ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ರಾಜಕೀಯ ನಾಯಕರ ಮಾತು ಕೇಳಿ ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್(ಸಿಐಟಿಯು) ನಾಯಕ ಶಬ್ಬೀರ್ ಮಹ್ಮದ್ ಜಾಲಹಳ್ಳಿ ಮೇಲೆ ರಾಜಕೀಯ ಪ್ರಭಾವದ ಒತ್ತಡಕ್ಕೆ ಮಣಿದು ಗೂಂಡಾ ಕಾಯ್ದೆ ಅಡಿಯಲ್ಲಿ ಸುಳ್ಳು ಪ್ರಕರಣ ದಾಖಲಾಗಿದೆ. ಇದನ್ನು ಖಂಡಿಸಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಇದನ್ನು ಓದಿ: ವಾರಕ್ಕೆ 5 ದಿನ – ದಿನಕ್ಕೆ 7 ಗಂಟೆ ಅಥವಾ ವಾರಕ್ಕೆ 35 ಗಂಟೆ ಕೆಲಸದ ಅವಧಿ ನಿಗದಿಗಾಗಿ ಸಿಐಟಿಯು ಆಗ್ರಹ
ಶಬ್ಬೀರ್ ಜಾಲಹಳ್ಳಿ ಮೇಲೆ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಗುಂಡಾ ಕೇಸ್ ವಾಪಸ್ಸು ತೆಗೆದುಕೊಂಡು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮಜರುಗಿಸಬೇಕು ಎಂದು ಒತ್ತಾಯಿಸಿ ಇಂದು(ಫೆಬ್ರವರಿ 28) ಸಿಪಿಐ(ಎಂ) ಪಕ್ಷದ ಮುಖಂಡರು, ರೈತ ಸಂಘ, ವಿದ್ಯಾರ್ಥಿ, ಯುವಜನ, ಕಾರ್ಮಿಕ ಸಂಘಟನೆ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಶಬ್ಬೀರ್ ಜಾಲಹಳ್ಳಿ ವಿರುದ್ಧ ಗುಂಡಾ ಕೇಸ್ ನಂ. 921/20-21 ಮತ್ತು 19, 2020 ಗುಪ್ತವಾಗಿ ಏಕಪಕ್ಷೀಯವಾಗಿ ದಾಖಲಿಸಿದ್ದಾರೆ. ಈ ವಿಚಾರವು ಪ್ರಕರಣ ದಾಖಲಾದ ಸುಮಾರು ವರ್ಷಗಳ ನಂತರ ಈಗ ಚುನಾವಣೆಯ ಸಂದರ್ಭದಲ್ಲಿ ಈ ರೀತಿ ಗೂಂಡಾ ಕಾಯ್ದೆ ಅಡಿಯಲ್ಲಿ ಇರುವ ಆರೋಪಿಗಳನ್ನು ಠಾಣಿಗೆ ಕರೆಯಿಸಿ ಮುಚ್ಚಳಕೆ ಬರಿಸಿಕೊಳ್ಳುವ ಪ್ರಕ್ರಿಯೆ ನಡೆಸಿದ್ದಾರೆ. 2023ರ ಫೆಬ್ರವರಿ 08ರಂದು ಜಾಲಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಶಬ್ಬೀರ್ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡುವ ಮೂಲಕ ಸಂಪರ್ಕಿಸಿ, ನಿಮ್ಮ ಮೇಲೆ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಠಾಣೆಗೆ ಬನ್ನಿ ಎಂದು ತಿಳಿಸಿದ್ದಾರೆ.
ಶಬ್ಬೀರ್ ಜಾಲಹಳ್ಳಿ ಕಳೆದ 10-15 ವರ್ಷಗಳಿಂದ ವಿದ್ಯಾರ್ಥಿ ದಿಸೆಯಿಂದಲೇ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಸಂಘಟನೆಯಿಂದ ರೈತ ಮತ್ತು ಕಾರ್ಮಿಕ ಸಂಘಟನೆಗಳ ಮೂಲಕ ಬಡವರ ಕಾರ್ಮಿಕರ ಹಕ್ಕುಗಳಿಗಾಗಿ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ನಿರಂತರವಾಗಿ ಚಳುವಳಿಗಳು ನಡೆಸುತ್ತಿದ್ದಾರೆ. ಚಳುವಳಿಯ ಭಾಗವಾಗಿ ಜನರ ಹಕ್ಕುಗಳಗಾಗಿ ಹೋರಾಡುವ ಇವರ ಮೇಲೆ ಯಾವುದೇ ರೀತಿಯ ಪ್ರಕರಣಗಳು ಇರುವುದಿಲ್ಲ.
ಇದನ್ನು ಓದಿ: ಕಾರ್ಮಿಕ ಸಚಿವರ ಕಾರ್ಖಾನೆಯಲ್ಲೇ ಕಾರ್ಮಿಕರಿಗೆ ಜೀವ ರಕ್ಷಣೆ ಇಲ್ಲ ; ಸಚಿವ ಹೆಬ್ಬಾರ್ ರಾಜೀನಾಮೆಗೆ ಸಿಐಟಿಯು, ಡಿವೈಎಫ್ಐ ಆಗ್ರಹ
ಆದರೆ ಜಾಲಹಳ್ಳಿ ಪೊಲೀಸರು ಏಕಾಏಕಿಯಾಗಿ ಪಟ್ಟಭದ್ರ ಹಿತಾಸಕ್ತಿಗಳ ರಾಜಕೀಯ ಉದ್ದೇಶಕ್ಕಾಗಿ ಕಾನೂನು ಬಾಹಿರ ಸುಳ್ಳು ಗೂಂಡಾ ಪ್ರಕರಣ ದಾಖಲಿಸಿರುವ ಪೊಲೀಸ್ ಅಧಿಕಾರಿಗಳ ಕ್ರಮವನ್ನು ಸಿಪಿಐ(ಎಂ), ರಾಯಚೂರು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಈ ಸುಳ್ಳು ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕು ಮತ್ತು ಕೂಡಲೇ ಶಬ್ಬೀರ್ ಜಾಲಹಳ್ಳಿ ಮೇಲೆ ಹಾಕಿರುವ ಸುಳ್ಳು ಗೂಂಡಾ ಕೇಸ್ನ್ನು ವಾಪಸ್ಸು ಪಡೆಯಬೇಕೆಂದು ಪ್ರತಿಭಟನೆ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಅವುಗಳು ಸ್ಪಂದನೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಪ್ರತಿಭಟನೆಗೆ ಮೊದಲು ಶ್ರೇಷ್ಠ ದಾಸ ಕನಕ ದಾಸರ ವೃತ್ತದಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ