ಬೆಂಗಳೂರು: ಸಮಾಜವನ್ನು ಬದಲಿಸಲು ದುಡಿಯುವ ವರ್ಗದ ಜನರು ತಮ್ಮ ಶಕ್ತಿಯನ್ನೆಲ್ಲಾ ವ್ಯಯಿಸಬೇಕಾಗಿದೆ. ಕಾರ್ಮಿಕ ವರ್ಗವು ಈ ಸಮಯದಲ್ಲಿ ಐಕ್ಯ ಹೋರಾಟವನ್ನು ರೂಪಿಸುವುದು ಅಗತ್ಯವಾಗಿದೆ ಎಂದು ಡಾ. ಅಲಿಡಾ ಗೆವಾರ ಅವರು ಕರೆ ನೀಡಿದರು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದು, ಸಮ್ಮೇಳನದ 2ನೇ ದಿನವಾದ ಇಂದು(ಜನವರಿ 19), ಪ್ರತಿನಿಧಿಗಳನ್ನು ಉದ್ದೇಶಿಸಿ ಚೆ ಗೆವಾರ ಅವರ ಮಗಳು ವೈದ್ಯಕೀಯ ತಜ್ಞೆ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ಡಾ. ಅಲಿಡಾ ಗೆವಾರ ಸ್ಪೂರ್ತಿದಾಯಕ ಮಾತುಗಳನ್ನು ಆಡಿದರು.
ಮುಂದುವರೆದು ಮಾತನಾಡಿದ ಅವರು, ಸಾಮಾನ್ಯ ಜನರಿಗೆ ನಮ್ಮ ಮೌಲ್ಯಗಳನ್ನು ತಲುಪಿಸುವುದು ಅತ್ಯಂತ ಅಗತ್ಯವಾಗಿದೆ. ಯಾವುದೇ ಬಣ್ಣದವರು, ಜಾತಿಯವರು ಅಥವಾ ಸೈದ್ಧಾಂತಿಕ ಭಿನ್ನತೆಗಳು ಇವೆಯಾದರೂ ಅವುಗಳ ನಡುವೆಯೂ ಕಾರ್ಮಿಕ ವರ್ಗ ತನ್ನ ವಿಮೋಚನೆಗಾಗಿ ಐಕ್ಯತೆಯನ್ನು ಪ್ರದರ್ಶಿಸಬೇಕೆಂದು ಕರೆ ನೀಡಿದರು.
ಕ್ಯೂಬಾದಂತಹ ಚಿಕ್ಕ ರಾಷ್ಟ್ರವು ಜನರನ್ನು ಒಗ್ಗೂಡಿಸಿ ಅಮೆರಿಕಾದಂತಹ ಜಗತ್ತಿನ ದೊಡ್ಡ ಶಕ್ತಿಗಳಿಗೆ ಎದುರಾಗಿ ಸಮಾಜವಾದದ ಕ್ರಾಂತಿಯ ಸ್ವರೂಪವನ್ನು ತೋರಿಸಿಕೊಟ್ಟಿದೆ. ಇಂದು ಕ್ಯೂಬಾ ಕೊರೊನಾ ಸಂಕಷ್ಟದಿಂದಾಗಿ ಕಳೆದ ಎರಡು ವರ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ಅರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಇದರಿಂದಾಗಿ ಸಂಪನ್ಮೂಲಗಳ ಕೊರತೆಯನ್ನು ಎದುರಿಸುತ್ತಿದೆ. ಅಲ್ಲಿನ ಸರ್ಕಾರ ಇಡೀ ಶ್ರಮವನ್ನು ವಹಿಸಿ ಕೆಲಸ ಮಾಡುತ್ತಿದೆ.
ಅಮೆರಿಕಾವು ಕ್ಯೂಬಾ ದೇಶದ ಮೇಲೆ ಹೇರಿದ ನಿರ್ಬಂಧಗಳಿಂದಾಗಿ ಜನರು ಬಹಳ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರ್ಥಿಕ ಸಂಕಷ್ಟಗಳಿಂದಾಗಿ ಕ್ಯೂಬಾದ ಬಹಳಷ್ಟು ಜನರು ದೇಶವನ್ನು ತೊರೆಯುವ ಪರಿಸ್ಥಿತಿ ಎದುರಾಯಿತು. ಇದು ನಮಗೆ ಬಹಳಷ್ಟು ಸಂಕಷ್ಟವನ್ನು ಉಂಟು ಮಾಡಿದೆ.
ಆದರೆ ಇದು ವಾಸ್ತವವಾಗಿದ್ದು, ಇದನ್ನು ಎದುರಿಸುವಲ್ಲಿ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಈ ವೇದಿಕೆಯಲ್ಲಿ ನಿಂತು ನಾನು ನಿಮ್ಮೆಲರ ಸೌಹಾರ್ದತೆಯನ್ನು ಬಯಸುತ್ತೇನೆ. ನನ್ನ ದೇಶಕ್ಕೆ ಈಗ ಅಗತ್ಯವಿದೆ.
ಫಿಡಲ್ ಕ್ಯಾಸ್ಟ್ರೋ ಅವರು ಹೇಳಿದಂತೆ ಜನರಿನ ಒಗ್ಗಟ್ಟಿನ ಎದುರು ಅನ್ಯಾಯ ನಡುಗಿ ಹೋಗುತ್ತದೆ. ಅದೇ ರೀತಿ ಚೆ ಗೆವಾರ ಅವರು, ಗೆಲ್ಲುವವರೆಗೂ ಹೋರಾಡುತ್ತಲೇ ಇರೋಣ ಎಂದು ಹೇಳಿದ ಮಾತನ್ನು ನೆನಪಿಸಿಕೊಂಡು ತಮ್ಮ ಭಾಷಣವನ್ನು ಮುಗಿಸಿದರು.
Super👏👏👏👏👏👏🙏🙏🙏🙏🙏🙏 💐💐💐💐💐💐💐