ಸಚಿವ ವಿ. ಸೋಮಣ್ಣ ಕಾಂಗ್ರೆಸ್‌ ಸೇರುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಎಲ್ಲವೂ ಊಹಾಪೋಹ : ಡಿಕೆಶಿ ಸ್ಪಷ್ಟನೆ

ಬೆಂಗಳೂರು : ವಸತಿ ಸಚಿವ ವಿ.ಸೋಮಣ್ಣ ಯಾರು ಕಾಂಗ್ರೆಸ್ ಸೇರುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಎಲ್ಲವೂ ಊಹಾಪೋಹಗಳು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಣ್ಣ ಸೇರ್ಪಡೆ ಬಗ್ಗೆ ನಮ್ಮ ಬಳಿ ಯಾರು ಬಂದು ಚರ್ಚೆ ಮಾಡಿಲ್ಲ, ಅಂತಹ ಬೆಳವಣಿಗೆಯೆ ನಡೆದಿಲ್ಲ. ಅವರ ಪಕ್ಷದ ವಿಚಾರ ನಮಗೆ ಬೇಡ ಎಂದು ಹೇಳಿವ ಮೂಲಕ ಸಚಿವ ವಿ ಸೋಮಣ್ಣ ಕಾಂಗ್ರೆಸ್‌ ಪಕ್ಷಕ್ಕೆ ಸೇರುತ್ತಾರೆ ಎಂಬ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಸಾಮರ್ಥ್ಯ ಇಲ್ಲವೆಂದರೆ ಬಿಡಿ, ಭರವಸೆ ನೀಡಿದಂತೆ ನಾವು ನಡೆದುಕೊಳ್ಳುತ್ತೇವೆ :
ಕಾಂಗ್ರೆಸ್‍ನ ಗೃಹ ಜ್ಯೋತಿ ಯೋಜನೆ ಅನುಷ್ಠಾನಗೊಳಿಸಲು ಹೇಗೆ ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ. ಸಾಮರ್ಥ್ಯ ಇಲ್ಲವೆಂದರೆ ಬಿಡಿ ನಮಗೆ ಗೊತ್ತಿದೆ ನಾವು ಭರವಸೆ ನೀಡಿದಂತೆ ನಡೆದುಕೊಳ್ಳುತ್ತೇವೆ. ಹಿಂದೆ ಕಾಂಗ್ರೆಸ್ ರೈತರಿಗೆ ಉಚಿತ ವಿದ್ಯುತ್ ನೀಡಿತ್ತು. ಬಿಜೆಪಿಯವರು ತಮ್ಮ ಪ್ರಣಾಳಿಕೆಯಲ್ಲಿ ಮೂರು ಗಂಟೆ ಹೆಚ್ಚು ವಿದ್ಯುತ್ ನೀಡುವುದಾಗಿ ಹೇಳಿದ್ದರು, ಆ ರೀತಿ ಏಕೆ ಹೇಳಿದ್ದರು. ಮಹಿಳೆಯರಿಗೆ ಎರಡು ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆ ಘೋಷಿಸುತ್ತಿದ್ದಂತೆ ಮುಖ್ಯಮಂತ್ರಿ ಮೊದಲು 500 ರೂಪಾಯಿ ಕೊಡುತ್ತೇವೆ ಎಂದರು, ನಂತರ ಒಂದು ಸಾವಿರ ರೂಪಾಯಿ ಕೊಡುತ್ತೇವೆ ಎಂದಿದ್ದಾರೆ.

ಸಿಎಂ ಹುದ್ದೆಯ ಘನತೆಯನ್ನು ಬೊಮ್ಮಾಯಿ ಕಳೆಯುತ್ತಿದ್ದಾರೆ : 
ನಮಗೆ ಅಧಿಕಾರ ಇಲ್ಲ, ಮಾತನಾಡುತ್ತೇವೆ ಎಂದು ಹೇಳಬಹುದಾದರೂ ಸರ್ಕಾರ ನಡೆಸುವ ನೀವು ಭರವಸೆ ನೀಡುತ್ತಿರುವುದೇಕೆ. ಕಾಂಗ್ರೆಸ್ ಭರವಸೆ ನೀಡಿದಾಗ ಮಾತ್ರ ಅದು ಅನುಷ್ಠಾನವಾಗಲು ಸಾಧ್ಯವಿಲ್ಲ ಎಂದು ಬಿಜೆಪಿಯವರು ಮಾತನಾಡುತ್ತಾರೆ. ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಬರೀ ಸುಳ್ಳು ಹೇಳುತ್ತಾರೆ. ಈ ಮೂಲಕ ಹುದ್ದೆಯ ಘನತೆಯನ್ನು ಕಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಲೋಕಾಯುಕ್ತ ಮರು ಸ್ಥಾಪನೆ ಬಿಜೆಪಿಯ ಸಾಧನೆ ಅಲ್ಲ: 
ಭ್ರಷ್ಟಚಾರದ ಬಗ್ಗೆ ಬಿಜೆಪಿಯವರು ನನ್ನ ಬಗ್ಗೆ ವ್ಯಂಗ್ಯವಾಡಲಿ, ಉಚಿತ ವಿದ್ಯುತ್ ಕೊಡಲಾಗಲ್ಲ, ಎರಡು ಸಾವಿರ ರೂಪಾಯಿ ಕೊಡಲಾಗಲ್ಲ ಎಂದು ಹೇಳುತ್ತಲೇ ಇರಲಿ. ಅವರು ಆಗಲ್ಲ ಎಂದು ಹೇಳಿದ್ದನ್ನೇಲ್ಲಾ ನಾವು ಮುಂದೆ ನೋಡಿ ತೋರಿಸುತ್ತೇವೆ ಎಂದರು. ಲೋಕಾಯುಕ್ತ ಮರು ಸ್ಥಾಪನೆ ಬಿಜೆಪಿಯ ಸಾಧನೆ ಅಲ್ಲ. ಹೈಕೋರ್ಟ್ ಆದೇಶದ ಮೇರೆ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ನ್ಯಾಯಾಲಯ ಯಾವ ಲೆಕ್ಕಾಚಾರದಲ್ಲಿ ಮಾಡಾಳುವಿಗೆ ಜಾಮೀನು ನೀಡಿದೆ ಗೊತ್ತಿಲ್ಲ: 
ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರಿಗೆ ನ್ಯಾಯಾಲಯ ಜಾಮೀನು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೋರ್ಟ್ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ. ನ್ಯಾಯಾಲಯ ನನಗೆ ಜಾಮೀನು ಕೊಟ್ಟಾಗ ಒಂದು ರೀತಿ, ಬೇರೆಯವರಿಗೆ ಬೇರೆಯವರಿಗೆ ಜಾಮೀನು ಕೊಟ್ಟಾಗ ಮತ್ತೊಂದು ರೀತಿ ಮಾತನಾಡಲಾಗುವುದಿಲ್ಲ ಎಂದು ಹೇಳಿದರು. ನ್ಯಾಯಾಲಯ ಯಾವ ಲೆಕ್ಕಾಚಾರದಲ್ಲಿ ಜಾಮೀನು ನೀಡಿದೆ ಎಂದು ಗೋತ್ತಿಲ್ಲ. ನ್ಯಾಯಾಧೀಶರ ಬುದ್ಧಿವಂತಿಕೆಯ ಬಗ್ಗೆ ನಾನು ಮಾತನಾಡುವುದಿಲ್ಲ. ಶಾಸಕರು ತಲೆ ಮರೆಸಿಕೊಂಡಿದ್ದರು, ತನಿಖಾಕಾರಿಯ ಮುಂದೆ ಶರಣಾಗಲಿ ಎಂದು ಜಾಮೀನು ನೀಡಿರಬಹುದು ಎಂದು ಹೇಳಿದರು.

ಇದನ್ನೂ ಓದಿ : ಎ-1 ಆರೋಪಿಯಾಗಿರುವ ಮಾಡಾಳು ವಿರೂಪಾಕ್ಷಪ್ಪನಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ಏನೇ ಮಾಡಿದರೂ ಬಿಜೆಪಿ ಗೆಲವು 65 ಕ್ಷೇತ್ರಗಳಿಗೆ ಸೀಮಿತ:
ಪ್ರಸ್ತುತ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಬಿಜೆಪಿ 65 ಸ್ಥಾನಗಳಲ್ಲಿ ಗೆಲ್ಲಲು ಸಾಧ್ಯವಿಲ್ಲ. ಹಿಂದೆ ಯಡಿಯೂರಪ್ಪ ಬಿಜೆಪಿ ಬಿಟ್ಟು ಹೋದಾಗ 40 ಸ್ಥಾನಗಳಿಗೆ ಕುಸಿದಿತ್ತು, ಮತ್ತೆ ಅದೇ ಪರಿಸ್ಥಿತಿ ಉದ್ಭವಿಸಿದರು ಅಚ್ಚರಿ ಪಡಬೇಕಿಲ್ಲ ಎಂದರು. ಸರ್ಕಾರದ ಬಗ್ಗೆ ಜನ ಸಾಮಾನ್ಯರಲ್ಲಿ ಆಕ್ರೋಶ ಇದೆ. ಆಟೋದವರು, ಬೀದಿ ಬದಿ ವ್ಯಾಪಾರಿಗಳು, ಅಧಿಕಾರಿಗಳು, ಪತ್ರಿಕೆಯವರು ಎಲ್ಲರೂ ತಮಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳುತ್ತಿದ್ದಾರೆ. ಚುನಾವಣೆಯಲ್ಲಿ ಸೋಲು ಕಾಣುವುದು ಖಚಿತವಾಗುತ್ತಿದ್ದಂತೆ ಬಿಜೆಪಿಯವರು ದೆಹಲಿ ನಾಯಕರನ್ನು ಕರೆಸಿ ನಾನಾ ಕಸರತ್ತು ಮಾಡುತ್ತಿದ್ದಾರೆ. ಯಡಿಯೂರಪ್ಪರನ್ನು ಪ್ರಚಾರಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಏನೇ ಮಾಡಿದರೂ ಅವರ ಗೆಲುವು 65 ಕ್ಷೇತ್ರಗಳಿಗಿಂತಲೂ ಕಡಿಮೆಯಾಗಲಿದೆ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಪರಿಶೀಲನಾ ಸಮಿತಿ ಸಭೆ ನಡೆಸುತ್ತಿದೆ. ಈಗಾಗಲೇ ಶೇ.75ರಷ್ಟು ಪೂರ್ಣಗೊಂಡಿದೆ. ಒಂದೆರಡು ದಿನಗಳಲ್ಲಿ ಎಲ್ಲವನ್ನೂ ದೆಹಲಿಗೆ ಕಳುಹಿಸುತ್ತೇವೆ. ಕ್ಷೇತ್ರದಲ್ಲಿ ಯಾರಿಗೆ ಏನು ಸಂದೇಶ ನೀಡಬೇಕೋ ಅದನ್ನು ತಲುಪಿಸಿಯಾಗಿದೆ. ಕೆಲಸ ನಡೆಯುತ್ತಿದೆ ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *