ಮಡಿಕೇರಿ: ಕಾರ್ಯಾಚರಣೆಯೊಂದರಲ್ಲಿ ಸೆರೆಸಿಕ್ಕ ಕಾಡಾನೆಯೊಂದು ಸುಂಟಿಕೊಪ್ಪ ಬಳಿಯ ಅತ್ತೂರು ನಲ್ಲೂರು ಗ್ರಾಮದ ಕಾಫಿತೋಟವೊಂದರಲ್ಲಿ ಸಾವಿಗೀಡಾಗಿದೆ. ಎತ್ತರದ ಜಾಗದಿಂದ ಸಿಮೆಂಟ್ ಕಾಫಿಕಣಕ್ಕೆ ಬಿದ್ದ ಪರಿಣಾಮ ಈ ಆನೆ ದಾರುಣವಾಗಿ ಮೃತಪಟ್ಟಿದೆ. ಸಾವನ್ನಪ್ಪಿದ ಆನೆ ಸುಮಾರು 20 ವರ್ಷ ಪ್ರಾಯದ್ದೆಂದು ಅಂದಾಜಿಸಲಾಗಿದೆ.
ಅತ್ತೂರು ನಲ್ಲೂರು ಗ್ರಾಮದ ಕೃಷಿ ಪ್ರದೇಶಗಳಿಗೆ ದಾಳಿ ಮಾಡಿ ಕೃಷಿಕರ ನಿದ್ದೆಗೆಡಿಸಿದ್ದ ಹಾಗೂ ಜನರನ್ನು ಕಂಡಲ್ಲಿ ದಾಳಿಗೆ ಮುಂದಾಗುತ್ತಿದ್ದ ಕಾಡಾನೆ ಕಾರ್ಯಾಚರಣೆ ವೇಳೆ ಸೆರೆಸಿಕ್ಕಿದ ನಂತರ ಸಾವನ್ನಪ್ಪಿದೆ.
ಮೋದೂರು, ಅತ್ತೂರು ನಲ್ಲೂರಿನ ಕಾಫಿತೋಟಗಳಲ್ಲಿ ಬೀಡುಬಿಟ್ಟು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಈ ಆನೆಯನ್ನು ಸೆರೆಹಿಡಿಯಲು ಕಳೆದ ಆರು ತಿಂಗಳ ಹಿಂದೆಯೇ ಸರಕಾರದಿಂದ ಅನುಮತಿಯನ್ನು ಪಡೆಯಲಾಗಿತ್ತು. ಆದರೆ ಮಳೆಯ ಕಾರಣದಿಂದಾಗಿ ಕಾಡಾನೆ ಸೆರೆ ಕಾರ್ಯಾಚರಣೆ ತಡವಾಗಿತ್ತು. ಕಳೆದ ಮೂರು ದಿನಗಳಿಂದ ಅರಣ್ಯ ಇಲಾಖೆ ಕಾಡಾನೆ ಸೆರೆ ಕಾರ್ಯಾಚರಣೆಯನ್ನು ಕೈಗೊಂಡಿತ್ತು.
ದುಬಾರೆ ಸಾಕಾನೆ ಶಿಬಿರದ ಪ್ರಶಾಂತ್, ಹರ್ಷ, ಸುಗ್ರೀವ, ಶ್ರೀರಾಮ, ಲಕ್ಷ್ಮಣ ಸಾಕಾನೆಗಳ ಸಹಕಾರದೊಂದಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ಕುಶಾಲನಗರ ವಲಯ ಅರಣ್ಯಾಧಿಕಾರಿ ರಂಜನ್, ಇಲಾಖೆಯ ವೈದ್ಯರಾದ ಡಾ.ಚಿಟ್ಟಿಯಪ್ಪ ಮತ್ತು ಡಾ. ರಮೇಶ್ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡಾನೆ ಸೆರೆ ಕಾರ್ಯಾಚರಣೆಯನ್ನು ಕೈಗೊಂಡಿದ್ದರು..
ಗುರುವಾರ ರಾತ್ರಿ ಮನೆಯೊಂದರ ಬಳಿ ತೆರಳಿದ್ದ ಪುಂಡಾನೆ ಸೊಂಡಿಲಿನಿಂದ ಮನೆಯ ಬಾಗಿಲನ್ನು ಮುರಿಯಲು ಯತ್ನಿಸಿದ್ದ ಮಾಹಿತಿ ಅರಿತ ಅರಣ್ಯ ಇಲಾಖಾಧಿಕಾರಿಗಳು ಶುಕ್ರವಾರ ಮುಂಜಾನೆ 5ಗಂಟೆ ಸಮಯದಲ್ಲಿ ಕಾಡಾನೆ ಪತ್ತೆಕಾರ್ಯವನ್ನು ಕೈಗೊಂಡಿತ್ತು. ಬೆಳಗ್ಗಿನ ಸುಮಾರು 9ಗಂಟೆಯ ವೇಳೆಗೆ ಮೋದೂರು ತೋಟವೊಂದರಲ್ಲಿ ಪುಂಡಾನೆ ಬೀಡುಬಿಟ್ಟಿದ್ದನ್ನು ಕಾರ್ಯಾಚರಣೆ ತಂಡ ಪತ್ತೆಹಚ್ಚಿದೆ. ಬಳಿಕ ಡಾ. ರಮೇಶ್ ಅವರು ಕಾಡಾನೆಯ ಮೇಲೆ ಅರಿವಳಿಕೆಯನ್ನು ಪ್ರಯೋಗಿಸಿದ್ದಾರೆ. ಈ ಸಂದರ್ಭ ಸುಮಾರು ಐನೂರು ಮೀಟರ್ ದೂರವರೆಗೆ ತೆರಳಿದ ಪುಂಡಾನೆ, ಅತ್ತೂರು ನಲ್ಲೂರು ಗ್ರಾಮದ ಮುತ್ತಣ್ಣ ಎಂಬುವರಿಗೆ ಸೇರಿದ ಇಳಿಜಾರು ಪ್ರದೇಶದಲ್ಲಿದ್ದ ತೋಟದ ಸಿಮೆಂಟ್ ಕಾಫಿಕಣಕ್ಕೆ ಬಿದ್ದಿದೆ.
ಸಾಕಾನೆಗಳ ಸಹಾಯದಿಂದ ಹಗ್ಗದ ಮೂಲಕ ಕಾಡಾನೆಯನ್ನು ಬಂಧಿಸಿದ ಕಾರ್ಯಾಚರಣೆ ತಂಡ ಕಾಫಿತೋಟ ಮಾರ್ಗವಾಗಿ ಕರೆತರುವ ಸಂದರ್ಭ ಸುಮಾರು ನೂರು ಮೀಟರ್ ದೂರವರೆಗೆ ಸಾಗಿದ ಕಾಡಾನೆ ಏಕಾಏಕಿ ಕುಸಿದುಬಿದ್ದಿದೆ. ತಕ್ಷಣವೇ ಇಲಾಖೆಯ ನುರಿತ ವೈದ್ಯರಾದ ಡಾ. ಚಿಟ್ಟಿಯಪ್ಪ ಮತ್ತು ಡಾ.ರಮೇಶ್ ಅವರು ಕಾಡಾನೆಗೆ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಂತರಿಕ ಗಾಯ ಮತ್ತು ರಕ್ತಸ್ರಾವದಿಂದಾಗಿ ಸಾವಪ್ಪಿದೆ.
ಕಾಡಾನೆ ಸಾವಿನ ಬಗ್ಗೆ ಎಸಿಎಫ್ ಗೋಪಾಲ್ ಖಚಿತಪಡಿಸಿದ್ದಾರೆ. ಕಾಡಾನೆಯ ಕಳೇಬರವನ್ನು ಕ್ರೇನ್ ಮೂಲಕ ಮೀನುಕೊಲ್ಲಿ ಅರಣ್ಯಕ್ಕೆ ಕೊಂಡೊಯ್ದು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು. ಕಳೆದ ವರ್ಷ ನಾಪೋಕ್ಲು ಬಳಿ ಇದೇ ರೀತಿಯಲ್ಲಿ ಕಾರ್ಯಾಚರಣೆ ಸಂದರ್ಭ ಕಾಡಾನೆಯೊಂದು ಮೃತಪಟ್ಟಿತ್ತು ಎಂದು ತಿಳಿಸಿದ್ದಾರೆ.