾಡಿದ ಆಟೋರಿಕ್ಷಾ ಡ್ರೈವರ‍್ಸ್‌ ಯೂನಿಯನ್‌(ಎಆರ್‌ಡಿಯು-ಸಿಐಟಿಯು) ಅಧ್ಯಕ್ಷ ಸಿ.ಎನ್.ಶ್ರೀನಿವಾಸ್‌, ಸರ್ಕಾರಕ್ಕೆ ಆಟೋ ಚಾಲಕ ಸಂಘಟನೆಗಳು ಈಗಾಗಲೇ ಮೂರು ದಿನಗಳ ಗಡುವು ನೀಡಿ, ರ‍್ಯಾಪಿಡೋ ಬೈಕ್‌ ಟ್ಯಾಕ್ಸಿ ನಂತಹ ಅನಧಿಕೃತ ಸಂಚಾರಿ ಸೇವೆಗಳನ್ನು ನಿಷೇಧಿಸಬೇಕೆಂದು ಆಗ್ರಹಿಸುತ್ತಿದ್ದೇವೆ. ಆದರೆ, ರಾಜ್ಯ ಬಿಜೆಪಿ ಸರ್ಕಾರ ಆನ್‌ಲೈನ್‌ ಸೇವೆ ಆಧಾರಿತ ಖಾಸಗಿ ಸಂಸ್ಥೆಗಳಿಗೆ ಸಹಾಯವಾಗುವಂತೆ ತಮ್ಮ ಹಠಮಾರಿ ಧೋರಣೆಯನ್ನು ಕೈಬಿಡುತ್ತಿಲ್ಲ. ಇದರಿಂದ ಆಟೊ ಚಾಲಕರು ಪ್ರತಿದಿನ ಉತ್ತಮ ಸಂಪಾದನೆಯಿಲ್ಲದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಇದನ್ನು ಓದಿ: ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧಿಸುವಂತೆ ಆಗ್ರಹಿಸಿ ಮಾ.20ರಂದು ಆಟೋ ಚಾಲಕರಿಂದ ಮುಖ್ಯಮಂತ್ರಿ ಮನೆ ಮುತ್ತಿಗೆ

ಆಟೋ ಚಾಲಕರ ಆದಾಯಕ್ಕೆ ಕುತ್ತಾಗಿರುವ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ. ನಮ್ಮೊಂದಿಗೆ ವಿವಿಧ ಆಟೋ ಸಂಘಟನೆಗಳು ಭಾಗವಹಿಸಿದ್ದು, ಜಂಟಿ ಕಾರ್ಯಕ್ರಮ ಇದಾಗಿದೆ. ಸದ್ಯದಲ್ಲಿ ನಮ್ಮದು ಪ್ರಮುಖ ಬೇಡಿಕೆ ಸರ್ಕಾರದ ಅನುಮತಿ ಇಲ್ಲದೆ, ಅನಧಿಕೃತವಾಗಿ ಬೈಕ್‌ ಟ್ಯಾಕ್ಸಿಗಳು ಸಂಚಾರ ಮಾಡುತ್ತಿದ್ದರೂ, ಸರ್ಕಾರ ಮತ್ತು ಸಾರಿಗೆ ಇಲಾಖೆ ಮಾತ್ರ ಕ್ರಮಕೈಗೊಳ್ಳುತ್ತಿಲ್ಲ. ಪ್ರತಿಬಾರಿ ಪ್ರತಿಭಟನೆ ಮಾಡಿದಾಗಲೂ ಕೇವಲ ಭರವಸೆ ನೀಡುತ್ತಿದ್ದರೆ ವಿನಃ ಬೇಡಿಕೆಗಳನ್ನು ಮಾತ್ರ ಈಡೇರಿಸುತ್ತಿಲ್ಲ. ಹಾಗಾಗಿ ಇಂದು ಮುಷ್ಕರಕ್ಕೆ ಕರೆ ನೀಡಲಾಯಿತು ಎಂದು ತಿಳಿಸಿದರು.

ಎಆರ್‌ಡಿಯು ಉಪಾಧ್ಯಕ್ಷ ಆರ್‌ ನವೀನ್‌ ಶೆಣೈ ಮಾತನಾಡಿ, ಸಾರಿಗೆ ಇಲಾಖೆಯ ಅಧಿಕಾರಿಗಳು ವೈಟ್‌ ಬೋರ್ಡ್‌ ವಾಹನಗಳು ಸಾರ್ವಜನಿಕ ಸಾರಿಗೆ ಸೇವೆ ನೀಡುತ್ತಿದ್ದರೂ ಸುಮ್ಮನಿದೆ. ಅವರ ಮೇಲೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ನಮ್ಮಂಥ ಆಟೋ ಚಾಲಕರು ಸಾರಿಗೆ ಇಲಾಖೆಯ ನಿಯಮಗಳನ್ನು ಅನುಸರಿಸಿ ಕರ್ತವ್ಯ ಮಾಡುತ್ತಿದ್ದೇವೆ. ಪ್ರತಿನಿತ್ಯ ತೆರಿಗೆ ಕಟ್ಟುವವರು ನಾವು ಆದರೆ ಬಿಜೆಪಿ ಸರ್ಕಾರ ನಮ್ಮಂಥ ಆಟೋ ಚಾಲಕರತ್ತ ಗಮನವನ್ನೆ ಹರಿಸುತ್ತಿಲ್ಲ. ದಿನ ಬಳಕೆ ವಸ್ತುಗಳು, ಮಕ್ಕಳ ಶಿಕ್ಷಣ, ಇತ್ಯಾದಿ ಖರ್ಚುಗಳ ಅಧಿಕವಾಗಿದೆ. ಆದರೂ ನಮ್ಮಂಥ ಚಾಲಕರ ಆದಾಯ ಮಾತ್ರ ಏರಿಕೆಯಾಗಿಲ್ಲ. ಚಾಲಕರು ಮತ್ತು ಪ್ರಯಾಣಿಕರ ಹಿತದೃಷ್ಟಿಯಿಂದ ಚಾಲಕರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಬೇಕೆಂದು ಆಗ್ರಹಿಸಿದರು.

ಆದರ್ಶ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್‌ ಯೂನಿಯನ್‌ ಅಧ್ಯಕ್ಷ ಎಂ. ಮಂಜುನಾಥ್‌ ಮಾತನಾಡಿ, ಪ್ರತಿದಿನವೂ ಸೇವೆ ನೀಡುತ್ತಿರುವ ಆಟೋ ಚಾಲಕರಿಗೆ ನ್ಯಾಯ ಒದಗಿಸಬೇಕು, ಕಾನೂನು ಬಾಹಿರವಾಗಿ ಬೈಕ್‌ ಟ್ಯಾಕ್ಸಿಯಿಂದ ಆಟೋ ಚಾಲಕರಿಗೆ ಬಾಡಿಗೆ ಸರಿಯಾಗಿ ಸಿಗುತ್ತಿಲ್ಲ. ನ್ಯಾಯಬದ್ಧವಾಗಿ ಸರ್ಕಾರಕ್ಕೆ ಕಳೆದ 60 ವರ್ಷಗಳಿಂದ ತೆರಿಗೆ ಕಟ್ಟಿಕೊಂಡು ಬರುತ್ತಿದ್ದೇವೆ. ಆದರೆ, ಕಾನೂನುಬಾಹಿರವಾಗಿ ಬೈಕ್ ಟ್ಯಾಕ್ಸಿಗಳು ಸೇವೆ ನೀಡುತ್ತಿದ್ದರೂ ಸರ್ಕಾರ ಕ್ರಮಕೈಗೊಳ್ಳದೇ ಕಾರ್ಪೊರೇಟ್ ಕಂಪನಿಗಳ ಪರ ನಿಂತಿದೆ. ಇದರಿಂದ ಆಟೋ ಚಾಲಕರ ಜೀವನ ದುಸ್ತರವಾಗಿದೆ ಎಂದು ಹೇಳಿದರು.

ಪ್ರತಿಭಟನೆಗೆ ಕರೆ ನೀಡಿದ್ದ ವಿವಿಧ ಆಟೋ ಸಂಘಟನೆಗಳ ಮುಖಂಡರು ಮತ್ತು ಚಾಲಕರು, ಮಹಿಳಾ ಆಟೋ ಚಾಲಕರು ಒಳಗೊಂಡು ಸುಮಾರು 300 ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದರು. ಸಂಘಟನೆಗಳ ಪ್ರಮುಖ ನಿಯೋಗವೊಂದು ಮುಖ್ಯಮಂತ್ರಿ ಗೃಹ ಕಛೇರಿಯಲ್ಲಿ ಸರ್ಕಾರ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಅನಧಿಕೃತ ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿರುವ ಸಂಘಟಕರು, ಮುಂದಿನ ದಿನಗಳಲ್ಲೂ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಎಆರ್‌ಡಿಯು ಸಂಘಟನೆ ಮುಖಂಡರಾದ ಜಾವೀದ್‌ ಅಹ್ಮದ್‌, ಎನ್‌ ನಾಗರಾಜ್‌, ನವೀನ್‌ ಶೆಣೈ, ಮೊಹಮ್ಮದ್‌ ರಿಯಾಜ್‌, ಎನ್.‌ ನರಸಿಂಹಮೂರ್ತಿ, ಬಸವರಾಜು, ವಿವಿಧ ಸಂಘಟನೆಯ ಮುಖಂಡರಾದ ಆದರ್ಶ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್‌ ಯೂನಿಯನ್‌ ಅಧ್ಯಕ್ಷ ಎಂ. ಮಂಜುನಾಥ್‌, ಕರ್ನಾಟಕ ರಕ್ಷಣಾ ವೇದಿಕೆ ಆಟೋ ಘಟಕ ಅಧ್ಯಕ್ಷ ಜಿ.ಎಸ್‌. ಕುಮಾರ್‌, ಪೀಸ್‌ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ರಘು ನಾರಾಯಣ ಗೌಡ, ಬೆಂಗಳೂರು ಆಟೋ ಸೇನೆ ಅಧ್ಯಕ್ಷ ಎಂ.ಆರ್‌ ಚೇತನ್‌, ಕರ್ನಾಟಕ ಜನಾಶ್ರಯ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಎನ್‌. ಮಾಯಲಗು, ಭಾರತ್‌ ಟ್ರಾನ್ಸ್‌ಪೋರ್ಟ್‌ ಅಸೋಸಿಯೇಷನ್‌ ಅಧ್ಯಕ್ಷ ಜಯಣ್ಣ, ಜಯ ಕರ್ನಾಟಕ ಆಟೋ ಘಟಕ ಅಧ್ಯಕ್ಷ ಆನಂದ್‌ ಹೆಚ್‌, ಸ್ನೇಹಜೀವಿ ಚಾಲಕರ ಟ್ರೇಡ್‌ ಯೂನಿಯನ್‌ ಅಧ್ಯಕ್ಷ ಸಂತೋಷ್‌ ಎನ್‌.ಜಿ., ಕರುನಾಡ ವಿಜಯಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪಟೇಲ್‌ ನೇತೃತ್ವ ವಹಿಸಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *