ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಮತ್ತು 500 ಕೋಟಿಗಿಂತ ಹೆಚ್ಚು ಮೊತ್ತದ ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕರಣ್ ಗ್ರೂಪ್ ಬಿಲ್ಡರ್ಸ್ ಡೆವಲಪರ್ಸ್ ಮುಖ್ಯಸ್ಥ ಮಹೇಶ್ ಬಿ.ಓಜಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿಯನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ 10 ದಿನ ಇ.ಡಿ. ವಶಕ್ಕೆ ಪಡೆದುಕೊಂಡಿದ್ದಾರೆ. ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ಹೂಡಿಕೆ ಹೆಸರಲ್ಲಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಓಜಾ ವಿರುದ್ಧ ರಾಜ್ಯದ ಪೊಲೀಸರು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. ವಿವಿಧ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ದೂರುದಾರರು ಒಟ್ಟು .526 ಕೋಟಿ ಹೂಡಿಕೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಹಿಂದೆ ಓಜಾರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ನಾನು ಬಿಜೆಪಿ ಸಂಸದ, ಹಾಗಾಗಿ ನನ್ನ ಮೇಲೆ ಇಡಿ ದಾಳಿಯಾಗದು: ಸಂಜಯ್ ಪಾಟೀಲ್
526 ಕೋಟಿ ಹೂಡಿಕೆಯಲ್ಲಿ 121.5 ಕೋಟಿಯನ್ನು ಕರಣ್ ಗ್ರೂಪ್ ಬಿಲ್ಡರ್ಸ್ ಕೈಗೊಂಡಿದ್ದ ರಿಯಲ್ ಎಸ್ಟೇಟ್ ಯೋಜನೆಯಲ್ಲಿ ಹೂಡಿಕೆ ಮಾಡಲಾಗಿದೆ. ಜನರಿಂದ ಪಡೆಯಲಾದ ಹಣವನ್ನು ನಿಗದಿತ ಯೋಜನೆಗೆ ಬಳಕೆ ಮಾಡದೆ ಬೇರೆ ಉದ್ದೇಶಕ್ಕೆ ಬಳಕೆಯಾಗಿರುವುದು ತನಿಖೆ ವೇಳೆ ಗೊತ್ತಾಗಿದೆ. ಕೋಟ್ಯಂತರ ರು. ಅಕ್ರಮವಾಗಿ ವರ್ಗಾವಣೆ ಮಾಡಿರುವುದೂ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ನಡೆಸಲು ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಇಡಿ ಮೂಲಗಳು ಹೇಳಿವೆ.