ಟಿಪ್ಪು ಸುಲ್ತಾನ್ ಕರ್ನಾಟಕದ ಇತಿಹಾಸದಲ್ಲಿ ಒಂದು ವಿಶಿಷ್ಟ ವ್ಯಕ್ತಿ. ಆದರೆ ಅವನ ವಿಶಿಷ್ಟ ವ್ಯಕ್ತಿತ್ವ, ವಿಶಿಷ್ಟ ಚಾರಿತ್ರಿಕ ಪಾತ್ರದ ಬದಲಾಗಿ, ವಿವಾದಾಸ್ಪದ ವ್ಯಕ್ತಿಯಾಗಿ ಟಿಪ್ಪು ಚರ್ಚಿಸಲ್ಪಡುತ್ತಾನೆ. ಆತನ ಬಗ್ಗೆ ವಿವಾದಗಳನ್ನು ಬದಿಗಿಟ್ಟು, ಆಗಿನ ಮೈಸೂರಿನ ಜನ, ಅವನ ಪ್ರಜೆಗಳು ಟಿಪ್ಪುವನ್ನು ಯಾವ ರೀತಿ ನೋಡುತ್ತಿದ್ದರು. ಆತನನ್ನು, ಆತನ ಆಡಳಿತವನ್ನು, ಆತನ ಬದುಕನ್ನು ನೇರವಾಗಿ ನೋಡಿದ ಅವರ ಅನಿಸಿಕೆ ಏನಿತ್ತು ಎಂಬುದು ಕುತೂಹಲಕಾರವಾಗಬಲ್ಲದು.
ಅದೇ “ಧೀರ ಟಿಪ್ಪುವಿನ ಲಾವಣಿಗಳು” ಪುಸ್ತಕದ ಮುಖ್ಯ ವಸ್ತು. ಟಿಪ್ಪು ಸುಲ್ತಾನನ ಕುರಿತು ವ್ಯಾಪಕವಾಗಿ ಜನಜನಿತವಾಗಿದ್ದ ಜಾನಪದ ಹಾಡುಗಳ ಪ್ರಕಾರವಾದ ‘ಲಾವಣಿ’ಗಳ ಸಂಗ್ರಹವಿದು. ಖ್ಯಾತ ಸಾಹಿತಿ, ವಿದ್ವಾಂಸ ಲಿಂಗದೇವರು ಹಳೆಮನೆ ಅವರು ಸಂಪಾದಿಸಿ 2003ರಲ್ಲಿ ಪ್ರಕಟಿಸಿದ ಕೃತಿಯಿದು. ಈಗ ಕ್ರಿಯಾ ಮಾಧ್ಯಮ ಎರಡನೆಯ ಆವೃತ್ತಿಯನ್ನು ಪ್ರಕಟಿಸುತ್ತಿದೆ. ಈ ಪುಸ್ತಕ ಜನವರಿ 8 ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಜನಸಾಹಿತ್ಯ ಸಮ್ಮೇಳನ’ದ “ಕನ್ನಡ ನಾಡು ನುಡಿ : ಟಿಪ್ಪು ಕೊಡುಗೆಗಳು” ಗೋಷ್ಠಿಯಲ್ಲಿ ಬಿಡುಗಡೆಯಾಗಲಿದೆ.
ಟಿಪ್ಪು ಸುಲ್ತಾನನ ಕುರಿತ ಆರು ಲಾವಣಿಗಳನ್ನು ಸಂಗ್ರಹಿಸಿದ್ದಲ್ಲದೆ ಲಿಂಗದೇವರು ಈ ಲಾವಣಿಗಳ ಚರಿತ್ರೆ, ಮಹತ್ವ ಮತ್ತು ಟಿಪ್ಪು ಸುಲ್ತಾನನ ಸುತ್ತ ವಿವಾದಗಳ ಕುರಿತು ದೀರ್ಘವಾದ ಉಪಯುಕ್ತವಾದ ಪ್ರಸ್ತಾವನೆ ಬರೆದಿದ್ದಾರೆ. ಅದನ್ನು ಹಾಗೆ ಉಳಿಸಿಕೊಳ್ಳಲಾಗಿದೆ. “ಜನಪದ ನಿರೂಪಣೆ ಟಿಪ್ಪುವನ್ನು ಕಂಡ ರೀತಿ ಹೇಗಿದೆ ಎಂಬುದು ಸಹಜವಾಗಿಯೇ ಕುತೂಹಲಕಾರಿಯಾದುದು.. .. ಟಿಪ್ಪುವಿನ ಇತಿಹಾಸವನ್ನು ಗಮನಿಸುವಾಗ ಈ ಲಾವಣಿಗಳನ್ನು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಆಶ್ಚರ್ಯವೆಂದರೆ, ಲಿಖಿತ ಇತಿಹಾಸದಲ್ಲಿ ಖಳನಾಯಕನೆಂದು ಚಿತ್ರಿತವಾಗಿರುವ ಟಿಪ್ಪು ಇಲ್ಲಿಯವರೆಗೆ ಲಭ್ಯವಿರುವ ಜನಪದ ಸಾಹಿತ್ಯದಲ್ಲಿ ಹಾಗೂ ಕಂಪನಿ ನಾಟಕಗಳಲ್ಲಿ ಜನಾನುರಾಗಿಯೆಂದೂ ರಾಷ್ಟ್ರವೀರನೆಂದೂ ವಿಜೃಂಭಿಸಿರುವುದು.” ಎನ್ನುವ ಅವರ ಮಾತು ಮನನಯೋಗ್ಯ.
ಇದಲ್ಲದೆ ಖ್ಯಾತ ಸಾಂಸ್ಕೃತಿಕ ಚಿಂತಕ, ಜಾನಪದ ವಿದ್ವಾಂಸ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಈ ಆವೃತ್ತಿಗಾಗಿಯೇ ಮುನ್ನುಡಿಯೊಂದನ್ನು ಬರೆದಿದ್ದಾರೆ. “ಮೌಖಿಕ ಇತಿಹಾಸ, ಲಾವಣಿಗಳು ಮತ್ತು ಟಿಪ್ಪ್ಪು ಸುಲ್ತಾನ್” ಎಂಬ ಶೀರ್ಷಿಕೆಯಲ್ಲಿ ಅವರು ಬರೆದ ಮುನ್ನುಡಿ ಈ ಎರಡನೆಯ ಆವೃತ್ತಿಯ ಮೆರುಗನ್ನು ಹೆಚ್ಚಿಸಿದೆ. ಅವರ ಮುನ್ನುಡಿ ಈ ಲಾವಣಿಗಳನ್ನು ಅರಿಯಲು ಸಹಾಯಕವಾಗುವುದಲ್ಲದೆ ಟಿಪ್ಪು ಸುಲ್ತಾನನ ಕುರಿತ ಚರ್ಚೆಯನ್ನು ನಡೆಸಬೇಕಾದ ಸರಿಯಾದ ಕಣ್ಣೋಟವನ್ನು ಮುಂದಿಡುತ್ತದೆ. “ಸಾಮಾನ್ಯವಾಗಿ ಜನರಿಗೆ ಹತ್ತಿರವಾಗಿ ಬದುಕಿದ್ದವರ ಕುರಿತು ಮಾತ್ರ ಜನಪದ ಸಾಹಿತ್ಯ ಹುಟ್ಟಿಕೊಳ್ಳುತ್ತದೆ. ಲಾವಣಿಗಳು ಆ ಕಾಲಘಟ್ಟದಲ್ಲಿ ಬದುಕಿದ್ದ ಜನರ ಮನದಾಳದಲ್ಲಿ ಹುದುಗಿದ್ದ ವೈಯಕ್ತಿಕ ಅನುಭವಗಳನ್ನು ಹಾಡಿನ ಮೂಲಕ ಜನರಿಗೆ ತಿಳಿಸಿಹೇಳುತ್ತವೆ… ಇತಿಹಾಸದ ವ್ಯಕ್ತಿಯೊಬ್ಬ ಜನಸಾಮಾನ್ಯರೊಡನೆ ಸಂಪರ್ಕ ಸಾಧಿಸದೇ ಇದ್ದರೆ ಅವನ ಬಗ್ಗೆ ಲಾವಣಿಗಳು ಹುಟ್ಟುವುದಿಲ್ಲ.. ..” ಎಂಬ ಅವರ ಮಾತುಗಳು ಮಾರ್ಮಿಕವಾಗಿವೆ.
ಲಿಂಗದೇವರು ಪ್ರಸ್ತಾವನೆಯಲ್ಲಿ ಬರೆದಂತೆ ಪ್ರೊ.ರಹಮತ್ ತರೀಕೆರೆ ಅವರು ಈ ಕೃತಿಯ ಮೊದಲ ಆವೃತ್ತಿಯ ಪ್ರಕಟಣೆಗೆನೇ ಒತ್ತಡ ಹಾಕಿದವರು. “ಇಲ್ಲಿ ಟಿಪ್ಪುವನ್ನು ತಮ್ಮ ಊರುಮನೆಯ ವ್ಯಕ್ತಿ, ಕುಟುಂಬದ ಸದಸ್ಯ ಎಂಬ ಬಾವಣಿಕೆಯಿಂದ ಚರಿತ್ರೆಯನ್ನು ನೋಡುವ ಜನಪದ ಕಥನವಿದೆ. ಜನಪದರು ಯಾವಾಗಲೂ ಯುದ್ಧವನ್ನು ಗೆದ್ದ ಸಾಮ್ರಾಟರ ಬಗ್ಗೆ ಕಥಿಸುವುದಿಲ್ಲ. ದೊಡ್ಡ ಶಕ್ತಿಯೊಂದಕ್ಕೆ ಅಂಜದೆ ಮುಖಾಮುಖಿಯಾಗಿ ದುರಂತ ಸಾವನ್ನು ಕಂಡ ಕೆಚ್ಚೆದೆಯವರನ್ನು ಕುರಿತು ಹಾಡುವರು.” ಎಂಬಿತ್ಯಾದಿ ವಿಶಿಷ್ಟ ಒಳನೋಟಗಳಿರುವ ಬೆನ್ನುಡಿಯನ್ನು ರಹಮತ್ ತರೀಕೆರೆ ಬರೆದಿದ್ದಾರೆ.