ಚೆನ್ನೈ : ಸರ್ಕಾರ ರೂಪಿಸಿದ ಭಾಷಣವನ್ನು ಪೂರ್ಣ ಪ್ರಮಾಣದಲ್ಲಿ ಓದದೇ, ತಿದ್ದುಪಡಿ ಮಾಡಿದ್ದರ ವಿರುದ್ಧ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ನಿರ್ಣಯ ಮಂಡಿಸಿದ್ದರು. ಇದರಿಂದ ಕೋಪಗೊಂಡ ರಾಜ್ಯಪಾಲ ಆರ್ಎನ್ ರವಿ ಅವರು ವಿಧಾನಸಭೆ ಕಲಾಪದಿಂದ ಹೊರನಡೆದ ಘಟನೆ ನಡೆಯಿತು.
ವಿಧಾನಸಭೆಯ ಕಲಾಪ ನಿನ್ನೆಯಿಂದ ಆರಂಭವಾಗಿದ್ದು, ರಾಜ್ಯಪಾಲರು ಸದನವನ್ನು ಉದ್ದೇಶಿಸಿ ಮಾತನಾಡಿದರು. ಇದರಲ್ಲಿ ಅನೇಕ ವಿಷಯಗಳನ್ನು ಅವರು ಓದಿರಲಿಲ್ಲ. ಮುಖ್ಯಮಂತ್ರಿ ಸ್ಟಾಲಿನ್ ಅವರು ರಾಜ್ಯಪಾಲರ ಭಾಷಣದ ಮೇಲೆ ನಿರ್ಣಯ ಕೈಗೊಂಡರು. ಸರ್ಕಾರ ರೂಪಿಸಿದ ಭಾಷಣವನ್ನು ಮಾತ್ರ ಪೂರ್ಣವಾಗಿ ಓದಬೇಕು. ಅದನ್ನು ಮಾತ್ರ ದಾಖಲಿಸಬೇಕು ಎಂದು ನಿರ್ಣಯ ಅಂಗೀಕರಿಸಿದರು. ಇದರ ಮರುಕ್ಷಣವೇ ರಾಜ್ಯಪಾಲರು ರಾಷ್ಟ್ರಗೀತೆ ಮೊಳಗುವ ಮೊದಲೇ ಅವರ ಸ್ಥಾನದಿಂದ ಎದ್ದು ಹೊರನಡೆದರು.
ಜಾತ್ಯತೀತತೆಯ ಉಲ್ಲೇಖಗಳನ್ನು ಹೊಂದಿರುವ, ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದ ಕೆಲ ಭಾಗಗಳನ್ನು ರಾಜ್ಯಪಾಲ ರವಿ ಅವರು ಓದಲಿಲ್ಲ. ತಮಿಳುನಾಡು ಶಾಂತಿಯ ಸ್ವರ್ಗ ಎಂದು ಬಣ್ಣಿಸಿದರು. ಪೆರಿಯಾರ್, ಡಾ.ಬಿಆರ್ ಅಂಬೇಡ್ಕರ್, ಕೆ ಕಾಮರಾಜ್, ಸಿಎನ್ ಅಣ್ಣಾದೊರೈ ಮತ್ತು ಕರುಣಾನಿಧಿ ಅವರಂತಹ ನಾಯಕರ ಉಲ್ಲೇಖವನ್ನೂ ಬಿಟ್ಟಿದ್ದರು. ಇದಲ್ಲದೇ, ಮುಖ್ಯವಾಗಿ ‘ದ್ರಾವಿಡ ಮಾದರಿ’ಯನ್ನು ಹೇಳದೇ ಇರುವುದು ಸರ್ಕಾರದ ಅಸಮಾಧಾನಕ್ಕೆ ಕಾರಣವಾಗಿದೆ. ಇದರ ವಿರುದ್ಧ ಮುಖ್ಯಮಂತ್ರಿ ನಿರ್ಣಯ ಮಂಡಿಸಿದರು.
ರಾಜ್ಯಪಾಲರ ಕ್ರಮವು ವಿಧಾನಸಭೆ ಸಂಪ್ರದಾಯಗಳಿಗೆ ವಿರುದ್ಧವಾಗಿದೆ. ಸರ್ಕಾರ ರೂಪಿಸಿದ ಭಾಷಣವನ್ನು ರಾಜ್ಯಪಾಲರು ಯಥಾವತ್ತಾಗಿ ಪೂರ್ಣವಾಗಿ ಓದಬೇಕಿತ್ತು. ಅದು ಸಂಪ್ರದಾಯ. ಆದರೆ, ರಾಜ್ಯಪಾಲರು ಕೆಲ ಮಾತುಗಳನ್ನೇ ಬಿಟ್ಟಿದ್ದಾರೆ. ಇದು ಅಸಮಾಧಾನ ತಂದಿದೆ ಎಂದು ನಿರ್ಣಯದಲ್ಲಿ ಎಂಕೆ ಸ್ಟಾಲಿನ್ ಹೇಳಿದರು.
ತಮಿಳುನಾಡು ಬಿಟ್ಟು ತೊಲಗಿ: ರಾಜ್ಯಪಾಲ ರವಿ ಅವರ ವಿರುದ್ಧ ವಿಧಾನಸಭೆಯಲ್ಲಿ ಡಿಎಂಕೆ ಶಾಕಸರು ಘೋಷಣೆ ಕೂಗಿದರು. ತಮಿಳುನಾಡು ಬಿಟ್ಟು ತೊಲಗಿ ಘೋಷಣೆಗಳು ಪ್ರತಿಧ್ವನಿಸಿದವು. ಬಿಜೆಪಿ, ಆರೆಸ್ಸೆಸ್ ಸಿದ್ಧಾಂತವನ್ನು ಇಲ್ಲಿ ಹೇರಬೇಡಿ ಎಂದು ಆಡಳಿತಾರೂಢ ಡಿಎಂಕೆ ಶಾಸಕರು ಒಕ್ಕೊರಲಿನಿಂದ ಹೇಳಿದರು. ಕಾಂಗ್ರೆಸ್ ಸಂಸದ ಕಾರ್ತಿ ಪಿ ಚಿದಂಬರಂ ಅವರು ರಾಜ್ಯಪಾಲರನ್ನು ಪದಚ್ಯುತಗೊಳಿಸುವಂತೆ ಕರೆ ನೀಡಿದರು.
ಬಿಜೆಪಿಯ ಆಶಯದಂತೆ ರಾಜ್ಯಪಾಲರು ಕಾರ್ಯನಿರ್ವಹಿಸುತ್ತಿದ್ದಾರೆ ಡಿಎಂಕೆ ಆರೋಪಿಸಿದೆ. ಬಿಜೆಪಿಯ ಎರಡನೇ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬೇಕು ಎಂದು ಪಕ್ಷದ ಸಂಸದರೊಬ್ಬರು ಟೀಕಿಸಿದ್ದರು. ಆನ್ಲೈನ್ ಜೂಜಾಟ, ವಿಶ್ವವಿದ್ಯಾಲಯಗಳಿಗೆ ಉಪಕುಲಪತಿಗಳ ನೇಮಿಸಲು ರಾಜ್ಯಪಾಲರ ಅಧಿಕಾರ ಕಡಿತ ಮಾಡುವುದು ಮಾಡುವುದು ಸೇರಿದಂತೆ ವಿಧಾನಸಭೆ ಅಂಗೀಕರಿಸಿದ 21 ಮಸೂದೆಗಳು ರಾಜ್ಯಪಾಲರು ಸಹಿ ಹಾಕದೇ ಹಾಗೆಯೇ ಬಾಕಿ ಉಳಿಸಿಕೊಂಡಿದ್ದಾರೆ.
ರಾಜ್ಯಪಾಲರ ದುರುಪಯೋಗ : ಕೇಂದ್ರ ಸರಕಾರ ರಾಜ್ಯಪಾಲರನ್ನು ದುರುಪಯೋಗಪಡಿಸುತ್ತಿದೆ ಎನ್ನುವ ವ್ಯಾಪಕ ಆಕ್ರೋಶ ಕೇರಳ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ವ್ಯಕ್ತವಾಗುತ್ತಿದೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರ ಮತ್ತು ಕೇಂದ್ರ ಸರಕಾರ ನೇಮಿಸಿದ ರಾಜ್ಯಪಾಲರ ನಡುವೆ ನೇರನೇರ ಸಂಘರ್ಷ ಏರ್ಪಟ್ಟಿದೆ.
ರಾಜ್ಯಪಾಲರು ತಮ್ಮ ಲಕ್ಷ್ಮಣ ರೇಖೆಯನ್ನು ದಾಟಿ ಸರಕಾರದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಈ ರಾಜ್ಯಗಳು ಆರೋಪಿಸುತ್ತಿವೆ.
ಹಲವಾರು ವಿಷಯಗಳಲ್ಲಿ ರಾಜ್ಯ ಸರಕಾರಗಳು ಮತ್ತು ರಾಜ್ಯಪಾಲರ ನಡುವೆ ತೀಕ್ಷ್ಣ ದಾಳಿ ಮತ್ತು ಪ್ರತಿದಾಳಿಗಳನ್ನು ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳು ನೋಡುತ್ತಿವೆ. ರಾಜ್ಯಪಾಲರ ವಿರುದ್ಧ ಹಲವಾರು ಪ್ರತಿಭಟನೆಗಳು ನಡೆಯುತ್ತಿವೆ. ಪರಿಸ್ಥಿತಿ ಕೈ ಮೀರುವ ಮೊದಲೇ ರಾಷ್ಟ್ರಪತಿ ಮಧ್ಯ ಪ್ರವೇಶಿಸಬೇಕು. ರಾಜ್ಯಗಳ ಅಪೇಕ್ಷೆಯಂತೆ ರಾಜ್ಯಪಾಲರನ್ನು ವಜಾಗೊಳಿಸಿ, ಆ ಸ್ಥಾನದ ಘನತೆಯನ್ನು ಕಾಪಾಡಬಲ್ಲ ಮುತ್ಸದ್ದಿಗಳನ್ನು ನೇಮಿಸಬೇಕಿದೆ.