ಬೆಂಗಳೂರು : ಕಾಂಗ್ರೆಸ್ ಪಕ್ಷ ನೀಡಿರುವ ಮೂರು ಗ್ಯಾರೆಂಟಿಗಳ ಕಾರ್ಡ್‍ಗಳನ್ನು ನಾಳೆ ಮನೆ ಮನೆಗೆ ತಲುಪಿಸುವ ಅಭಿಯಾನಕ್ಕೆ ಕಾಂಗ್ರೆಸ್ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ.
ಪ್ರತಿಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಪೂರೈಕೆ ಮಾಡುವ ಗೃಹಜ್ಯೋತಿ, ಪ್ರತಿ ಮನೆಯ ಗೃಹಿಣಿಗೆ ಮಾಸಿಕ ಎರಡು ಸಾವಿರ ರೂಪಾಯಿಗಳನ್ನು ನೀಡುವ ಗೃಹಲಕ್ಷ್ಮೀ, 10 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಸೇರಿದಂತೆ ಮೂರು ಭರವಸೆಗಳ ಗ್ಯಾರಂಟಿ ಕಾರ್ಡ್‍ಗಳನ್ನು ಈಗಾಗಲೇ ಬ್ಲಾಕ್ ಕಾಂಗ್ರೆಸ್‍ಗಳಿಗೆ ತಲುಪಿಸಲಾಗಿದೆ.
ಶನಿವಾರ ಪಕ್ಷದ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರು ಎಲ್ಲೆ ಇದ್ದರೂ ತಾವಿದ್ದಲ್ಲೇ ಗ್ರಾಮ ಅಥವಾ ವಾರ್ಡ್‍ನಲ್ಲಿ ತಲಾ 50 ಮನೆಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‍ಗಳನ್ನು ತಲುಪಿಸಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ : ಸಚಿವ ವಿ. ಸೋಮಣ್ಣ ಕಾಂಗ್ರೆಸ್ ಸೇರುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಎಲ್ಲವೂ ಊಹಾಪೋಹ : ಡಿಕೆಶಿ ಸ್ಪಷ್ಟನೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜಂಟಿಯಾಗಿ ವಿಡಿಯೋ ಸಂದೇಶದಲ್ಲಿ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಮನವಿ ಮಾಡಿಕೊಂಡಿದ್ದು, ತಮ್ಮ ಸಹಿ ಇರುವ ಗ್ಯಾರಂಟಿ ಕಾರ್ಡ್‍ಗಳನ್ನು ಮನೆ ಮನೆಗೆ ತಲುಪಿಸುವಂತೆ ಕರೆ ನೀಡಿದ್ದಾರೆ. ನಾಳೆ ನಡೆಯುವ ಅಭಿಯಾನದ ಉಸ್ತುವಾರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರು ಹಾಗೂ ವೀಕ್ಷಕರು ನಿಗಾವಹಿಸಲಿದ್ದಾರೆ.
ಪ್ರತಿಮನೆಗೆ ಗ್ಯಾರಂಟಿ ಕಾರ್ಡ್ ತಲುಪಿಸುವಾಗ ಪ್ರತಿರೋಧಗಳು ಕಂಡು ಬರಬಹುದು, ಅನ್ಯಪಕ್ಷಗಳ ಕಾರ್ಯಕರ್ತರು ಮತ್ತು ಮುಖಂಡರ ಮನೆಯಲ್ಲಿ ಆಕ್ಷೇಪ ವ್ಯಕ್ತವಾಗಬಹುದು. ಆ ವೇಳೆ ಸಂಯಮದಿಂದ ವರ್ತಿಸಬೇಕು, ಎಲ್ಲಿಯೂ ಅಪಹಾಸ್ಯ ಅಥವಾ ಆಕ್ಷೇಪಕ್ಕೆ ಗುರಿಯಾಗುವಂತೆ ನಡೆದುಕೊಳ್ಳಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.