ಆರ್ಥಿಕ ಕಾರ್ಯತಂತ್ರವಾಗಿ ʻʻಬಂಟ ಬಂಡವಾಳಶಾಹಿʼʼ

ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್

ಮೋದಿ ಸರ್ಕಾರ ದೊಡ್ಡ ದೊಡ್ಡ ಬಂಡವಾಳಗಾರರಿಗೆ ಬೃಹತ್ ತೆರಿಗೆ ವಿನಾಯಿತಿ ನೀಡುತ್ತದೆ. ಅದನ್ನು ಸರಿಹೊಂದಿಸಲು ಬಡವರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಮಾಡುತ್ತಿದ್ದ ಖರ್ಚು-ವೆಚ್ಚಗಳನ್ನು ಕಡಿತಗೊಳಿಸುತ್ತದೆ. ಇಂತಹ ಒಂದು ಬಹಿರಂಗ ವರ್ಗ-ಪಕ್ಷಪಾತದ ನೀತಿಯನ್ನು ಅನುಸರಿಸಲು ಬಂಡವಾಳಶಾಹಿ ಸರ್ಕಾರಗಳೂ ಸಹ ಮುಜುಗರ ಪಟ್ಟುಕೊಳ್ಳುತ್ತವೆ. ಆದರೆ, ಮೋದಿ ಸರ್ಕಾರವು ಧಾರಾಳವಾಗಿ ಮತ್ತು ಬಹಿರಂಗವಾಗಿ ಬಂಡವಾಳಗಾರರಿಗೆ ಅನುಕೂಲಗಳನ್ನು ಕಲ್ಪಿಸಿದೆ. ಇದು ‘ಕ್ರೋನಿಯಿಸಂ’ನ ಅಂದರೆ “ಬಂಟತನ”ದ ಒಂದು ಸ್ಪಷ್ಟ ನಿದರ್ಶನವೆಂಬುದೇನೋ ನಿಜ. ಆದರೆ, ಈ ‘ಬಂಟತನ’ದಲ್ಲಿ ಒಂದು ವ್ಯತ್ಯಾಸವಿದೆ. ಈ ‘ಬಂಟತನ’ವು “ರಾಷ್ಟ್ರ”ನಿರ್ಮಾಣದಲ್ಲಿ ಸಹಾಯಕವಾಗುತ್ತದೆ ಎಂಬ ನೆಲೆಯಲ್ಲಿ ಅದನ್ನು ಸಮರ್ಥಿಸುವ ಸಿದ್ಧಾಂತವೇ ಇದೆ. ಪ್ರಧಾನ ಮಂತ್ರಿ ಮೋದಿ ಮತ್ತು ಪ್ರಧಾನ ಉದ್ಯಮಿ ಅದಾನಿಗೆ ಸಂಬಂಧಿಸಿದ ಇತ್ತೀಚಿನ ಎರಡು ಘಟನೆಗಳಲ್ಲಿ ಇವರಿಬ್ಬರನ್ನೂ ರಾಷ್ಟ್ರದೊಂದಿಗೆ ಸಮೀಕರಿಸುವ ಪ್ರಯತ್ನದಲ್ಲಿ ಇದು ಕಂಡುಬಂದಿದೆ. ಮೋದಿ ಸರ್ಕಾರದಡಿಯಲ್ಲಿ “ಬಂಟ ಬಂಡವಾಳಶಾಹಿ”ಯನ್ನು ಒಂದು ಆರ್ಥಿಕ ಕಾರ್ಯತಂತ್ರದ ಮಟ್ಟಕ್ಕೆ ಏರಿಸಲಾಗಿದೆ ಮತ್ತು ಅದನ್ನು “ರಾಷ್ಟ್ರದ ಹಿತಾಸಕ್ತಿ” ಎಂಬ ಶ್ರದ್ಧೆಯಿಂದ ಅನುಸರಿಸಲಾಗುತ್ತಿದೆ. ಆದರೆ ಜಾಗತೀಕರಣಗೊಂಡ ಅರ್ಥವ್ಯವಸ್ಥೆಯಲ್ಲಿ ಅದಾನಿಯೂ ಜಾಗತಿಕ ರಂಗದಲ್ಲಿ ವ್ಯವಹರಿಸುತ್ತಿರುವಾಗ “ರಾಷ್ಟ್ರ ಹಿತಾಸಕ್ತಿಯ ಮರೆಯಲ್ಲಿ ಇದು ಕಾರ್ಯಸಾಧ್ಯವೇ?

ಅದಾನಿ ಉದ್ದಿಮೆ-ಸಮೂಹದ ಮೇಲೆ ಅಮೆರಿಕದ ಹಿಂಡೆನ್‌ಬರ್ಗ್ ಎಂಬ ಸಂಸ್ಥೆಯು ಎಸಗಿದ ವಂಚನೆಯ ಆರೋಪಗಳನ್ನು ಅವು ಭಾರತದ ಮೇಲೆ ಮಾಡಿದ ದಾಳಿ ಎಂದು ಗೌತಮ್ ಅದಾನಿ ಅವರು ಪರಿಗಣಿಸಿರುವ ಕ್ರಮವು ಒಂದು ವಿಶೇಷ ಮಹತ್ವವನ್ನು ಹೊಂದಿದೆ. ಹಿಂಡೆನ್‌ಬರ್ಗ್ ವರದಿ ಪ್ರಕಟಗೊಳ್ಳುವ ಕೆಲವು ದಿನಗಳ ಮೊದಲು, ಹೆಸರಾಂತ ಮಾಧ್ಯಮ ಸಂಸ್ಥೆ ಬಿಬಿಸಿಯು ನಿರ್ಮಿಸಿ ಪ್ರಸ್ತುತಪಡಿಸಿದ ಒಂದು ಸಾಕ್ಷ್ಯಚಿತ್ರವನ್ನು ಭಾರತದ ಮೇಲೆ ಎಸಗಿದ ದಾಳಿ ಎಂದು ಮೋದಿ ಸರ್ಕಾರ ಪರಿಗಣಿಸಿತ್ತು. ವಸಾಹತುಶಾಹಿ ಮನಃಸ್ಥಿತಿಯನ್ನುಳ್ಳ ಈ ಸಂಸ್ಥೆಯು ನಿರ್ಮಿಸಿದ ಈ ಸಾಕ್ಷ್ಯಚಿತ್ರವು ರಾಷ್ಟ್ರದ ಮೇಲಿನ ದಾಳಿ ಎಂಬುದಾಗಿ ಪರಿಗಣಿಸಿ ಅದು ದೇಶದಲ್ಲಿ ಪ್ರದರ್ಶನಗೊಳ್ಳದಂತೆ ನೋಡಿಕೊಳ್ಳಲಾಗಿತ್ತು. ಗುಜರಾತ್‌ನ 2002ರ ಕೋಮು ಗಲಭೆಗಳಲ್ಲಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿ ಆಗ ವಹಿಸಿದ್ದ ಪಾತ್ರದ ಬಗ್ಗೆ ಬೆಳಕು ಚೆಲ್ಲುವ ಈ ಸಾಕ್ಷ್ಯಚಿತ್ರವು ಛಿದ್ರಗೊಳಿಸಿದ ನರೇಂದ್ರ ಮೋದಿಯವರ ಪ್ರಭಾವಳಿಯನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ನರೇಂದ್ರ ಮೋದಿಯವರನ್ನು ರಾಷ್ಟ್ರದೊಂದಿಗೆ ಸಮೀಕರಿಸಲಾಗಿತ್ತು. ಗೌತಮ್ ಅದಾನಿ ಸಹ, ಅದೇ ರೀತಿಯಲ್ಲಿ ತಮ್ಮನ್ನು ತಾವು ದೇಶದೊಂದಿಗೆ ಸಮೀಕರಣ ಮಾಡಿಕೊಂಡರು. ದೇಶದೊಂದಿಗೆ ಸಮೀಕರಣ ಮಾಡಿಕೊಂಡ ತನ್ನ ಈ ಕ್ರಮವನ್ನು ನರೇಂದ್ರ ಮೋದಿ ಒಪ್ಪುವ ಖಾತ್ರಿ ಇಲ್ಲದಿದ್ದರೆ, ಗೌತಮ್ ಅದಾನಿ ತಮ್ಮನ್ನು ತಾವು ರಾಷ್ಟ್ರದೊಂದಿಗೆ ಸಮೀಕರಣ ಮಾಡಿಕೊಳ್ಳುವ ಸಾಹಸ ಮಾಡುತ್ತಿರಲಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ಮೋದಿ ಮತ್ತು ಅದಾನಿ ಇಬ್ಬರೂ ತಮ್ಮನ್ನು ತಾವು ಮತ್ತು ಪರಸ್ಪರರನ್ನು ರಾಷ್ಟ್ರದ ಪ್ರತೀಕವಾಗಿ ನೋಡುತ್ತಾರೆ ಅಂದರೆ, ಮೋದಿ ಎಂದರೆ ಭಾರತ; ಭಾರತವೆಂದರೆ ಮೋದಿ ಎಂಬ ಭಾವನೆಯನ್ನು ಅದಾನಿ ಹೊಂದಿದ್ದಾರೆ ಮತ್ತು ಅದಾನಿ ಎಂದರೆ ಭಾರತ; ಭಾರತವೆಂದರೆ ಅದಾನಿ ಎಂಬ ಭಾವನೆಯನ್ನು ಮೋದಿ ಹೊಂದಿದ್ದಾರೆ. ಅವರ ಗ್ರಹಿಕೆಯಲ್ಲಿ ರಾಷ್ಟ್ರವೆಂದರೆ, ಕಾರ್ಪೊರೇಟ್-ಹಿಂದುತ್ವ ಮೈತ್ರಿ ಮತ್ತು ಅದರ ಜೀವಾಳವಾಗಿರುವ ಮೋದಿ-ಅದಾನಿ ಮೈತ್ರಿಯೇ. ದೇಶದ ಭಾಗ್ಯದ ಬಾಗಿಲು ತೆರೆಯಬೇಕು ಎಂದಾದರೆ, ಸರ್ವೋಚ್ಚ ರಾಜಕೀಯ ನಾಯಕನಾಗಿ ಮೋದಿ ಅವರೇ ಮುಂದುವರಿಯಬೇಕು ಮತ್ತು ಆರ್ಥಿಕ ವಲಯದಲ್ಲಿ ಅದಾನಿ ಅವರೇ ಕುಬೇರ-ಉದ್ಯಮಪತಿಯಾಗಿ ಮುಂದುವರಿಯಬೇಕು – ಅವರನ್ನು ಬಿಟ್ಟರೆ ದೇಶಕ್ಕೆ ಬೇರೆ ದಾರಿಯೇ ಇಲ್ಲ – ಎಂಬುದು ಅವರ ಗ್ರಹಿಕೆ!

ಇದನ್ನು ಓದಿ: “ಬರುತಿದೆ ಬರುತಿದೆ ವಿಶ್ವ ಆರ್ಥಿಕ ಹಿಂಜರಿತ”

ವಾಸ್ತವವಾಗಿ, ವಿಚಾರ-ವಿವೇಕ-ತರ್ಕ ಇವುಗಳನ್ನು ತಲೆಕೆಳಗು ಮಾಡುವುದೇ ಮೋದಿ ಅವರ ಸಿದ್ಧಾಂತ. “ರಾಷ್ಟ್ರ-ವಿರೋಧಿಗಳು” ಅಥವಾ “ರಾಷ್ಟ್ರದ ಶತ್ರುಗಳು” ಎಂದು ಕರೆಯಲ್ಪಡುವ ಕೆಲವು ಮಂದಿಯ ದೃಷ್ಟಿಯನ್ನು ಹೊರತುಪಡಿಸಿದರೆ, ಮೋದಿ-ಅದಾನಿ ಜೋಡಿಯನ್ನು ನಡೆತೆಗೆಟ್ಟವರು ಅಥವಾ ನೀತಿಗೆಟ್ಟವರು ಎಂದು ಯಾರೂ ಆಪಾದಿಸುವಂತಿಲ್ಲ, ಏಕೆಂದರೆ, ಅವರು ಮಾಡಿದ್ದೆಲ್ಲವೂ ರಾಷ್ಟ್ರ-ಹಿತದಿಂದಲೇ. ಯಾವಾಗಲೂ ರಾಷ್ಟ್ರ-ಹಿತವೇ ಅವರ ಧ್ಯಾನ. ಆದ್ದರಿಂದ ನಡೆತೆಗೆಟ್ಟ ಅಥವಾ ನೀತಿಗೆಟ್ಟ ನಡವಳಿಕೆಯ ಆರೋಪವನ್ನು ಎಂದಿಗೂ ಅವರ ಮೇಲೆ ಹೊರಿಸಲಾಗದು. ಆದರೆ, ಹಿಂಡೆನ್‌ಬರ್ಗ್ ಸಂಸ್ಥೆಯ ತರ್ಕವೇ ಬೇರೆ. ಒಬ್ಬ ವಂಚಕನು ತನ್ನನ್ನು ತಾನು ರಾಷ್ಟ್ರವಾದದ ಹೊದಿಕೆಯಲ್ಲಿ ಮುಚ್ಚಿಕೊಂಡಾಗ ಅವನು ಮಾಡಿದ ಮೋಸವೇನೂ ಅದೃಶ್ಯವಾಗುವುದಿಲ್ಲ ಎಂಬ ನಂಬಿಕೆ ಮತ್ತು ತರ್ಕದ ಆಧಾರದ ಮೇಲೆ ಅದು ಅದಾನಿಯವರ ನಿಜ-ಸ್ವರೂಪವನ್ನು ಬಯಲಿಗೆಳೆದಿದೆ. ರಾಷ್ಟ್ರವಾದ, ರಾಷ್ಟ್ರದ ಹಿತಾಸಕ್ತಿ, ದೇಶ ಪ್ರೇಮ ಮುಂತಾದ ಪರಿಕಲ್ಪನೆಗಳನ್ನು ಸ್ವತಂತ್ರವಾಗಿ ಮತ್ತು ವಸ್ತುನಿಷ್ಠವಾಗಿ ವ್ಯಾಖ್ಯಾನಿಸಿದಾಗ ಮಾತ್ರ ಹಿಂಡೆನ್‌ಬರ್ಗ್‍ನ ಈ ಕ್ರಮವು ಸಮಂಜಸವಾಗಿ ಕಾಣುತ್ತದೆ. ಆದರೆ, ರಾಷ್ಟ್ರದ ಹಿತಾಸಕ್ತಿಯನ್ನು ಮೋದಿ-ಅದಾನಿ ಜೋಡಿಯ ಹಿತಾಸಕ್ತಿಗಳಿಗೆ ಸಮವೆಂದು ಪರಿಗಣಿಸಿದರೆ, ಅವರ ಮೆಲೆ ಹೊರಿಸಿದ ಈ ಆರೋಪವು ಸಿಂಧುವಾಗುವುದಿಲ್ಲ. ರಾಷ್ಟ್ರವಾದದ ಗುರುತನ್ನು ಆವಾಹಿಸಿಕೊಂಡ ಅದಾನಿ ಅದನ್ನು ಹೊದಿಕೆಯಾಗಿ ಹೊದ್ದುಕೊಂಡೇ ತಮ್ಮನ್ನು ವಂಚನೆಯ ಆಪಾದನೆಯಿಂದ ರಕ್ಷಿಸಿಕೊಳ್ಳಲು ಮುಂದಾದರು.

ವ್ಯಂಗ್ಯಚಿತ್ರ ಕೃಪೆ: ಪಂಜು ಗಂಗೊಳ್ಳಿ

ಬಂಟತನ” ಮತ್ತು “ರಾಷ್ಟ್ರ”

ಮೋದಿ ಸರ್ಕಾರದ ಆರ್ಥಿಕ ನೀತಿಯು ಜನರ ಬಗ್ಗೆ ಸಂಪೂರ್ಣವಾಗಿ ನಿರ್ದಯವಾಗಿದೆ ಮತ್ತು ತಮ್ಮ “ಬಂಟ”ರ (crony ಗಳ)ಹಿತಾಸಕ್ತಿಯನ್ನು ಕಾಪಾಡಲು ಸಂಪೂರ್ಣವಾಗಿ ಅದು ತನ್ನನ್ನು ಸಮರ್ಪಿಸಿಕೊಂಡಿದೆ ಎಂಬ ಅಭಿಪ್ರಾಯವನ್ನು ಪದೇ ಪದೇ ವ್ಯಕ್ತಪಡಿಸಲಾಗಿದೆ. ಹೀಗನ್ನುವುದು ಸರಿಯಾಗಿಯೇ ಇದೆ. ಒಂದು ಖಾಸಗಿ ಸಾಮ್ರಾಜ್ಯವನ್ನು ನಿರ್ಮಿಸುವ ಯೋಜನೆಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಂತಹ ರಾಷ್ಟ್ರೀಕೃತ ಹಣಕಾಸು ಸಂಸ್ಥೆಗಳು ಬಳಕೆಯಾಗುತ್ತಿರುವ ಬಗ್ಗೆ ಪದೇ ಪದೇ ಆಕ್ಷೇಪ ವ್ಯಕ್ತಪಡಿಸಲಾಗಿದೆ ಮತ್ತು ಈ ಅಂಶದ ಬಗ್ಗೆ ಸರ್ಕಾರದ ಮೇಲೆ ವಾಗ್ದಾಳಿಯನ್ನೂ ಮಾಡಲಾಗಿದೆ. ಇಂತಹ ಅಭಿಪ್ರಾಯಗಳಿಗೆ ಸೊಪ್ಪು ಹಾಕದ ಮೋದಿ ಸರ್ಕಾರವು ದೊಡ್ಡ ದೊಡ್ಡ ಬಂಡವಾಳಗಾರರಿಗೆ ಬೃಹತ್ ತೆರಿಗೆ ವಿನಾಯಿತಿ ನೀಡುತ್ತದೆ. ಬಡವರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಮಾಡುತ್ತಿದ್ದ ಖರ್ಚು-ವೆಚ್ಚಗಳನ್ನು ಕಡಿತಗೊಳಿಸಿ ಆ ಮೂಲಕ ಒದಗಿಸಿಕೊಂಡ ಹಣವನ್ನು ಬಂಡವಾಳಗಾರರಿಗೆ ನೀಡಿದ ತೆರಿಗೆ ವಿನಾಯಿತಿಗಳೊಂದಿಗೆ ಸರಿದೂಗಿಸಿಕೊಳ್ಳುತ್ತದೆ. ಇಂತಹ ಒಂದು ವರ್ಗ-ಪಕ್ಷಪಾತದ ನೀತಿಯನ್ನು ಅನುಸರಿಸಲು ಬಂಡವಾಳಶಾಹಿ ಸರ್ಕಾರಗಳೂ ಸಹ ಮುಜುಗರ ಪಟ್ಟುಕೊಳ್ಳುತ್ತವೆ. ಆದರೆ, ಮೋದಿ ಸರ್ಕಾರವು ಧಾರಾಳವಾಗಿ ಮತ್ತು ಬಹಿರಂಗವಾಗಿ ಬಂಡವಾಳಗಾರರಿಗೆ ಅನುಕೂಲಗಳನ್ನು ಕಲ್ಪಿಸಿದೆ. ಇದು “ಬಂಟತನ (cronyism)ದ ಒಂದು ಸ್ಪಷ್ಟ ನಿದರ್ಶನವಷ್ಟೇ.

ಇದನ್ನು ಓದಿ: ಕೃಷಿ ಬಿಕ್ಕಟ್ಟನ್ನು ಇಷ್ಟಪಡುವ ಸಾಮ್ರಾಜ್ಯಶಾಹಿ – ಸಾಮ್ರಾಜ್ಯಶಾಹಿಯೆದುರು ತಲೆಬಾಗುವ ಸರಕಾರ

ಆದರೆ, ಈ ‘ಬಂಟತನ’ದಲ್ಲಿ ಒಂದು ವ್ಯತ್ಯಾಸವಿದೆ. ಈ ‘ಬಂಟತನವು  “ರಾಷ್ಟ್ರ” (ಅಂದರೆ, ಬಹುಸಂಖ್ಯಾಕ ದೃಷ್ಟಿಕೋನದ ಪ್ರಕಾರ) ನಿರ್ಮಾಣದಲ್ಲಿ ಸಹಾಯಕವಾಗುತ್ತದೆ ಎಂಬ ನೆಲೆಯಲ್ಲಿ ಅದನ್ನು ಸಮರ್ಥಿಸುವ ಒಂದು ಸಿದ್ಧಾಂತವೇ ಇದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, “ರಾಷ್ಟ್ರ”ವನ್ನು (ಅಂದರೆ,’ ಹಿಂದೂ’ ರಾಷ್ಟ್ರವನ್ನು)ನಿರ್ಮಿಸುವ ಈ ‘ಬಂಟತನ’ಕ್ಕೆ ಪಾವಿತ್ರ್ಯತೆಯ ಮುದ್ರೆ ಒತ್ತಲಾಗಿದೆ. ಆದ್ದರಿಂದ, ಮೋದಿ ಸರ್ಕಾರದ ಸಂದರ್ಭದಲ್ಲಿ “ಬಂಟ ಬಂಡವಾಳಶಾಹಿ” ಎಂಬ ಪದ ಹೊಂದಿರುವ ಅರ್ಥವೇ ಬೇರೆ.

ಸಾಮಾನ್ಯವಾಗಿ, “ಬಂಟ ಬಂಡವಾಳಶಾಹಿ” ಎಂದರೆ ಕೆಲವು ಆಯ್ದ ಮತ್ತು ನೆಚ್ಚಿನ ಬಂಡವಾಳಶಾಹಿಗಳ ಅದೃಷ್ಟ ಖುಲಾಯಿಸುವ ವಿಕೃತ ಮತ್ತು ಕಾನೂನುಬಾಹಿರ ಪ್ರಯತ್ನಗಳು ಎಂದರ್ಥ. ಇದು ತಪ್ಪು ಎಂದು ಎಲ್ಲರೂ ಒಪ್ಪುತ್ತಾರಾದರೂ ಅದು ಆಚರಣೆಯಲ್ಲಿದೆ. ಉತ್ತರದಾಯಿತ್ವವಿಲ್ಲದ ಪರಿಸ್ಥಿತಿ ಅದಕ್ಕೆ ಕಾರಣವಾಗಿರಬಹುದು ಅಥವಾ ವಿಷಯವನ್ನು ಮರೆಮಾಚಿದ ಕಾರಣವಿರಬಹುದು. ಅದೇನೇ ಇರಲಿ, ಇಲ್ಲಿನ ಸಂಗತಿಯೆಂದರೆ,ಈ ವ್ಯಾಖ್ಯಾನವು ಮೋದಿ ಸರ್ಕಾರದಲ್ಲಿ ಅನ್ವಯವಾಗುವುದಿಲ್ಲ. ಮೋದಿ ಸರ್ಕಾರದಡಿಯಲ್ಲಿ “ಬಂಟ ಬಂಡವಾಳಶಾಹಿ”ಯನ್ನು ಒಂದು ಆರ್ಥಿಕ ಕಾರ್ಯತಂತ್ರದ ಮಟ್ಟಕ್ಕೆ ಏರಿಸಲಾಗಿದೆ ಮತ್ತು ಅದನ್ನು “ರಾಷ್ಟ್ರದ ಹಿತಾಸಕ್ತಿ” ಎಂಬ ಶ್ರದ್ಧೆಯೊಂದಿಗೆ ಅನುಸರಿಸಲಾಗುತ್ತಿದೆ.

ದಕ್ಷಿಣ ಕೊರಿಯಾದಲ್ಲಿ ‘ಚೆಬೊಲ್’(chaebol)ಗಳನ್ನು (ಅಂದರೆ, ಕುಟುಂಬ ಒಡೆತನದ ಬೃಹತ್ ಉದ್ದಿಮೆಗಳನ್ನು) ಪ್ರೋತ್ಸಾಹಿಸುವ ದಕ್ಷಿಣ ಕೊರಿಯಾದ ಆರ್ಥಿಕ ಕಾರ್ಯತಂತ್ರವು ಅದಾನಿಗಳು ಮತ್ತು ಅಂಬಾನಿಗಳನ್ನು ಮೋದಿ ಸರ್ಕಾರವು ಪ್ರೋತ್ಸಾಹಿಸುವ ಕಾರ್ಯತಂತ್ರಕ್ಕೆ ಸಮಾನವಾಗಿದೆಯೇ ಎಂಬ ಪ್ರಶ್ನೆಯನ್ನು ಕೆಲವರು ಆಶ್ಚರ್ಯಭರಿತರಾಗಿ ಕೇಳುತ್ತಾರೆ (ʼದಿ ವೈರ್ʼ ಪತ್ರಿಕೆಯಲ್ಲಿ ಇತಿಹಾಸಕಾರ ಜಾನ್ ಆಡಮ್ ಟೂಜ಼್ ಅವರ ಲೇಖನ). ಆದರೆ, ಇಲ್ಲಿರುವ ಒಂದು ಮೂಲಭೂತ ವ್ಯತ್ಯಾಸವನ್ನು ಗಮನಿಸಬೇಕಾಗುತ್ತದೆ. ಮಹಾಯುದ್ಧದ ನಂತರ ಜಪಾನ್‌ನಲ್ಲಿದ್ದ ಪರಿಸ್ಥಿತಿಯೇ(ಅಂದರೆ, ಬಂಡವಾಳಶಾಹಿಯ ಬೆಳವಣಿಗೆಯ ಹಂತ) ದಕ್ಷಿಣ ಕೊರಿಯಾದಲ್ಲೂ ಇತ್ತು. ಪ್ರಭುತ್ವದ ಸಂಸ್ಥೆಗಳು ಕೆಲವು ಏಕಸ್ವಾಮ್ಯ ಗುಂಪುಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದವು ಮತ್ತು ಅವುಗಳಿಗೆ ಮಾರ್ಗದರ್ಶನವನ್ನೂ ನೀಡುತ್ತಿದ್ದವು ಮತ್ತು ಈ ಏಕಸ್ವಾಮ್ಯ ಗುಂಪುಗಳು ತಮ್ಮ ಸಾಮ್ರಾಜ್ಯವನ್ನು ನಿರ್ಮಿಸಿಕೊಳ್ಳಲು ಅನುವಾಗುವಂತೆ ಪ್ರಭುತ್ವದ ಸಾಧನ ಸಾಮಗ್ರಿಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದವು. ಸಂಕ್ಷಿಪ್ತವಾಗಿ ಹೇಳುವುದಾದರೆ, ಬಂಡವಾಳಶಾಹಿಯನ್ನು ಬೆಳೆಸುವಲ್ಲಿ ಒಂದು ಸಾಂಸ್ಥಿಕ ಏರ್ಪಾಟನ್ನು ಕಲ್ಪಿಸಲಾಗಿತ್ತು.

ಇದನ್ನು ಓದಿ: ದಾರಿಗಾಣದಾಗಿರುವ ನವ-ಉದಾರವಾದದ ಆಳ್ವಿಕೆಯಲ್ಲಿ ಜಾಗತಿಕವಾಗಿ ಹೆಚ್ಚುತ್ತಿದೆ ದುಡಿಯುವ ವರ್ಗದ ಪ್ರತಿರೋಧ

ಭಾರತದ ಮಟ್ಟಿಗೆ ಹೇಳುವುದಾದರೆ ಇಂಥಹ ಒಂದು ಸಾಂಸ್ಥಿಕ ಏರ್ಪಾಟನ್ನು ಕಲ್ಪಿಸಿಲ್ಲ. ಇದು ಮಹಾನಾಯಕ ಮತ್ತು ಉದ್ಯಮ-ಸಾಮ್ರಾಟ ಇವರ ನಡುವೆ ಇರುವ ನಿಕಟ ನಂಟಿನಿಂದಾಗಿ ಆಡಳಿತ ವ್ಯವಸ್ಥೆಯ ಎಲ್ಲಾ ಬಾಗಿಲುಗಳೂ ಉದ್ಯಮ-ಸಾಮ್ರಾಟನಿಗೆ ವಿನಮ್ರವಾಗಿ ತೆರೆದುಕೊಳ್ಳುತ್ತವೆ. ಭಾರತದ ಪ್ರಕರಣ ಮತ್ತು ನಾಜಿ ಜರ್ಮನಿಯ ಪ್ರಕರಣಗಳ ನಡುವಿನ ವ್ಯತ್ಯಾಸ ಸಹ ಇದೇ ರೀತಿಯದು. ನಾಜಿ ಜರ್ಮನಿಯಲ್ಲೂ ಆಡಳಿತ ಪಕ್ಷದ ನಾಯಕರು ಮತ್ತು ಉದ್ಯಮ ಸಂಸ್ಥೆಗಳ ನಡುವೆ ನಿಕಟ ನಂಟು ಇತ್ತು. ಮಹಾಯುದ್ಧಕ್ಕಿಂತ ಮೊದಲು, ಒಬ್ಬೊಬ್ಬ ನಾಜಿ ನಾಯಕನೂ ಒಂದೊಂದು ವ್ಯಾಪಾರೋದ್ಯಮ ಸಂಸ್ಥೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ. ಈ ಉದ್ದಿಮೆಗಳು ಪೈಪೋಟಿಗೆ ಇಳಿಯುತ್ತಿದ್ದವು. ಒಂದು ನಿರ್ದಿಷ್ಟ ಉದ್ದಿಮೆಯೊಂದಿಗೆ ನಿಕಟ ನಂಟು ಹೊಂದಿದ್ದ ಒಬ್ಬ ನಾಯಕನು ಆಡಳಿತದಲ್ಲಿ ತಾನು ಹೊಂದಿದ್ದ ಪ್ರಭಾವವನ್ನು ಕಳೆದುಕೊಂಡಾಗ ಅಂತಹ ಸಂಸ್ಥೆಯು ನಷ್ಟ ಅನುಭವಿಸುತ್ತಿತ್ತು. (ಯುದ್ಧದ ಸಮಯದಲ್ಲಿ, ಈ ಪರಿಸ್ಥಿತಿಯು ಭಿನ್ನವಾಗಿತ್ತು. ಏಕೆಂದರೆ, ವಿವಿಧ ಉದ್ದಿಮೆಗಳಲ್ಲಿ ಉತ್ಪಾದನೆಯನ್ನು ಸಮನ್ವಯಗೊಳಿಸುವ ಮತ್ತು ನಿರ್ದಿಷ್ಟ ಗುರಿಯನ್ನು ತಲುಪುವ ಅವಶ್ಯಕತೆ ಇತ್ತು. ಅದಕ್ಕಾಗಿ ಸ್ವಲ್ಪಮಟ್ಟಿಗೆ ಪೂರ್ವಸಿದ್ಧತೆ ಮಾಡಬೇಕಾಗುತ್ತಿತ್ತು). ಈ ವಿದ್ಯಮಾನಗಳು ಹೇಗೆ ಜರುಗಿದವು ಎಂಬುದನ್ನು ಇಟಲಿಯ ಲುಚಿನೊ ವಿಕೌಂಟಿ ಅವರ ಚಿತ್ರ: ದಿ ಡ್ಯಾಮ್ಡ್ (1969)ನಲ್ಲಿ ಮನೋಜ್ಞವಾಗಿ ಸೆರೆಹಿಡಿಯಲಾಗಿದೆ.

ಇದನ್ನು ಓದಿ: ಅರ್ಥಶಾಸ್ತ್ರವನ್ನು ಅಪ್ರಾಮಾಣಿಕತೆಯ ಮಟ್ಟಕ್ಕೆ ಇಳಿಸಿರುವ ನವ-ಉದಾರವಾದ

ಭಾರತದ ಸನ್ನಿವೇಶದಲ್ಲಿ ಜರುಗಿದ ಘಟನಾವಳಿಗಳು ಜರ್ಮನಿಗಿಂತ ಭಿನ್ನವಾಗಿವೆ. ಇಲ್ಲಿ ಒಬ್ಬ ಪ್ರಶ್ನಾತೀತ ಅಗ್ರ ನಾಯಕನು ಒಂದು ನಿರ್ದಿಷ್ಟ ವ್ಯಾಪಾರೋದ್ಯಮ ಸಂಸ್ಥೆಯೊಂದಿಗೆ ನಿಕಟ ನಂಟು ಹೊಂದಿದ್ದಾನೆ. ಈ ಸಂಸ್ಥೆಯು ಅನನ್ಯ ಬೆಳವಣಿಗೆಯನ್ನು ದಾಖಲಿಸುತ್ತದೆ. ರಾಜಕೀಯ ನಾಯಕತ್ವ ಮತ್ತು ದೊಡ್ಡ ಕಾರ್ಪೊರೇಟ್ ಬಂಡವಾಳದ ನಡುವಿನ ನಿಕಟ ನಂಟು ಎಲ್ಲ ಫ್ಯಾಸಿಸ್ಟ್ರ ಮತ್ತು ಫ್ಯಾಸಿಸ್ಟ್ ತೆರನ ಸರ್ಕಾರಗಳ ಒಂದು ಸಾಮಾನ್ಯ ಲಕ್ಷಣವೇ ಹೌದು. ಈ ಕಾರಣದಿಂದಲೇ ಫ್ಯಾಸಿಸಂಅನ್ನು “ಪ್ರಭುತ್ವ ಮತ್ತು ಕಾರ್ಪೊರೇಟ್ ಶಕ್ತಿಗಳ ವಿಲೀನ” ಎಂದು ಮುಸೊಲಿನಿ ವ್ಯಾಖ್ಯಾನಿಸಿದ್ದಾನೆಂದು ಹೇಳಲಾಗಿದೆ. ಹೀಗೆ, ಭಾರತದ ಪ್ರಕರಣವು ಈ ಸ್ಥೂಲ ಚಿತ್ರಣದೊಳಗೆ ಒಂದು ಅನನ್ಯ ವಿದ್ಯಮಾನವೇ ಸರಿ.

ವ್ಯಂಗ್ಯಚಿತ್ರಕೃಪೆ: ಪಂಜು ಗಂಗೊಳ್ಳಿ

ಅದಾನಿಯ ಉಲ್ಲಂಘನೆ ಮತ್ತು ದಂಡನೆ

ಮತ್ತು ಮೋದಿ ಸರಕಾರದ ತಿಣುಕಾಟ

ಆದರೆ, ಒಬ್ಬಿಬ್ಬರು ದೊಡ್ಡ ವ್ಯಾಪಾರೋದ್ಯಮಿಗಳು ಮತ್ತು ಒಬ್ಬಿಬ್ಬರು ರಾಜಕೀಯ ಧುರೀಣರು ಒಟ್ಟಾಗಿ ಬಂಡವಾಳಶಾಹಿಯ ಮೇಲೆ ಪೂರ್ಣವಾಗಿ ಹತೋಟಿ ಹೊಂದುವ ರೀತಿಯ ಕೈವಾಡಗಳಿಗೆ ಬಂಡವಾಳಶಾಹಿಯು ಬಹಳಷ್ಟು ಮಟ್ಟಿಗೆ ಒಳಪಡುವುದಿಲ್ಲ. ಒಂದು ದೇಶದೊಳಗೆ ಬಂಡವಾಳಶಾಹಿಯನ್ನು ಸಂಪೂರ್ಣವಾಗಿ ಹತೋಟಿಗೆ ತೆಗೆದುಕೊಳ್ಳಬಹುದು ಎಂದಾದರೆ, ಆಗ, ಈ ಸಂಪೂರ್ಣ ಹತೋಟಿಯ ವ್ಯಾಪಿಯಲ್ಲಿ ರಾಜಕಾರಣಿ-ಉದ್ಯಮಿ ಜೋಡಿಯ ಹುಕುಂಶಾಹಿ ಸಾಧ್ಯವೇ, ಅದಕ್ಕೆ ಬಂಡವಾಳಶಾಹಿಯ ಸ್ವಯಂಸ್ಫೂರ್ತತೆಯಿಂದ ಅಡೆ-ತಡೆಗಳು ಬರುವುದಿಲ್ಲವೇ ಎಂಬುದು ಚರ್ಚಾರ್ಹವಾದ ಒಂದು ವಿಷಯವಾಗುತ್ತದೆ. ಆದರೆ ಯಾವತ್ತೂ ಕಷ್ಟಸಾಧ್ಯವಿದ್ದ ಇಂತಹ ಹತೋಟಿಯನ್ನು ನಾವೀಗ ವ್ಯವಹರಿಸುತ್ತಿರುವ ಜಾಗತೀಕರಣಗೊಂಡ ಬಂಡವಾಳಶಾಹಿ ವ್ಯವಸ್ಥೆಯಲ್ಲಂತೂ ಸಾಧಿಸುವುದು ಕನಸಿನ ಮಾತಾಗುತ್ತದೆ. ಮತ್ತು, ಒಬ್ಬ ದೊಡ್ಡ ಉದ್ದಿಮೆದಾರನು ತನ್ನ ವ್ಯವಹಾರವನ್ನು ತನ್ನ ದೇಶಕ್ಕೆ ಮಾತ್ರ ಸೀಮಿತಗೊಳಿಸಿಕೊಳ್ಳಲು ಇಷ್ಟಪಡುವುದಿಲ್ಲ. ಏಕೆಂದರೆ, ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವನ ವ್ಯಾಪಾರ-ವಹಿವಾಟುಗಳನ್ನು ಬೇರೆಯವರು ಕಬಳಿಸುತ್ತಾರೆ. ಸ್ವದೇಶದಲ್ಲಿ ಒಬ್ಬ ರಾಜಕೀಯ ಮಹಾ ನಾಯಕನಿಕಗೆ ಬಹಳ ಹತ್ತಿರದವನಾಗಿದ್ದ ಕಾರಣದಿಂದ ಲಾಲಿಸಲ್ಪಟ್ಟ ಒಬ್ಬ ಉದ್ಯಮಿಯು ಅಂತಾರಾಷ್ಟ್ರೀಯ ರಂಗಕ್ಕೆ ಕಾಲಿಡಲು ಪ್ರಯತ್ನಿಸಿದ ಕ್ಷಣವೇ ಅವನು ಅಂತಾರಾಷ್ಟ್ರೀಯ ಪರಿಶೀಲನೆಗೆ ಒಳಪಡುತ್ತಾನೆ. ಆಗ, ಇತರ ಉದ್ಯಮಿಗಳು ಅವನ ವ್ಯವಹಾರ-ವಹಿವಾಟುಗಳ ವಿವರಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಪರಿಶೀಲಿಸುತ್ತಾರೆ. ಬಂಡವಾಳಶಾಹಿ ವ್ಯವಹಾರ ನಡವಳಿಕೆಯ ನಿಯಮಗಳ ಯಾವುದೇ ಉಲ್ಲಂಘನೆಯನ್ನು ಅವರು ಗಮನಿಸುತ್ತಾರೆ ಮಾತ್ರವಲ್ಲ ದಂಡನೆಗೂ ಗುರಿಪಡಿಸುತ್ತಾರೆ. ದಂಡಿಸುವ ಕ್ರಮವನ್ನು ವ್ಯವಸ್ಥೆಯು ನೈತಿಕತೆಯ ಬಗ್ಗೆ ತೋರಿಸುವ ಗೌರವದಿಂದಾಗಿ ಕೈಗೊಳ್ಳಲಾಗುತ್ತದೆ ಎಂದಲ್ಲ. ಬೇರೆ ಬೇರೆ ವ್ಯಾಪಾರೋದ್ದಿಮೆಗಳ ನಡುವಿನ ಪೈಪೋಟಿಯ ಕಾರಣದಿಂದಾಗಿ ಶಿಕ್ಷೆಯು ವಿಧಿಸಲ್ಪಡುತ್ತದೆ. ಅದಾನಿಗಳಿಗೆ ನಿಜಕ್ಕೂ ಎದುರಾಗಿರುವುದು ಇದೇ.

ಇದನ್ನು ಓದಿ: ಮೋದಿ ಸರ್ಕಾರವೂ, “ಉಚಿತಕೊಡುಗೆ” ಎಂಬ ಕಾಡು ಪುರಾಣವೂ

ತೊಂದರೆಗೆ ಸಿಲುಕಿದ ಅದಾನಿ ಉದ್ದಿಮೆಗಳನ್ನು ಸರ್ಕಾರವು ಹೇಗಾದರೂ ಬಚಾವ್ ಮಾಡಬಹುದು. ಆದರೆ, ಅದಾನಿ ಉದ್ದಿಮೆಗಳ ವ್ಯವಹಾರಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪುಗೊಳ್ಳುವ “ಅಭಿಪ್ರಾಯ”ವು ಬೆಳಕಿಗೆ ಬಂದಾಗ ಅವುಗಳ ರಕ್ಷಣೆಗೆ ಸರ್ಕಾರ ಧಾವಿಸುವುದು ಕಷ್ಟಕರವಾಗುತ್ತದೆ. ದೇಶವು ತನ್ನ ಪಾವತಿ ಶೇಷದ ಸಮಸ್ಯೆಯನ್ನು ನಿರ್ವಹಿಸಲು (ಅಂದರೆ, ವಿದೇಶ ವ್ಯಾಪಾರದ ಬಾಕಿಯನ್ನು ಚುಕ್ತಾ ಮಾಡಲು) ಗಣನೀಯ ಪ್ರಮಾಣದ ವಿದೇಶಿ ಬಂಡವಾಳದ ಒಳಹರಿವಿನ ಅಗತ್ಯವಿರುವಾಗ ಸರ್ಕಾರದ ತೊಂದರೆಗಳು ಹೆಚ್ಚುತ್ತವೆ: ಮೋಸದ ವಿಧಾನಗಳ ಮೂಲಕ ಸಂಪತ್ತು ಸಂಗ್ರಹಿಸುವವರನ್ನೂ ಸಹ ಶಿಕ್ಷಿಸದೆ ಬಿಡುವ ದೇಶದ ನಿಯಂತ್ರಣ ಸಂಸ್ಥೆಗಳ ಅಸಮರ್ಥತೆಯ ಪ್ರದರ್ಶನದಿಂದ ವಿದೇಶಿ ಹೂಡಿಕೆದಾರರು ಭಯಭೀತರಾದರೆ, ಬಂಡವಾಳದ ಒಳಹರಿವು ಕ್ಷೀಣಿಸುತ್ತದೆ. ಅದು ಸರ್ಕಾರದ ತೊಂದರೆಗಳನ್ನು ಹೆಚ್ಚಿಸುತ್ತದೆ.

ಈ ಉದ್ದಿಮೆ ಸಂಸ್ಥೆಗಳು ಬಚಾವಾಗಿ ಉಳಿದುಕೊಂಡರೂ ಸಹ, ಮೋದಿ ಸರ್ಕಾರದ ಉದ್ಧಟತನ ತೊಲಗಿರುತ್ತದೆ. ಅದಾನಿ ಸಾಮ್ರಾಜ್ಯದ ವ್ಯವಹಾರಗಳ ಬಗ್ಗೆ ತನಿಖೆ ಮಾಡದೆ ತಪ್ಪಿಸಿಕೊಳ್ಳುವುದು ಅಸಾಧ್ಯವಾಗುತ್ತದೆ. ಏಕೆಂದರೆ, ಅದು ಜಾಗತಿಕ ಹಣಕಾಸು ವಲಯಗಳಲ್ಲಿ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುವ ಕೆಲಸವಾಗುತ್ತದೆ. ಅಂತೆಯೇ, ತನಿಖೆಯು ಒಂದು ವೇಳೆ ಅದಾನಿಗಳು ಪ್ರಾಮಾಣಿಕರು ಮತ್ತು ಪರಿಶುದ್ಧರು ಎಂದು ಹೇಳಿದರೆ ಅಂತಹ ತನಿಖೆಯ ಬಗ್ಗೆ ಜಾಗತಿಕ ಹಣಕಾಸು ವಲಯಗಳಲ್ಲಿ ಯಾವುದೇ ವಿಶ್ವಾಸಾರ್ಹತೆ ಉಳಿಯುವುದಿಲ್ಲ. ಆದ್ದರಿಂದ, ಅದು ಎಷ್ಟೇ ಲಘುವಾಗಿರಲಿ, ಶಿಕ್ಷೆಯನ್ನಂತೂ ಅದಾನಿಗಳು ಅನುಭವಿಸಲೇಬೇಕಾಗುತ್ತದೆ. ಬಂಟನಿಗೆ ಶಿಕ್ಷೆಯಾದಾಗ, ಆ ನಿರ್ದಿಷ್ಟ ಬಂಟನೊಂದಿಗೆ ಅದೇ ಹಳೆಯ ಸಂಬAಧವನ್ನು ಮುಂದುವರಿಸಲು “ನಾಯಕ” ತಿಣುಕಬೇಕಾಗುತ್ತದೆ. ಮತ್ತು, ಮೋದಿ-ಅದಾನಿ ಮೈತ್ರಿಯಿಂದ ಅಂದರೆ ಒಳಾರ್ಥದಲ್ಲಿ ಕಾರ್ಪೊರೇಟ್-ಹಿಂದುತ್ವ ಮೈತ್ರಿಯಿಂದ “ರಾಷ್ಟ್ರ”ಕ್ಕೆ ಅತ್ಯುತ್ತಮ ಸೇವೆ ಸಲ್ಲಿಕೆಯಾಗುತ್ತಿದೆ ಎಂಬ ಹೇಳಿಕೆಯನ್ನು ಮುಂದೊಡ್ಡುವುದು ಸರ್ಕಾರಕ್ಕೆ ಇನ್ನು ಮುಂದೆ ಕಷ್ಟವಾಗುತ್ತದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಇಡೀ ಪ್ರಕರಣವು ಬಂಡವಾಳದ ಜಾಗತೀಕರಣ ಮತ್ತು ರಾಷ್ಟçಪ್ರಭುತ್ವದ ಕಲ್ಪನೆಯ ನಡುವಿನ ವೈರುಧ್ಯದ ಒಂದು ನಿರ್ದಿಷ್ಟ ಅಭಿವ್ಯಕ್ತಿಯಾಗಿದೆ-ಅದು “ಹಿಂದೂ” ಎಂಬ ರಾಷ್ಟ್ರ-ಪ್ರಭುತ್ವದ್ದಾದರೂ ಆಗಿರಬಹುದು. ಈ ವೈರುಧ್ಯವು ಜಾಗತೀಕರಣ ಎಂಬುದು ಯಾವುದೇ ತಪ್ಪು ಮಾಡಲು ಆಸ್ಪದ ಕೊಡದೇ ಸರಿಪಡಿಸುವ ಪ್ರಕ್ರಿಯೆ ಎಂಬ ಕಾರಣಕ್ಕೆ ಉದ್ಭವಿಸುತ್ತದೆ ಎಂದೇನಲ್ಲ; ಈ ವೈರುಧ್ಯವು ಉದ್ಭವಿಸುತ್ತದೆ ಏಕೆಂದರೆ, ಜಾಗತೀಕರಣದ ಅಡಿಯಲ್ಲಿ ಬಂಡವಾಳಗಳ ನಡುವೆ ಏರ್ಪಡುವ ಪೈಪೋಟಿಯನ್ನು ಯಾವುದೇ ಒಂದು ರಾಷ್ಟ್ರ-ಪ್ರಭುತ್ವವು ನಂದಿಸಿಬಿಡಲು ಸಾಧ್ಯವಿಲ್ಲದ ಮಟ್ಟದಲ್ಲಿ ಅದು ಸಂಭವಿಸುತ್ತದೆ.

ಭಾರತ್‍ ಮಾತಾಕೀ….                                                                   ಜೈ!

ವ್ಯಂಗ್ಯಚಿತ್ರಕೃಪೆ: ಸತೀಶ ಆಚಾರ್ಯ, ಮೊಲಿಟಿಕ್ಸ್.ಇನ್

Donate Janashakthi Media

Leave a Reply

Your email address will not be published. Required fields are marked *