ಭದ್ರಾವತಿ ಕಬ್ಬಿಣ-ಉಕ್ಕು ಕಾರ್ಖಾನೆ ಮುಚ್ಚಬಾರದೆಂದು ಸಿದ್ದರಾಮಯ್ಯ ಮೋದಿಗೆ ಪತ್ರ

ಶಿವಮೊಗ್ಗ: ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ(ವಿಐಎಸ್‌ಎಲ್)ಯನ್ನು ಮುಚ್ಚಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಬಲವಾಗಿ ಖಂಡಿಸುತ್ತೇನೆ. ಈ ಜನ ವಿರೋಧಿ ತೀರ್ಮಾನವನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನು ಓದಿ: ಭದ್ರಾವತಿ ಉಕ್ಕು ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಲು ಪ್ರಧಾನಿಗೆ ಹೆಚ್.ಡಿ.ದೇವೇಗೌಡ ಪತ್ರ

ಕಾರ್ಖಾನೆ ಸ್ಥಗಿತದಿಂದಾಗಿ 20 ಸಾವಿರ ಮಂದಿಯ ಜೀವನ ನಿರ್ವಹಣೆಗೆ ಕಷ್ಟವಾಗಲಿದೆ. ಅಷ್ಟೇ ಅಲ್ಲದೆ ರಾಜ್ಯದ ಏಕೈಕ ಸರ್ಕಾರಿ ಉಕ್ಕಿನ ಕಾರ್ಖಾನೆ ಇಲ್ಲದಂತೆ ಮಾಡಿದಂತಾಗುತ್ತದೆ. ಕಾರ್ಖಾನೆ ಪುನಶ್ಚೇತನಗೊಳಿಸಲು ಅನುವಾಗುವಂತೆ ನಮ್ಮ ಸರ್ಕಾರ 150 ಎಕರೆ ಗಣಿ ಜಾಗ ನೀಡಿತ್ತು. ಆದರೆ, ರಾಜಕೀಯ ಇಚ್ಛಾಶಕ್ತಿ ಇಲ್ಲದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಖಾನೆಯನ್ನೇ ಇಲ್ಲದಂತೆ ಮಾಡಲು ಹೊರಟಿಸಿರುವುದು ಖಂಡನೀಯ ಎಂದು ಹೇಳಿದ್ದಾರೆ.

ಇದನ್ನು ಓದಿ: ದುಸ್ಥಿತಿಯೆಂದು ದೇಶದ ಸಾರ್ವಜನಿಕ ಆಸ್ತಿಯ ಮಾರಾಟ ಯೋಜನೆ ಎನ್‌ಎಂಪಿ : ಪ್ರೊ. ಎಂ ಚಂದ್ರ ಪೂಜಾರಿ

3 ವರ್ಷದಿಂದ ಈಚೆಗೆ 13 ಬೃಹತ್ ಸಾರ್ವಜನಿಕ ಸಂಸ್ಥೆಗಳನ್ನು ಮುಚ್ಚಿಲ್ಪಟ್ಟಿದ್ದು, 37 ಸಂಸ್ಥೆಗಳು ರೂ.6,103 ಕೋಟಿ ನಷ್ಟದಲ್ಲಿ ನಡೆಯುತ್ತಿದೆ. ಇದರಿಂದ ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ನಾಗಮೋಹನ್ ದಾಸ್ ವರದಿ ಪ್ರಕಾರ ಶೇ. 2ರಷ್ಟು ಮಾತ್ರ ಸರ್ಕಾರಿ ಉದ್ಯೋಗಗಳಿದ್ದು, ಸರ್ಕಾರಿ ಉದ್ಯೋಗಗಳಿಂದ ಮಾತ್ರ ಎಸ್ಸಿ, ಎಸ್ಟಿ ಮೀಸಲಾತಿ ಸಾಧ್ಯ. ಇದೀಗ ಒಂದೊಂದಾಗಿ ಸಾರ್ವಜನಿಕ ಸಂಸ್ಥೆಗಳನ್ನು ಮುಚ್ಚುತ್ತಾ ಬಂದರೆ ಪರಿಶಿಷ್ಟರ ಉದ್ಯೋಗವನ್ನು ಕಸಿದುಕೊಂಡಂತೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

2018ರ ಬಿಜೆಪಿ ಪ್ರಣಾಳಿಕೆಯಲ್ಲಿ ರಾಜ್ಯದಲ್ಲಿನ ಎಲ್ಲಾ ನೆನೆಗುದಿಗೆ ಬಿದ್ದಿರುವ ಉಕ್ಕಿನ ಯೋಜನೆಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸುತ್ತೇವೆಂದು ಹೇಳಲಾಗಿತ್ತು. ಆದರೆ, ರಾಜ್ಯದಲ್ಲಿರುವ ಒಂದೇ ಒಂದು ಕಾರ್ಖಾನೆಯನ್ನೂ ಮುಚ್ಚಿತ್ತಿರುವುದು ಯಾಕೆ? ಈ ಭಾಗದ ಜನ ಬಿಜೆಪಿಗೆ ಬೆಂಬಲ ನೀಡಿದ್ದರು. ಅವರ ಹಿತ ರಕ್ಷಿಸಲು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ವಿಫಲವಾಗಿದ್ದಾರೆ. ನಿಮ್ಮ ಬಳಿ ರಾಜ್ಯದ ಪ್ರತಿ ಹಕ್ಕನ್ನೂ ಹೋರಾಟದ ಮೂಲಕ ಪಡೆಯುವಂತಾಗಿದೆ. ಕರ್ನಾಟಕ ನಾಗರೀಕರನ್ನು ಯಾಕೆ ದ್ವಿತೀಯ ದರ್ಜೆಯವರಂತೆ ಕಾಣುತ್ತೀರಿ ಎಂದು ಕಿಡಿಕಾರಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *