ವಿಶ್ವ ಗೆದ್ದ ಮೆಸ್ಸಿ ಬಳಗ, ಹೃದಯ ಕದ್ದ ಎಂಬಾಪೆ ಬಳಗ

ರೋಚಕ ಹಣಾಹಣಿಯೊಂದಿಗೆ ತೆರೆಕಂಡ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ

ಜಗದೀಶ್ ಸೂರ‍್ಯ, ಮೈಸೂರು

28 ದಿನಗಳ ಕಾಲ ಇಡೀ ಜಗತ್ತನ್ನೇ ತನ್ನತ್ತ ಸೆಳೆದಿದ್ದ 22ನೇ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಡಿಸೆಂಬರ್ 18ರಂದು ರೋಚಕ ಹಣಾಹಣಿ ಫೈನಲ್ ಪಂದ್ಯದೊಂದಿಗೆ ತೆರೆಕಂಡಿದೆ. ಎರಡು ಬಾರಿ ವಿಶ್ವ ಚಾಂಪಿಯನ್ ಅರ್ಜೆಂಟಿನಾ ಹಾಗೂ ಎರಡು ಬಾರಿ ವಿಶ್ವ ಚಾಂಪಿಯನ್ ಫ್ರಾನ್ಸ್ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಿದ್ದವು. ಖ್ಯಾತ ಆಟಗಾರರಾದ ಲಿಯೋನೆಲ್ ಮೆಸ್ಸಿ ಹಾಗೂ ಕೈಲಿಯನ್ ಎಂಬಾಪೆ ಬಳಗದ ನಡುವೆ ನಡೆದ ಕುತೂಹಲಕಾರಿ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದ್ದರಿಂದ ಪೆನಾಲ್ಟಿ ಕಿಕ್ ನಲ್ಲಿ 4–2 ಗೋಲುಗಳ ಅಂತರದಿಂದ ಅರ್ಜೆಂಟಿನಾ ಮೂರನೇ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡಿತು. ಇದರೊಂದಿಗೆ  ದಿಗ್ಗಜ ತಂಡಗಳ ಸೋಲು, ಪುಟ್ಟ ತಂಡಗಳ ಗೆಲುವು, ಹಲವು ದಾಖಲೆಗಳು, ವಿಶೇಷತೆಗಳೊಂದಿಗೆ ವಿಶ್ವಕಪ್ ಪಂದ್ಯಾವಳಿ ಅದ್ದೂರಿ ಹಾಗೂ ಯಶಸ್ವಿಯಾಗಿ ಮುಗಿದಿದೆ.

ಡಿಸೆಂಬರ್ 9 ರಿಂದ ಆರಂಭವಾದ ಕ್ವಾರ್ಟರ್ ಪಂದ್ಯಗಳು ಜಿದ್ದಾಜಿದ್ದಿನಿಂದ ಕೂಡಿದ್ದವು. ಕ್ರೋವೇಶಿಯಾ ತಂಡ ಬಲಿಷ್ಠ ಬ್ರೆಜಿಲ್ ತಂಡವನ್ನು, ಅರ್ಜೆಂಟಿನಾ, ನೆದರ್‌ಲ್ಯಾಂಡ್ ತಂಡವನ್ನು, ಮೊರಾಕ್ಕೊ, ಪೋರ್ಚುಗಲ್ ತಂಡವನ್ನು, ಇಂಗ್ಲೆಂಡ್, ಫ್ರಾನ್ಸ್ ತಂಡವನ್ನು ಮಣಿಸಿ ಸೆಮಿ ಫೈನಲ್ ಹಂತವನ್ನು ಪ್ರವೇಶಿಸಿದವು. ಸೆಮಿ ಫೈನಲ್ ಪಂದ್ಯಗಳು ಅಕ್ಷರಶಃ ಕುತೂಹಲದಿಂದ ಕೂಡಿತ್ತು. ಈ ಪಂದ್ಯಗಳಲ್ಲಿ ಕಳೆದ ಬಾರಿಯ ರನ್ನರ್ ಅಪ್ ಕ್ರೋವೇಶಿಯಾವನ್ನು ಮಣಿಸಿ ಅರ್ಜೆಂಟಿನಾ ಫೈನಲ್‌ ಗೇರಿದರೆ, ಮೊದಲ ಬಾರಿಗೆ ಸೆಮಿಫೈನಲ್‌ಗೆ ಬಂದಿದ್ದ ಆಫ್ರಿಕಾ ದೇಶದ ಮೊರಾಕ್ಕೊ ಪ್ರಬಲ ಸ್ಪರ್ಧೆಯೊಡ್ಡಿದರೂ ಫ್ರಾನ್ಸ್ ಎದುರು ಮಣಿಯಬೇಕಾಯಿತು. ಇದರೊಂದಿಗೆ ಅರ್ಜೆಂಟಿನಾ ಹಾಗೂ ಫ್ರಾನ್ಸ್ ತಂಡಗಳು ಫೈನಲ್ ಪಂದ್ಯದಲ್ಲಿ ಸೆಣಸಲು ವೇದಿಕೆ ಸಿದ್ಧವಾಯಿತು. ಅಂತಿಮವಾಗಿ ಡಿಸೆಂಬರ್ 18ರಂದು ನಡೆದ ಫೈನಲ್‌ನಲ್ಲಿ ಕಳೆದ ಬಾರಿಯ ಚಾಂಪಿಯನ್ ಫ್ರಾನ್ಸ್ ತಂಡದ ಎದುರು ಅರ್ಜೆಂಟಿನಾ ಗೆದ್ದು ವಿಶ್ವಕಪ್ ಅನ್ನು ಎತ್ತಿಯಿಡಿಯಿತು.

ವಿಶ್ವಕಪ್ ಗೆದ್ದ ಮೆಸ್ಸಿ ಬಳಗ, ಹೃದಯ ಕದ್ದ ಎಂಬಾಪೆ ಬಳಗ

ಖ್ಯಾತ ಆಟಗಾರ ಲಿಯೊನಲ್ ಮೆಸ್ಸಿಗೆ ಈ ವಿಶ್ವಕಪ್ ಕೊನೆಯ ಮತ್ತು ಅತ್ಯಂತ ಮಹತ್ವದ ಪಂದ್ಯವಾಗಿತ್ತು. ತನ್ನ 18 ವರ್ಷಗಳ ಫುಟ್ಬಾಲ್ ಪಯಣದಲ್ಲಿ 37 ಕ್ಲಬ್ ಟ್ರೋಫಿಗಳು, 7 ಬ್ಯಾಲನ್ ಡಿ’ಓರ್ ಪ್ರಶಸ್ತಿ, 6 ಯುರೋಪಿಯನ್ ಗೋಲ್ಡನ್ ಬೂಟ್, 1 ಕೋಪಾ ಅಮೇರಿಕಾ ಪಟ್ಟ, 1 ಒಲಂಪಿಕ್ ಚಿನ್ನದ ಪದಕ ಗೆದ್ದಿದ್ದ ಮೆಸ್ಸಿಗೆ ವಿಶ್ವಕಪ್ ಒಂದು ಬಾಕಿ ಇತ್ತು. 2014 ರಲ್ಲಿ ಫೈನಲ್ ಹಂತಕ್ಕೆ ಬಂದಿದ್ದರೂ ವಿಶ್ವಕಪ್ ಗೆಲ್ಲುವ ಕನಸು ಈಡೇರಿರಲಿಲ್ಲ. ಆದ್ದರಿಂದ ಮೆಸ್ಸಿ ಹಾಗೂ ಬಳಗಕ್ಕೆ ಈ ಪಂದ್ಯ ಮಹತ್ವದಾಗಿತ್ತು. ಕಪ್ ಗೆಲ್ಲುವ ಮಹತ್ವಾಕಾಂಕ್ಷೆಯಿಂದಲೇ ಬಂದಿದ್ದ ಮೆಸ್ಸಿ ಬಳಗ ಪಂದ್ಯದ ಆರಂಭದಿಂದ ಆಕ್ರಮಣಕಾರಿಯಾಗಿ ಆಡಿ 2 ಗೋಲ್ ಗಳಿಸಿ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯಾರ್ಧದಲ್ಲಿ ಅರ್ಜೆಂಟಿನಾ ತಂಡದ ತಪ್ಪುಗಳ ಲಾಭ ಪಡೆದ ಫ್ರಾನ್ಸ್ ತಂಡದ ಕೈಲಿಯಾನ್ ಎಂಬಾಪೆ ಒಂದು ನಿಮಿಷದಲ್ಲಿ ಎರಡು ಗೋಲ್ ಗಳಿಸಿ ಫ್ರಾನ್ಸ್‌ ಗೆ ಮುನ್ನಡೆ ತಂದುಕೊಟ್ಟು ಅರ್ಜೆಂಟಿನಾ ತಂಡಕ್ಕೆ ಆಘಾತ ನೀಡಿದರು. ನಂತರ ಹೆಚ್ಚುವರಿ ಸಮಯದಲ್ಲಿ ಮತ್ತೆ ಮೆಸ್ಸಿ ಹಾಗೂ ಎಂಬಾಪೆ ಚುರುಕಿನ ಆಟವಾಡಿ ತಲಾ ಒಂದೊಂದು ಗೋಲುಗಳಿಸಿ 1-1 ಗೋಲುಗಳ ಸಮಬಲ ಸಾಧಿಸಿತು. ಪೆನಾಲ್ಟಿ ಕಿಕ್‌ನಲ್ಲಿ ಅರ್ಜೆಂಟಿನಾದ ಗೋಲ್ ಕೀಪರ್ ಎಮಿಲಿಯಾನೋ ಮಾರ್ಟಿನೇಝ್ ತಡೆದ ಎರಡು ಗೋಲ್ ಗಳ ಸಹಾಯದಿಂದ ಅರ್ಜೇಂಟಿನಾ 4-2 ಗೋಲ್ ಗಳ ಅಂತರದಿಂದ ಗೆದ್ದು ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿತು. ಆದರೆ ಫೈನಲ್ ಪಂದ್ಯದಲ್ಲಿ ಸೋತರೂ ಕೊನೆ ಕ್ಷಣದವರೆಗೂ ಅರ್ಜೆಂಟಿನಾವನ್ನು ಕಾಡಿ ಸುಲಭವಾಗಿ ಸೋಲೊಪ್ಪಿಕೊಳ್ಳದಂತೆ ಮಾಡಿದ ಹ್ಯಾಟ್ರಿಕ್ ಗೋಲುಗಳಿಸಿದ ಎಂಬಾಪೆ ವಿಶ್ವದ ಪುಟ್ಬಾಲ್ ಪ್ರೇಮಿಗಳ ಹೃದಯ ಕದ್ದು ಮೆಸ್ಸಿಯ ಉತ್ತಾರಾಧಿಕಾರಿಯಂತೆ ಮೆರೆದರು.

ಇನ್ನು ಈ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲುಗಳಿಸಿದ ಕೈಲಿಯಾನ್ ಎಂಬಾಪೆ (8 ಗೋಲು) ಚಿನ್ನದ ಬೂಟು,  ಶ್ರೇಷ್ಠ ಪ್ರದರ್ಶನದೊಂದಿಗೆ ಅತ್ಯುತ್ತಮ ಆಟಗಾರನಾಗಿ ಮಿಂಚಿದ ಲಿಯೋನೆಲ್ ಮೆಸ್ಸಿಗೆ  ಚಿನ್ನದ ಬಾಲ್, ಅತ್ಯುತ್ತಮ ಗೋಲ್ ಕೀಪರ್ ಆಗಿ ಅರ್ಜೆಂಟಿನಾದ ಎಮಿಲಿಯೊ ಮಾರ್ಟಿನೇಝ್ ಚಿನ್ನದ ಗ್ಲೌಸ್ ಪಡೆದರೆ, ಉತ್ತಮ ನಿರ್ವಹಣೆಗಾಗಿ ಯುವ ಆಟಗಾರನಾಗಿ ಅರ್ಜೆಂಟಿನಾದ ಎನ್‌ಝೋ ಫೆರ್ನಾಂಡಿಸ್ ಪ್ರಶಸ್ತಿ ಗೆದ್ದರು.

ಇದನ್ನು ಓದಿ: ಮೆಸ್ಸಿ ಮ್ಯಾಜಿಕ್‌, ಆರ್ಜೆಂಟೀನಾಕ್ಕೆ ಕಪ್‌ – ವಿಶ್ವದ ಹೃದಯ ಗೆದ್ದ ಎಂಬಪ್ಪೆ..!

ಈ ಬಾರಿಯ ವಿಶ್ವಕಪ್‌ನ ಕೆಲವು ವಿಶೇಷತೆಗಳು ಗಮನ ಸೆಳೆದವು. ಈ ವಿಶ್ವಕಪ್ ಆರಂಭದಿಂದಲೆ ಸಾಕಷ್ಟು ವಿಶೇಷ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಪ್ರಶಸ್ತಿ ಗೆಲ್ಲುವ ಕೆಲವು ಫೇವರಿಟ್ ತಂಡಗಳನ್ನು ಆಫ್ರಿಕಾ ಹಾಗೂ ಏಷ್ಯಾದ ತಂಡಗಳು ಸೋಲಿಸಿ ಹೊರ ಹಾಕುವ ಮೂಲಕ ಅಚ್ಚರಿ ಮೂಡಿಸಿದವು. ಜೊತೆಗೆ ಸೆಮಿಫೈನಲ್ ಪ್ರವೇಶಿಸುವ ಮೂಲಕ ಮೊರಾಕ್ಕೊ ಆಫ್ರಿಕಾ ಖಂಡದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅಲ್ಲದೆ ಈ ವಿಶ್ವಕಪ್‌ನಲ್ಲಿ ಭಾರತ ತಂಡ ಭಾಗವಹಿಸದಿದ್ದರೂ ಭಾರತ ಸುದ್ದಿಯಲ್ಲಿತ್ತು. ಅದಕ್ಕೆ ಕಾರಣ ಕನ್ನಡತಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ. ತನ್ನ ನಟನೆಯ ಪಠಾಣ್ ಸಿನಿಮಾದ ಹಾಡೊಂದರಲ್ಲಿ ಕೇಸರಿ ಬಟ್ಟೆ ತೊಟ್ಟು ನೃತ್ಯ ಮಾಡಿದ್ದಾರೆಂದು ಕೋಮುವಾದಿ ಸಂಘಪರಿವಾರದವರು ಪಠಾಣ್ ಸಿನಿಮಾದ ಬಹಿಷ್ಕಾರಕ್ಕೆ ಕರೆ ನೀಡಿದ್ದರು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದರು. ಆದರೆ ಫಿಫಾ ಫೈನಲ್ ಪಂದ್ಯದಲ್ಲಿ ವಿಜೇತರಿಗೆ ನೀಡುವ ವಿಶ್ವಕಪ್ ಟ್ರೋಫಿಯನ್ನು ಸ್ಪ್ಯಾನಿಶ್‌ನ ಮಾಜಿ ಆಟಗಾರ ಐಕೇರ್ ಕಾಸಿಲಾಸ ಫೆರ್ನಾಂಡಿಸ್ ಜೊತೆ ಸೇರಿ ದೀಪಿಕಾ ಪಡುಕೋಣೆ ಅನಾವರಣ ಮಾಡುವ ಮೂಲಕ ಹೆಮ್ಮೆಯ ಕ್ಷಣದಲ್ಲಿ ಭಾಗಿಯಾದರು. ಇದು ಕೋಮುವಾದಿಗಳ ವ್ಯಾದಿಗೆ ಉತ್ತರ ಕೊಟ್ಟಂತ್ತಿತ್ತು.

ಹಾಗೆಯೇ ಸ್ವಿಡ್ಜರ್‌ಲ್ಯಾಂಡ್ ತಂಡದ ಆಟಗಾರ ಬ್ರೀಲ್ ಎಂಬೊಲೊ ಕ್ಯಾಮರೂನ್ ತಂಡದ ವಿರುದ್ದ ಗೋಲು ಗಳಿಸಿದ್ದರೂ ಸಂಭ್ರಮಿಸಲಿಲ್ಲ ಏಕೆಂದರೆ ಎಂಬಲೋ ಮೂಲತಃ ಕ್ಯಾಮರೂನ್ ದೇಶದವನು.

ಇದನ್ನು ಓದಿ: ಅಭಿಮಾನಿಗಳು ಕಾತುರ: ವಿಶ್ವಕಪ್‌ ಫುಟ್ಬಾಲ್‌ ಪಂದ್ಯಾವಳಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ

ಇನ್ನು  ಹಣ ಗಳಿಕೆಯ ವಿಚಾರದಲ್ಲೂ ವಿಶ್ವಕಪ್ ಸಾಕಷ್ಟು ಸದ್ದು ಮಾಡಿದೆ. ಫಿಫಾ 2018ರಲ್ಲಿ ಒಟ್ಟು 6.4 ಬಿಲಿಯನ್ ಡಾಲರ್ ಲಾಭಗಳಿಸಿತ್ತು. 2022ರಲ್ಲಿ ಸುಮಾರು 7.5 ಬಿಲಿಯನ್ ಡಾಲರ್‌ನಷ್ಟು ಲಾಭಗಳಿಸಿದೆ ಎಂದು ಅಂದಾಜಿಸಲಾಗಿದೆ. 2018ರಲ್ಲಿ ಟಿವಿ ಪ್ರಸಾರದ ಹಕ್ಕು ನೀಡುವಿಕೆಯಲ್ಲಿ 4.6 ಬಿಲಿಯನ್ ಡಾಲರ್ ಗಳಿಸಿತ್ತು. 2022ರಲ್ಲಿ ಸುಮಾರು 400 ಮಿಲಿಯನ್‌ಗಿಂತಲೂ ಹೆಚ್ಚೆಂದು ಹೇಳಲಾಗಿದೆ (ಫಿಪಾ ಮುಂದಿನ ವಿಶ್ವಕಪ್ ಪಂದ್ಯಾವಳಿ ವೇಳೆಗೆ ಅಧಿಕೃತವಾಗಿ ಆದಾಯವನ್ನು ಘೋಷಿಸಲಿದೆ). ಜಾಹೀರಾತು, ಆನಿಮೇಷನ್ ಗೇಮ್‌ಗಳ ತಯಾರಿಕೆ ಜೊತೆಗೆ ಬಿಡ್ಡಿಂಗ್‌ನಲ್ಲಿ ಸಾವಿರಾರು ಕೋಟಿ ರೂಪಾಯಿಗಳು ಹರಿದಾಡಿದೆ. ಇನ್ನು ಕತಾರ್ ದೇಶ ಈ ಪಂದ್ಯಾವಳಿ ಅಯೋಜಿಸುವ ಮೂಲಕ ಜಾಗತಿಕವಾಗಿ ಗುರುತಿಸಿಕೊಂಡಿದ್ದಲ್ಲದೆ ಹೂಡಿಕೆ ಹಾಗೂ ಪ್ರವಾಸೋದ್ಯಮಕ್ಕೆ ತೆರೆದುಕೊಂಡಿದೆ.

ದಾಖಲೆ ಬರೆದ ಪಂದ್ಯ ವೀಕ್ಷಣೆ :

ಅರ್ಜೆಂಟಿನಾ ಮತ್ತು ಫ್ರಾನ್ಸ್ ನಡುವೆ ನಡೆದ ಫೈನಲ್ ಪಂದ್ಯವನ್ನು ಜಗತ್ತಿನಾದ್ಯಂತ ಸುಮಾರು 26 ಮಿಲಿಯನ್ ಜನ ದೂರದರ್ಶನದ ಮೂಲಕ ವೀಕ್ಷಿಸಿದ್ದಾರೆಂದು ತಿಳಿದು ಬಂದಿದೆ. ಅಲ್ಲದೆ ಭಾರತದಲ್ಲಿ ಸುಮಾರು 3.2 ಕೋಟಿ ಜನ ಜಿಯೋ ಸಿನಿಮಾ ಆ್ಯಪ್ ಮೂಲಕ ಮೊಬೈಲ್‌ನಲ್ಲಿ ಫೈನಲ್ ಪಂದ್ಯವನ್ನು ವೀಕ್ಷಣೆ ಮಾಡಿದ್ದು ಇದು ಭಾರತದಲ್ಲಿ ದಾಖಲೆ ಬರೆದಿದೆ.

ಮುಂದಿನ ವಿಶ್ವಕಪ್ ಪಂದ್ಯಾವಳಿ :

2026ರಲ್ಲಿ ನಡೆಯುವ ವಿಶ್ವಕಪ್ ಪಂದ್ಯಾವಳಿಯ ಆತಿಥ್ಯವನ್ನು ಕೆನಡಾ, ಮೆಕ್ಸಿಕೊ ಹಾಗೂ ಅಮೇರಿಕಾ ದೇಶಗಳು ಜಂಟಿಯಾಗಿ ವಹಿಸಿಕೊಂಡಿವೆ. 2026ರಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ 34 ತಂಡಗಳ ಬದಲಾಗಿ 48 ತಂಡಗಳಿಗೆ ಅವಕಾಶ ನೀಡುವುದಾಗಿ ಫಿಫಾ ಘೋಷಿಸಿದೆ. ಇದರಿಂದಾಗಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಭಾರತದ ಕನಸು ನನಸಾಗಬಹುದು ಆದರೆ ಅದು ಫಿಫಾ ನಡೆಸುವ ಅರ್ಹತಾ ಪಂದ್ಯಾವಳಿಯಲ್ಲಿ ಮೊದಲ ಅಥವಾ ಎರಡನೇ ಸ್ಥಾನ ಪಡೆದಾಗ ಮಾತ್ರ. ಆ ನಿಟ್ಟಿನಲ್ಲಿ ಭಾರತದ ಫುಟ್ಬಾಲ್ ತಂಡ ಈಗಿನಿಂದಲೇ ಅಗತ್ಯ ತಯಾರಿ ಮಾಡಿಕೊಳ್ಳಲೇಬೇಕು.

ಇದನ್ನು ಓದಿ: ಫುಟ್‌ಬಾಲ್‌ ದಿಗ್ಗಜ ಡಿಯಾಗೊ ಮರಡೋನಾ ನಿಧನ

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *