ನವದೆಹಲಿ: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಜೆಡ್.ಜಮೀರ್ ಅಹಮ್ಮದ್ ಖಾನ್ ಅವರು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಗುರುವಾರ ಮಧ್ಯಾಹ್ನ ಇ.ಡಿ ಕಚೇರಿಗೆ ಬಂದ ಜಮೀರ್ ಅವರನ್ನು ಸುಮಾರು ಮೂರು ತಾಸು ವಿಚಾರಣೆ ನಡೆಸಲಾಯಿತು ಎಂದು ಮೂಲಗಳಿಂದ ತಿಳಿದುಬಂದಿದೆ.
2021ರ ಆಗಸ್ಟ್ನಲ್ಲಿ ಜಮೀರ್ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿ ತನಿಖೆ ನಡೆಸಿತ್ತು. ಆ ಸಂದರ್ಭದಲ್ಲಿ ಶಾಸಕರ ಮನೆ ಸೇರಿದಂತೆ ಕೆಲವು ಆಸ್ತಿಗಳ ಮೌಲ್ಯಮಾಪನ ಮಾಡಿ ಇ.ಡಿ ಸಲ್ಲಿಸಿದ್ದ ವರದಿ ಆಧರಿಸಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರತ್ಯೇಕ ಪ್ರಕರಣ ದಾಖಲಿಸಿತ್ತು. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದ ಎಸಿಬಿ, ಜಮೀರ್ಗೆ ಸಂಬಂಧಿಸಿದ ಐದು ಸ್ಥಳಗಳ ಮೇಲೆ 2022ರಲ್ಲಿ ಶೋಧ ನಡೆಸಿತ್ತು. ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಸಮೀಪದಲ್ಲಿರುವ ಜಮೀರ್ ಬಂಗಲೆ, ಸಿಲ್ವರ್ ಓಕ್ ಅಪಾರ್ಟ್ಮೆಂಟ್ನಲ್ಲಿರುವ ಫ್ಲ್ಯಾಟ್, ಸದಾಶಿವನಗರದಲ್ಲಿರುವ ಅತಿಥಿ ಗೃಹ, ಬನಶಂಕರಿಯಲ್ಲಿರುವ ಜಿ.ಕೆ. ಅಸೋಸಿಯೇಟ್ಸ್ ಕಚೇರಿ ಮತ್ತು ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು.
ಇದನ್ನೂ ಓದಿ : ಕಾಂಗ್ರೆಸ್ ಶಾಸಕ ಜಮೀರ್ಖಾನ್ ಮನೆ,ಕಚೇರಿ ಮೇಲೆ ಐಟಿ ದಾ
ಜಾರಿ ನಿರ್ದೇಶನಾಲಯವು ಹಿಂದೆ ಜಮೀರ್ ವಿರುದ್ಧ ತನಿಖೆ ಕೈಗೊಂಡಿದ್ದಾಗ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಸಮೀಪದ ಅವರ ಭವ್ಯವಾದ ಬಂಗಲೆಯ ಮೌಲ್ಯಮಾಪನ ನಡೆಸಿತ್ತು. ಜಮೀರ್ ₹ 40 ಕೋಟಿ ಮೌಲ್ಯ ಘೋಷಿಸಿಕೊಂಡಿದ್ದರು. ಮಾರುಕಟ್ಟೆ ದರದಲ್ಲಿ ಅದು ಸುಮಾರು ₹ 80 ಕೋಟಿಗೂ ಹೆಚ್ಚು ಬೆಲೆಬಾಳುತ್ತದೆ ಎಂದು ಮೌಲ್ಯಮಾಪಕರು ವರದಿ ಸಲ್ಲಿಸಿದ್ದರು. ಶೌಚಾಲಯ, ಸ್ನಾನಗೃಹ, ಹೋಂ ಥಿಯೇಟರ್ ಸೇರಿದಂತೆ ಎಲ್ಲ ಕಡೆಗಳಲ್ಲೂ ಶೋಧ ನಡೆಸಿದ ಅಧಿಕಾರಿಗಳು, ಮನೆ ನಿರ್ಮಾಣಕ್ಕೆ ಮಾಡಿರುವ ವೆಚ್ಚದ ಕುರಿತು ಮಾಹಿತಿ ಸಂಗ್ರಹಿಸಿದ್ದರು.