ನವದೆಹಲಿ: ಬಿಬಿಸಿ ಸುದ್ದಿ ಸಂಸ್ಥೆಯು ಸಿದ್ದಪಡಿಸಿದ ಮೋದಿ ಸಾಕ್ಷ್ಯಚಿತ್ರ ಕುರಿತು ವಿವಾದ ಸೃಷ್ಟಿಸಿದ ಕೇಂದ್ರದ ಬಿಜೆಪಿ ಸರ್ಕಾರ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದು, ದೇಶದ ಎರಡು ಪ್ರಮುಖ ನಗರಗಳಲ್ಲಿರುವ ಬಿಬಿಸಿ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಮೂಲಕ ದಾಳಿ ಮಾಡಿಸಿದೆ.
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಸಂಸ್ಥೆಯ ಕಛೇರಿಗಳಲ್ಲಿ ದಾಳಿ ನಡೆಸಿದ್ದು, ತೆರಿಗೆ ವಂಚನೆ ತನಿಖೆಯ ಭಾಗವಾಗಿ ದಾಳಿ ಮಾಡಲಾಗಿದೆ ಎಂಬುದು ಇಲಾಖೆಯ ಅಧಿಕಾರಿಗಳ ಮಾಹಿತಿಯಾಗಿದೆ.
ಇದನ್ನು ಓದಿ: ಬಿಬಿಸಿ ನಿಷೇಧಿಸಲು ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ರಾಷ್ಟ್ರ ರಾಜಧಾನಿ ದೆಹಲಿಯ ಕಸ್ತೂರ್ ಬಾ ಗಾಂಧಿ ರಸ್ತೆಯಲ್ಲಿ ಬಿಬಿಸಿ ಕಚೇರಿ ಹಾಗೂ ಮುಂಬೈನಲ್ಲಿರುವ ಬಿಬಿಸಿ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆಯ 60-70 ಸದಸ್ಯರ ತಂಡವು ಭೇಟಿ ನೀಡಿದ್ದು, ಕಚೇರಿಯಲ್ಲಿರುವ ಉದ್ಯೋಗಿಗಳಿಗೆ ತಮ್ಮ ಮೊಬೈಲ್ ಫೋನ್ ಬಳಸದಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಬಿಬಿಸಿ ಕಚೇರಿಯಲ್ಲಿ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದ ಅನೇಕ ಪತ್ರಕರ್ತರ ಮೊಬೈಲ್, ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇದು ಕೇವಲ ಸರ್ವೇ ಅಷ್ಟೆ ಎಂದಿದ್ದಾರೆ. ನಮ್ಮ ಅಧಿಕಾರಿಗಳು, ಬಿಬಿಸಿ ಕಚೇರಿಯ ಲೆಕ್ಕಪತ್ರಗಳನ್ನು ಪರಿಶೀಲನೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಸಾಕ್ಷ್ಯಚಿತ್ರ ಪ್ರಸಾರ ಮಾಡಿದ ಕೆಲವೇ ದಿನಗಳಲ್ಲಿ ಬಿಬಿಸಿ ಕಚೇರಿಗಳ ಮೇಲೆ ಆದಾಯ ತೆರಿಗೆ ದಾಳಿ ನಡೆದಿರುವುದು ಗಮನಾರ್ಹ.
ಇದನ್ನು ಓದಿ: ಪ್ರಧಾನಿ ನರೇಂದ್ರ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಕೇರಳದಲ್ಲಿ ಪ್ರದರ್ಶನವಾಗಲಿದೆ: ಡಿವೈಎಫ್‌ಐ
2002ರಲ್ಲಿ ನಡೆದ ಗುಜರಾತ್ ಗಲಭೆಗಳ ಕುರಿತಾಗಿ ಎರಡು ಕಂತುಗಳಲ್ಲಿ ಸಾಕ್ಷ್ಯಚಿತ್ರವೊಂದನ್ನು ಬಿಬಿಸಿ ಪ್ರಸಾರ ಮಾಡಿತ್ತು. ಸಾಕ್ಷ್ಯಚಿತ್ರ ಬಿಡುಗಡೆಗೊಂಡ ಎರಡು ವಾರಗಳ ನಂತರ ಭಾರತದಲ್ಲಿರುವ ಅದರ ಕಚೇರಿಗಳ ಮೇಲೆ ದಾಳಿ ನಡೆದಿದೆ. ಆದಾಯ ತೆರಿಗೆ ಇಲಾಖೆಯು ಕಂಪನಿಯ ವ್ಯವಹಾರ ಕಾರ್ಯಾಚರಣೆಗಳು ಮತ್ತು ಅದರ ಭಾರತೀಯ ಘಟಕಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಹಲವು ವಿಶ್ವವಿದ್ಯಾಲಯಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನಗೊಂಡು ಗದ್ದಲವೂ ಎದ್ದಿತು. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ನಲ್ಲಿ ಬಿಬಿಸಿ ನಿಷೇಧಿಸುವಂತೆ ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ನಂತರ ಬೆಳವಣಿಗೆಯಲ್ಲಿ ಇದೀಗ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಮೂಲಕ ದಾಳಿ ನಡೆಸಿದೆ ಎಂಬುದು ಪ್ರತಿಪಕ್ಷಗಳ ಆರೋಪವಾಗಿದೆ. ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.
2002ರ ಗುಜರಾತ್ ಗಲಭೆ ಕುರಿತು ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್(ಬಿಬಿಸಿ) ಪ್ರಸಾರ ಮಾಡಿತ್ತು. ಆದರೆ, ಭಾರತದಲ್ಲಿ ಅದರ ಪ್ರಸಾರಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ನಿಷೇಧ ಹೇರಿತು. ಇದರ ಬೆನ್ನಲ್ಲೇ ಹಲವು ಕಡೆಗಳಲ್ಲಿ ಸಾಕ್ಷ್ಯ ಪ್ರದರ್ಶನಗೊಂಡಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ