ಕೋಮು ಭಾವನೆ ಪ್ರಚೋದಿತ ಹೇಳಿಕೆ ನೀಡಿದ ತೊಗಾಡಿಯಾ-ಮುತಾಲಿಕ್‌

ನವದೆಹಲಿ/ಕಲಬುರಗಿ: ಪ್ರತ್ಯೇಕವಾದ ಬಹಿರಂಗ ಕಾರ್ಯಕ್ರಮಗಳಲ್ಲಿ ಕೋಮುಭಾವನೆಗಳನ್ನು ಪ್ರಚೋದಿಸುವ ಹೇಳಿಕೆ ನೀಡಿರುವ ಹಿಂದು ಕೋಮುವಾದಿ ಸಂಘಟನೆಯ ಮುಖಂಡರಾದ ಪ್ರವೀಣ್‌ ತೊಗಾಡಿಯಾ ಹಾಗೂ ಪ್ರಮೋದ್‌ ಮುತಾಲಿಕ್‌ ಗಲಭೆಗೆ ಪೂರಕವಾದ ಅಂಶಗಳನ್ನು ವ್ಯಕ್ತಪಡಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಂವಿಧಾನ ಬದಲಾವಣೆ ಮಾಡುವ ಕುರಿತು ಹೇಳಿಕೆ ನೀಡಿರುವ ಅಂತರರಾಷ್ಟ್ರೀಯ ಹಿಂದೂ ಪರಿಷತ್ ಅಧ್ಯಕ್ಷ ಪ್ರವೀಣ್‌ ತೊಗಾಡಿಯಾ, ಕೇವಲ ಹಿಂದೂಗಳ ಹಿತಾಸಕ್ತಿಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಭಾರತದ ಸಂವಿಧಾನವನ್ನು ಪುನರ್ ರಚಿಸುವ ಅಗತ್ಯವಿದೆ. ನಾವು ಅಧಿಕಾರಕ್ಕೆ ಬಂದರೆ ಭಾರತದ ಸಂವಿಧಾನವನ್ನು ಬದಲಾಯಿಸುತ್ತೇವೆ ಮತ್ತು ಯಾವುದೇ ಮುಸ್ಲಿಮರು ಸರ್ಕಾರಿ ಹುದ್ದೆಗೆ ಆಯ್ಕೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿರುವುದು ವರದಿಯಾಗಿದೆ.

ಇದನ್ನು ಓದಿ: ಹಿಂದುತ್ವದ ಜಿಜ್ಞಾಸೆ ಹಾಗೂ ಹಿಂದೂಪರ ಸಂಘಟನೆಗಳ ಮೀಸಲಾತಿ ವಿರೋಧಿ ಹೇಳಿಕೆಯ ಪ್ರಶ್ನೆಗಳು…..???

ಅದೇ ರೀತಿ ಆಯುಧಗಳನ್ನು ಇಟ್ಟುಕೊಳ್ಳಬೇಕೆಂದಿರುವ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌, ಎಲ್ಲ ಹಿಂದೂಗಳು ತಮ್ಮ ಮನೆಗಳಲ್ಲಿ ತಲ್ವಾರ್, ಖಡ್ಗ, ಚಾಕು, ಚೂರಿ, ಮತ್ತು ಕೊಡಲಿ ಮೊದಲಾದ ಅಯುಧಗಳನಿಟ್ಟುಕೊಳ್ಳಬೇಕು ಮತ್ತು ಅದನ್ನು ಕಣ್ಣಿಗೆ ಕಾಣುವಂಥ ಸ್ಥಳಗಳಲ್ಲಿ ಇಟ್ಟುಕೊಳ್ಳಬೇಕೆಂದು ಕರೆ ನೀಡಿದ್ದಾರೆ.

ಉತ್ತರಾಖಂಡದ ಸಾರ್ವಜನಿಕ ಸಭೆಯೊಂದರಲ್ಲಿ ಪ್ರವೀಣ್‌ ತೊಗಾಡಿಯಾ, ಮುಸ್ಲಿಂ ಸಮುದಾಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಸ್ಲಿಮರನ್ನು ‘ಹೊಸ ಸಂವಿಧಾನ’ದಲ್ಲಿ ಸೇರಿಸಬಾರದು ಎಂದು ಹೇಳಿದ್ದು, ಹೊಸ ಸಂವಿಧಾನದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸಬ್ಸಿಡಿ ಧಾನ್ಯಗಳನ್ನು ನೀಡಲಾಗುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಅಥವಾ ಶಾಲೆಗಳಲ್ಲಿ ಶಿಕ್ಷಣವಿಲ್ಲ. ಸರ್ಕಾರಿ ಬ್ಯಾಂಕ್‌ಗಳಿಂದ ಸಾಲವಿಲ್ಲ, ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಹಕ್ಕಿಲ್ಲ, ಹಾಗೆಯೇ ಮತದಾನದ ಹಕ್ಕಿಲ್ಲ ಎಂದು ಹೇಳಿದ್ದಾರೆ.

‘ವೀರ್ ಹಿಂದೂ ವಿಜೇತ ಹಿಂದೂ’ ಎಂಬ ಕಾರ್ಯಕ್ರಮ ಪ್ರಾರಂಭವಾಗಿದೆ ಎಂದು ಹೇಳಿರುವ ಪ್ರವೀಣ್‌ ತೊಗಾಡಿಯಾ, ಇದರಲ್ಲಿ ಸುಮಾರು ಎರಡು ಕೋಟಿ ಹಿಂದೂ ಯುವಕ-ಯುವತಿಯರಿಗೆ ತ್ರಿಶೂಲ ವಿತರಿಸಲಾಗುವುದು. ಅಲ್ಲದೆ, ಈ ಅಭಿಯಾನದಡಿ, ಯುವಕರು ವ್ಯಾಯಾಮಕ್ಕಾಗಿ ಖೋ-ಖೋ, ಕ್ರಿಕೆಟ್, ಕಬಡ್ಡಿ, ಬ್ಯಾಡ್ಮಿಂಟನ್ ಮುಂತಾದ ಕ್ರೀಡೆಗಳನ್ನು ಆಡುತ್ತಾರೆ, ವಿಜಯದಶಮಿ ಹಬ್ಬದ ಸಮಯದಲ್ಲಿ ಆಯುಧಗಳನ್ನು ಪೂಜಿಸುತ್ತಾರೆ ಮತ್ತು ಹಿಂದೂ ಧರ್ಮವನ್ನು ಉಳಿಸುವ ಸಲುವಾಗಿ ರಾಜ್ಯ ಪೊಲೀಸ್ ಪಡೆಯ ಭಾಗವಾಗಲಿದ್ದಾರೆ ಎಂಬ ಹೇಳಿಕೆಗಳನ್ನು ನೀಡಿದ್ದಾರೆ.

ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಮೊದಲು ನಾವೆಲ್ಲಾ ಆಯುಧಗಳಿಗೆ ಪೂಜೆ ಮಾಡುತ್ತಿದ್ದೀವಿ, ಪುಸ್ತಕ, ಪೆನ್ನು, ವಾಹನಗಳ ಪೂಜೆ ಮಾಡ್ತಿದ್ದೇವೆ. ಆದರೆ ಇನ್ಮುಂದೆ ತಲ್ವಾರ್, ಚಾಕು, ಕೊಡಲಿ ಇಟ್ಟು ಪೂಜೆ ಮಾಡಬೇಕು. ಪೊಲೀಸರು ಠಾಣೆಯಲ್ಲಿ ಬಂದೂಕಿಗೆ ಪೂಜೆ ಮಾಡುತ್ತಾರೆ ಹೊರತು ಎಫ್‌ಐಆರ್‌ಗೆ ಪೂಜೆ ಮಾಡಲ್ಲ. ಮನೆಗಳಲ್ಲಿ ತಲ್ವಾರ್ ಇಟ್ಟುಕೊಳ್ಳೋದು ಅಪರಾಧವಲ್ಲ. ಪೊಲೀಸರು ಬಂದು ಪ್ರಶ್ನಿಸಿದರೆ, ಮೊದಲು ಶಸ್ತ್ರ ಹಿಡಿದು ನಿಂತಿರೋ ಕಾಳಿ, ದುರ್ಗೆ, ಹನುಮಂತ, ರಾಮನ ಮೇಲೆ ಕೇಸ್ ಹಾಕಿ ಅಂತಾ ಹೇಳಿ ಎಂದಿದ್ದಾರೆ.

ಹಿಂದುತ್ವ ಮೂಲಭೂತವಾದಿ ಸಂಘಟನೆ ವಕ್ತಾರರು ಕೋಮು ಪ್ರಚೋದಿತ ಹೇಳಿಕೆಗಳನ್ನು ನೀಡುವ ಮೂಲಕ ದೇಶದ ಜನತೆಯಲ್ಲಿ ಆತಂಕದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಅದರಲ್ಲೂ ಬಹಿರಂಗ ವೇದಿಕೆಗಳಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *