ಬೆಂಗಳೂರು: ದರ್ಶನ್ ಕ್ರಾಂತಿ ಸಿನಿಮಾ ಪ್ರಚಾರ ಕಾರ್ಯಕ್ರಮದ ವೇಳೆ ಅಪ್ಪು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ನಟ ಸುದೀಪ್, ದ್ವೇಷವೇ ಎಲ್ಲದಕ್ಕೂ ಉತ್ತರವಲ್ಲ ಎಂದಿದ್ದಾರೆ.
ಬಳ್ಳಾರಿಯ ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ತುಂಬಿದ ಜನಜಂಗುಳಿ ಮಧ್ಯೆ ನಾಯಕ ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ ನಡೆದಿತ್ತು. ಈ ಬಗ್ಗೆ ಪತ್ರ ಬರೆದು ಟ್ವೀಟ್ ಮಾಡಿರುವ ನಟ ಸುದೀಪ್, ನಮ್ಮ ಭೂಮಿ, ಭಾಷೆ, ಸಂಸ್ಕೃತಿ ಎಲ್ಲವೂ ಪ್ರೀತಿ ಮತ್ತು ಗೌರವವನ್ನು ಕಲಿಸುತ್ತವೆ. ಪ್ರತಿ ಸಮಸ್ಯೆಗೆ ಉತ್ತರವಿದೆ. ಪ್ರತಿ ಸಮಸ್ಯೆಯನ್ನು ಹಲವು ವಿಧದಲ್ಲಿ ಬಗೆಹರಿಸಬಹುದು. ಪ್ರತಿ ವ್ಯಕ್ತಿಯನ್ನು ಗೌರವದಿಂದ ಕಾಣಬೇಕು. ಯಾವುದೇ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಬರೆದಿದ್ದಾರೆ.
❤️🙏🏼 pic.twitter.com/PbR5RzCLTn
— Kichcha Sudeepa (@KicchaSudeep) December 20, 2022
ಘಟನೆಗೆ ಸಂಬಂಧಿಸಿದ ವಿಡಿಯೊ ನೋಡಿ ನಾನು ತುಂಬಾ ವಿಚಲಿತನಾದೆ. ಆ ಸಿನಿಮಾಗೆ ಸಂಬಂಧಪಟ್ಟ ಅನೇಕರು ಮತ್ತು ಸಿನಿಮಾದ ಭಾಗವಾಗಿದ್ದ ಪ್ರಮುಖ ಮಹಿಳೆ ಕೂಡ ಇದ್ದರು. ಅವರೆಲ್ಲ ಆ ಸಿನಿಮಾ ಕಾಯಕ್ರಮದ ಭಾಗವಾಗಿದ್ದರು. ಆ ಸಮಯದಲ್ಲಿ ಸಂಭವಿಸಿದ ಅಗೌರವದ ಅವಘಡಕ್ಕೆ ಯಾವುದೇ ಸಂಬಂಧವಿರಲಿಲ್ಲ. ಅವರನ್ನು ಸಾರ್ವಜನಿಕವಾಗಿ ಅವಮಾನಿಸುವುದು, ಈ ಅನ್ಯಾಯದ ಪ್ರತಿಕ್ರಿಯೆಗಳಿಗೆ ನಾವು ಕನ್ನಡಿಗೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಒಳಗಿರುವ ಆಕ್ರೋಶವನ್ನು ಹೊರಹಾಕುವ ಮಾರ್ಗವೂ ಇದಲ್ಲ ಎಂದು ತಿಳಿಸಿದ್ದಾರೆ.
ದರ್ಶನ್ ಹಾಗೂ ಪುನೀತ್ ಅಭಿಮಾನಿಗಳ ನಡುವೆ ಮನಸ್ತಾವಿದೆ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ ಈ ರೀತಿ ಪ್ರತಿಕ್ರಿಯೆಯನ್ನು ಸ್ವತಃ ಪುನೀತ್ ಒಪ್ಪಿಕೊಳ್ಳುತ್ತಿದ್ದರೇ? ಬೆಂಬಲಿಸುತ್ತಿದ್ದರೇ? ಎಂಬುದನ್ನು ಪ್ರಶ್ನಿಸಿಕೊಳ್ಳಿ. ಬಹುಶಃ ಅವರ ಪ್ರತಿಯೊಬ್ಬ ಅಭಿಮಾನಿ ಇದಕ್ಕೆ ಉತ್ತರ ತಿಳಿದುಕೊಳ್ಳಲೇಬೇಕು ಎಂದು ಸುದೀಪ್ ಹೇಳಿದ್ದಾರೆ.
ಕನ್ನಡ ಚಿತ್ರರಂಗ, ಈ ನಾಡಿನ ಜನರು ಉತ್ತಮ ನಡವಳಿಕೆಗೆ ಹೆಸರಾಗಿದೆ. ಭಾರತದಲ್ಲಿ ಕರ್ನಾಟಕ ಸಂಸ್ಕೃತಿಯಲ್ಲಿ ಎತ್ತರದ ಸ್ಥಾನದಲ್ಲಿ ನಿಲ್ಲುತ್ತದೆ. ಹೀಗಿರುವಾಗ ನಾವು ಖಂಡಿತಾ ಇಂತಹ ಸಂದೇಶ ಹರಡಬಾರದು. ಪರಿಸ್ಥಿತಿಗೆ ಈ ರೀತಿ ಉದ್ರೇಕದಿಂದ ಕ್ರೋಧದಿಂದ ವರ್ತಿಸುವುದು ಖಂಡಿತಾ ಉತ್ತರವಲ್ಲ.
ಪ್ರತಿಯೊಂದಕ್ಕೂ ಹಲವು ವಿಧಾನಗಳಲ್ಲಿ ಪರಿಹರಿಸಬಹುದು. ಪ್ರತಿಯೊಬ್ಬ ವ್ಯಕ್ತಿಯೂ ಗೌರವದಿಂದ ನಡೆಸಿಕೊಳ್ಳಲು ಅರ್ಹರಿರುತ್ತಾರೆ. ತಾಳ್ಮೆಯಿಂದ ಮಾತುಕತೆ ಮೂಲಕ ಪ್ರತಿಯೊಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ತುಂಬಿದ ಜನರ ಮಧ್ಯೆ ಒಬ್ಬರ ಕ್ಷುಲ್ಲಕ ನಡವಳಿಕೆ ಇಡೀ ವ್ಯವಸ್ಥೆಯನ್ನು ಹಾಳು ಮಾಡಬಾರದು, ಪ್ರೀತಿ, ಗೌರವ ಮತ್ತು ಘಟನೆಯನ್ನು ಎತ್ತಿ ತೋರಿಸುವ ಪುನೀತ್ ಅಭಿಮಾನಿಗಳು ಅದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರಬಹುದು ಎಂದಿದ್ದಾರೆ.
ನನಗೆ ಗೊತ್ತಿದೆ. ಕೆಲವು ನಟರುಗಳ ನಡುವೆ ಹಾಗೂ ಅಭಿಮಾನಿಗಳ ಮಧ್ಯೆ ಅಸಮಾಧಾನವಿದೆ; ಭಿನ್ನಾಭಿಪ್ರಾಯವಿದೆ. ನಾನು ದರ್ಶನ್ ಮತ್ತು ಪುನೀತ್ ಇಬ್ಬರನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ. ಅವರ ಜೀವನದಲ್ಲಿ ಹೊಂದಿದ್ದ ಸ್ಥಾನದಿಂದ ಇಂದು ನಾನು ಈ ರೀತಿ ನನ್ನ ಭಾವನೆಗಳನ್ನು ಬರೆಯಲು ಅರ್ಹನಾಗಿದ್ದೇನೆ ಎಂದು ಭಾವಿಸುತ್ತೇನೆ. ಅಗತ್ಯಕ್ಕಿಂತ ಹೆಚ್ಚು ಮಾತನಾಡಿದ್ದರೆ ನನ್ನನ್ನು ಕ್ಷಮಿಸಿ, ಈ ಚಿತ್ರರಂಗದಲ್ಲಿ 27 ವರ್ಷಗಳಿಂದ ಪ್ರಯಾಣ ಮಾಡುತ್ತಿರುವ ನಾನು ಒಂದು ವಿಷಯವನ್ನಂತೂ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಯಾವುದೂ, ಯಾರೂ ಕೂಡ ಶಾಶ್ವತವಲ್ಲ, ಇರುವಷ್ಟು ದಿನ ಪ್ರೀತಿ, ಗೌರವವನ್ನು ಹಂಚಿ ಬೇರೆಯವರಿಂದ ಅದನ್ನು ಪಡೆಯೋಣ. ಇದೊಂದೇ ಕೊನೆಯವರೆಗೂ ಇರುವುದು, ಗೆಲ್ಲುವುದು ಮತ್ತು ಪರಿಸ್ಥಿತಿಯನ್ನು ಜಯಿಸುವುದು ಎಂದು ಹೇಳಿ ನಟ ಸುದೀಪ್ ಮುಕ್ತಾಯಗೊಳಿಸಿದ್ದಾರೆ.