ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ವಿದ್ಯಾರ್ಥಿಗಳಿಗೆ ಈ ವರ್ಷವೂ ಕೃಪಾಂಕ ಜಾರಿ!

ಬೆಂಗಳೂರು: ಕೋವಿಡ್ ಕಾರಣದಿಂದಾಗಿ ಕಳೆದ ವರ್ಷ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕೃಪಾಂಕ ಅಂಕಗಳನ್ನು ನೀಡಿದಂತೆ ಈ ವರ್ಷವೂ ಅಂದರೆ, 2022-23ನೇ ಸಾಲಿನ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ವಾರ್ಷಿಕ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗುತ್ತದೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಲಿ ಎಂದು ತಿಳಿಸಿದೆ.

ಒಟ್ಟಾರೆ ಕನಿಷ್ಠ ಅಂಕ ಗಳಿಸುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶೇ. 10ರಷ್ಟು ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇ. 5ರಷ್ಟು ಕೃಪಾಂಕ ನೀಡಲು ನಿರ್ಧಾರವಾಗಿದೆ. ಈ ಕೃಪಾಂಕವನ್ನು ಕೋವಿಡ್ ಕಾರಣದಿಂದ ಕಲಿಕೆ ಮೇಲೆ ಉಂಟಾಗಿರುವ ಪರಿಣಾಮದಿಂದ ಮಕ್ಕಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಹೊರಬಂದಿಲ್ಲ. ಶೈಕ್ಷಣಿಕವಾಗಿ ಚೇತರಿಕೆ ಕಂಡುಬರದ ಹಿನ್ನೆಲೆಯಲ್ಲಿ 2023ರಲ್ಲಿಯೂ ಕೃಪಾಂಕ ನೀಡಲು ನಿರ್ಧರಿಸಲಾಗಿದೆ.

ಇದನ್ನು ಓದಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

2019ರ ವರೆಗೆ ಶೇಕಡ 5ರಷ್ಟು ಕೃಪಾಂಕ ನೀಡಲಾಗುತ್ತಿತ್ತು. ನಂತರ ಕೊರೊನಾ ಸಾಂಕ್ರಾಮಿಕತೆಯ ಕಾರಣದಿಂದಾಗಿ 2020ರಲ್ಲಿ ಪರೀಕ್ಷೆಗಳು ನಡೆದಿರಲಿಲ್ಲ. 2021ರಲ್ಲಿ ಎಲ್ಲರನ್ನೂ ಉತ್ತೀರ್ಣಗೊಳಿಸಲಾಗಿತ್ತು. 2022ರಲ್ಲಿ ಶೇಕಡ 10 ರಷ್ಟು ಕೃಪಾಂಕ ನೀಡಲಾಗಿತ್ತು.

ಈ ವರ್ಷವೂ ಒಟ್ಟಾರೆ ಕನಿಷ್ಠ ಅಂಕ ಗಳಿಸುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶೇ.10ರಷ್ಟು ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇ.5ರಷ್ಟು ಕೃಪಾಂಕ ನೀಡಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಲಿ ನಿರ್ಣಯಿಸಿದೆ.

ಎಸ್ಸೆಸ್ಸೆಲ್ಸಿಯಲ್ಲಿ 6 ವಿಷಯಗಳ ಪೈಕಿ ಮೂರು ವಿಷಯಗಳಲ್ಲಿ ಉತ್ತೀರ್ಣರಾಗಿದ್ದರೆ, ಉಳಿದ ಮೂರು ವಿಷಯಗಳಿಗೆ ಕನಿಷ್ಠ 1 ರಿಂದ ಗರಿಷ್ಠ 26 ಅಂಕಗಳವರೆಗೆ ಕೃಪಾಂಕ ದೊರೆಯಲಿದೆ. ಆದರೆ, 625 ಅಂಕಗಳಿಗೆ ಕನಿಷ್ಠ 219 ಅಂಕ ಪಡೆಯಲು ಬೇಕಾಗುವ ಅಂಕಗಳನ್ನು ನೀಡಲಿದೆ.

ಇದನ್ನು ಓದಿ: ಪರೀಕ್ಷೆಗೆ ಆರ್ಧ ತೋಳಿನ ಬಟ್ಟೆ ಧರಿಸಬೇಕು – ಹಾಗೆ ಬಂದರೆ ಪೊಲೀಸರು ಕತ್ತರಿಸುವರು

100 ಅಂಕಗಳ ಪರೀಕ್ಷೆಯಲ್ಲಿ 20 ಅಂಕಗಳಿಗೆ ಮೌಖಿಕ ಮತ್ತು 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. 80 ಅಂಕಗಳಿಗೆ ಕನಿಷ್ಠ 28 ಅಂಕಗಳನ್ನು ಪಡೆದಿರಬೇಕು. ಆದರೆ, ಕೆಲವು ವಿದ್ಯಾರ್ಥಿಗಳು ಕೆಲವು ವಿಷಯಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಕೆಲವು ವಿಷಯಗಳಲ್ಲಿ ಕಡಿಮೆ ಅಂಕಗಳನ್ನು ಪಡೆದಿರುತ್ತಾರೆ.

ಇಂತಹ ವಿದ್ಯಾರ್ಥಿಗಳಿಗೆ ಕೃಪಾಂಕ ನೆರವಾಗಲಿದೆ. ಉತ್ತೀರ್ಣರಾಗಲು ಕನಿಷ್ಠ ಅರ್ಹತಾ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡಬಾರದು ಎಂಬ ಉದ್ದೇಶದಿಂದ ಈ ವಿದ್ಯಾರ್ಥಿಸ್ನೇಹಿ ನಿಯಮ ರೂಪಿಸಲಾಗಿದೆ. ಅದೇ ರೀತಿ ದ್ವಿತೀಯ ಪಿಯುಸಿಯಲ್ಲಿ 600 ಅಂಕಗಳಿಗೆ ಕನಿಷ್ಠ 210 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿ ಎರಡು ವಿಷಯಗಳಲ್ಲಿ ಶೇಕಡ 5 ರಷ್ಟು ಅಂದರೆ ತಲಾ 5 ಅಂಕ ಸೇರಿ ಗರಿಷ್ಠ 10 ಅಂಕಗಳನ್ನು ಪಡೆಯಬಹುದಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಲಿ ತಿಳಿಸಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *