ರೈತ ಹೋರಾಟಗಾರ ಹತ್ತಿ ಅಡಿವೆಪ್ಪನವರಿಗೆ ನುಡಿನಮನ

ಹಗರಿಬೊಮ್ಮನಹಳ್ಳಿ: ಒಬ್ಬ ಸಾಮಾನ್ಯ ಮನುಷ್ಯ ಒಂದು ಕ್ರಾಂತಿಕಾರಿ ಪರಂಪರೆ ನೆಲೆಯಲ್ಲಿ ಬೆಳೆದು ತನ್ನ ಸಾಮಾನ್ಯವಾದ ಜನತೆಗೆ ವಿಶಿಷ್ಟವಾದ ಕೋಡುಗೆ ನೀಡಿದ ಸಂಗಾತಿ ಹತ್ತಿ ಅಡಿವೆಪ್ಪ ಅವರಿಗೆ ನೆನ್ನೆ(ಜನವರಿ 28) ನುಡಿ ನಮನ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ಕೃಷಿಕ ಸಮಾಜದ ಭವನದಲ್ಲಿ ನಾಗರೀಕರ ವೇದಿಕೆಯಿಂದ ನಡೆದ ಹೋರಾಟಗಾರ ಹತ್ತಿ ಅಡಿವೆಪ್ಪನವರ ನುಡಿನಮನ ಸಭೆ ನಡೆಯಿತು.

ಅಡಿವೆಪ್ಪನವರು ಚಳುವಳಿಯನ್ನು ಕಟ್ಟಿದವರು, ಚಳುವಳಿಯ ಹೆಸರಿನಲ್ಲಿ ಬದುಕನ್ನು ಕಟ್ಟಿಕೊಂಡವರಲ್ಲ. ಅವರಿಗೆ ಎಷ್ಟೇ ಬಡತನ, ಕಷ್ಟಗಳಿದ್ದರೂ ಚಳುವಳಿಗೆ ದ್ರೋಹ ಮಾಡದೇ ಬದ್ದತೆಯಿಂದ ಚಳುವಳಿ ಕಟ್ಟಿದರು. ಎಷ್ಟೋ ಬಾರಿ ಹಸಿವಿನಲ್ಲೂ ಹೋರಾಟ ಮಾಡಿದ ಅಡಿವೆಪ್ಪನವರ ಹೋರಾಟ ನಿಜಕ್ಕೂ ಶ್ಲಾಘನೀಯವಾದದ್ದು ಮತ್ತು ಅವರ ಹೋರಾಟಗಳಿಗೆ ಯಾವತ್ತೂ ಬೆಂಬಲಿಸಿದ ಅವರ ಕುಟುಂಬಕ್ಕೂ ನಾವು ಮರೆಯುವಂತಿಲ್ಲ ಎಂದು ಅಡಿವೆಪ್ಪನವರೊಂದಿಗಿನ ಚಳುವಳಿಯ ಒಡನಾಡಿ, ಹಿರಿಯರಾದ ಬಿ.ಗಣೇಶರವರು ತಿಳಿಸಿದರು.

ಕೋಮುವಾದಿಗಳಿಂದ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗುತ್ತಿರುವ ಸಂದರ್ಭದಲ್ಲಿ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕವಾಗಿ ಜನರ ಮೇಲಾಗುತ್ತಿರುವ ದಾಳಿಯ ಸಂದರ್ಭದಲ್ಲಿ ಹೋರಾಟಗಾರ ಅಡಿವೆಪ್ಪನವರು ಅಗಲಿದ್ದು ಚಳುವಳಿ ಮತ್ತು ಸಮಾಜಕ್ಕೆ ದೊಡ್ಡ ನಷ್ಟವಾಗಿದೆ ಎಂದು ನೋವು ವ್ಯಕ್ತಪಡಿಸಿದರು.

ಯಾವುದೇ ಚಳುವಳಿಯಲ್ಲಿರುವವರು ತಾನು ಯಾವ ಸಿದ್ಧಾಂತ, ಪ್ರಗತಿಪರ ವಿಚಾರಗಳಿಗೆ ಬದ್ದನಾಗಿರುತ್ತಾನೋ, ಅವುಗಳನ್ನು ಮೈಗೂಡಿಸಿಕೊಂಡು ಚಳುವಳಿಯಲ್ಲಿ ಆಚರಣೆಗೆ ತರದೇ ಇದ್ದರೆ ಯಾವ ಚಳುವಳಿಯೂ ಉಳಿಯುವುದಿಲ್ಲ. ಹಾಗೆಯೇ ಸಾಮಾಜಿಕ ಹೊಣೆಗಾರಿಕೆಯಿಂದ ಬದ್ದತೆಯಿಂದ ಚಳುವಳಿಗೆ ತ್ಯಾಗ ಮಾಡಿ ಬರುವ ಯಾವುದೇ ಕಾರ್ಯಕರ್ತನನ್ನು ಆತನ ಕಷ್ಟ, ನೋವುಗಳಿಗೆ ಮಾನವೀಯ ಸ್ಪಂದನೆ ನೀಡದೇ ಆತನನ್ನು ಧೂರ ಮಾಡಿಕೊಂಡರೆ ಆ ವ್ಯಕ್ತಿಗೆ ಮಾಡಿದ ಅನ್ಯಾಯವಲ್ಲದೇ, ಚಳುವಳಿಗೂ ಮಾಡುವ ದೊಡ್ಡ ಅನ್ಯಾಯವಾಗುತ್ತದೆ ಎಂದು ಪ್ರಗತಿಪರ ಚಿಂತಕ ವೀರಣ್ಣ ಕಲ್ಮನಿ ಹೇಳಿದರು.

ಹತ್ತಿ ಅಡಿವೆಪ್ಪನವರು ಎಡ ಸಿದ್ಧಾಂತವನ್ನು ಒಪ್ಪಿಕೊಂಡು ಸುಮಾರು ಇಪ್ಪತ್ತೈದು ವರ್ಷಗಳಷ್ಟು ಸುದೀರ್ಘ ಚಳುವಳಿ ಕಟ್ಟಿ, ಕರ್ನಾಟಕ ಪ್ರಾಂತ ರೈತ ಸಂಘಟನೆಯ ಮೂಲಕ ಚಿಲವಾರಬಂಡಿ ಏತ ನೀರಾವರಿ ಯೋಜನೆ ಜಾರಿಗಾಗಿ ಮತ್ತು ಮಾಲವಿ ಜಲಾಶಯಕ್ಕೆ ಶಾಶ್ವತ ನೀರಾವರಿಗಾಗಿ ಹಾಗೂ ಇನ್ನೂ ಅನೇಕ ರೈತಪರ ಹೋರಾಟಗಳನ್ನು ಮಾಡಿದ್ದರು. ಏತ ನೀರಾವರಿ ಯೋಜನೆಗಳ ಮೂಲಕ ರೈತರ ಬದುಕು ಹಸನಾಗಬೇಕೆಂದು ಕನಸು ಕಂಡಿದ್ದರು. ಆದರೆ ಈವರೆಗೂ ಅವುಗಳು ಜಾರಿಯಾಗದೇ ಇರುವುದು ನೋವಿನ ಸಂಗತಿ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಅಡಿವೆಪ್ಪನವರು ನಿಸ್ವಾರ್ಥ, ಪ್ರಾಮಾಣಿಕವಾಗಿ ಚಳುವಳಿಯನ್ನು ಕಟ್ಟಿದ್ದರಿಂದ ಸಮಾಜ ಅವರ ವ್ಯಕ್ತಿತ್ವವನ್ನು ಗೌರವಿಸಿ ಸ್ಮರಿಸುತ್ತಿದೆ ಎಂದರು.

ರೈತ ಹೋರಾಟಗಾರರಾದ ಜೆ.ಎಂ.ವೀರಸಂಗಯ್ಯ, ಸಾಹಿತಿಗಳಾದ ಹುರುಕಡ್ಲಿ ಶಿವಕುಮಾರ, ಉಪ್ಪಾರ ಬಸಪ್ಪ, ಎ.ಆರ್.ಪಂಪಣ್ಣ, ಲೆಕ್ಕ ಪರಿಶೋಧಕರಾದ ಸರ್ಪಭೂಷಣ, ಕೊಟಿಗಿ ಮಲ್ಲಿಕಾರ್ಜುನ, ಹುಳ್ಳಿ ಉಮೇಶ, ಶಂಷಾದ್ ಬೇಗಂ, ಸೌಮ್ಯ ಪಾಟೀಲ್, ಕೆ.ರಮೇಶ, ಒ.ತಿಂದಪ್ಪ, ಹೆಚ್.ಉಸ್ಮಾನ್‌ ಬಾಷರವರು ಮಾತನಾಡಿದರು.

ರಂಗಪ್ಪದಾಸರ, ಸಿದ್ದನಗೌಡ, ಜಿ.ಸರೋಜ, ಹೆಚ್.ವಿರುಪಾಕ್ಷಿ, ನಾಗರಾಜ ಪಿ.ಹೆಗ್ಡಾಳ್, ಭೀಮರೆಡ್ಡಿ, ರುದ್ರಮುನಿಸ್ವಾಮಿ, ನಿಂಗಮ್ಮ, ಎಸ್.ಹುಲಿಗೆಮ್ಮ, ಸೋಗಿ ಬಸವರಾಜ ಮತ್ತು ಅಡಿವೆಪ್ಪನವರ ಪುತ್ರ ಹತ್ತಿ ಪ್ರಶಾಂತ ಮತ್ತು ಬಂಧುಗಳು, ಅಡಿವೆಪ್ಪನವರ ಇತರೆ ಒಡನಾಡಿ, ಹಿತೈಷಿಗಳು ಭಾಗವಹಿಸಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *