KSDL ಹಗರಣ : ಶಾಸಕ ಮಾಡಾಳು ವಿರೂಪಾಕ್ಷಪ್ಪ ಭವಿಷ್ಯ ಮಂಗಳವಾರ ನಿರ್ಧಾರ

ಬೆಂಗಳೂರು : ಬಂಧನದ ಭೀತಿ ಎದುರಿಸುತ್ತಿರುವ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರು ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದು, ಮಂಗಳವಾರ ಅವರ ಭವಿಷ್ಯ ನಿರ್ಧಾರವಾಗಲಿದೆ.

ಒಂದು ವೇಳೆ ಮಂಗಳವಾರ ಹೈಕೋರ್ಟ್ ಏಕಸದಸ್ಯ ಪೀಠ ಮಾಡಾಳ್‍ಗೆ ಜಾಮೀನು ಮಂಜೂರು ಮಾಡಿದರೆ ಬಂಧನದ ಭೀತಿಯಿಂದ ಪಾರಾಗುತ್ತಾರೆ. ಅರ್ಜಿ ವಜಾಗೊಂಡರೆ ಬಂಧನಕ್ಕೊಳಗಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಮಾಡಾಳ್ ವಿರೂಪಾಕ್ಷಪ್ಪ ಪರ ವಕೀಲ ಸಂದೀಪ್ ಪಾಟೀಲ್ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ನ್ಯಾಯಪೀಠವು ಮಂಗಳವಾರ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದೆ.

ಲೋಕಾಯುಕ್ತ ದಾಳಿಯಲ್ಲಿ ಪುತ್ರನ ಮನೆಯಲ್ಲಿ ಸಿಕ್ಕ ಕೋಟಿ ಕೋಟಿ ಅಕ್ರಮ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಎ1 ಆರೋಪಿಯಾಗಿದ್ದಾರೆ. ಕಳೆದ ಐದು ದಿನಗಳಿಂದ ನಾಪತ್ತೆಯಾಗಿರುವ ವಿರೂಪಾಕ್ಷಪ್ಪ ಅಜ್ಞಾತ ಸ್ಥಳದಿಂದಲೇ ತಮ್ಮ ವಕೀಲರಿಂದ ಜಾಮೀನು ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು, ತುರ್ತು ವಿಚಾರಣೆ ನಡೆಸುವಂತೆ ಕೋರ್ಟ್‍ಗೆ ಮನವಿ ಮಾಡಿದ್ದರು. ಇದೇ ಸಂದರ್ಭದಲ್ಲಿ ಮಾಡಾಳ್ ವಿರೂಪಾಕ್ಷಪ್ಪನವರು ತಮ್ಮ ಮೇಲೆ ಲೋಕಾಯುಕ್ತರು ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆಯೂ ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದಾರೆ.

ಮೂರು ತಂಡ ರಚನೆ : 

ಶಾಸಕ ಮಾಡಾಳ್ ಪುತ್ರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಬೆನ್ನಲ್ಲೇ ಐದು ದಿನಗಳು ಆದರೂ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರತ್ಯಕ್ಷವಾಗಿಲ್ಲ. ಪುತ್ರನ ಬಂಧನದ ಬಳಿಕ ಮಾಡಾಳ್ ವಿರೂಪಾಕ್ಷಪ್ಪ ತಮ್ಮ ಪೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರ ಮತ್ತೆಗೆ ಲೋಕಾಯುಕ್ತ ಅಧಿಕಾರಿಗಳು ತಂಡ ಕಟ್ಟಿಕೊಂಡು ಕಾರ್ಯಚರಣೆ ನಡೆಸಿದ್ದಾರೆ.

ಪತ್ತೆಗೆ ಲೋಕಾಯುಕ್ತ ಮೂರು ತಂಡ ರಚಿಸಿದೆ. ಮೂವರು ಡಿವೈಎಸ್ ಪಿ ಗಳ ನೇತೃತ್ವದಲ್ಲಿ ಸುಮಾರು ಹದಿನೈದು ಜನರ ಅಧಿಕಾರಿಗಳ ಒಳಗೊಂಡಿರುವ ಮೂರು ಟೀಮ್ ರಚನೆ ಮಡಲಾಗಿದ್ದು, ಮಾಡಾಳ್‍ಗಾಗಿ ಹುಡುಕಾಟ ಆರಂಭಿಸಿವೆ.
ಪೊಲೀಸರು ನೋಟಿಸ್ ನೀಡಿದ ಬಳಿಕ ವಿಚಾರಣೆಗೆ ಹಾಜರಾಗುವ ಲೆಕ್ಕಾಚಾರದಲ್ಲಿ ಮಾಡಾಳ್ ಇದ್ದಾರೆ. ಆದರೆ ನೋಟಿಸ್ ನೀಡದೇ ಎಂಎಲ್‍ಎ ಲಾಕ್ ಮಾಡಲು ಲೋಕಾಯುಕ್ತ ಅಧಿಕಾರಿಗಳ ಪ್ಲಾನ್ ಮಾಡಿದ್ದಾರೆ. ನೋಟಿಸ್ ನೀಡಿದ ತಕ್ಷಣ ಬಂಧನ ಮಾಡುವಂತಿಲ್ಲ. ಕನಿಷ್ಠ ಮೂರು ಬಾರಿ ವಿಚಾರಣೆ ಮಾಡಿ ನಂತರ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ ಎಂದು ಅರೆಸ್ಟ್ ಮಾಡಬಹುದು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡದೇ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುವ ಚಿಂತನೆ ನಡೆಸಿದೆ.

ಶುಕ್ರವಾರ ನ್ಯಾಯಾಲಯ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು. ಜನಪ್ರತಿನಿಧಿಗಳ ವಿಶೇಷ ಕೋರ್ಟ್‍ನ ನ್ಯಾಯಾಧೀಶ ಬಿ. ಜಯಂತ್ ಕುಮಾರ್ ಅರ್ಜಿ ವಿಚಾರಣೆ ನಡೆಸಿದ್ದರು. ಲೋಕಾಯುಕ್ತ ಪೊಲೀಸರು ಮುಚ್ಚಿದ ಲಕೋಟೆಯಲ್ಲಿ ಎಫ್‌ಐಆರ್‌ ಪ್ರತಿ ಸಲ್ಲಿಕೆ ಮಾಡಿದರು. ಇದನ್ನು ಒಪ್ಪಿದ ಕೋರ್ಟ್ ಪ್ರಕರಣದ ಸರಿಯಾದ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿತ್ತು.

ಇದನ್ನೂ ಓದಿ : ಶಾಸಕ ಮಾಡಾಳು ವಿರುದ್ಧವೂ ಕ್ರಮ ಕೈಗೊಳ್ಳಿ : ಸಿದ್ದರಾಮಯ್ಯ ಒತ್ತಾಯ

ಮಾಡಾಳ್ ವಿರೂಪಾಕ್ಷಪ್ಪ ಇನ್ನೂ ಏಕೆ ಬಂಧಿಸಿಲ್ಲ? ಎಂದು ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಒಬ್ಬ ಶಾಸಕನನ್ನು ಹುಡುಕಲು ಐದು ದಿನ ಬೇಕೆ? ಎಂದು ಸರಣಿ ಟ್ವೀಟ್ ಮಾಡಿ ಟೀಕೆ ಮಾಡುತ್ತಿದೆ. ಆದರೆ ಶಾಸಕರು ಮಾತ್ರ ಇದುವರೆಗೂ ಪತ್ತೆಯಾಗಿಲ್ಲ. ಶಾಸಕರ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ ಪ್ರಕರಣ ಬಿಜೆಪಿ ಪಾಲಿಗೆ ಬಹಳ ಹಾನಿ ಮಾಡಿದೆ. ಅದರಲ್ಲೂ ಚುನಾವಣೆ ಎದುರು ಇರುವಾಗ ಶಾಸಕರ ಪುತ್ರ ಸಿಕ್ಕಿ ಬಿದ್ದಿದ್ದು ಪ್ರತಿಪಕ್ಷಗಳ ಕೈಗೆ ಅಸ್ತ್ರ
ಕೊಟ್ಟಂತೆ ಆಗಿದೆ.

ಇದನ್ನೂ ಓದಿ : ಲಂಚ ಸ್ವೀಕಾರ ಪ್ರಕರಣ : ಪ್ರಶಾಂತ್‌ ಮಾಡಾಳ್‌ ಸೇರಿ ಐವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಲೋಕಾಯುಕ್ತ ಪೊಲೀಸರು ಶಾಸಕರಿಗೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಅವರು ಕಚೇರಿಗೆ ಆಗಮಿಸಿದರೆ ಪ್ರಶ್ನಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಹೈಕೋರ್ಟ್ ಮೊರೆ ಹೋಗಿರುವ ಶಾಸಕರು ಲೋಕಾಯುಕ್ತ ಕಚೇರಿಗೆ ಆಗಮಿಸುವ ಸಾಧ್ಯತೆ ಕಡಿಮೆ ಇದೆ.

Donate Janashakthi Media

Leave a Reply

Your email address will not be published. Required fields are marked *