ನವದೆಹಲಿ: ರಾಜಕೀಯ ಅಥವಾ ಸರ್ಕಾರವನ್ನು ನೇರವಾಗಿ ಟೀಕಿಸುವ ಕವಿತೆಗಳನ್ನು ಓದಬೇಡಿ ಎಂದು ನನ್ನನ್ನು ಕೇಳಿಕೊಂಡರು. ಹಾಗಾಗಿ ನಾನು ಕಲ್ಚರ್ ಫೆಸ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂದು ಕವಿ ಅಶೋಕ್ ವಾಜಪೇಯಿ ಸ್ಪಷ್ಟಪಡಿಸಿದ್ದಾರೆ.
ಸುಂದರ್ ನರ್ಸರಿಯಲ್ಲಿ ಝೀ ಆಯೋಜಿಸಿದ್ದ ಮೂರು ದಿನಗಳ ಆರ್ಥ್ ಕಲ್ಚರ್ ಫೆಸ್ಟ್ ನಲ್ಲಿ ಶುಕ್ರವಾರ(ಫೆಬ್ರವರಿ 24) ನಡೆದ ಕವಿಗೋಷ್ಠಿ 82 ವರ್ಷದ ಕವಿ ಅಶೋಕ್ ವಾಜಪೇಯಿ ಭಾಗವಹಿಸಬೇಕಿತ್ತು. ಆದರೆ, ಕಾರ್ಯಕ್ರಮದ ಸಂಘಟಕ ಸೂಚನೆ ಮೇರೆಗೆ ಅವರು ಗೋಷ್ಟಿಯಿಂದ ದೂರ ಉಳಿದರು ಎಂದು ವರದಿಯಾಗಿದೆ.
ಅರ್ಥ್ ಮತ್ತು ರೇಖ್ತಾ ಫೌಂಡೇಶನ್ ಆಯೋಜಿಸಿರುವ ಸಂಸ್ಕೃತಿ ಉತ್ಸವದಲ್ಲಿ ಈ ರೀತಿಯಲ್ಲಿ ನಡೆಸಲಾಗುತ್ತಿರುವ ಸೆನ್ಸಾರ್ ಶಿಪ್ ಅನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕವಿ ಅಶೋಕ್ ವಾಜಪೇಯಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಗೋಷ್ಟಿಯಲ್ಲಿ ಅನಾಮಿಕಾ, ಬದ್ರಿ ನಾರಾಯಣ್, ದಿನೇಶ್ ಕುಶ್ವಾಹಾ ಮತ್ತು ಮಾನವ್ ಕೌಲ್ ಸೇರಿದಂತೆ ಇತರೆ ಕವಿಗಳೊಂದಿಗೆ ಅಶೋಕ್ ವಾಜಪೇಯಿ ಸಹ ಭಾಗವಹಿಸಬೇಕಾಗಿತ್ತು.
ಅಶೋಕ್ ವಾಜಪೇಯಿ ಅವರ ಹೇಳಿಕೆಯನ್ನು ಉತ್ಸವದ ಸಹ-ಸಂಘಟಕರಾಗಿರುವ ರೇಖ್ತಾ ಫೌಂಡೇಶನ್ನ ವಕ್ತಾರ ಸತೀಶ್ ಗುಪ್ತಾ ತಳ್ಳಿ ಹಾಕಿದ್ದು, “ಅವರು ಫೆಸ್ಟ್ ನಲ್ಲಿ ಏನು ಹೇಳಲಿದ್ದಾರೆ ಎಂದು ಎಲ್ಲರನ್ನು ಕೇಳಲಾಗಿತ್ತು. ಅದನ್ನು ಕಾರ್ಯಕ್ರಮದ ಪರಿಚಯ ಸಾಮಗ್ರಿಯಲ್ಲಿ ಸೇರಿಸಬೇಕಿತ್ತು. ನಾವು ಅಥವಾ ಝೀ ಅವರಿಗೆ ರಾಜಕೀಯಕ್ಕೆ ಸಂಬಂಧಿಸಿದಂತೆ ಏನನ್ನೂ ಓದಬೇಡಿ ಎಂದು ಹೇಳಿಲ್ಲ. ಅದು ನಿಜವಾಗಿದ್ದರೆ, ನಾವು ಎಲ್ಲರಿಗೂ ಅದನ್ನೇ ಹೇಳುತ್ತಿದ್ದೇವು ಎಂದು ತಿಳಿಸಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ