ನೋಟುರದ್ಧತಿ ʻʻವಿಜಯʼʼದ ನಂತರ ಈಗ ಚುನಾವಣಾ ʻʻವಿಜಯʼʼಗಳಿಗೆ ಓಡಾಟ….

ವೇದರಾಜ ಎನ್ ಕೆ

ಕಳೆದೆರಡು ವಾರಗಳಲ್ಲಿ ನೋಟುರದ್ಧತಿಯ ಬಗ್ಗೆ ಸುಪ್ರಿಂ ಕೋರ್ಟ್  ತೀರ್ಪಲ್ಲದೆ, ಆರೆಸ್ಸೆಸ್ ಮುಖ್ಯಸ್ಥರ, ಉಪರಾಷ್ಟ್ರಪತಿಗಳ, ಕೇಂದ್ರ ಗೃಹಮಂತ್ರಿಗಳ ಮತ್ತು  ಆಳುವ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷರ ಉದ್ಗಾರಗಳು , ಅವುಗಳ ನಡುವೆ ರಾಜ್ಯ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಪ್ರಧಾನಿಗಳ ಮತ್ತು ಗೃಹಮಂತ್ರಿಗಳ ರಾಜ್ಯ ಭೇಟಿಗಳು  ವ್ಯಂಗ್ಯಚಿತ್ರಕಾರರ  ರೇಖೆಗಳಿಗೆ ವಿಪುಲ ಆಹಾರ ಒದಗಿಸಿವೆ. ಇದರತ್ತ ಒಂದು ನೋಟ

ಕೇಂದ್ರ ಸರಕಾರದ 2016ರ ‘ನೋಟುರದ್ಧತಿ’ ಕ್ರಮ ಅದರ ಘೋಷಿತ ಉದ್ದೇಶಗಳನ್ನು ಸಾಧಿಸಿದೆಯೋ ಇಲ್ಲವೋ, ಕಾನೂನು ದೃಷ್ಟಿಯಲ್ಲಿ ಅದರಲ್ಲಿ ದೋಷವೇನೂ ಇಲ್ಲ ಎಂದು ಸುಪ್ರಿಂ ಕೋರ್ಟ್‍  ಆರು ವರ್ಷಗಳ ನಂತರ ತೀರ್ಪು ನೀಡಿದೆ.  ಹೀಗೆ ಹೇಳುವಾಗ, ಯಾವ ಉದ್ದೇಶದಿಂದ ಸರಕಾರ ನೋಟುರದ್ಧತಿ ಕ್ರಮವನ್ನು ತಂದಿತೋ ಅದು ಈಡೇರಿದೆಯೇ ಅಥವ ಪ್ರತ್ಯಕ್ಷ ಅಥವ ಪರೋಕ್ಷ ಪ್ರಯೋಜನಗಳನ್ನು ತಂದಿದೆಯೇ ಎಂಬ ಪ್ರಶ್ನೆಗೆ ನಾವು ಹೋಗ ಬಯಸುವುದಿಲ್ಲ. ಆ ಪ್ರಶ್ನೆಯನ್ನು ಪರಿಶೀಲಿಸುವ ಪರಿಣತಿ ನಮಗಿಲ್ಲ. ಅದು ಪರಿಣತರ ಕ್ಷೇತ್ರದಲ್ಲಿದ್ದರೇ ಒಳ್ಳೆಯದು ಎಂದೂ ಹೇಳಿದೆ.

ಪರಿಣತರಲ್ಲಿ ಹೆಚ್ಚಿನವರು ಆರು ವರ್ಷಗಳ ಹಿಂದೆಯೇ  ಇದೊಂದು ಅನಗತ್ಯವಾಗಿ ಜನರಿಗೆ ಮತ್ತು ದೇಶದ ಅರ್ಥವ್ಯವಸ್ಥೆಗೆ ವಿನಾಶಕಾರಿಯಾದ ಕ್ರಮ ಎಂದು ಹೇಳಿದ್ದರು  ಎಂಬುದನ್ನು ಈಗ ಮತ್ತೆ ನೆನಪಿಸಿಕೊಳ್ಳಬಹುದು.

ನೋಟುರದ್ಧತಿಯ ಅಬ್ಬರ

ನಿಮ್ಮ ಲೈಸೆನ್ಸ್ ಸಿಂಧುವಾಗಿದೆ”!
ಸತೀಶ ಆಚಾರ್ಯ, ಫೇಸ್‍ಬುಕ್

ಅಲ್ಲದೆ ಇದು ಒಮ್ಮತದ ತೀರ್ಪಲ್ಲ. 4:1 ಬಹುಮತದ ತೀರ್ಪು. ಭಿನ್ನ ಮತದ ತೀರ್ಪು ನವಂಬರ್ 8,2016ರಂದು ಆರ್‌ಬಿಐ ಕಾಯ್ದೆಯ ವಿಭಾಗ 26(2)ರ ಅಡಿಯಲ್ಲಿ ಹೊರಡಿಸಿದ ಅಧಿಸೂಚನೆ ಕಾನೂನಾತ್ಮಕವಾಗಿಲ್ಲ, ಇದನ್ನೊಳಗೊಂಡ 2016ರ ಸುಗ್ರೀವಾಜ್ಞೆ ಮತ್ತು 2017ರ ಕಾಯ್ದೆ ಕೂಡ ಕಾನೂನಾತ್ಮಕವಾಗಿಲ್ಲ, ರಿಜರ್ವ್ ಬ್ಯಾಂಕ್ ಸ್ವತಂತ್ರವಾಗಿ ಯೋಚಿಸಲಿಲ್ಲ, ಅದಕ್ಕೆ ಅದರ ಬಳಿ ಸಮಯವೂ ಇರಲಿಲ್ಲ ಎಂದು ನೇರವಾಗಿಯೇ ಹೇಳಿದೆಯಷ್ಟೇ ಅಲ್ಲ,  ಈ ಕ್ರಮ ನಿರೀಕ್ಷಿಸಿದಷ್ಟು ಪರಿಣಾಮಕಾರಿಯಾಗಿರಲಿಕ್ಕಿಲ್ಲ, ಏಕೆಂದರೆ, ರದ್ದಾದ ನೋಟುಗಳಲ್ಲಿ 98%ದಷ್ಟು ವಿನಿಮಯಗೊಂಡುವು, ಅಲ್ಲದೆ, ಹೆಚ್ಚಿನ ಮೌಲ್ಯದ ಅಂದರೆ 2000ರೂ.ನ ನೋಟುಗಳನ್ನು ಬಿಡುಗಡೆ ಮಾಡಲಾಯ್ತು ಎಂದೂ  ಗಮನಿಸಿದೆ.

ಆದರೂ  ಆಳುವ ಪಕ್ಷದ ಮುಖಂಡರು ಪ್ರಧಾನ ಮಂತ್ರಿಗಳ “ಐತಿಹಾಸಿಕ” ಕ್ರಮವನ್ನು ದೇಶದ ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ ಎಂದು ಆನಂದತುಂದಿಲರಾಗಿ ಹೇಳುತ್ತಿದ್ದಾರೆ. ಅದು ರಾಷ್ಟ್ರೀಯ ಹಿತದೃಷ್ಟಿಯಿಂದ ಕೈಗೊಂಡ ಕ್ರಮವಾಗಿತ್ತು ಎಂದು ಮಾಜಿ ಕಾನೂನುಮಂತ್ರಿಗಳು ಹೇಳಿದ್ದಾರೆ.

ನಿಜ, ಅವರ ಮಟ್ಟಿಗೆ , ಈ ಕ್ರಮ ಕೈಗೊಂಡವರ ಕೈಗಳ ಸುಟ್ಟ ಗಾಯಗಳ ಗುರುತುಗಳು ಕಾಣುತ್ತಿಲ್ಲ.

ಇಲ್ಲ ಸಾರ್, ನಿಮ್ಮ ಕೈಗಳಲ್ಲಿ ಸುಟ್ಟಗಾಯಗಳು ಕಾಣಿಸುತ್ತಿಲ್ಲ”
ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್

ಅಂದರೆ ಅವರು ಸರಕಾರ ಮತ್ತೆ ಇಂತಹ ಕ್ರಮ ಕೈಗೊಳ್ಳಬೇಕು, ಅಥವ ಕೈಗೊಳ್ಳಬಹುದು ಎಂದು ಹೇಳುತ್ತಾರೆಯೇ? ಸರಕಾರ ಅದಕ್ಕೆ ಸಿದ್ಧವಿದೆಯೇ?

ನೋಟುರದ್ಧತಿ ಅರ್ಥವ್ಯವಸ್ಥೆಗೆ ಭಾರೀ ಒಳ್ಳೆಯದಾಗಿತ್ತು ಸಾರ್,
 ಅದನ್ನು ಇನ್ನೊಮ್ಮೆ ಮಾಡೋಣ!”
ಅಲೋಕ್‍   ನಿರಂತರ್, ಫೇಸ್‍ಬುಕ್

ಇದು ನಿಜವಾಗಿಯೂ ‘ವಿಜಯ’ ವಾಗಿದ್ದರೆ, ಇದುವರೆಗೆ ನವಂಬರ್‍ 8ನ್ನು ‘ನೋಟುರದ್ಧತಿ ದಿನ ‘ ಎಂದು ಏಕೆ ಆಚರಿಸುತ್ತಿರಲಿಲ್ಲ ಎಂದು ಕೆಲವರು ಕೇಳುತ್ತಿದ್ದಾರೆ, ಅಥವ ಈ  ತೀರ್ಪಿನ  ಹಿನ್ನೆಲೆಯಲ್ಲಿ ಈ ವರ್ಷದಿಂದ ಅದನ್ನು ಆರಂಭಿಸಲಾಗುತ್ತಿದೆಯೇ ಎಂಬ ಬಗ್ಗೆ ಆಳುವ ಪಕ್ಷದ ವಕ್ತಾರರು ಇದುವರೆಗೆ ಏನೂ ಹೇಳಿಲ್ಲ.

***

ಇದಾದ ನಂತರ ಆರ್‌ಎಸ್‌ಎಸ್ ಮುಖ್ಯಸ್ಥರ ಒಂದು ‘ಸಂದರ್ಶನ’ ಈ ವಾರ ಬಹಳ ಸುದ್ದಿ ಮಾಡಿದೆ. ಇದರಲ್ಲಿ ಅವರು ಹಿಂದೂ ಸಮಾಜ ತನ್ನನ್ನು ರಕ್ಷಿಸಿಕೊಳ್ಳಲು 1000 ವರ್ಷಗಳಿಂದ ಯುದ್ಧದಲ್ಲಿದೆ ಎಂದಿದ್ದಾರೆ. ಇದು ಹೊರಗಿನ ಶತ್ರುಗಳ ವಿರುದ್ಧ ಮಾತ್ರವಲ್ಲ, ಒಳಗಿನ ಶತ್ರುಗಳ ವಿರುದ್ಧವೂ ಎಂದಿದ್ದಾರೆ.

ಭಾಗವತ್‍ಜೀ ಹೇಳುತ್ತಾರೆ ಯುದ್ಧ ಒಳಗಿರುವ ಒಬ್ಬಶತ್ರುವಿನ ವಿರುದ್ಧವಂತೆ”
ಮತ್ತು ಆ ಶತ್ರು ಯಾರು ಎಂದು ನಮಗೆ ಗೊತ್ತಿದೆ ಅಲ್ಲವೇ
?”
ಎನ್ನುತ್ತಾರೆ ಅವರ ಹಿಂಬಾಲಕರು.

ಇಲ್ಲ, ನಿಮಗೆ ಗೊತ್ತಿಲ್ಲ”
(ಎನ್ನುತ್ತದೆ ಅವರ ಮೆದುಳು ಹೊಕ್ಕಿರುವ ದ್ವೇಷದ ವೈರಸ್)
ಸಂದೀಪ್‍ ಅಧ್ವರ್ಯು, ಫೇಸ್‍ಬುಕ್

ಹಿಂದೂ ಸಮಾಜ ಜಾಗೃತಗೊಂಡಿದೆ ಎಂದು ಮುಂದುವರೆದು ಆರೆಸ್ಸೆಸ್‍ ಮುಖ್ಯಸ್ಥರು ಹೇಳಿದ್ದಾರೆ.

ಅದಷ್ಟೇ ಅಲ್ಲ, ಎಲ್ಲ ಸಮಾಜಗಳೂ ಜಾಗೃತಗೊಂಡಂತೆ ಕಾಣುತ್ತದೆ ಎನ್ನುತ್ತಾರೆ ಈ ವ್ಯಂಗ್ಯಚಿತ್ರಕಾರರು… …

ಹಿಂದುಗಳಷ್ಟೇ ಅಲ್ಲ ಎಂದು  ನನಗನಿಸುತ್ತದೆ…”
ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್

ನಿಜ, ಸಾವಿರ ವರ್ಷಗಳ ಯುದ್ಧದಿಂದಾಗಿ ಅಲ್ಲ, ಕುಟುಂಬದ ವೆಚ್ಚ ತೂಗಿಸುವ ಯುದ್ಧದಿಂದಾಗಿ…..

ಸಾವಿರ ವರ್ಷಗಳ  ಯುದ್ಧದಲ್ಲಿರುವವರು ಆಕ್ರಮಣಕಾರಿಗಳಾಗಿರುವುದು ಸಹಜ. ಆದರೆ ಭಾರತದ ಮುಸ್ಲಿಮರು ಭಯಪಡಬೇಕಾಗಿಲ್ಲ ಎಂದು ಭಾಗವತ್‍ ಜೀ ಸಂಘ ಪರಿವಾರದ ಪತ್ರಿಕೆಗಳಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ನೀವು ಹೆದರುವಂತದ್ದೇನೂ ಇಲ್ಲ”
ಸತೀಶ ಆಚಾರ್ಯ, ಮೊಲಿಟಿಕ್ಸ್. ಇನ್

ತಾವು ಒಂದೊಮ್ಮೆ ಈ ನೆಲವನ್ನು ಆಳಿದವರು, ಮತ್ತೆ ಆಳುತ್ತೇವೆ ಎಂಬ ಅಹಂಭಾವವನ್ನು ಅವರು ಬಿಟ್ಟರೆ ಸಾಕು ಎಂದು ಮುಂದುವರೆದು ಅವರು  ಹೇಳುತ್ತಾರೆ.

ಆದರೆ ಸಮಕಾಲೀನ ಭಾರತದಲ್ಲಿ ಎಷ್ಟು ಮಂದಿ ಮುಸ್ಲಿಮರು ಈ ಭಾವನೆಯನ್ನು ಹೊಂದಿದ್ದಾರೆ, ಅಥವ ಹಾಗೆ ಹೊಂದಿದ್ದಾರೆ ಎಂದು ಇವರು ಭಾವಿಸಲು ಆಧಾರಗಳೇನು ಎಂದು ಇತಿಹಾಸದ ವಿಷಯಗಳ ಬಗ್ಗೆ ಬರೆಯುತ್ತಿರುವ ಪತ್ರಕರ್ತರೊಬ್ಬರು  ಕೇಳಿದ್ದಾರೆ.

ಈ ಪ್ರಶ್ನೆಯನ್ನು ಅವರಿಗೆ ಸಂದರ್ಶಕರು ಕೇಳಲಿಲ್ಲ, ಏಕೆಂದರೆ ಇದು ವಾಸ್ತವವಾಗಿ ‘ಸಂದರ್ಶನ’ವಾಗಿರಲಿಲ್ಲ, ಅದರ ಹೆಸರಲ್ಲಿ ಮಾಡಿರುವ ಒಂದು ಪ್ರಚಾರ ಭಾಷಣ, ವಿಶೇಷವಾಗಿ, ಈ ವರ್ಷ ನಡೆಯಲಿರುವ 9 ಅಥವ 10 ರಾಜ್ಯಗಳಲ್ಲಿನ ಚುನಾವಣೆಗಳನ್ನು ಮತ್ತು ಮುಂದಿನ ವರ್ಷದ ಲೋಕಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಇರಬಹುದು ಎಂದು ಆ ಪತ್ರಕರ್ತರು  ಹೇಳುತ್ತಾರೆ (ನೀಲಾಂಜನ ಮುಖ್ಯೋಪಾಧ್ಯಾಯ, ನ್ಯೂಸ್‌ಕ್ಲಿಕ್, ಜನವರಿ 13).

***

ನಮ್ಮ ಹೊಸ ಉಪರಾಷ್ಟ್ರಪತಿಗಳು ಪದಗ್ರಹಣ ಮಾಡಿದಂದಿನಿಂದಲೇ ದೇಶದ ಸರ್ವೋಚ್ಚ ನ್ಯಾಯಾಲಯದ ಮೇಲೆ ವಾಗ್ಬಾಣಗಳನ್ನು ಬಿಡುತ್ತಿದ್ದಾರೆ. ಅದು ಸಂಸತ್ತಿನ ಸಾರ್ವಭೌಮತೆಗೆ ಸವಾಲು ಹಾಕಿದೆ ಎಂದು ಜನವರಿ 11ರಂದು ಶಾಸನ ಸಭೆಗಳ ಅಧ್ಯಕ್ಷರುಗಳ ಸಮ್ಮೇಳನವನ್ನು ಉದ್ಘಾಟಿಸುತ್ತ ಅವರು ಹೇಳಿರುವುದಾಗಿ ವರದಿಯಾಗಿದೆ. ವಾಗ್ಬಾಣಗಳನ್ನು ಎಸೆಯುವ ಭರದಲ್ಲಿ ಅವರು ಸಂವಿಧಾನಕ್ಕೆ ತಿದ್ದುಪಡಿ ತರಬಹುದು, ಆದರೆ ಸಂವಿಧಾನದ ‘ಮೂಲಸಂರಚನೆ’ಯನ್ನು ಬದಲಿಸುವುದು ಸಾಧ್ಯವಿಲ್ಲ, ಅಂತಹ ಯಾವುದೇ ತಿದ್ದುಪಡಿ ಅಸಿಂಧುವಾಗುತ್ತದೆ ಎಂಬ ಸುಪ್ರಿಂ ಕೋರ್ಟಿನ 1973ರ ಕೇಶವಾನಂದ ಭಾರತಿ ಪ್ರಕರಣದ ತೀರ್ಪನ್ನೇ ತಾವು ಒಪ್ಪಿಕೊಳ್ಳುವದಿಲ್ಲ ಎಂದಿದ್ದಾರೆ ಸಂಸತ್ತಿನ ಮೇಲ್ಮನೆಯ ಈ ಅಧ್ಯಕ್ಷರು!

ಮೇಲಣ ಸದನವನ್ನು ಇನ್ನು ಮುಂದೆ
ಸರ್ವೋಚ್ಚ ಸದನ  ಎಂದು ಕರೆಯಲಾಗುವುದೇ?”

ಇ.ಪಿ.ಉನ್ನಿ, ಇಂಡಿಯನ್‍ ಎಕ್ಸ್ ಪ್ರೆಸ್

ಈ ತೀರ್ಪು ದೇಶದ ಎಲ್ಲ ರಾಜಕೀಯ ಪಕ್ಷಗಳು, ಆಳುವ ಪಕ್ಷದ  ಹಿಂದಿನ ಹಿರಿಯ ಮುಖಂಡರು ಕೂಡ ಒಪ್ಪಿಕೊಂಡಿರುವ ತೀರ್ಪು, ವಿಶೇಷವಾಗಿ 1975ರ ತುರ್ತುಪರಿಸ್ಥಿತಿಯ ಕರಾಳ ಅನುಭವಗಳ ನಂತರ. ಈಗ ಜಿ-20 ಅಧ್ಯಕ್ಷಗಿರಿಯನ್ನು ಸಂಭ್ರಮಿಸಲು ಭಾರತ ‘ಪ್ರಜಾಪ್ರಭುತ್ವಗಳ ಮಾತೆ’ ಎಂದು ಬಿಂಬಿಸಬೇಕು ಎಂದು ಪ್ರಧಾನ ಮಂತ್ರಿಗಳೇ ಹೇಳುತ್ತಿರುವಾಗಲೇ, ದೇಶದ ಉಪರಾಷ್ಟ್ರಪತಿಗಳು ನಮ್ಮ ಪ್ರಜಾಪ್ರಭುತ್ವದ ಆ ಮೂಲ ತತ್ವವನ್ನೇ ಪ್ರಶ್ನಿಸುತ್ತಿರಲು, ಈ ರೀತಿ ಕೆಂಡಕಾರುತ್ತಿರಲು ಕಾರಣವೇನಿರಬಹುದು ಎಂಬುದು ಹಲವು ರಾಜಕೀಯ ವೀಕ್ಷಕರಲ್ಲಿ ಎದ್ದಿರುವ ಪ್ರಶ್ನೆ. ಪ್ರಧಾನ ಮಂತ್ರಿಗಳು ಸೇರಿದಂತೆ ಆಳುವ ಪಕ್ಷದ ಈಗಿನ ಯಾವ ಮುಖಂಡರೂ ಈ ಬಗ್ಗೆ ಮಾತನಾಡದಿರುವುದು ನೋಡಿದರೆ, ಇದು ಸರ್ವೋಚ್ಚ ನ್ಯಾಯಾಲಯಕ್ಕೆ ಬಾಯಿ ಮುಚ್ಚಿಕೊಂಡಿರಿ ಎಂಬ ಸಂದೇಶ ರವಾನಿಸುವ ಒಟ್ಟು ಯೋಜನೆಯ ಭಾಗವಾಗಿರಬಹುದೇ ಎಂಬುದು ಒಬ್ಬ ಹಿರಿಯ ಪತ್ರಕರ್ತರ ಸಂದೇಹ.

***

ಅತ್ತ ತ್ರಿಪುರಾದಲ್ಲಿ ಗೃಹಮಂತ್ರಿಗಳು ಜನವರಿ1, 2024ರಂದು ಅಯೋಧ್ಯೆಯಲ್ಲಿ ಗಗನದೆತ್ತರದ ರಾಮ ಮಂದಿರ ಸಿದ್ಧವಾಗಿರುತ್ತದೆ, ಅದನ್ನು ನೋಡಲು ಟಿಕೆಟ್‍ಗಳನ್ನು ಬುಕ್‍ ಮಾಡಿ ಎಂದು ಹೇಳಿದ್ದಾರೆ.

ಸಿದ್ಧವಾಗುವುದು ರಾಮ್‍ ಮಂದಿರ್ ಅಥವ ಹೋಮ್‍ ಮಂದಿರ್…….?

ಹೋಮ್‍ ಮಂದಿರ್-ಜನವರಿ1 2024ರಂದು ಪ್ರಾರಂಭ
ನಲ ಪೊನ್ನಪ್ಪ, ಫೇಸ್‍ಬುಕ್

ತ್ರಿಪುರಾದಲ್ಲಿ  ಮಾರ್ಚ್ 2023ರ ಮೊದಲು ವಿಧಾನಸಭಾ ಚುನಾವಣೆ ನಡೆಯಬೇಕಾಗಿದೆ. ಗೃಹಮಂತ್ರಿಗಳು ಚುನಾವಣಾ ಪ್ರಚಾರ ಆರಂಭಿಸುವ ರ್ಯಾಲಿಯಲ್ಲಿ ಇದನ್ನು ಹೇಳಿರುವುದಾಗಿ ವರದಿಯಾಗಿದೆ.

ಈ ಮಧ್ಯೆ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಸ್ಥಳದಲ್ಲಿ….ಎಲೆಕ್ಷನ್ ಡ್ಯೂಟಿ…..

ಬೇಗ-ಬೇಗ! ನಾವು ಎಲೆಕ್ಷನ್ ಡ್ಯೂಟಿಯ ಮೇಲಿದ್ದೇವೆ!”
ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್

ಕಳೆದ ಚುನಾವಣೆಗಳ ನಂತರ ಮುಖ್ಯಮಂತ್ರಿಗಳಾದವರನ್ನು, ಮುಂದಿನ ಚುನಾವಣೆಗೆ ಕೇವಲ 10ತಿಂಗಳು ಉಳಿದಿರುವಾಗಲೇ ಬದಲಿಸಿದ್ದು, ಈಗ ಅವರೇ ತಮ್ಮ ಪಕ್ಷದ ಮುಖ್ಯಮಂತ್ರಿ  ಅಭ್ಯರ್ಥಿ ಎಂದು ಅವರು ಘೊಷಿಸಿರುವುದಾಗಿಯೂ ವರದಿಯಾಗಿದೆ.

***

ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಕರ್ನಾಟಕಕ್ಕೂ ಪ್ರಧಾನಿಗಳು ಮತ್ತು ಗೃಹಮಂತ್ರಿಗಳ ಭೇಟಿಗಳ ಸರಣಿ ಆರಂಭವಾಗಿದೆ.. ಬಿಜೆಪಿ ಅಧ್ಯಕ್ಷರು ಮುಂದಿನ ತಿಂಗಳು ‘ಮಠಯಾತ್ರೆ’ಯೊಂದಿಗೆ ಮತಯಾತ್ರೆ ಆರಂಭಿಸುತ್ತಾರಂತೆ.

ಸಹಕಾರ ಮಂತ್ರಿಗಳೂ ಆಗಿರುವ ಗೃಹಮಂತ್ರಿಗಳು ಡಿಸೆಂಬರ್‍ ಕೊನೆಯಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದರು. ಅಧಿಕೃತವಾಗಿ ಅವರು ಬಂದದ್ದು ಮಂಡ್ಯದಲ್ಲಿ ಒಂದು ಮೆಗಾ ಡೈರಿಯ ಉದ್ಘಾಟನೆಗೆ, ಬೆಂಗಳೂರಿನಲ್ಲಿ ಸಹಕಾರಿ ಸಮಾವೇಶಕ್ಕೆ  ಅಧ್ಯಕ್ಷರಾಗಿ ಮತ್ತು ಗೃಹ ಇಲಾಖೆಯ ಅಡಿಯಲ್ಲಿ ಬರುವ ಎರಡು ಸಂಸ್ಥೆಗಳಿಗೆ ಸಂಬಂಧಪಟ್ಟ ಉದ್ಘಾಟನೆಗಳಿಗೆ- ಆದರೆ ಅವರ ಭೇಟಿಯ ಮುಖ್ಯ ಕಾರ್ಯಭಾರ ಚುನಾವಣಾ ತಯಾರಿ ಎನ್ನಲಾಗಿದೆ. ಸಂಕ್ರಾಂತಿ ಕಳೆದ ಕೂಡಲೇ ಮತ್ತೆ ಬರುತ್ತಾರೆ ಎನ್ನಲಾಗಿದೆ.

ಈ ಡಿಸೆಂಬರ್‍ ಭೇಟಿಯ ಸಂದರ್ಭದಲ್ಲಿ ಕರ್ನಾಟಕದ ‘ನಂದಿನಿ’ ಮತ್ತು ಗುಜರಾತಿನ ‘ಅಮುಲ್‍’ ಜತೆಗೂಡಿ ಕೆಲಸ ಮಾಡಬಹುದು ಎಂದು ಸೂಚಿಸಿರುವುದಕ್ಕೆ ಭಾರೀ ಪ್ರತಿರೋಧ ಬಂದಿದೆ.

ವ್ಯಂಗ್ಯಚಿತ್ರ: ಪಂಜು ಗಂಗೊಳ್ಳಿ, ಕನ್ಡಡ ಒನ್‍ ನ್ಯೂಸ್

ಮೂರು ತಿಂಗಳ ಹಿಂದೆ ಗೃಹಮಂತ್ರಿಗಳು ಐದು ರಾಜ್ಯ ಹಾಲು ಸಹಕಾರಿಗಳು ಮತ್ತು ಅಮುಲ್ ನ್ನು ವಿಲೀನಗೊಳಿಸಿ ಒಂದು ಬಹುರಾಜ್ಯ ಸಹಕಾರಿಯನ್ನು ರಚಿಸಲಾಗುವುದು ಎಂದು ಹೇಳಿರುವ ಹಿನ್ನೆಲೆಯಲ್ಲಿ ಇದು ನಮ್ಮ ಕೆಎಂಎಫ್‍ನ ಅಸ್ತಿತ್ವಕ್ಕೆ ಬಂದಿರುವ ಬೆದರಿಕೆ ಎಂದು ಈ ಪ್ರತಿರೋಧ ಬಂದಿದೆ.

ಪಿ.ಮಹಮ್ಮದ್, ವಾರ್ತಾಭಾರತಿ

ಮುಖ್ಯಮಂತ್ರಿಗಳು ಮತ್ತು ಸಹಕಾರಿ ಮಂತ್ರಿಗಳು ಸೇರಿದಂತೆ ರಾಜ್ಯ ಬಿಜೆಪಿ ಮುಖಂಡರು ಹೀಗಾಗುವುದಿಲ್ಲ ಎಂದು ಹೇಳಿದರೂ ಬಹಳಷ್ಟು ಮಂದಿ ಇದನ್ನು ನಂಬಲಾರದಂತಹ  ಸನ್ನಿವೇಶ ಇದೆ.

***

ಜನವರಿ 12ರಂದು, ಏಳಿ, ಎದ್ದೇಳಿ ಎಂದು ಯುವಜನರಿಗೆ ಕರೆ ನೀಡಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಭಾಗವಾಗಿ ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ಪ್ರಧಾನಿಗಳು ಬಂದಿದ್ದರು-ದೇಶದಲ್ಲಿ,  ಅದರಲ್ಲೂ ಯುವಜನರ ನಡುವೆ, ಏರುತ್ತಿರುವ ನಿರುದ್ಯೋಗದ ಮಾಹಿತಿಯನ್ನು ಗಣನೆಗೂ ತಗೊಳ್ಳದಂತೆ ಕಾಣುವ ಸರಕಾರದ ಮುಖ್ಯಸ್ಥರಾಗಿ ……..

ಏಳಿ, ಎದ್ದೇಳಿ… ಆದರೆ ಕೇರ್ ಮಾಡುವವರು ಯಾರು!
ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್

ಎರಡು ತಿಂಗಳ ಹಿಂದೆ ನವಂಬರ್ 11 ರಂದು ಬೆಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‍ ಉದ್ಘಾಟನೆಗೆಂದು ಬಂದಿದ್ದ ಪ್ರಧಾನಿಗಳು, ಮತ್ತೆ ಜನವರಿ 19ರಂದು  ವಿಜಯಪುರ ಜಿಲ್ಲೆಯಲ್ಲಿ ನಾರಾಯಣಪುರ ಎಡದಂಡೆ ಆಧುನೀಕರಣ ಪ್ರಾಜೆಕ್ಟಿನ ಲೋಕಾರ್ಪಣೆಗೆಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರಂತೆ- ಆ ಸಂದರ್ಭದಲ್ಲಿ ಬಂಜಾರ ಸಮುದಾಯದ ಸಮಾವೇಶದಲ್ಲಿ ಪಾಲ್ಗೊಳ್ಳಬಹುದು ಎಂದು ಮುಖ್ಯಮಂತ್ರಿಗಳು ಹೇಳಿರುವುದಾಗಿ ವರದಿಯಾಗಿದೆ. ನಂತರ ಫೆಬ್ರುವರಿ 13 ರಂದು ಏರೋ ಇಂಡಿಯ ಉದ್ಘಾಟನೆಗೆ ಬರಲಿದ್ದಾರಂತೆ. 3 ತಿಂಗಳಲ್ಲಿ 4- ಎಲ್ಲವೂ  ‘ಅಧಿಕೃತ’ ಭೇಟಿಗಳು….

***

ಈ ಮಧ್ಯೆ ಮಂಗಳೂರಿನಲ್ಲಿ ಜನವರಿ 2ರಂದು  ‘ಬೂತ್ ವಿಜಯ ಅಭಿಯಾನ’ದಲ್ಲಿ  ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಆಳುವ ಪಕ್ಷದ ರಾಜ್ಯಾಧ್ಯಕ್ಷರು,  ರಸ್ತೆ, ಚರಂಡಿ, ಅಭಿವೃದ್ಧಿ ಬಗ್ಗೆ ಕೇಳುವುದನ್ನು ಬಿಟ್ಟು, ಲವ್ ಜಿಹಾದ್ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂಬುದರ ಕುರಿತು ಜನರು ಚರ್ಚೆಯಲ್ಲಿ ತೊಡಗುವಂತೆ ಮಾಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ ಎಂಬ ಸುದ್ದಿಗೆ ವ್ಯಾಪಕ ಪ್ರತಿಕ್ರಿಯೆ ಕಂಡು ಬಂದಿದೆ. ರಾಜ್ಯದಲ್ಲಿ ಮಾತ್ರವಲ್ಲ, ದೇಶಾದ್ಯಂತ ಇದು ಗಮನ ಸೆಳೆದಿದೆ.

ಪಿ.ಮಹಮ್ಮದ್, ವಾರ್ತಾಭಾರತಿ

ಈ ವಾರ ಬೆಂಗಳೂರಿನ ಮೆಟ್ರೋ ಕಾಮಗಾರಿಯಲ್ಲಿನ ಅಜಾಗರೂಕತೆಯಿಂದ ಸಂಭವಿಸಿರುವ ತಾಯಿ-ಮಗುವಿನ ಸಾವಿನ ದುರಂತಕ್ಕೆ ಕ್ಷಮೆ ಕೇಳಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ ಎರಡು ದಿನಗಳಲ್ಲೇ, ಇನ್ನೊಂದೆಡೆ ಒಂದು ಪ್ರಮುಖ ರಸ್ತೆಯಲ್ಲೇ ದೊಡ್ಡ ಗುಂಡಿ ಬಿದ್ದಿದ್ದು, ದ್ವಿಚಕ್ರ ವಾಹನ ಸವಾರರೊಬ್ಬರು ಸ್ವಲ್ಪದರಲ್ಲೇ ಪಾರಾದ ಸುದ್ದಿ ಬಂದಿದೆ. ಬಹುಶಃ ಇಲ್ಲಿ ಅಂತಹ ಯಾವುದೇ ಕ್ರಮದ ಅಗತ್ಯವಿಲ್ಲ, ಆಳುವ ಪಕ್ಷದ  ರಾಜ್ಯಾಧ್ಯಕ್ಷರ ‘ಮಾರ್ಗದರ್ಶನ’ದಂತೆ ಅಲ್ಲಿ ‘ಲವ್‍ ಜಿಹಾದ್‍’ ಎಂದು ಡಾಂಬರಿನಲ್ಲಿ ಬರೆದರೆ ಸಾಕು …….?

ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ

***

Donate Janashakthi Media

Leave a Reply

Your email address will not be published. Required fields are marked *