ನವದೆಹಲಿ: ಬಿಬಿಸಿ ಪ್ರದರ್ಶಿಸಿರುವ ʻಇಂಡಿಯಾ: ದಿ ಮೋದಿ ಕ್ವಶ್ಚನ್ʼ ಭಾರತದಲ್ಲಿ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆಗೆ ಸಮ್ಮಿತಿಸಿರುವ ನ್ಯಾಯಾಲಯ ಮುಂದಿನ ಸೋಮವಾರ(ಫೆಬ್ರವರಿ 06) ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ತುರ್ತು ವಿಚಾರಣೆ ನಡೆಸಬೇಕೆಂದು ವಕೀಲರಾದ ಎಂ.ಎಲ್. ಶರ್ಮಾ ಮತ್ತು ಸಿ.ಯು. ಸಿಂಗ್ ನ್ಯಾಯಪೀಠಕ್ಕೆ ಮನವಿ ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪರ್ದಿವಾಲಾ ಅವರಿದ್ದ ತ್ರಿಸದಸ್ಯ ಪೀಠ ಅರ್ಜಿಯನ್ನು ಪುರಸ್ಕರಿಸಿದೆ.
ಇದನ್ನು ಓದಿ: ಪ್ರಧಾನಿ ನರೇಂದ್ರ ಮೋದಿ ಕುರಿತ ಸಾಕ್ಷ್ಯಚಿತ್ರ; ಇಷ್ಟಕ್ಕೂ ಬಿಬಿಸಿ ವಿರುದ್ಧ ಕೇಂದ್ರ ಸರ್ಕಾರ ಕೆಂಡಕಾರುವುದೇಕೆ?
ಬಿಬಿಸಿ ನಿರ್ಮಿಸಿರುವ ʻಇಂಡಿಯಾ: ದಿ ಮೋದಿ ಕ್ವಶ್ಚನ್ʼ ಸಾಕ್ಷ್ಯಚಿತ್ರ ನಿರ್ಬಂಧ ಅಕ್ರಮ, ಅಸಂವಿಧಾನಿಕ, ನಿರಂಕುಶದ ಕ್ರಮವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ವೇಳೆ ನ್ಯಾಯಾಲಯಕ್ಕೆ ವಕೀಲ ಸಿ.ಯು. ಸಿಂಗ್, ಕೇಂದ್ರ ಸರ್ಕಾರ ತನ್ನ ತುರ್ತು ಅಧಿಕಾರ ಬಳಸಿ ಎನ್. ರಾಮ್ ಮತ್ತು ಪ್ರಶಾಂತ್ ಭೂಷಣ್ ಅವರ ಟ್ವೀಟ್ಗಳನ್ನು ಅಳಿಸಿ ಹಾಕಿರುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಸಾಕ್ಷ್ಯಚಿತ್ರ ಪ್ರದರ್ಶಿಸಿದ್ದಕ್ಕಾಗಿ ಅಜ್ಮೀರ್ನ ವಿದ್ಯಾರ್ಥಿಗಳನ್ನು ಬಂಧಿಸಿರುವ ಬಗ್ಗೆ ನ್ಯಾಯಪೀಠದ ಗಮನಕ್ಕೆ ತಂದರು.
ಗುಜರಾತ್ ನಲ್ಲಿ ಸಂಭವಿಸಿದ 2002ರ ಗೋಧ್ರೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಬಿಸಿ ನಿರ್ಮಾಣ ಮಾಡಿರುವ ಸಾಕ್ಷ್ಯಚಿತ್ರಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ