ಅಮಿತ್ ಷಾ ಕಾರ್ಯಕ್ರಮಕ್ಕೆ ಜನರನ್ನು ತರಲು ಸಹಕಾರ ಸಂಘಗಳ ಹಣ ಬಳಕೆ – ಸಿಪಿಐಎಂ ಆರೋಪ

ಮಂಡ್ಯ : ನಾಳೆ ಮಂಡ್ಯದಲ್ಲಿ ನಡೆಯಲಿರುವ ಬಿಜೆಪಿ ಸಮಾವೇಶಕ್ಕೆ ಜನರನ್ನು ಕರೆತರಲು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಹಣ ಬಳಸಲಾಗುತ್ತಿದೆ ಎಂದು ಸಿಪಿಐಎಂ ಆರೋಪಿಸಿದೆ.

ಸಿಪಿಐಎಂ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಟಿ ಎಲ್ ಕೃಷ್ಣೇಗೌಡ ಪತ್ರಿಕಾ ಹೇಳಿಕೆ ನೀಡಿದ್ದು, ಈ ಕ್ರಮವನ್ನು ಬಲವಾಗಿ ಖಂಡಿಸಿದ್ದಾರೆ. ಅಮಿತ್ ಷಾ ಕಾರ್ಯಕ್ರಮಕ್ಕೆ ಜನ ಕರೆ ತರಲು, ಹಣ ವೆಚ್ಚ ಮಾಡುವಂತೆ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಒತ್ತಡ ಹಾಕಲಾಗುತ್ತಿದೆ. ಮನ್ಮುಲ್ ಆಡಳಿತ ಮಂಡಳಿಯು ಸಹಕಾರಿ ವಿರೋಧಿ ನಿಯಮಗಳನ್ನು ಅನುಸರಿಸುತ್ತಿದೆ. ಯಾವುದೇ ಕಾರಣಕ್ಕೂ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘದ ಹಣ ಬಳಸದಂತೆ ಪ್ರತಿ ಷೇರುದಾರರು ವಿರೋಧಿಸಬೇಕೆಂದು ಅವರು ಕರೆ ನೀಡಿದ್ದಾರೆ.

ಬಿಜೆಪಿ ರಾಜಕೀಯ ಬೆಳೆಸಲು ಸಹಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಈ ಕೂಡಲೇ ನಿಲ್ಲಬೇಕು, ರೈತರಿಗೆ ಉತ್ಪಾದನಾ ವೆಚ್ಚ ಭರಿಸುವ, ಹಾಲು ಖರೀದಿ ದರ ನೀಡಲು ಕೂಡ ಸಾಧ್ಯವಾಗದೇ ಇರುವ ಮನ್ಮುಲ್ ಸಂಸ್ಥೆಯ ಹಣವನ್ನು ಈ ರೀತಿ ದುರುಪಯೋಗ ಮಾಡುವುದು ರೈತ ವಿರೋಧಿ ಹಾಗೂ ಸಹಕಾರಿ ಸಂಘಗಳನ್ನು ನಾಶ ಮಾಡುವ ಹುನ್ನಾರದ ಭಾಗವಾಗಿದೆ ಎಂದು ಆರೋಪಿಸಿದ್ದಾರೆ.

ಜನರನ್ನು ಕರೆತರಲು, ಬೇಕಾದರೆ ರಾಜಕೀಯ ಪಕ್ಷಗಳಲ್ಲೇ ಅತ್ಯಂತ ಶ್ರಿಮಂತವಾಗಿರುವ ಬಿಜೆಪಿ , ಚುನಾವಣಾ ಬಾಂಡ್ ಗಳ ಮೂಲಕ ಅಕ್ರಮವಾಗಿ ಸಂಗ್ರಹಿಸಿರುವ ಸಹಸ್ರಾರು ಕೋಟಿ ಹಣದಲ್ಲಿ ಖರ್ಚು ಮಾಡಲಿ, ಬಿಜೆಪಿಯ ಖಯಾಲಿಗೆ ಬಡ ಹಾಲು ಉತ್ಪಾದಕರ ಹಣವನ್ನು ವ್ಯಯ ಮಾಡುವುದು ಬೇಡವೇ ಬೇಡ ಎಂದು ಅವರು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *