ತಿರುವನಂತಪುರಂ: ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿನೀಯರಿಗೆ ಋತುಚಕ್ರದ ರಜೆ ನೀಡಿ ಕೇರಳ ಎಡರಂಗ ಸರ್ಕಾರ ಆದೇಶ ನೀಡಿದೆ. ಈ ಮೂಲಕ ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತದೊಂದು ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೆಗೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಬಗ್ಗೆ ಟ್ವೀಟ್ ಮಾಡಿ, ಮುಟ್ಟಿನ ರಜೆ ನಿರ್ಧಾರದ ಮೂಲಕ ಮತ್ತೊಮ್ಮೆ ಕೇರಳವು ರಾಷ್ಟ್ರಕ್ಕೆ ಮಾದರಿಯಾಗಿದೆ ಮತ್ತು ಪ್ರಸ್ತುತ ನಿರ್ಧಾರವು ಲಿಂಗ ನ್ಯಾಯಯುತ ಸಮಾಜವನ್ನು ಸಾಕಾರಗೊಳಿಸುವ ಎಡ ಪ್ರಜಾಸತ್ತಾತ್ಮಕ ರಂಗ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ಹೇಳಿದ್ದರು.
ರಾಜ್ಯ ಉನ್ನತ ಶಿಕ್ಷಣ ಇಲಾಖೆ ಜನವರಿ 19ರಂದು ಹೊರಡಿಸಿದ ಆದೇಶದಲ್ಲಿ ವಿಶ್ವವಿದ್ಯಾಲಯದ ನಿಯಮಗಳ ಅಡಿಯಲ್ಲಿ ಸೆಮಿಸ್ಟರ್ ಪರೀಕ್ಷೆಗಳಿಗೆ ಕಡ್ಡಾಯವಾದ ಶೇ. 75 ಹಾಜರಾತಿ ಬದಲಿಗೆ ಶೇ. 73 ಹಾಜರಾತಿಯೊಂದಿಗೆ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಬಹುದು ಎನ್ನಲಾಗಿದೆ. ಇದಲ್ಲದೆ, 18 ವರ್ಷ ತುಂಬಿದ ವಿದ್ಯಾರ್ಥಿನೀಯರು 60 ದಿನಗಳ ಗರ್ಭಿಣಿ ರಜೆಯನ್ನು ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ನಿಯಮಗಳಲ್ಲಿ ತಿದ್ದುಪಡಿ ಮಾಡಲು ತುರ್ತಾಗಿ ರಾಜ್ಯ ಸರ್ಕಾರವು ಕ್ರಮಕೈಗೊಳ್ಳಲಿದೆ.
ಸರ್ಕಾರದ ಆದೇಶದ ಬೆನ್ನಲ್ಲೆ ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ನಿಯಮ ಜಾರಿ ಮಾಡಿದೆ. ಈ ಬಗ್ಗೆ ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ರಾಜ್ಯ ಸಚಿವ ಆರ್ ಬಿಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ರಾಜ್ಯಾದ್ಯಂತ ಇರುವ ವಿಶ್ವವಿದ್ಯಾನಿಲಯಗಳಲ್ಲಿ ಇದೇ ರೀತಿಯ ನೀತಿಯನ್ನು ಜಾರಿಗೆ ತರಲು ರಾಜ್ಯವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿನಿಯರು ಮತ್ತು ಕೆಲಸ ಮಾಡುತ್ತಿರುವ ಮಕ್ಕಳಿಗೆ ಋತುಚಕ್ರದ ರಜೆ ಘೋಷಿಸಲು ಕೋರಿ ಈಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಭಾರತದಾದ್ಯಂತ ಮಹಿಳಾ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ನೋವು ರಜೆ ಅಥವಾ ಅವಧಿ ರಜೆಯನ್ನು ಪರಿಚಯಿಸಲು ಕರೆ ನೀಡಲಾಯಿತು.