ಬೆಂಗಳೂರು: ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಪಡಿತರ ಚೀಟಿ ವಿತರಿಸುವ ಕಾರ್ಯ ಜಾರಿಯಲ್ಲಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನಸಭೆಯ ಪ್ರಶ್ನೋತ್ತರ ವೇಳೆ ಜೆಡಿಎಸ್ ಶಾಸಕ ಎಂ.ವಿ.ವೀರಭದ್ರಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಮಾಧುಸ್ವಾಮಿ, ಆದ್ಯತಾ ಪಡಿತರ ಚೀಟಿಯನ್ನು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆಯ ಪ್ರಗತಿಯಲ್ಲಿದ್ದು, ಅರ್ಹ ಕುಟುಂಬದಾರರ ವಾಸಸ್ಥಳ ಪರಿಶೀಲನೆ ಕೈಗೊಂಡು ಆದ್ಯತಾ ಪಡಿತರ ಚೀಟಿ ನೀಡಲಾಗುತ್ತಿದೆ ಎಂದರು.
ಮಧುಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ ಆದ್ಯತಾ ಪಡಿತರ ಚೀಟಿಗಾಗಿ 2524 ಅರ್ಜಿಗಳು ಸಲ್ಲಿಕೆಯಾಗಿದೆ. 1845 ಅರ್ಜಿಗಳು ವಿಲೇವಾರಿಯಾಗಿದ್ದು, 679 ಅರ್ಜಿಗಳು ಬಾಕಿ ಉಳಿದಿವೆ.
ಆದ್ಯತೇತರ ಪಡಿತರ ಚೀಟಿಗೆ 348 ಅರ್ಜಿಗಳು ಸಲ್ಲಿಕೆಯಾಗಿದ್ದು, 285 ಅರ್ಜಿ ವಿಲೇವಾರಿ ಆಗಿವೆ. 63 ಅರ್ಜಿಗಳು ಬಾಕಿ ಉಳಿದಿವೆ ಎಂದು ಮಾಹಿತಿ ನೀಡಿದರು.
ಮಧುಗಿರಿ ತಾಲ್ಲೂಕಿನಲ್ಲಿ 125 ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ ಎಂದ ಸಚಿವರು, ಅಗತ್ಯಕ್ಕೆ ಅನುಗುಣವಾಗಿ ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯುವ ಬಗ್ಗೆ ಕ್ರಮ ಕೈಗೊಳ್ಳಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ