ನವದೆಹಲಿ: ಆರ್ಥಿಕ ವರ್ಷ 2022-23ನೇ ಸಾಲಿನ ಕೊನೆ ತಿಂಗಳ ಮೊದಲ ದಿನವೇ ಕೇಂದ್ರ ಸರ್ಕಾರ ಅಡುಗೆ ಅನಿಲ ದರವನ್ನು ಹೆಚ್ಚಳ ಮಾಡಿದ್ದು, ಜನಸಾಮಾನ್ಯರಿಗೆ ಬೇಸಿಗೆ ಈ ಸುಡು ಬಿಸಿಲಿನಲ್ಲಿ ಬೆಲೆ ಏರಿಕೆಯ ಬಿಸಿಯೂ ತಟ್ಟಲಿದೆ. ನೂತನ ದರ ಇಂದಿನಿಂದಲೇ (ಮಾರ್ಚ್ 1) ಜಾರಿಗೆ ಬರಲಿದೆ.
14.2 ಕೆಜಿ ತೂಕದ ಗೃಹ ಬಳಕೆಯ ಅನಿಲದ ದರ ಇಂದಿನಿಂದ 50 ರೂಪಾಯಿ ಹೆಚ್ಚಳವಾಗಲಿದೆ. 19 ಕೆಜಿ ವಾಣಿಜ್ಯ ಬಳಕೆಯ ಅನಿಲದ ದರ 350 ರೂಪಾಯಿ 50 ಪೈಸೆ ಹೆಚ್ಚಿಸಲಾಗಿದೆ ಪರಿಷ್ಕೃತ ದರದ ಪ್ರಕಾರ ವಾಣಿಜ್ಯ ಅನಿಲದ ದರ ದೆಹಲಿಯಲ್ಲಿ ರೂ.2,119.50 ಹಾಗೂ ಗೃಹ ಬಳಕೆಯ ಅನಿಲದ ಬೆಲೆ ರೂ.1,103 ರೂ. ರಷ್ಟು ದರಕ್ಕೆ ವಿನಿಯೋಗವಾಗಲಿದೆ. ಅದೇ ರೀತಿ ಬೆಂಗಳೂರಿನಲ್ಲಿ ಗೃಹಬಳಕೆಯ ಅನಿಲದ ದರ 1,055.50 ರೂ. ಆಗಿದೆ.
ಇದನ್ನು ಓದಿ: ಅಡುಗೆ ಅನಿಲ ಸಬ್ಸಿಡಿ ಸ್ಥಗಿತ: ಕೇಂದ್ರ ಸರ್ಕಾರ ಅಧಿಕೃತ ಘೋಷಣೆ
ಕೋಲ್ಕತ್ತಾದಲ್ಲಿ ರೂ.1,870ಕ್ಕೆ ವಿನಿಯೋಗವಾಗುತ್ತಿದ್ದ ವಾಣಿಜ್ಯ ಬಳಕೆಯ ಅನಿಲ ಈಗ 2,221.5 ಆಗಿದೆ. ಮುಂಬೈನಲ್ಲಿ ಇದರ ಬೆಲೆ ಈಗ ರೂ.1,721 ರಿಂದ ರೂ. 2,071.50ಕ್ಕೆ ಏರಿಕೆಯಾಗಿದೆ. ಚೆನ್ನೈನಲ್ಲಿ ರೂ.1,917ಕ್ಕೆ ಸಿಗುತ್ತಿದ್ದ ಅನಿಲ ಈಗ ರೂ. 2,268ಕ್ಕೆ ದೊರೆಯಲಿದೆ.
ಈ ಎಲ್ಲಾ ಹೊಸ ದರಗಳು ಇಂದಿನಿಂದ ಜಾರಿಗೆ ಬರಲಿದೆ. ಈ ವರ್ಷದಲ್ಲಿ ವಾಣಿಜ್ಯ ಬಳಕೆಯ ಅನಿಲದ ದರದಲ್ಲಿ ಇದು ಎರಡನೇ ಏರಿಕೆಯಾಗಿದೆ. ಇದಕ್ಕೂ ಮುನ್ನ ಜನವರಿ 1 ರಂದು ಬೆಲೆಯನ್ನು ಪ್ರತಿ ಯೂನಿಟ್ಗೆ 25 ರೂ. ಹೆಚ್ಚಿಸಲಾಗಿತ್ತು.
ಇದನ್ನು ಓದಿ: ಮತ್ತೆ ಬೆಲೆ ಏರಿಕೆ ಕಂಡ ಗೃಹಬಳಕೆ ಅನಿಲ: ರೂ.50 ದರ ಹೆಚ್ಚಳ
2014ರಲ್ಲಿ 19 ಕೆಜಿ ತೂಕದ ಪ್ರತಿ ವಾಣಿಜ್ಯ ಬಳಕೆಯ ಅನಿಲ ರೂ.350 ರೂಪಾಯಿಗಳಷ್ಟು ಹೆಚ್ಚಿಸಿದ ನಂತರ ಇದು ಎರಡನೇ ಅತಿದೊಡ್ಡ ಭಾರಿ ಏರಿಕೆಯಾಗಿದೆ. ಭಾರತದಲ್ಲಿ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ ಅನಿಲದ ಬೆಲೆಯನ್ನು ಸರ್ಕಾರಿ-ಚಾಲಿತ ತೈಲ ಕಂಪನಿಗಳು ಮಾಸಿಕ ಆಧಾರದ ಮೇಲೆ ನಿರ್ಧರಿಸುತ್ತವೆ ಮತ್ತು ಬದಲಾವಣೆಗೆ ಒಳಪಟ್ಟಿರುತ್ತದೆ. ಸ್ಥಳೀಯ ತೆರಿಗೆಗಳಿಂದಾಗಿ ರಾಜ್ಯದಿಂದ ರಾಜ್ಯಕ್ಕೆ ಅಡುಗೆ ಅನಿಲದ ಬೆಲೆಗಳು ಬದಲಾಗುತ್ತವೆ. ಇಂಧನ ಚಿಲ್ಲರೆ ವ್ಯಾಪಾರಿಗಳು ಪ್ರತಿ ತಿಂಗಳು ದರ ಪರಿಷ್ಕರಣೆಯನ್ನು ಮಾಡುತ್ತವೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ