ಗುರುರಾಜ ದೇಸಾಯಿ
ಇತ್ತೀಚೆಗೆ ಟಿಪ್ಪು ಸುಲ್ತಾನ್ ಬಗ್ಗೆ ಅನಗತ್ಯ ವಿವಾದವನ್ನು ಸೃಷ್ಟಿಸುವ ಕೆಲಸ ಹೆಚ್ಚಾಗುತ್ತಲೇ ಇದೆ. ಟಿಪ್ಪು ಹೋರಾಟಗಾರನೇ ಅಲ್ಲ, ಧರ್ಮಾಂಧನಾಗಿದ್ದ ಎಂದು ಬಿಂಬಿಸಲಾಗುತ್ತಿದೆ. ಇದೇ ಕಾರಣಕ್ಕೆ ಮೈಸೂರು ರಂಗಾಯಣ, ಟಿಪ್ಪು ನಿಜ ಕನಸುಗಳು ಅನ್ನೋ ನಾಟಕವನ್ನೇ ಮಾಡಿ ಹೊಸ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲಿಯೇ ಈಗ ಧಾರವಾಡ ರಂಗಾಯಣವು ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ನಾಟಕದಲ್ಲೂ ಟಿಪ್ಪುವನ್ನು ಕ್ರೂರಿ ಎಂಬಂತೆ ಬಿಂಬಿಸಲಾಗಿದೆ.
ಪೇಶ್ವೆಗಳು ಮಲ್ಲಸರ್ಜನನ್ನು ಮೋಸದಿಂದ ಜೈಲಗಟ್ಟುತ್ತಾರೆ. ಆಗ ಚೆನ್ನಮ್ಮ ಚಿಂತಾಕ್ರಾಂತಳಾಗಿ ಇರುವಾಗ ಮಲ್ಲಸರ್ಜನ ಹಿರಿಯ ಹೆಂಡತಿ ಗಾಬರಿಯಾಗಬೇಡ ಚೆನ್ನಮ್ಮ, ನಮ್ಮ ಸಂಸ್ಥಾನದ ಮೇಲೆ ಅನೇಕರು ಕಣ್ಣಿಟ್ಟಾದ್ದಾರೆ, ಅವರನ್ನೆಲ್ಲ ಸೋಲಿಸಿ ಸಂಸ್ಥಾನವನ್ನು ಉಳಿಸಿಕೊಂಡು ಬಂದಿದ್ದೇವೆ ಎಂದು ಹೇಳುತ್ತಾಳೆ. ಆಗ ಚೆನ್ನಮ್ಮ ಅಂತಹದ್ದೊಂದು ಘಟನೆ ನೆನಪಿಸುವಂತೆ ಕೇಳುತ್ತಾಳೆ. ಆಗ ರುದ್ರಾಂಬಿಕೆ ಟಿಪ್ಪುವನ್ನು ಭೇಟಿಯಾಗಲು ಹೋದಾಗ ಮೋಸದಿಂದ ಟಿಪ್ಪು ಮಲ್ಲಸರ್ಜನನ್ನು ಬಂಧಿಸುತ್ತಾಳೆ ಎಂದು ಕಥೆ ಹೇಳುತ್ತಾಳೆ. ಆಗ ಕಥೆ ಹಿಂದಕ್ಕೆ ಹೋಗಿ ಆ ಸನ್ನಿವೇಶ ಪ್ರದರ್ಶನಗೊಳ್ಳುತ್ತದೆ. ಅಲ್ಲಿ ಟಿಪ್ಪುವನ್ನು ಹಿಂದೂಗಳ ವಿರೋಧಿಯಾಗಿ, ಕನ್ನಡ ವಿರೋಧಿಯಾಗಿ ಬೆಂಬಿಸುವ ಮಾತುಗಳನ್ನು ಮಲ್ಲಸರ್ಜನ ಪಾತ್ರಗಳ ಮೂಲಕ ಹೇಳಿಸಲಾಗಿದೆ.
ಈ ಸನ್ನಿವೇಶ ಬೇಕಿರಲಿಲ್ಲ, ವಿವಾದ ಸೃಷ್ಟಿಸಲೆಂದೆ ಹಾಕಲಾಗಿದೆ ಎಂಬ ಮಾತುಗಳು ರಂಗಾಸಕ್ತರಲ್ಲಿ ಕೇಳಿ ಬರುತ್ತಿವೆ. ರಂಗಾಯಣ ರಂಗಭೂಮಿ ಕಲೆಯನ್ನು ಬೆಳಸುವ ಬದಲಾಗಿ ನಾಟಕಗಳ ಮೂಲಕ ಇತಿಹಾಸವನ್ನು ತಿರುಚಿ ಆಡಳಿತ ಪಕ್ಷಕ್ಕೆ ಸಹಾಯ ಮಾಡುತ್ತಿದೆ. ಟಿಪ್ಪು ಸುಲ್ತಾನ ಪ್ರಸ್ತಾಪ ಯಾರ ಓಲೈಕೆಗಾಗಿ? ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.
ಈ ಕುರಿತು, ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ಪ್ರೊ.ಮಾಲತಿ ಪಟ್ಟಣಶೆಟ್ಟಿ ಜನಶಕ್ತಿ ಮೀಡಿಯಾ ಜೊತೆ ಮಾತನಾಡುತ್ತಾ, ಮೆಗಾ ನಾಟಕದ ಕಾರ್ಯವನ್ನು ಶ್ಲಾಘಿಸಿರುವ ಅವರು, ನಾಟಕದ ಪ್ರದರ್ಶನಕ್ಕೆ ಇಷ್ಟೊಂದು ಅವಸರ ಇರಲಿಲ್ಲ ಎಂದಿದ್ದಾರೆ. ಸಾಧನೆಗಳನ್ನು ಹೇಳುವಾಗ ವರ್ಣಿಸುವುದು ಸಹಜ, ಆದರೆ ಇತಿಹಾಸದ ಘಟನೆಗಳನ್ನು ತಿರುಚಿ ತಪ್ಪಾಗಿ ಬಿಂಬಿಸುವುದು ಸರಿಯಲ್ಲ. ಯಾರೋ ಹೇಳಿದ ಸಣ್ಣ ಸಣ್ಣ ಮಾಹಿತಿಯನ್ನು ಸೇರಿಸುತ್ತಾ ಹೋದರೆ ಹೇಗೆ? ಆ ಘಟನೆಗಳ ಕುರಿತು ಅಧ್ಯಯನ ಅಗತ್ಯ ಹಸಿ ಹಸಿ ಸುಳ್ಳುಗಳ ಮೂಲಕ ಇತಿಹಾಸದ ಸಾಧಕರನ್ನು ಅವಮಾನಿಸುವುದು ಸರಿಯಲ್ಲ. ಬಹಳಷ್ಟು ಜನ ವಿರೋಧಿಸುತ್ತಿದ್ದಾರೆ. ಹಾಗಾಗಿ ಈ ಸನ್ನಿವೇಶ ಕೈ ಬಿಡುವುದು ಸೂಕ್ತ ಎಂದು ಹೇಳಿದರು.
ಚಿಂತಕ ಡಾ. ಜೆ ಎಸ್ ಪಾಟೀಲ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು, ಕಿತ್ತೂರು ರಾಜ ಸಂಸ್ಥಾನ ನಾಶ ಮಾಡಿದವರು ಪುಣೆಯ ಚಿತ್ಪಾವನ ಪೆಶ್ವೆಗಳೆ ಹೊರತು ಟಿಪ್ಪು ಅಲ್ಲ ಎಂದಿದ್ದಾರೆ. ಇಲ್ಲಿ ರಾಣಿ ಚೆನ್ನಮ್ಮನವರ ಶೌರ್ಯದ ಕುರಿತು ಸಂದೇಶ ಸಾರುವುದಕ್ಕಿಂತ ಕಿತ್ತೂರಿನ ವೈರಿ ಟಿಪ್ಪು ಎನ್ನುವ ಸುಳ್ಳನ್ನು ಹರಡುವುದೇ ರಂಗಾಯಣದ ಉದ್ದೇಶವಾಗಿದೆಯೆ ಎನ್ನುವ ಸಂಶಯ ಬಲವಾಗುತ್ತಿದೆ. ಚುನಾವಣೆಯ ದಿನಗಳಲ್ಲಿ ಇದನ್ನು ಉದ್ದೇಶಪೂರ್ವಕವಾಗಿಯೇ ವಿವಾದ ಮಾಡಲು ರಂಗಾಯಣ ಹೊಂಚು ಹಾಕಿದೆಯೆ ಎನ್ನುವ ಪ್ರಶ್ನೆ ಕಾಡೂತ್ತಿದೆ. ಪ್ರತಿ ವಿಷಯವನ್ನು ವಿವಾದಗೊಳಿಸಿ ರಾಜಕೀಯ ಲಾಭ ಪಡೆಯುವುದು ಬಿಜೆಪಿ ಮತ್ತು ಅದನ್ನು ನಿಯಂತ್ರಿಸುವ ಧರ್ಮಾಂಧ ಸಂಘಟನೆಗಳ ನಡೆ ಹೊಸದೇನಲ್ಲ. ಕಿತ್ತೂರು ಸಂಸ್ಥಾನವನ್ನು ಟಿಪ್ಪು ನಾಶ ಮಾಡಿದ ಎನ್ನುವ ಟೇಲರ್ ಮೇಡ್ ವಿವಾದಕ್ಕೆ ರಂಗಾಯಣ ಬಳಕೆಯಾಗುತ್ತಿರುವ ಸಂಶಯವಂತೂ ಖಂಡಿತ ಇದೆ. ಹಾಗಾದರೆˌ ನಿಜವಾಗಿಯೂ ಕಿತ್ತೂರು ಸಂಸ್ಥಾನ ನಾಶಮಾಡಿದವರು ಯಾರುˌ ಈ ಸಂಸ್ಥಾನದ ಪ್ರಮುಖ ಘಟ್ಟಗಳು ಯಾವುವು ಎನ್ನುವ ಸತ್ಯಾಂಶಗಳನ್ನು ಸಾರ್ವಜನಿಕರು ಮನದಟ್ಚು ಮಾಡಿಕೊಳ್ಳಬೇಕು ಎಂದಿದ್ದಾರೆ.
1785 ರಿಂದ 1788 ರ ಕಾಲಾವಧಿಯಲ್ಲಿ ಮಲ್ಲಸರ್ಜ ದೇಸಾಯಿಯನ್ನು ಟಿಪ್ಪು ಶ್ರೀರಂಗಪಟ್ಟಣದ ಕಬ್ಬಾಳದುರ್ಗದಲ್ಲಿ ಬಂಧಿಸಿಟ್ಟಿದ್ದು ನಿಜ. ಈ ಬಂಧನಕ್ಕೆ ಟಿಪ್ಪುವಿಗೆ ಕುಮ್ಮಕ್ಕು ಕೊಟ್ಟಿದ್ದು ಮತ್ತು ಸಹಾಯ ಮಾಡಿದ್ದು ಟಿಪ್ಪುನ ಸೇನಾಧಿಪತಿಯಾಗಿದ್ದ ವೆಂಕಟರಂಗಯ್ಯ. ಇದೇ ವಿಷಯವನ್ನಿಟ್ಟುಕೊಂಡು ಇಡೀ ನಾಟಕದಲ್ಲಿ ಟಿಪ್ಪುವನ್ನು ಖಳನಾಯಕನನ್ನಾಗಿಸುವ ಪ್ರಯತ್ನ ಮಾಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.
ರಂಗಾಯಣಕ್ಕೆ ಧರ್ಮಾಂಧನೊಬ್ಬ ಒಕ್ಕರಿಸಿದ ಮೇಲೆ ಸಾಂಸ್ಕೃತಿಕ ಸಂಸ್ಥೆಯೊಂದು ಧಾರ್ಮಿಕ ಮೂಲಭೂತವಾದಿಗಳ ಗಾಳಕ್ಕೆ ಬಲಿಯಾಗುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಹಾಗಾದರೆ ಕಿತ್ತೂರು ನಾಶ ಮಾಡಿದವರು ಯಾರು? ಕಿತ್ತೂರು ಸಂಸ್ಥಾನವು 1585 ರಲ್ಲಿ ಹಿರೇಮಲ್ಲಶೆಟ್ಟಿ ಮತ್ತು ಚಿಕ್ಕಮಲ್ಲಶೆಟ್ಟಿ ಸಹೋದರರಿಂದ ಸ್ಥಾಪಿತವಾಗಿದ್ದುˌ ಆನಂತರ ಸಂಸ್ಥಾನದ ಐದನೇ ದೊರೆಯಾಗಿ ಅಲ್ಲಪ್ಪಗೌಡ ದೇಸಾಯಿ ತನ್ನ ರಾಜಧಾನಿಯನ್ನು ಬೆಳಗಾವಿ ಜಿಲ್ಲೆಯ ಸಂಪಗಾವಿಯಿಂದ ಕಿತ್ತೂರಿಗೆ ಬದಲಾಯಿಸುತ್ತಾನೆ. ಕಿತ್ತೂರು ಸಂಸ್ಥಾನದ ಇತಿಹಾಸದಲ್ಲಿ ಮಾಳ್ವ ರುದ್ರಸರ್ಜ ಮತ್ತು ನಿರಂಜನೆಯ ಪ್ರೇಮ ವಿವಾಹ ಅತ್ಯಂತ ಕುತೂಹಕಾರಿ ಹಾಗು ಅಷ್ಟೇ ವಿವಾದಾತ್ಮಕವೂ ಆಗಿದೆ. ಕಿತ್ತೂರಿನ ದೊರೆಯಾದ ಮಲ್ಲಸರ್ಜ ದೇಸಾಯಿಯವರ ತಂದೆ ವೀರಪ್ಪ ದೇಸಾಯಿ ಪುಣೆಯ ಪೇಶ್ವೆಗಳನ್ನು ಸೋಲಿಸಿದ ಧೀರ ರಾಜ. ಆದರೆ ಆನಂತರ ನಡೆದ ಗೋಕಾಕ ಕಾಳಗದಲ್ಲಿ ಪೇಶ್ವೆಗಳು ವೀರಪ್ಪ ದೇಸಾಯಿಯನ್ನು ಸೋಲಿಸಿ ಆತನನ್ನು ಮೂರು ವರ್ಷಗಳ ಕಾಲ ಮಿರಜ್ ನಲ್ಲಿ ಅಕ್ರಮ ಬಂಧನದಲ್ಲಿರಿಸಿ (1779-1782) ವಿಷಪ್ರಾಶನ ಮಾಡಿ ಹತ್ಯೆ ಮಾಡುತ್ತಾರೆ. ಈತ ಕಿತ್ತೂರು ಸಂಸ್ಥಾನದ ಹೊರಗಡೆ ನಿಧನವಾದ ಕಿತ್ತೂರಿನ ಪ್ರಥಮ ದೊರೆ. ಹಾಗಾಗಿ ಕಿತ್ತೂರು ಸಂಸ್ಥಾನಕ್ಕೆ ಆರಂಭದಿಂದ ಕಂಟಕರಾದವರು ಪುಣೆಯ ಚಿತ್ಪಾವನ ಬ್ರಾಹ್ಮಣ ಪೇಶ್ವೆಗಳು ಎನ್ನುವುದರಲ್ಲಿ ಯಾವುದೆ ಅನುಮಾನಗಳಿಲ್ಲ.
ಪುಣೆಯ ಚಿತ್ಪಾವನ ಪೇಶ್ವೆಗಳು ದೊರೆ ಮಲ್ಲಸರ್ಜ ದೇಸಾಯಿಯ ತಂದೆಯನ್ನು ಕೊಂದವರು. ಆನಂತರ ಪಟ್ಟಕ್ಕೇರಿದ ಮಲ್ಲಸರ್ಜ ದೇಸಾಯಿ 1782 ರಿಂದ 1816 ರವರೆಗೆ ಆಳ್ವಿಕೆ ನಡೆಸುತ್ತಾನೆ. 1812 ರಲ್ಲಿ ಪುಣೆಯ ಪೇಶ್ವೆ ಬಾಜಿರಾಯನು ತನ್ನನ್ನು ಭೇಟಿಯಾಗಲು ಬಂದ ಮಲ್ಲಸರ್ಜ ದೇಸಾಯಿಯನ್ನು ಬಂಧಿಸಿ ಅಕ್ರಮವಾಗಿ ಇರಿಸುತ್ತಾನಲ್ಲದೆ ರಾಜನಿಗೆ ಸರಿಯಾಗಿ ಅನ್ನ-ನೀರು ಕೊಡದೆ ಕಾಡಿಸುತ್ತಾನೆ. ಸತತ ಮೂರು ವರ್ಷಗಳ ಅವಧಿ ಕಿತ್ತೂರು ದೊರೆಯನ್ನು ಸೂರ್ಯನ ಬೆಳಕು ಕಾಣದಂತೆ ಅಕ್ರಮ ಬಂಧನದಲ್ಲಿರಿಸಿ ಅನಾರೋಗ್ಯಕ್ಕೀಡಾಗುವಂತೆ ಮಾಡಿ ಮಲ್ಲಸರ್ಜ ಮರಣಹೊಂದುವುದಕ್ಕೆ ಕಾರಣನಾಗುತ್ತಾನೆ.
ಕಿತ್ತೂರು ಸಂಸ್ಥಾನಕ್ಕೆ ಮೊದಲಿನಿಂದ ಕಂಟಕವಾಗಿದ್ದು ಪುಣೆಯ ಪೇಶ್ವೆ ಏರಡನೆಯ ಬಾಜಿರಾಯ ಮತ್ತು ಮಿರಜ್ ಹಾಗು ಜಮಖಂಡಿಯ ಪಟವರ್ಧನ ಬ್ರಾಹ್ಮಣ ಸಂಸ್ಥಾನಗಳು. ಬ್ರಿಟೀಷರ ಜೊತೆಗೂಡಿ ಕಿತ್ತೂರು ಸಂಸ್ಥಾನ ನಾಶ ಮಾಡುವುದರಲ್ಲಿ ಈ ಹಾವೇರಿ ವೆಂಕಟರಾಯನ ಪಾತ್ರ ಬಹಳ ದೊಡ್ಡದಿದೆ ಎನ್ನುತ್ತವೆ ಐತಿಹಾಸಿಕ ದಾಖಲೆಗಳು.
ಕಿತ್ತೂರಿನ ದತ್ತು ಪಡೆಯುವಿಕೆಯ ಸಂಗತಿ ಕುರಿತು ಥ್ಯಾಕರೆ ವೆಂಕಟರಾಯನಿಗೆ ಮಾಹಿತಿ ಕೇಳಿದಾಗ ದತ್ತು ವಿಷಯವು ಕಿತ್ತೂರು ಸಂಸ್ಥಾನದ ನೌಕರರು ಮಾಡಿಕೊಂಡಿರುವ ಒಂದು ಕಟ್ಟುಕಥೆˌ ಸಂಸ್ಥಾನದ ಆಸ್ತಿಯನ್ನು ಲಪಟಾಯಿಸಲು ಕಿತ್ತೂರಿನ ಸರದಾರರು ಮಾಡಿರುವ ಕುತಂತ್ರ ಎಂದು ಸುಳ್ಳು ವರದಿ ಕೊಟ್ಟವನೆ ಈ ವೆಂಕಟರಾಯ. ಅಷ್ಟೇ ಅಲ್ಲದೆ ರಾಣಿ ದತ್ತು ಪಡೆದ ಮಗ ಕಿತ್ತೂರಿನ ಹತ್ತಿರದ ಸಂಬಂಧಿಕ ಅಲ್ಲ ಎಂದು ವೆಂಕಟರಾವ್ ಥ್ಯಾಕರೆಗೆ ವರದಿ ನೀಡುತ್ತಾನೆ. ಥ್ಯಾಕರೆˌ ಈ ಕುರಿತು ಮುಂಬೈ ಪ್ರೆಸಿಡೆನ್ಸಿಯ ಪ್ರಧಾನ ಕಾರ್ಯದರ್ಶಿ ಆಗಿರುವ ಎಲ್ಫಿನ್ಸ್ಟನ್ ಗೆ ಯತಾವತ್ತ ವರದಿ ಕಳಿಸುತ್ತಾನೆ. ಹೀಗಾಗಿ ದತ್ತು ಪ್ರಕ್ರಿಯೆ ಅನುಷ್ಟಾನಕ್ಕೆ ಬರದಂತೆ ತಡೆ ಹಿಡಿಯುವಲ್ಲಿ ಹಾವೇರಿಯ ವೆಂಕಟರಾವ್ ಬರೆದ ಪತ್ರವೇ ಕಾರಣವಾಗಿತ್ತು ಎನ್ನುವ ಸಂಗತಿ ಗಮನಿಸಬೇಕು. ಮುಂದೆ ಕಿತ್ತೂರಿನ ಯುದ್ಧದಲ್ಲಿ ಪಿತೂರಿ ಮಾಡಿದ ಘಟನೆಗಳುˌ ಮದ್ದುಗಳಲ್ಲಿ ಲದ್ದಿ ಮತ್ತು ರಾಗಿ ಹಿಟ್ಟನ್ನು ಬೆರೆಸಿದ ಗೆಜ್ಜೆ ಮಾಂತಮ್ಮ ˌ ಗೋವಿಂದ ಭಟ್ಟˌ ಶ್ರೀನಿವಾಸˌ ಮುಂತಾದವರು.
ನಾಟಕದಲ್ಲಿ ಈ ಅಂಶಗಳನ್ನು ಅರೆಬರೆಯಾಗಿ ಹೇಳಲಾಗಿದೆ. ಇಲ್ಲಿರುವುದು ಹಿಂದುಗಳ ಹೆಸರು, ವೈಧಿಕಶಾಹಿಗಳ ಹೆಸರು ಎಂಬ ಕಾರಣಕ್ಕೆ ಈ ಹೆಸರುಗಳ ಪ್ರಸ್ತಾಪ ನಾಟಕಗಳಲ್ಲಿ ಕಾಣುವುದೇ ಇಲ್ಲ.
ಟಿಪ್ಪು ಮೇಲೆಕೆ ಇಷ್ಟು ಸಿಟ್ಟು : ರಾಜನಾಧವನಿಗೆ ಸಾಮ್ರಾಜ್ಯವನ್ನು ವಿಸ್ತರಿಸುವ ಮಹದಾಸೆ ಇರುವುದು ಸಹಜ. ಹಾಗೆಂದ ಮಾತ್ರಕ್ಕೆ ಅವರನ್ನು ಧರ್ಮಾಂದರೆಂದು, ಹಿಂದೂ ವಿರೋಧಿಗಳು ಎಂದು ಬಿಂಬಿಸುವುದು ಸರಿಯಾದ ವಿಧಾನವಲ್ಲ. ಟಿಪ್ಪುವನ್ನು ಅಥವಾ ಮುಸ್ಲಿಮರನ್ನು ಈ ಬಗೆಯ ಸುಳ್ಳುಗಳ ಮೂಲಕ ಕ್ರೂರಿಗಳನ್ನಾಗಿ ಚಿತ್ರಿಸಿ ಆ ಇಡೀ ಸಮುದಾಯದ ವಿರುದ್ಧ ದಲಿತ ಮತ್ತು ಶೂದ್ರರೆಂಬ ಹುಂಬರನ್ನು ಎತ್ತಿಕಟ್ಟಿ ತಾವು ಅಧಿಕಾರದ ಗದ್ದುಗೆ ಏರುವ ಕುತಂತ್ರವನ್ನು ಈ ದೇಶದ ಪುರೋಹಿತಶಾಹಿ ಯಾವ ಮಾನವೀಯ ಅಂತಃಕ್ಕರಣವನ್ನೂ ಇಟ್ಟುಕೊಳ್ಳದೆ ನಿರಂತರವಾಗಿ ಪ್ರಯೋಗಿಸುತ್ತಲೇ ಬಂದಿದೆ.
ಟಿಪ್ಪು ಮುಸ್ಲಿಮನಾಗಿ ಹುಟ್ಟಿದ್ದೇ ತಪ್ಪಾಗಿದೆ. ಆತ ಹಿಂದೂವಾಗಿದ್ದರೆ ಯಾವ ಶಿವಾಜಿಗೂ ಸಿಗದ ಮಹತ್ವ ಪ್ರಚಾರ ಬಹುಪರಾಕು ಉತ್ಸವ ಮೆರೆದಾಟಗಳು ಟಿಪ್ಪುವಿಗೂ ಸಲ್ಲುತ್ತಿದ್ದವು. ಅವನ ಹೆಸರಲ್ಲಿ ಎಷ್ಟು ಜನ ಮುಖ್ಯಮಂತ್ರಿಗಳು ಶಾಸಕರು ಎಂಪಿಗಳು ಹುಟ್ಟುತ್ತಿದ್ದರೋ ಗೊತ್ತಿಲ್ಲ.
ನಾಟಕದ ಹಿಂದಿದೆ ‘ಮೆಗಾ’ ರಾಜಕೀಯ : ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಧಾರವಾಡ ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್ ಅವರನ್ನು ಹೊಗಳುವಾಗ ಸತ್ಯವನ್ನೆ ಹೇಳಿದ್ದಾರೆ. ಈಗಾಗಲೇ ನಾಟಕ ಶುರುವಾಗಿದೆ. ಅದರಲ್ಲಿ ನಿನ್ನದೊಂದು ನಾಟಕ ಹುಷಾರು ಎಂದಿರುವುದು.
ಈಗ ಟಿಪ್ಪು ವಿಷಯವಿಟ್ಟುಕೊಂಡು ಮುಸ್ಲಿಮರ ವಿರುದ್ಧ ಲಿಂಗಾಯತರನ್ನು ಎತ್ತಿ ಕಟ್ಟಿ ಬಿಜೆಪಿ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ ಎನ್ನುವ ಗುಸುಗುಸು ಮಾತುಗಳು ಕೇಳಿಬರುತ್ತಿವೆ. 2024 ಸಂಸತ್ ಚುನಾವಣೆಯಲ್ಲಿ ಪ್ರಲ್ಹಾದ ಜೋಶಿಯವರಿಗೆ ಅಷ್ಟು ಸುಲಭವಲ್ಲ ಎನ್ನುವ ಸುದ್ದಿ ಕೂಡ ಇದೆ. ಹಾಗಾಗಿ ಧಾರವಾಡ ಜಿಲ್ಲೆಯಲ್ಲಿ ಕೂಡ ಟಿಪ್ಪು ವಿಷಯ ಮುಂದೆ ಮಾಡಿ ಧಾರ್ಮಿಕ ದೃವೀಕರಣಕ್ಕೆ ರಂಗಾಯಣ ಕೈಹಾಕಿದೆ ಎಂಬ ಅನುಮಾನ ಕಾಡುತ್ತಿದೆ.
ಧಾರವಾಡ ಜಿಲ್ಲೆಯಲ್ಲಿ ಪಂಚಮಸಾಲಿ ಲಿಂಗಾಯತರು ಈಗಾಗಲೆ ಬಿಜೆಪಿಯಿಂದ ದೂರವಾಗಿದ್ದಾರೆ ಅವರನ್ನು ಸೆಳೆಯಲು ಈ ತಂತ್ರ ಅಳವಡಿಸಲಾಗಿದೆ. ಈಗಾಗಲೇ ಲಿಂಗಾಯತ ಪಂಚಮಸಾಲಿ ಸಮಾಜ ಚೆನ್ನಮ್ಮನನ್ನು ಐಕಾನ್ ಮಾಡಿಕೊಂಡು 2ಎ ಮೀಸಲಾತಿಗಾಗಿ ಹೋರಾಡುತ್ತಿದೆ. ಈಗ ಇಂತಹ ಭಾವನಾತ್ಮಕ ವಿಷಯದ ಮೇಲೆ ನಾಟಕ ಪ್ರದರ್ಶಿಸುವುದು ಸಮಂಜಸವೇ? ಎಂಬ ಪ್ರಶ್ನೆ ಎದ್ದಿದೆ.
ವಿವಿಧ ಅಕಾಡೆಮಿಗಳು ಹಣ ಇಲ್ಲದೆ ಸೊರಗುತ್ತಿವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಈ ನಾಟಕಕ್ಕೆ 25 ಲಕ್ಷದಷ್ಟು ಅನುದಾನವನ್ನು ಸರಕಾರ ನೀಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಶಾಸಕರು, ಜನಪ್ರತಿನಿಧಿಗಳಿಂದ ಹಣ ಸಂಗ್ರಹಿಸಿ 2 ಕೋಟಿ 50 ಲಕ್ಷ ರೂ ವೆಚ್ಚದಲ್ಲಿ ನಾಟಕವನ್ನು ತಯಾರಿಸಲಾಗಿದೆ. ಈಗಾಗಲೆ 08 ಪ್ರದರ್ಶನಗಳು ನಿಗದಿಯಾಗಿವೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪರಿಕರಗಳನ್ನು ಸಾಗಿಸಲು 15 ಲಕ್ಷ ರೂ ಖರ್ಚಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಒಟ್ಟಿನಲ್ಲಿ, ಜನತೆ ಯೋಚಿಸಬೇಕು. ಯುವಕರು ಅಧ್ಯಯನದಲ್ಲಿ ಹೆಚ್ಚಾಗಿ ತೊಡಗಬೇಕು. ಚರಿತ್ರೆಯನ್ನು ವಿವೇಕಕ್ಕೆ ಕಪ್ಪು ಬಟ್ಟೆ ಕಟ್ಟಿ ಒಪ್ಪಿಸಲಾಗುತ್ತಿದೆ ಅದನ್ನು ಕಿತ್ತೆಸೆದು ಒಳನೋಟದಿಂದ ಅಧ್ಯಯನ ನಡೆಸಿ ಸತ್ಯಾಸತ್ಯತೆಯನ್ನು ಕಂಡುಕೊಳ್ಳಬೇಕು. ಈ ಎಲ್ಲ ವಿರೋಧಗಳ ನಡೆವೆ ಟಿಪ್ಪು ಸನ್ನಿವೇಶವನ್ನು ತೆಗೆದು ಹಾಕುವ ಮೂಲಕ ರಂಗಾಯಣ ತನ್ನ ಘನತೆಯನ್ನು ಕಾಪಾಡಿಕೊಂಡು ಸೌಹಾರ್ದತೆಯನ್ನು ಮೆರೆಯಬೇಕಿದೆ.