ನವದೆಹಲಿ: ಉದ್ಯಮಿ ಗೌತಮ್ ಅದಾನಿ ಲಾಭ ಪಡೆಯಲು ಮೋದಿ ಸರ್ಕಾರ ವ್ಯಾಪಾರಿ ನಿಯಮಗಳನ್ನೇ ಬದಲಿಸಿದೆ. ಈಗ ದೇಶದಲ್ಲಿ ಒಂದೇ ಹೆಸರು ಕೇಳಿರುತ್ತಿದೆ. ಅದು ಅದಾನಿ.. ಅದಾನಿ… ಅದಾನಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಸಂಸತ್ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ತಮಿಳುನಾಡು, ಕೇರಳದಿಂದ ಹಿಮಾಚಲ ಪ್ರದೇಶದವರೆಗೂ ಅದಾನಿ ಹೆಸರು ಕೇಳಿಬರುತ್ತಿದೆ. ಅದಾನಿಗೆ ಅನುಕೂಲವಾಗುವಂತೆ ನಿಯಮಗಳನ್ನು ರೂಪಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿ: ಹಿಂಡನ್ ಬರ್ಗ್ ವರದಿ : ಅದಾನಿ ಸಮೂಹದ ಅಕ್ರಮ, ವಂಚನೆಗಳ ಚಿತ್ರ
ವಿಮಾನ ನಿಲ್ದಾಣಗಳ ಬಗ್ಗೆ ಪೂರ್ವಾನುಭವ ಹೊಂದಿರದ ಯಾವುದೇ ವ್ಯಕ್ತಿ, ವಿಮಾನ ನಿಲ್ದಾಣಗಳ ಅಭಿವೃದ್ಧಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವಂತಿಲ್ಲ ಎಂಬ ನಿಯಮವಿದೆ. ಆದರೆ ಬಿಜೆಪಿ ನೇತೃತ್ವದ ಭಾರತ ಸರ್ಕಾರ ಈ ನಿಯಮ ಬದಲಾಯಿಸಿ ಅದಾನಿ ಒಡೆತನಕ್ಕೆ 6 ವಿಮಾನ ನಿಲ್ದಾಣಗಳನ್ನು ನೀಡಿವೆ. ಇದರಿಂದ 2014ರಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 609ನೇ ಸ್ಥಾನದಲ್ಲಿದ್ದ ಅದಾನಿ ನಂತರ ಏಕಾಏಕಿಯಾಗಿ 2ನೇ ಸ್ಥಾನಕ್ಕೇರಿದರು ಎಂದರು.
ಎಸ್ಬಿಐ ಅದಾನಿಗೆ 1 ಬಿಲಿಯನ್ ಡಾಲರ್ ಸಾಲ ಮಂಜೂರು ಮಾಡಿದೆ. ಮೋದಿ ಬಾಂಗ್ಲಾದೇಶಕ್ಕೆ ತೆರಳಿದಾಗ ಬಾಂಗ್ಲಾದೇಶ ಇಂಧನ ಅಭಿವೃದ್ಧಿ ಮಂಡಳಿಯು ಅದಾನಿ ಜೊತೆ 25 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಇವೆಲ್ಲವೂ ಮ್ಯಾಜಿಕ್ ರೀತಿ ನಡೆದಿವೆ ಎಂದು ರಾಹುಲ್ ಆರೋಪಿಸಿದ್ದಾರೆ.
ಇದನ್ನು ಓದಿ: ಅದಾನಿ ಸಮೂಹ ಸಂಸ್ಥೆಯ ವ್ಯವಹಾರ ಕುರಿತು ಮಾಹಿತಿ ನೀಡುವಂತೆ ಬ್ಯಾಂಕುಗಳಿಗೆ ಆರ್ಬಿಐ ಸೂಚನೆ
ಪ್ರಧಾನಿ ನರೇಂದ್ರ ಮೋದಿ ಅದಾನಿಯೊಂದಿಗೆ ಎಷ್ಟು ಬಾರಿ ವಿದೇಶಿ ಪ್ರವಾಸ ಮಾಡಿದ್ದಾರೆ? ನೀವು ವಿದೇಶಕ್ಕೆ ಬಂದಾಗ ಎಷ್ಟು ಬಾರಿ ಅಲ್ಲಿ ನಿಮ್ಮ ಜೊತೆ ಕೂಡಿಕೊಂಡಿದ್ದಾರೆ? ನಿಮ್ಮ ಭೇಟಿಯ ನಂತರ ಎಷ್ಟು ಬಾರಿ ವಿದೇಶಗಳಲ್ಲಿ ಒಪ್ಪಂದ ಮಾಡಿಕೊಂಡಿದ್ದಾರೆ? ಕಳೆದ 20 ವರ್ಷಗಳಲ್ಲಿ ಬಿಜೆಪಿಗೆ ಅದಾನಿ ಎಷ್ಟು ಹಣ ನೀಡಿದ್ದಾರೆ? ಎಂದು ಪ್ರಶ್ನೆಗಳನ್ನು ಕೇಳಿದರು.
ಅದಾನಿ ಸಂಸ್ಥೆಗಳು ಎಂಟತ್ತು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತವೆ. 2014ರಿಂದ 2022ರ ನಡುವೆ 8 ಶತಕೋಟಿ ಡಾಲರ್ ಸಂಪತ್ತು ಹೊಂದಿದ್ದ ಅವರು ಈಗ 140 ಶತಕೋಟಿ ಡಾಲರ್ನಷ್ಟು ಸಂಪತ್ತು ತಲುಪಿದ್ದು ಹೇಗೆ? ಎಂದು ಸಾಕಷ್ಟು ಯುವಕರು ನಮ್ಮನ್ನು ಕೇಳಿದ್ದಾರೆ. ಇದಕ್ಕೆ ಏನು ಉತ್ತರ ನೀಡಲು ಸಾಧ್ಯ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅದಾನಿ ನಡುವಿನ ಸಂಬಂಧ ಕುರಿತು ಮಾತನಾಡಿದ ರಾಹುಲ್ ಗಾಂಧಿ, ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಿನಿಂದಲೂ ಅದಾನಿ ಜೊತೆಗೆ ಸಂಪರ್ಕ ಹೊಂದಿದ್ದಾರೆ. ಆಗ ಅದಾನಿ ಗುಜರಾತ್ ಪುನರುತ್ಥಾನ ಪರಿಕಲ್ಪನೆಗೆ ಮೋದಿಗೆ ಸಹಾಯ ಮಾಡಿದ್ದರು. ನರೇಂದ್ರ ಮೋದಿ ಪ್ರಧಾನಿಯಾಗಿ ದೆಹಲಿ ತಲುಪಿದಾಗ ನಿಜವಾದ ಮ್ಯಾಜಿಕ್ ಪ್ರಾರಂಭವಾಯಿತು ಎಂದು ಟೀಕಿಸಿದ್ದಾರೆ.
ಇದನ್ನು ಓದಿ: ಬಜೆಟ್ ಸಂಸತ್ ಅಧಿವೇಶನ: ಲೋಕಸಭೆಯಲ್ಲಿ ಅದಾನಿ ಸಂಸ್ಥೆ ವಿರುದ್ಧದ ಆರೋಪಗಳ ಚರ್ಚೆಗೆ ವಿರೋಧ ಪಕ್ಷಗಳ ಪಟ್ಟು
ಸದನದಲ್ಲಿ ರಾಹುಲ್ ಗಾಂಧಿ ಅದಾನಿ ಹಾಗೂ ಮೋದಿ ಸಂಬಂಧ ವಿಚಾರಗಳನ್ನು ಪ್ರಸ್ತಾಪಿಸುವ ವೇಳೆ ಮಧ್ಯೆ ಪ್ರವೇಶಿಸಿದ ಕಾನೂನು ಸಚಿವ ಕಿರಣ್ ರಿಜಿಜು, ಆಧಾರರಹಿತ ಆರೋಪಗಳನ್ನು ಮಾಡಬೇಡಿ, ಈ ಬಗ್ಗೆ ನಿಮ್ಮ ಬಳಿ ಪುರಾವೆಗಳಿವೆ ಎಂದರು.
ಈ ವೇಳೆ ರಾಹುಲ್ ಗಾಂಧಿ ಉದ್ಯಮಿ ಗೌತಮ್ ಅದಾನಿಯವರ ವಿಮಾನದಲ್ಲಿ ಅದಾನಿ ಅವರೊಂದಿಗೆ ಮೋದಿ ಕುಳಿತಿರುವ ಚಿತ್ರವನ್ನು ತೋರಿಸಿ ಅವರ ನಡುವಿನ ಸ್ನೇಹವನ್ನು ಸದನಕ್ಕೆ ತಿಳಿಸಲು ಹೊರಟಿರು. ಈ ಸಂದರ್ಭದಲ್ಲಿ ಸಭಾಪತಿ ಓಂ ಬಿರ್ಲಾ ರಾಷ್ಟ್ರಪತಿ ಭಾಷಣದ ಮೇಲೆ ಗಮನ ಕೇಂದ್ರೀಕರಿಸುವಂತೆ ಹೇಳಿದರು.
ಅದಾನಿ ಸಮೂಹ ಸಂಸ್ಥೆಗಳ ಮೂಲಕ ನಡೆದಿರುವ ವಂಚನೆ ಮತ್ತು ಷೇರುಗಳ ಬೆಲೆಯಲ್ಲಿ ಏರಿಕೆ ಮತ್ತು ಇಳಿಕೆ ಮಾಡುತ್ತಿದೆ, ಲೆಕ್ಕಪತ್ರವನ್ನು ತಿರುಚಲಾಗಿದೆ ಎಂಬ ಅಮೆರಿಕ ಮೂಲದ ಸಂಸ್ಥೆ ಹಿಂಡನ್ಬರ್ಗ್ ಸಂಶೋಧನಾ ವರದಿ ನೀಡಿತ್ತು. ಸದ್ಯ ಈ ವಿಚಾರ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ