ಅರಕಲಗೂಡು:ನಾವು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದು ಹೇಳುತ್ತಿದ್ದೇವೆಯೇ ಹೊರತು ನಮ್ಮ ನಾಡು ಉದಯವಾಗಿದೆ ಎಂದು ಹೇಳುವ ಕಾಲ ಇನ್ನೂ ಬಂದಿಲ್ಲ ಎಂದು ಶಾಸಕ ಎ.ಟಿ. ರಾಮಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಹಾಸನ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಈ ಭೂಮಿ ಅನೇಕ ಪುಣ್ಯ ಪುರುಷರಿಗೆ ಜನ್ಮ ನೀಡಿದ ಭಾರತಾಂಬೆ ಮತ್ತು ಕನ್ನಡ ತಾಯಿಯ ಋಣ ತೀರಿಸುವ ಸಂಬಂಧ ನಮ್ಮವರನ್ನು ಹೆಚ್ಚು ಜಾಗೃತರನ್ನಾಗಿ ಮಾಡಲೇಬೇಕಾದ ಅನಿವಾರ್ಯತೆಯಲ್ಲಿದ್ದೇವೆ ಎಂದರು.
ನೈತಿಕ ಮೌಲ್ಯಗಳಿಗೆ ನಾವೆಷ್ಟು ಬೆಲೆ ಕೊಡುತ್ತಿದ್ದೇವೆ ಎಂಬುದನ್ನು ಗಂಭೀರವಾಗಿ ಆಲೋಚಿಸಬೇಕಿದೆ. ಅಕ್ಷರಸ್ಥರು ಹೆಚ್ಚಾಗಿದ್ದು ನಾಗರಿಕತೆಯೂ ಬಹಳಷ್ಟು ಮುಂದುವರಿದಿದ್ದರೂ ನಾವು ಸುಭದ್ರ ನಾಡು ಕಟ್ಟಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ದಿಕ್ಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳು ಜಾಗೃತಿ ಮೂಡಿಸಲು ಹೆಚ್ಚು ಕೆಲಸ ಮಾಡಬೇಕಿದೆ. ಡಾ. ಆರ್.ಕೆ.ಪದ್ಮನಾಭ್ ಅವರು ಸರ್ವಾಧ್ಯಕ್ಷರಾಗಿದ್ದು ಈ ಸಮ್ಮೇಳನಕ್ಕೆ ದೊಡ್ಡ ಗೌರವ ತಂದುಕೊಟ್ಟಿದೆ. ಬಹಳ ಅಚ್ಚುಕಟ್ಟಾಗಿ ನಡೆದ ಸಮ್ಮೇಳನ ಸಂಪೂರ್ಣ ಯಶಸ್ವಿಯಾಗಿದೆ ಎಂದು ಹೇಳಿದರು.
ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಸಂಗೀತ ವಿದ್ವಾನ್ ಡಾ. ಆರ್.ಕೆ.ಪದ್ಮನಾಭ ಅವರು ಡಾ.ಸಿದ್ದಲಿಂಗಯ್ಯ ದತ್ತಿ ಪ್ರಶಸ್ತಿಯನ್ನು ಲೇಖಕಿ ಬೇಲೂರು ಪಲ್ಲವಿ, ಹೇಮಾಕ್ಷಮ್ಮ ದತ್ತಿ ಪ್ರಶಸ್ತಿಯನ್ನು ಎಚ್.ಆರ್.ನವೀನ್ ಕುಮಾರ್ ಅವರಿಗೆ ಪ್ರದಾನ ಮಾಡಿದರು. ಬಳಿಕ ಮಾತನಾಡಿ, ಕನ್ನಡ ಉಳಿದಿರುವುದು ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ. ಮುಂದುವರಿದ ಮಹಾ ನಗರಗಳಲ್ಲಿ ನಮ್ಮ ಸಂಸ್ಕೃತಿಯನ್ನು ಹುಡುಕುವುದು ಭ್ರಮೆ ಎನಿಸಿದೆ. ನಗರಗಳಲ್ಲಿ ಕನ್ನಡಕ್ಕೆ ಅಪಮಾನವಾಗುತ್ತಿದೆ. ಆದರೆ ನಮ್ಮ ಭಾಷೆ, ಸಂಸ್ಕೃ ತಿಗೆ ಎತ್ತರದ ಗೌರವ ತಂದುಕೊಡುವಲ್ಲಿ ಸಾಹಿತ್ಯ ಸಮ್ಮೇಳನಗಳು ಮಹತ್ವದ ಪಾತ್ರ ವಹಿಸಿರುವುದು ನೆಮ್ಮದಿಯ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಗೌರವ ಸಲಹೆಗಾರ ಅಧ್ಯಕ್ಷ ಜೆ.ಆರ್.ಕೆಂಚೇಗೌಡ, ಮಾಜಿ ಅಧ್ಯಕ್ಷ ಡಾ.ಉದಯರವಿ, ಉಪನ್ಯಾಸಕ ಡಿ.ಕೆ.ಕುಮಾರಯ್ಯ, ಚಂದ್ರಶೇಖರ್, ಎಚ್.ಎಂ.ದಯಾನಂದ್, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಜಯರಾಂ, ಗೌರವ ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ, ಜಾವಗಲ್ ಪ್ರಸನ್ನ ಕುಮಾರ್, ಯುವಜನ ಕ್ರೀಡಾ ಇಲಾಖೆ ಅಧಿಕಾರಿ ಸಿ.ಕೆ.ಹರೀಶ್, ಕಸಾಪ ತಾಲೂಕು ಅಧ್ಯಕ್ಷರಾದ ಮಮತೇಶ್, ಲೋಕೇಶ್, ಪುಟ್ಟೇಗೌಡ, ಚಂದ್ರಶೇಖರ್, ರಾಜೇಶ್, ಅನಿಲ್‌ಗೌಡ, ಶಾರದಾ ಗುರುಮೂರ್ತಿ, ಎ.ಎಸ್.ಗೋಪಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.