ಬೆಂಗಳೂರು: ಟ್ರಾನ್ಸ್ಫಾರ್ಮರ್ ದುರಸ್ತಿ ಮಾಡುತಿದ್ದ 26 ವರ್ಷದ ಲೈನ್ಮ್ಯಾನ್ ಒಬ್ಬರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಘಟನೆ ಸೋಮವಾರ ಬೆಂಗಳೂರಿನಲ್ಲಿ ನಡೆದಿದೆ.
ಸೋಮವಾರ ಮಾಗಡಿ ರಸ್ತೆಯ ಗೋಪಾಲಪುರದಲ್ಲಿ ಟ್ರಾನ್ಸ್ಫಾರ್ಮರ್ ದುರಸ್ತಿ ಮಾಡುತ್ತಿದ್ದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) 26 ವರ್ಷದ ಲೈನ್ಮ್ಯಾನ್ ಗೌತಮ್ ವಿದ್ಯುತ್ ತಗುಲಿ ಸಾವನ್ನಪ್ಪಿದ್ದಾರೆ.
ಮೃತ ಗೌತಮ್ ಅವರು ಕಳೆದ ಆರು ವರ್ಷಗಳಿಂದ ಬೆಸ್ಕಾಂನಲ್ಲಿ ಖಾಯಂ ಉದ್ಯೋಗಿಯಾಗಿದ್ದು, ಭಾನುವಾರ ರಾತ್ರಿ ಪಾಳಿಯಲ್ಲಿದ್ದರು. ಟ್ರಾನ್ಸ್ಫಾರ್ಮರ್ ಸಮಸ್ಯೆಯಿಂದ ವಿದ್ಯುತ್ ಕಡಿತವಾಗಿದೆ ಎಂಬ ದೂರಿನ ಮೇರೆಗೆ ತನ್ನ ಸಹೋದ್ಯೋಗಿ ಸಿದ್ದರಾಮ ಜೊತೆಗೆ ಸೋಮವಾರ ದುರಸ್ಥಿ ಸ್ಥಳಕ್ಕೆ ತಲುಪಿದರು. ಲೈನ್ನಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಿದ ನಂತರ ಹಾಳಗಿದ್ದ ಲೈನ್ ಸರಿ ಮಾಡಲು ಗೌತಮ್ ಕಂಬಕ್ಕೆ ಹತ್ತಿದ್ದರು. ಆದರೆ ವಿದ್ಯುತ್ ಸ್ವಿಚ್ ಆಫ್ ಆಗದ ಕಾರಣ ಮತ್ತೊಂದು ವಿದ್ಯುತ್ ತಂತಿ ತಗುಲಿದೆ. ತೀವ್ರ ಸುಟ್ಟ ಗಾಯಗಳಿಂದ ಕಂಬದಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪ್ರಯೋಜನವಾಗಿಲ್ಲ.
ಘಟನೆಗೆ ಆಕ್ರೋಶ ವ್ಯಕ್ತಪಡಿಸಿರುವ ಮೃತರ ಕುಟುಂಬಸ್ಥರು, ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದಿದ್ದಾರೆ. ಮೃತ ಗೌತಮ್ ತಂದೆ ರಂಗಸ್ವಾಮಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಘಟನೆಯ ವೇಳೆ ಬೆಸ್ಕಾಂ ಇಲಾಖೆಯು ಯಾವುದೇ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದೇ ಗೌತಮ್ನನ್ನು ಲೈಟ್ ಕಂಬದ ಮೇಲೆ ಹತ್ತಿಸಿದ್ದಾರೆ. ಅಷ್ಟೇ ಅಲ್ಲದೇ ಈ ವೇಳೆ ಎರಡರಲ್ಲಿ ಒಂದು ಲೈನ್ನ ಕರೆಂಟ್ ಅನ್ನು ಮಾತ್ರ ಆಫ್ ಮಾಡಿದ್ದಾರೆ. ಇದರಿಂದಾಗಿ ಗೌತಮ್ ಸಾವು ಬೆಸ್ಕಾಂನಿಂದ ನಡೆದಿರುವ ಕೊಲೆಯಾಗಿದೆ. ಇದಕ್ಕೆ ಎಇ, ಇಇನೇ ನೇರ ಕಾರಣ ಎಂದು ಮೃತ ಗೌತಮ್ ತಂದೆ ಆರೋಪಿಸಿದ್ದಾರೆ.
ಪ್ರಕರಣ ಸಂಬಂಧ ಮಾಗಡಿ ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾವಿಗೆ ಕಾರಣ ಎಂದು ಭಾರತೀಯ ದಂಡ ಸಂಹಿತೆಯ ಕಲಂ 304 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.