ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಕೇಂದ್ರ ಸರ್ಕಾರದ ಇತ್ತೀಚಿನ ಬಜೆಟ್ನಲ್ಲಿ ಮೂಲಸೌಕರ್ಯಗಳಿಗಾಗಿ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸಿರುವುದರ ಬಗ್ಗೆ ಟೀಕೆಗಳು ಅವುಗಳು ನಿಜವಾಗಿಯೂ ಸಾಕಾರಗೊಳ್ಳುತ್ತವೆಯೇ ಎಂಬುದರ ಮೇಲೇಯೇ ಗಮನ ಕೇಂದ್ರೀಕರಿಸಿವೆಯೇ ಹೊರತು ಅಷ್ಟೊಂದು ಹಣವನ್ನು ಮೀಸಲಿಡುವುದು ಅಪೇಕ್ಷಣೀಯವೇ ಎಂಬುದರ ಬಗ್ಗೆ ಅಲ್ಲ. ಆದರೆ ಮೂಲಸೌಕರ್ಯಗಳನ್ನು ಕುರಿತ ಬೇಡಿಕೆಗೂ ಜಾರಿಯಲ್ಲಿರುವ ಆರ್ಥಿಕ ಕಾರ್ಯತಂತ್ರಕ್ಕೂ ನೇರ ಸಂಬಧವಿದೆ. ಮೂಲಸೌಕರ್ಯದ ಬೇಡಿಕೆಯೂ ಒಂದು ವರ್ಗಪ್ರಶ್ನೆಯೇ ಆಗಿದೆ. ಮೂಲಸೌಕಯಗಳ ನಿರ್ಮಾಣಕ್ಕೆ ಹೆಚ್ಚೆಚ್ಚು ಹಣ ಕೊಡಬೇಕೆನ್ನುವ ಸರಕಾರಗಳು ಶಿಕ್ಷಣ ಮತ್ತು ಆರೋಗ್ಯವನ್ನು ಹೆಚ್ಚೆಚ್ಚಾಗಿ ನಿರ್ಲಕ್ಷಿಸುತ್ತವೆ, ಅಸಮಾನತೆಗಳನ್ನು ಪೋಷಿಸುವ ಆರ್ಥಿಕ ಕಾರ್ಯತಂತ್ರದ ಪ್ರವೃತ್ತಿಯನ್ನು ಬಲಪಡಿಸುತ್ತವೆ. ಮೂಲಸೌಕಯಗಳ ನಿರ್ಮಾಣವನ್ನು ಒಂದು ಪವಿತ್ರ ಗೋವು ಎಂಬಂತೆ ನೋಡುವ ಕ್ರಮವು ಈ ವರ್ಗ ಪ್ರಶ್ನೆಯನ್ನು, ಅಂದರೆ ಅಭಿವೃದ್ಧಿಯ ವರ್ಗ ಸ್ವರೂಪವನ್ನು ಮರೆಮಾಚುತ್ತದೆ.
ಪ್ರತಿಯೊಂದು ದೇಶಕ್ಕೂ “ಭೌತಿಕ ಮೂಲಸೌಕರ್ಯ”ಗಳು ಎಂಬುದು ಅತ್ಯಗತ್ಯ ಮತ್ತು ಲಭ್ಯವಿರುವ ಮೂಲಸೌಕರ್ಯಗಳ ಪ್ರಮಾಣವು ಯಾವತ್ತೂ ಅಗತ್ಯಕ್ಕಿಂತ ಕಡಿಮೆಯೇ ಇರುತ್ತದೆ ಎಂಬ ಭಾವನೆ ಪ್ರಗತಿಪರ ಬುದ್ಧಿಜೀವಿಗಳಲ್ಲೂ ಇದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಮೂಲಸೌಕರ್ಯಗಳಿಗಾಗಿ ಮಾಡುತ್ತಿರುವ ವೆಚ್ಚವನ್ನು “ಅತಿ ಹೆಚ್ಚು ಹೂಡಿಕೆ” ಎನ್ನುವಂತಿಲ್ಲ. ಹಾಗಾಗಿ ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ ಎಷ್ಟು ಹೆಚ್ಚಿನ ಮೊತ್ತದ ಹಣವನ್ನು ಮೀಸಲಿಟ್ಟರೂ ಸಹ ಸಾಮಾನ್ಯವಾಗಿ ಆಕ್ಷೇಪಣೆಗಳೇ ಇರುವುದಿಲ್ಲ. ಮೂಲಸೌಕರ್ಯ ಯೋಜನೆಗಳ ವಿರುದ್ಧ ಮಾಡಲಾಗುವ ಟೀಕೆಗಳು ಈ ಯೋಜನೆಗಳು ಕಾರ್ಯಸಾಧ್ಯವೇ, ಅವುಗಳು ನಿಜವಾಗಿಯೂ ಸಾಕಾರಗೊಳ್ಳುತ್ತದೆಯೇ, ಅವುಗಳಿಗೆ ನಿಗದಿಪಡಿಸಿದ ವೆಚ್ಚವನ್ನು ವಾಸ್ತವವಾಗಿ ಕೈಗೊಳ್ಳಲಾಗುತ್ತದೆಯೇ ಮುಂತಾದ ವಿಷಯಗಳ ಬಗ್ಗೆ ಕೇಂದ್ರೀಕರಿಸಲ್ಪಟ್ಟಿರುತ್ತವೆಯೇ ವಿನಃ, ಅಂತಹ ಯೋಜನೆಗಳು ಅಪೇಕ್ಷಣೀಯವೇ ಎಂಬುದರ ಬಗ್ಗೆ ಚರ್ಚೆಯಾಗುವುದೇ ಇಲ್ಲ.
ಕೇಂದ್ರ ಸರ್ಕಾರದ ಇತ್ತೀಚಿನ ಬಜೆಟ್ನಲ್ಲಿ ಮೂಲಸೌಕರ್ಯಗಳಿಗಾಗಿ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆಯಾದರೂ, ಅದರ ಬಗ್ಗೆ ಟೀಕೆಗಳು ನಿಗದಿಪಡಿಸಿದ ಮೊತ್ತವನ್ನು ಸರ್ಕಾರವು ಖರ್ಚು ಮಾಡಲು ಸಾಧ್ಯವಾಗುವುದಿಲ್ಲ ಎಂಬುದರ ಮೇಲೇಯೇ ಗಮನ ಕೇಂದ್ರೀಕರಿಸಿವೆಯೇ ಹೊರತು ಅಷ್ಟೊಂದು ಹಣವನ್ನು ಮೀಸಲಿಟ್ಟ ಬಗ್ಗೆ ಅಲ್ಲ. ಮೂಲಸೌಕರ್ಯಗಳಿಗಾಗಿ ಅಷ್ಟೊಂದು ಹಣವನ್ನು ಖರ್ಚು ಮಾಡುವ ಕ್ರಮವು ತಪ್ಪು ಆದ್ಯತೆಯಾಗಬಹುದು ಎಂಬ ಅಂಶವನ್ನೂ ಚರ್ಚಿಸಬೇಕು ಎಂದು ಅನಿಸಿದಂತೆಯೇ ಇಲ್ಲ. ಭಾರತದಲ್ಲಿ ಮೂಲಸೌಕರ್ಯವನ್ನು ಸಾಮಾನ್ಯವಾಗಿ ಒಂದು ಪವಿತ್ರ ಗೋವು ಎಂಬಂತೆ ಪರಿಗಣಿಸಲಾಗಿದೆ.
ಇದನ್ನು ಓದಿ: ಹಣಕಾಸು ಮಂತ್ರಿಗಳು ಹೇಳುವಂತೆ ರಾಜ್ಯಗಳಿಗೆ ಸಂಪನ್ಮೂಲ ವರ್ಗಾವಣೆ ಏರಿಲ್ಲ
ಮೂಲಸೌಕರ್ಯಗಳನ್ನು ಪವಿತ್ರ ಗೋವು ಎಂದು ನೋಡಬೇಕಾಗಿಯೇ ಇಲ್ಲ ಎಂಬುದನ್ನು ಈ ಅಂಕಣದಲ್ಲಿ ಈ ಮೊದಲೇ ಹೇಳಲಾಗಿದೆ. ಆದರೆ, ವಿಚಾರ ಮಾಡದೆ ವಿಷಯವನ್ನು ಒಪ್ಪಿಕೊಳ್ಳುವ ಮನೋಭಾವದ ಪರಿಸ್ಥಿತಿಯಲ್ಲಿ ಈ ಅಂಶವನ್ನು ಮತ್ತೆ-ಮತ್ತೆ ಹೇಳಬೇಕಾಗುತ್ತದೆ. ಜನರು ಬಯಸುವ ಭೌತಿಕ ಮೂಲಸೌಕರ್ಯಗಳು ದೇಶವು ಅನುಸರಿಸರಿಸುವ ಆರ್ಥಿಕ ಕಾರ್ಯತಂತ್ರವನ್ನು ಅವಲಂಬಿಸಿರುತ್ತವೆ. ಅರ್ಥವ್ಯವಸ್ಥೆಯ ದೃಷ್ಟಿಯಲ್ಲಿ ಹೇಳುವುದಾದರೆ, ಅದು ಒಂದು ಸಂಪೂರ್ಣವಾದ ಅಥವ ಬದಲಾಗದ ಅವಶ್ಯಕತೆಯೇನಲ್ಲ. ಆಚರಣೆಯಲ್ಲಿರುವ ಒಂದು ನಿರ್ದಿಷ್ಟ ಆರ್ಥಿಕ ಕಾರ್ಯತಂತ್ರದಿಂದಾಗಿ ಒಂದು ನಿರ್ದಿಷ್ಟ ರೀತಿಯ ಭೌತಿಕ ಮೂಲಸೌಕರ್ಯದ ಅಗತ್ಯವು ಉದ್ಭವಿಸುತ್ತದೆ.
ವಸಾಹತುಶಾಹಿ ಆದ್ಯತೆಗಳು ಹಾಗೂ ಬಂದರು–ರೈಲು ಕಾಮಗಾರಿಗಳು
ಉದಾಹರಣೆಗೆ, ವಸಾಹತುಶಾಹಿ ಆಳ್ವಿಕೆಯು ಭಾರತದಲ್ಲಿ ನೆಲೆಗೊಂಡ ನಂತರವೇ ಬಂದರುಗಳ ನಿರ್ಮಾಣದ ಅಗತ್ಯ ಉಂಟಾಯಿತು. ಭಾರತವನ್ನು ವಸಾಹತುಶಾಹಿಯು ವಶಪಡಿಸಿಕೊಂಡ ನಂತರ ಭಾರತದ ಅರ್ಥವ್ಯವಸ್ಥೆಯು ಕಡಲ-ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಇದ್ದಕ್ಕಿದ್ದಂತೆ ಹೆಚ್ಚಳಕ್ಕೆ ಒಳಗಾಯಿತು. ಏಕೆಂದರೆ, ವಸಾಹತುಶಾಹಿ ಆಳ್ವಿಕೆಗೆ ಒಳಪಟ್ಟ ಭಾರತವು ಮೆಟ್ರೋಪಾಲಿಟನ್(ಬಂಡವಾಳಶಾಹಿ) ದೇಶಗಳಿಗೆ ಪ್ರಾಥಮಿಕ ಸರಕುಗಳನ್ನು(ಕಚ್ಚಾ ಸಾಮಗ್ರಿಗಳನ್ನು) ಒದಗಿಸಬೇಕಾಗಿತ್ತು ಮತ್ತು ಆ ದೇಶಗಳಲ್ಲಿ ತಯಾರಾದ ಸರಕುಗಳಿಗೆ ಭಾರತದಲ್ಲಿ ಮಾರುಕಟ್ಟೆಯನ್ನು ಒದಗಿಸಬೇಕಾಗಿತ್ತು. ಈ ರೀತಿಯಲ್ಲಿ ವಸಾಹತುಶಾಹಿಯು ಅನುಸರಿಸುತ್ತಿದ್ದ ಆರ್ಥಿಕ ಕಾರ್ಯತಂತ್ರವು ಈ ಹಿಂದೆಂದೂ ಕಾಣದಷ್ಟು ಸಂಖ್ಯೆಯಲ್ಲಿ ಬಂದರುಗಳನ್ನು ನಿರ್ಮಿಸುವ ಅಗತ್ಯವನ್ನು ಸೃಷ್ಟಿಸಿತು.
ಹದಿನಾರನೇ ಶತಮಾನದ ಚಕ್ರವರ್ತಿ ಶೇರ್ ಷಾ ಸೂರಿ ಸಹ, ಮೂಲಸೌಕರ್ಯ ಯೋಜನೆಗಳನ್ನು ನಿರ್ಮಿಸಲು ಸಾಕಷ್ಟು ಸಂಪನ್ಮೂಲಗಳನ್ನು ಮೀಸಲಿಟ್ಟಿದ್ದರು. ಆತ ರಸ್ತೆಗಳನ್ನು ನಿರ್ಮಿಸಿದ್ದರು, ಬಂದರುಗಳನ್ನಲ್ಲ. ಏಕೆಂದರೆ, ಆ ಕಾಲದ ಆರ್ಥಿಕ ಕಾರ್ಯತಂತ್ರವು ದೂರ-ದೇಶಗಳೊಂದಿಗಿನ ವ್ಯಾಪಾರಗಳಿಗಾಗಿ ಹಡಗು-ಸಾಗಣೆಗಿಂತ ರಸ್ತೆ ಸಾರಿಗೆಯನ್ನು ಹೆಚ್ಚಾಗಿ ಅವಲಂಬಿಸಿತ್ತು.
ಇದನ್ನು ಓದಿ: ಆರ್ಥಿಕ ಕಾರ್ಯತಂತ್ರವಾಗಿ ʻʻಬಂಟ ಬಂಡವಾಳಶಾಹಿʼʼ
ವಸಾಹತುಶಾಹಿ ಯುಗದಲ್ಲಿ ಭಾರತದಲ್ಲಿ ರೈಲ್ವೆಗಳ ಅಭಿವೃದ್ಧಿಯನ್ನು ಬಂದರುಗಳು ನೆರವೇರಿಸುತ್ತಿದ್ದ ಉದ್ದೇಶಗಳಿಗಾಗಿಯೇ ಕೈಗೊಳ್ಳಲಾಯಿತು. ಕಚ್ಚಾ ಸಾಮಗ್ರಿಗಳ ಸಾಗಣೆಯೇ ಭಾರತೀಯ ರೈಲ್ವೆ ಜಾಲದ ಮುಖ್ಯ ಗುರಿಯಾಗಿತ್ತು ಎಂಬುದಾಗಿ ಆರ್ಥಿಕ ಇತಿಹಾಸಕಾರ ದಿವಂಗತ ಇಯಾನ್ ಮ್ಯಾಕ್ಫರ್ಸನ್ ವಾದಿಸಿದ್ದಾರೆ. ನಾವು ಇಲ್ಲಿ ಈ ಅಂಶದ ಬಗ್ಗೆ ಚರ್ಚಿಸುತ್ತಿಲ್ಲ. ವಿಷಯವೆಂದರೆ, ವಸಾಹತುಶಾಹಿ ಭಾರತದ ಅರ್ಥವ್ಯವಸ್ಥೆಯು ರೈಲ್ವೆಯಲ್ಲಿ ಹೂಡಿಕೆಯನ್ನು ಅಗತ್ಯಗೊಳಿಸಿತು ಎಂಬುದು. ಈ ಉದ್ದೇಶಕ್ಕಾಗಿ ವಸಾಹತುಶಾಹಿ ಆಡಳಿತವು ರೈಲ್ವೆ ವಲಯದಲ್ಲಿ ಹೂಡಿಕೆ ಮಾಡುವ ಖಾಸಗಿ ಕಂಪನಿಗಳಿಗೆ ಖಾತರಿಯ ಆದಾಯವನ್ನು ನೀಡಲು ಸಹ ಸಿದ್ಧವಾಗಿತ್ತು.
ರೈಲುಗಳು ಎಲ್ಲ ದೇಶಗಳಿಗೂ ಸದಾ ಉಪಯುಕ್ತವೇ ಆದ್ದರಿಂದ, ಅವುಗಳನ್ನು ನಿರ್ಮಿಸಿದ ನಿರ್ದಿಷ್ಟ ಉದ್ದೇಶವು ಅಪ್ರಸ್ತುತವಾಗುತ್ತದೆ. ಹಾಗೆ ನೋಡಿದರೆ ಮೂಲಸೌಕರ್ಯದ ನಿರ್ಮಾಣವನ್ನು ಅನುಸರಿಸಲಾಗುತ್ತಿರುವ ಆರ್ಥಿಕ ಕಾರ್ಯತಂತ್ರದೊಂದಿಗೆ ತಳುಕು ಹಾಕುವುದೇ ಅಪ್ರಸ್ತುತ. ಏಕೆಂದರೆ, ಮೂಲಸೌಕರ್ಯಗಳು ಸದಾ ಉಪಯುಕ್ತವೇ. ಆದ್ದರಿಂದ ಅವುಗಳನ್ನು ನಿರ್ಮಿಸಲೇಬೇಕಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಮೂಲಸೌಕರ್ಯಗಳಿಗಾಗಿ ಮಾಡುವ ಹೂಡಿಕೆ ಸದಾ ಒಳ್ಳೆಯದೇ ಎಂಬ ಈ ದೃಷ್ಟಿಕೋನವು ನಾನು ಇಲ್ಲಿಯವರೆಗೆ ಮಾಡಿದ ವಾದಕ್ಕೆ ತದ್ವಿರುದ್ಧವಾಗಿದೆ.
ಆರ್ಥಿಕ ಕಾರ್ಯತಂತ್ರದ ಪ್ರಶ್ನೆ
ಕೆಲವು ನಿರ್ದಿಷ್ಟ ಮೂಲಸೌಕರ್ಯ ಯೋಜನೆಗಳು ಭವಿಷ್ಯದಲ್ಲಿ ಉಪಯೋಗವಾಗುತ್ತವೆ ಎಂಬ ನೆಲೆಯಲ್ಲಿ ಅವುಗಳ ನಿರ್ಮಾಣಕ್ಕಾಗಿ ಇಂದು ಹಣ ಸುರಿಯುವುದು ವಿವೇಕದ ಕೆಲಸವಲ್ಲ. ಒಂದು ವೇಳೆ ಗಣನೀಯ ಸಂಪನ್ಮೂಲಗಳನ್ನು ಅಂತಹ ಉದ್ದೇಶಗಳಿಗಾಗಿ ಬಳಸಿದಾಗ ಅದರ ಕಾರಣವು ಆಚರಣೆಯಲ್ಲಿರುವ ನಿರ್ದಿಷ್ಟ ಆರ್ಥಿಕ ಕಾರ್ಯತಂತ್ರಕ್ಕೆ ಸಂಬಂಧಿಸಿರುತ್ತದೆ. ಅದೇನೇ ಇರಲಿ, ಸಂಪನ್ಮೂಲಗಳು ವಿರಳವೇ. ಅವುಗಳನ್ನು ಒಂದು ಉದ್ದೇಶಕ್ಕಾಗಿ ಬಳಸಿದಾಗ, ಅವುಗಳನ್ನು ಬೇರೊಂದು ಉದ್ದೇಶಕ್ಕೆ ಬಳಸುವುದು ತಪ್ಪುತ್ತದೆ. ಹಾಗಾಗಿ, ಅವುಗಳನ್ನು ಹೇಗೆ ಬಳಸಲಾಗುತ್ತದೆ ಎಂಬುದು ಆಯ್ಕೆಯ ವಿಷಯವಾಗುತ್ತದೆ. ಈ ಆಯ್ಕೆಯನ್ನು ಆಚರಣೆಯಲ್ಲಿರುವ ಆರ್ಥಿಕ ಕಾರ್ಯತಂತ್ರವು ನಿಯಂತ್ರಿಸುತ್ತದೆ.
ಇದನ್ನು ಓದಿ: ಅರ್ಥವ್ಯವಸ್ಥೆಯ ಮೂಲ ಸಮಸ್ಯೆಯನ್ನೇ ನಿರ್ಲಕ್ಷಿಸಿದ 2023-24ರ ಬಜೆಟ್ – ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವಲ್ಲಿ ವಿಫಲತೆ
‘ಆಧುನಿಕತೆ’ಯನ್ನು ಕಾರ್ಲ್ ಮಾರ್ಕ್ಸ್ ಬೆಂಬಲಿಸಿದರು ಎಂಬ ಕಾರಣದ ಮೇಲೆ, ಜನರಿಗೆ ನೇರವಾಗಿ ಮತ್ತು ತಕ್ಷಣದಲ್ಲಿ ಅಲ್ಲದಿದ್ದರೂ ಕಾಲ ಕ್ರಮೇಣ ಉಪಯೋಗಕ್ಕೆ ಬರುವ ಮೂಲಸೌಕರ್ಯ ಯೋಜನೆಗಳನ್ನು ಅವರು ಅನುಮೋದಿಸುತ್ತಿದ್ದರು ಎಂಬ ಒಂದು ಅಭಿಪ್ರಾಯವಿದೆ. ಉದಾಹರಣೆಗೆ, ಭಾರತದಲ್ಲಿ ರೈಲ್ವೆಗಳ ನಿರ್ಮಾಣದ ವಿಷಯದಲ್ಲಿ, ಅವು ವಸಾಹತುಶಾಹಿಗಳ ಹಿತಾಸಕ್ತಿಗಳನ್ನು ಪೂರೈಸುತ್ತಿದ್ದರೂ ಸಹ, ದೀರ್ಘಾವಧಿಯಲ್ಲಿ ಭಾರತದ ಅರ್ಥವ್ಯವಸ್ಥೆಯನ್ನು ಆಧುನೀಕರಿಸುವಲ್ಲಿ ಅವು ವಹಿಸುವ ಪಾತ್ರದಿಂದಾಗಿ, ಅವುಗಳ ನಿರ್ಮಾಣವನ್ನು ಮಾರ್ಕ್ಸ್ ಅನುಮೋದಿಸುತ್ತಿದ್ದರು ಎಂಬ ಒಂದು ಗ್ರಹಿಕೆ ಇದೆ. ಆದರೆ, “ಆಧುನಿಕತಾವಾದಿ ನಿಲುವು” ಎಂದು ಕರೆಯಲಾದ ಈ ನಿಲುವಿಗೆ ತದ್ವಿರುದ್ಧವಾದ ನಿಲುವನ್ನು ಮಾರ್ಕ್ಸ್ ತೆಗೆದುಕೊಂಡಿದ್ದರು ಎಂಬ ಅಂಶವು ಗಮನಾರ್ಹವಾಗಿದೆ. ʼನ್ಯೂಯಾರ್ಕ್ ಡೈಲಿ ಟ್ರಿಬ್ಯೂನ್ʼನಲ್ಲಿ ಭಾರತದ ಬಗ್ಗೆ ಬರೆದ ತಮ್ಮ ಲೇಖನವೊಂದರಲ್ಲಿ ಮಾರ್ಕ್ಸ್, ಬ್ರಿಟಿಷ್ ವಸಾಹತುಶಾಹಿಯು ಭಾರತದಲ್ಲಿ ನಿರ್ಮಿಸಿದ ರೈಲ್ವೆಗಳನ್ನು “ಹಿಂದೂಗಳಿಗೆ ನಿಷ್ಪ್ರಯೋಜಕ” ಎಂದು ಬಣ್ಣಿಸಿದ್ದಾರೆ.
ಮಾರ್ಕ್ಸ್ ಅಕ್ಷರಶಃ ಇದೇ ಭಾವನೆ ಹೊಂದಿದ್ದರು ಎಂದು ಹೇಳಲಾಗದು. ಅವುಗಳ ಪ್ರಸ್ತುತ ಉಪಯುಕ್ತತೆಯನ್ನು ಬದಿಗಿಟ್ಟು ನೋಡಿದರೂ ಸಹ, ರೈಲ್ವೆಗಳು ಹೊಸದಾಗಿ ಸ್ಥಾಪನೆಯಾದ ಸಮಯದಲ್ಲೂ ಭಾರತದ ಜನರಿಗೆ ಉಪಯುಕ್ತವಾಗಿದ್ದವು. ಅರ್ಥವ್ಯವಸ್ಥೆಯನ್ನು ವಸಾಹತುಶಾಹಿ ಶೋಷಣೆಗೆ ತೆರೆಯುವುದೇ ರೈಲ್ವೆಗಳ ಸ್ಥಾಪನೆಯ ಉದ್ದೇಶವಿರಬಹುದು. ಆದರೆ ಅವುಗಳನ್ನು ಭಾರತೀಯರಿಗೆ “ನಿಷ್ಪ್ರಯೋಜಕ” ಎಂದು ಕರೆಯುವುದು ಅತಿಯಾಗಿ ತೋರುತ್ತದೆ. ಆದರೆ, ಮಾರ್ಕ್ಸ್ ನಿಜಕ್ಕೂ ಉಲ್ಲೇಖಿಸಿದ ಸಂಗತಿಯೆಂದರೆ, ರೈಲ್ವೆ ಜಾಲವನ್ನು ನಿರ್ಮಿಸುವುದು ಭಾರತದ ಜನರ ಆದ್ಯತೆಯಾಗಿರಲಿಲ್ಲ; ವಸಾಹತುಶಾಹಿ ಆಡಳಿತಕ್ಕೆ ಅದು ಆದ್ಯತೆಯಾಗಿತ್ತು. ಅದಕ್ಕಾಗಿಯೇ ಅದನ್ನು ನಿರ್ಮಿಸಲಾಯಿತು. ಆದರೆ, ಭಾರತದ ಜನರಿಗೆ ಆ ಸಮಯದಲ್ಲಿ ಅದರ ಅಗತ್ಯವಿರಲಿಲ್ಲ ಮತ್ತು ಅವರು ಸ್ವತಂತ್ರರಾಗಿದ್ದರೆ ತಮ್ಮ ಸಂಪನ್ಮೂಲಗಳನ್ನು ಅದಕ್ಕಾಗಿ ಅಷ್ಟೊಂದು ಹಣವನ್ನು ಖರ್ಚು ಮಾಡುವ ಒತ್ತಾಯಕ್ಕೆ ಒಳಗಾಗುತ್ತಿರಲಿಲ್ಲ.
ಒಂದು ದೇಶದ ಮೂಲಸೌಕರ್ಯದ ಬೇಡಿಕೆಗಳು ಆ ದೇಶದೊಳಗೆ ಅನುಸರಿಸಲಾಗುವ ಆರ್ಥಿಕ ಕಾರ್ಯತಂತ್ರದ ಮೇಲೆ ಅವಲಂಬಿತವಾಗಿವೆ ಎಂಬ ಪ್ರತಿಪಾದನೆಯು ಅವುಗಳ ಕೊರತೆಯ ಬಗ್ಗೆ ಏನನ್ನೂ ಹೇಳುವುದಿಲ್ಲ. ಮೂಲಸೌಕರ್ಯಗಳಿಗಾಗಿ ಮಾಡುತ್ತಿರುವ ವೆಚ್ಚವನ್ನು “ಅತಿ ಹೆಚ್ಚು ಹೂಡಿಕೆ” ಎನ್ನುವಂತೆಯೇ ಇಲ್ಲ ಎಂಬ ಭಾವನೆಯ ಬಗ್ಗೆ ಈ ಹಿಂದೆ ಹೇಳಲಾಗಿದೆ. ಇದು ಸಾಮಾನ್ಯವಾಗಿ ಇರುವ ಪರಿಸ್ಥಿತಿಯೇ. ಏಕೆಂದರೆ ಮೂಲಸೌಕರ್ಯಗಳ ಕೊರತೆಗಳು ಸದಾ ಇದ್ದೇ ಇರುತ್ತವೆ. ಹೂಡಿಕೆಯು ಈ ಸಮಸ್ಯೆಯನ್ನು ನಿವಾರಿಸುತ್ತದೆ. ಆರ್ಥಿಕ ಕಾರ್ಯತಂತ್ರವು ಯಾವುದೇ ಇರಲಿ, ಅದಕ್ಕೆ ಅನುಗುಣವಾದ ಮೂಲಸೌಕರ್ಯವು ಒಂದು ನಿರ್ದಿಷ್ಟ ರೀತಿಯದ್ದೇ ಆಗಿರುತ್ತದೆ. ಮೂಲಸೌಕರ್ಯಗಳಂತೂ ಎಷ್ಟಿದ್ದರೂ ಸಾಕಾಗುವುದಿಲ್ಲ. ಹಾಗಾಗಿ, ಮೂಲಸೌಕರ್ಯಗಳ ಮೇಲಿನ ಹೂಡಿಕೆಯು ಸದಾ “ಸಮರ್ಥನೀಯ” ಎಂದೇ ಕಾಣಿಸುತ್ತದೆ. ಆದರೆ ಈ “ಸಮರ್ಥನೆಯು” ಆರ್ಥಿಕ ಕಾರ್ಯತಂತ್ರದೊಂದಿಗೆ ಸಂಬಂಧ ಹೊಂದಿದೆ ಎಂಬುದನ್ನು ಮರೆಯುವಂತಿಲ್ಲ.
ವರ್ಗ ಸ್ವರೂಪವನ್ನು ಮರೆಮಾಚುವ ಮಾರ್ಗ
ಒಂದು ಉದಾಹರಣೆಯನ್ನು ನೋಡೋಣ. ನವ ಉದಾರವಾದಿ ಆಳ್ವಿಕೆಯಲ್ಲಿ ಆರ್ಥಿಕ ಅಸಮಾನತೆಗಳು ಅಗಾಧವಾಗಿ ಬೆಳೆದಿವೆ. ಈ ವಿದ್ಯಮಾನವು ಒಂದು ನಿರ್ದಿಷ್ಟ ಮಾದರಿಯ ಬೇಡಿಕೆಯನ್ನು ಸೃಷ್ಟಿಸಿದೆ. ಈ ಬೇಡಿಕೆಯ ಒಂದು ಮುಖ್ಯ ಲಕ್ಷಣವೆಂದರೆ ವಾಯು-ಯಾನದಲ್ಲಿ ಆಗಿರುವ ಭಾರಿ ಹೆಚ್ಚಳವೇ. ಅದಕ್ಕಾಗಿ ದೇಶಾದ್ಯಂತ ವಿಮಾನ ನಿಲ್ದಾಣಗಳನ್ನು ನಿರ್ಮಿಸಬೇಕಾಗುತ್ತದೆ. ಅವುಗಳನ್ನು ವಿಸ್ತರಿಸಬೇಕಾಗುತ್ತದೆ ಮತ್ತು ನವೀಕರಿಸಬೇಕಾಗುತ್ತದೆ. ಹಾಗೆ ಮಾಡದಿದ್ದಲ್ಲಿ ತೀವ್ರ ದಟ್ಟಣೆಯಾಗುತ್ತದೆ. ಅದು ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ. ಈ ವಿದ್ಯಮಾನವು ವಿಮಾನ ನಿಲ್ದಾಣಗಳ ಮೇಲೆ ಹೂಡಿಕೆಯನ್ನು ಹೆಚ್ಚು ಮಾಡಲು ಸಮರ್ಥನೆಯನ್ನು ಒದಗಿಸುತ್ತದೆ. ಹೂಡಿಕೆಯು ಸಾರ್ವಜನಿಕ ವಲಯದ್ದೇ ಇರಲಿ ಅಥವಾ ಖಾಸಗಿ ವಲಯದ್ದೇ ಇರಲಿ, ಇಂತಹ ಹೂಡಿಕೆ ಸಂಪೂರ್ಣವಾಗಿ ತರ್ಕಬದ್ಧವೆಂದೆನಿಸುವುದರಿಂದ, ಇಂತಹ ಹೂಡಿಕೆಯ ವಿರುದ್ಧ ಯಾರೂ ವಾದಿಸುವಂತಿಲ್ಲ. ಆದರೆ ಈ ತರ್ಕಬದ್ಧತೆಯೆಂಬುದು ನವ ಉದಾರವಾದದ ಆರ್ಥಿಕ ಕಾರ್ಯತಂತ್ರಕ್ಕೆ ಮಾತ್ರ ಸಂವಾದಿಯಾಗಿದೆ. ಒಂದು ವೇಳೆ ಹೆಚ್ಚು ಸಮಾನತೆಯ ಆರ್ಥಿಕ ಅಭಿವೃದ್ಧಿಯ ಒಂದು ಪರ್ಯಾಯ ಕಾರ್ಯತಂತ್ರವೇ ಆಚರಣೆಯಲ್ಲಿದ್ದಿದ್ದರೆ, ವಿಮಾನ ಪ್ರಯಾಣದ ಮೇಲಿನ ಬೇಡಿಕೆ ತುಂಬಾ ಕಡಿಮೆ ಇರುತ್ತಿತ್ತು. ವಿಮಾನ ನಿಲ್ದಾಣಗಳಲ್ಲಿ ದಟ್ಟಣೆ ಕಡಿಮೆಯಾಗುತ್ತಿತ್ತು ಮತ್ತು ವಿಮಾನ ನಿಲ್ದಾಣಗಳನ್ನು ವಿಸ್ತರಿಸಲು ಮತ್ತು ನವೀಕರಿಸಲು ಹೆಚ್ಚಿನ ಹೂಡಿಕೆ ಅನಗತ್ಯವಾಗುತ್ತಿತ್ತು.
ಇದನ್ನು ಓದಿ: “ಬರುತಿದೆ ಬರುತಿದೆ ವಿಶ್ವ ಆರ್ಥಿಕ ಹಿಂಜರಿತ”
ಮೂಲಸೌಕರ್ಯಗಳ ಮೇಲಿನ ಬೇಡಿಕೆಯನ್ನು ಆಚರಣೆಯಲ್ಲಿರುವ ಆರ್ಥಿಕ ಕಾರ್ಯತಂತ್ರದಿಂದ ಬೇರ್ಪಡಿಸಿ ನೋಡುವ ಕ್ರಮವು ಅಂತಹ ಬೇಡಿಕೆಯ ಅಂತರ್ಗತ ವರ್ಗ ಸ್ವರೂಪವನ್ನು ಮರೆಮಾಚುವ ಒಂದು ಮಾರ್ಗವಾಗಿದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ ಮೂಲಸೌಕರ್ಯದ ಬೇಡಿಕೆಯೂ ಒಂದು ವರ್ಗ-ವಿಷಯವೇ. ಮೂಲಸೌಕರ್ಯಗಳನ್ನು ಒಂದು ಪವಿತ್ರ ಗೋವು ಎಂಬಂತೆ ನೋಡುವ ಕ್ರಮವು ಈ ವರ್ಗ ಪ್ರಶ್ನೆಯನ್ನು, ಅಂದರೆ ಅಭಿವೃದ್ಧಿಯ ವರ್ಗ ಸ್ವರೂಪವನ್ನು ಮರೆಮಾಚುತ್ತದೆ.
ಇಲ್ಲೊಂದು ನಿರ್ದಿಷ್ಟ ದ್ವಂದ್ವವೂ ಇದೆ. ಸರ್ಕಾರಗಳು ಆಗಾಗ್ಗೆ ಮಂಡಿಸುವ ವಾದವೆಂದರೆ, ಸಂಪನ್ಮೂಲಗಳ ಕೊರತೆಯಿಂದಾಗಿ ಆರೋಗ್ಯ ರಕ್ಷಣೆಗೆ ಧನಸಹಾಯ ನೀಡುವುದು ಸಾಧ್ಯವಿಲ್ಲ (ಸಾರ್ವಜನಿಕ ಆರೋಗ್ಯ ವೆಚ್ಚಗಳಿಗಾಗಿ ಜಿಡಿಪಿಯ ಶೇ. 3ರಷ್ಟನ್ನೂ ನಿಗದಿಪಡಿಸಿಲ್ಲ), ಅಥವಾ ಶಿಕ್ಷಣಕ್ಕೆ ಧನಸಹಾಯ ನೀಡಲು ಸಾಧ್ಯವಿಲ್ಲ (ದಶಕಗಳ ಹಿಂದೆ ಕೊಠಾರಿ ಆಯೋಗದ ಶಿಫಾರಸಿನ ಪ್ರಕಾರ ಜಿಡಿಪಿಯ ಶೇ. 6ರಷ್ಟನ್ನೂ ನಿಗದಿಪಡಿಸಿಲ್ಲ) ಎಂಬುದು. ಎಷ್ಟೇ ಸಂಪನ್ಮೂಲಗಳನ್ನು ಕ್ರೋಢೀಕರಿಸಿದರೂ ಸಹ, ಅದನ್ನು ತಮಗೆ ನೀಡುವಂತೆ ಹಲವು ದಾವೆಗಳಿರುತ್ತವೆ. ಅವುಗಳಲ್ಲಿ ಪ್ರಮುಖ ದಾವೇದಾರನೆಂದರೆ, ಮೂಲಸೌಕರ್ಯ ವಲಯವೇ. ಸಾರ್ವಜನಿಕ ಶಿಕ್ಷಣದ ಮೇಲಿನ ಮತ್ತು ಆರೋಗ್ಯ ರಕ್ಷಣೆಯ ಮೇಲಿನ ಈ ರೀತಿಯ ನಿರ್ಲಕ್ಷ್ಯವು, ಬಡವರನ್ನು ಹಿಂಡುವ ಮೂಲಕ ಮತ್ತು ಈ ಕ್ಷೇತ್ರಗಳಲ್ಲಿ ಲಾಭದಾಯಕ ಖಾಸಗಿ ಕಾರ್ಯಾಚರಣೆಗಳಿಗೆ ಅವಕಾಶಗಳನ್ನು ಒದಗಿಸುವ ಮೂಲಕ ಅಸಮಾನತೆಗಳನ್ನು ಪೋಷಿಸುವ ಆರ್ಥಿಕ ಕಾರ್ಯತಂತ್ರದ ಪ್ರವೃತ್ತಿಯನ್ನು ಬಲಪಡಿಸುತ್ತದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಈ ದ್ವಂದ್ವವನ್ನು ಅಸಮಾನತೆಗಳನ್ನು ಪೋಷಿಸುವ ಆರ್ಥಿಕ ಕಾರ್ಯತಂತ್ರವನ್ನು ಬದಲಾಯಿಸುವ ಮೂಲಕ ಹಿಮ್ಮೆಟ್ಟಿಸಬಹುದು. ನಿಜ, ಅದಕ್ಕಾಗಿ ದುಡಿಯುವ ಜನರ ವರ್ಗವನ್ನು ಅಣಿನೆರೆÀಸಬೇಕಾಗುತ್ತದೆ. ಆದರೆ ಈ ರೀತಿ ಅಣಿನೆರೆಸಬೇಕಾದರೆ, ಮೂಲಸೌಕರ್ಯ ಹೂಡಿಕೆಯ ಮಾದರಿಯನ್ನು ಅರ್ಥಮಾಡಿಕೊಳ್ಳುವುದೂ ಕೂಡ ಯಾವುದರ ವಿರುದ್ಧ ದುಡಿಯುವ ಜನರು ಹೋರಾಟ ಮಾಡುತ್ತಿದ್ದಾರೋ ಅಂತಹ ಹೋರಾಟದ ಒಂದು ಭಾಗವಾಗಿರಬೇಕಾಗುತ್ತದೆ.