ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ವೈಜ್ಞಾನಿಕ ದರ ನಿಗದಿಗೊಳಿಸಲು ಮಂಡ್ಯ ಬಂದ್‌: ರೈತರ ಕರೆಗೆ ವ್ಯಾಪಕ ಬೆಂಬಲ

ಮಂಡ್ಯ: ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು, ಪ್ರತಿ ಲೀಟರ್ ಹಾಲಿಗೆ ರೂ.40 ದರ ನಿಗದಿ ಮಾಡಬೇಕೆಂಬ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ರೈತ ಸಂಘಟನೆ ಮಂಡ್ಯ ಜಿಲ್ಲಾ ಬಂದ್‌ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಇದನ್ನು ಓದಿ: ನಾಲ್ಕು ವರ್ಷದಲ್ಲಿ ಕಬ್ಬು ಖರೀದಿ ದರ ಕೆಜಿಗೆ ಇಪ್ಪತ್ತೈದು ಪೈಸೆ ಮಾತ್ರ ಹೆಚ್ಚಳ!

ಇಂದು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿತ್ತು. ಸತತ 8 ಗಂಟೆಗಳ ಕಾಲ ಮಂಡ್ಯ ನಗರವನ್ನು ಸ್ಥಬ್ದವಾಗಿದ್ದು, ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಬೆಂಬಲ ವ್ಯಕ್ತಪಡಿಸಿ ವರ್ತಕರು ತಮ್ಮ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಕೆಲ ಹೊಟೇಲ್‌ಗಳ ಮಾಲೀಕರು ಸಹ ಬಂದ್‌ಗೆ ಬೆಂಬಲ ಸೂಚಿಸಿದ್ದು, ಕೆಲವೇ ಕೆಲವು ಹೊಟೇಲುಗಳ ಮಾತ್ರ ಕಾರ್ಯನಿರ್ವಹಿಸಿದೆ ಎಂದು ವರದಿಯಾಗಿದೆ.

ಒಂದು ಟನ್ ಕಬ್ಬಿಗೆ ರೂ.4500 ದರ ನಿಗದಿ ಮಾಡಬೇಕೆಂದು ಆಗ್ರಹಿಸುತ್ತಿರುವ ರೈತರು, ಹಾಲಿಗೆ ವೈಜ್ಞಾನಿಕ ದರ ನೀಡುವಂತೆಯೂ ಆಗ್ರಹಿಸುತ್ತಿದ್ದಾರೆ. ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಡ್ಯ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕಳೆದ 43 ದಿನಗಳಿಂದ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಹೋರಾಟ ನಡೆಯುತ್ತಿದೆ. ಒಂದೂವರೆ ತಿಂಗಳು ಕಳೆದರು ರೈತರ ಕಡೆ ತಿರುಗಿಯೂ ನೋಡದ ಸರ್ಕಾರದ ವಿರುದ್ಧ ಇಂದು ಮಂಡ್ಯ ನಗರ ಬಂದ್ ಕರೆ ನೀಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದರು.

ಬಂದ್ ಹಿನ್ನೆಲೆಯಲ್ಲಿ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಡ್ಯ ನಗರದ ಬೆಂಗಳೂರು-ಮೈಸೂರು ಹೆದ್ದಾರಿ, ನೂರಡಿ ರಸ್ತೆ, ಗುತ್ತಲು ರಸ್ತೆ, ಪೇಟೆ ಬೀದಿ, ಹೊಳಲು ವೃತ್ತ, ಹೊಸಹಳ್ಳಿ ವೃತ್ತ, ಬನ್ನೂರು ರಸ್ತೆ, ವಿ.ವಿ. ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಬೈಕ್ ರ‍್ಯಾಲಿ ನಡೆಸಿದ್ದಾರೆ.

ಇದನ್ನು ಓದಿ: ರಾಜ್ಯ ಕೃಷಿ ಕಾಯ್ದೆಗಳು, ವಿದ್ಯುತ್ ತಿದ್ದುಪಡಿ ಮಸೂದೆ ರದ್ದುಪಡಿಸಲು ಕೆಪಿಆರ್‌ಎಸ್‌ ರಾಜ್ಯ ಸಮ್ಮೇಳನ ಕರೆ

ಬಂದ್ ವೇಳೆ ಮಂಡ್ಯ ನಗರ ಸಂಪೂರ್ಣ ಸ್ಥಬವಾಗಿದ್ದವು. ಆಟೋ, ಲಾರಿ ಚಾಲಕರು, ವರ್ತಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರಗತಿಪರ ಹಾಗೂ ಕನ್ನಡ ಸಂಘಟನೆಗಳು ರೈತರ ಕರೆ ಓಗೊಟ್ಟು ಬೀದಿಗೆ ಇಳಿದು ಪ್ರತಿಭಟನೆಗಳನ್ನು ನಡೆಸಿದ್ದಾರೆ.  ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳು ರೈತರೊಂದಿಗೆ ಜೊತೆಯಾಗಿದ್ದಾರೆ. ಮಂಡ್ಯದ ಸಂಜಯ ವೃತ್ತಕ್ಕೆ ಮೆರವಣಿಗೆ ಮೂಲಕ ಆಗಮಿಸಿದ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.‌ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಕುಳಿತು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು, ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಬಂದ್ ಬೆಂಬಲ ವ್ಯಕ್ತಪಡಿಸಿದ ಚಲನಚಿತ್ರ ಮಂದಿರಗಳು ಬೆಳಗಿನ ಪ್ರದರ್ಶನವನ್ನು ರದ್ದುಗೊಳಿಸಿದ್ದರು. ಹೆದ್ದಾರಿಯಲ್ಲಿನ ಪೆಟ್ರೋಲ್ ಬಂಕ್‌ ಗಳು ಸಹ ಕೆಲ ಕಾಲ ವ್ಯಾಪಾರ ಸ್ಥಗಿತಗೊಳಿಸಿತ್ತು. ನಗರದಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಸಾರಿಗೆ ಬಸ್ಸುಗಳ ಸಂಚಾರ ನಗರದಲ್ಲಿ ಸ್ಥಗಿತವಾಗಿತ್ತು. ಕೆಲವು ಕಡೆಗಳಲ್ಲಿ ಸಾರಿಗೆ ಬಸ್ಸುಗಳನ್ನು ತಡೆದು ನಗರ ಪ್ರವೇಶಕ್ಕೆ ವ್ಯತ್ಯಯಗೊಳಿಸಲಾಯಿತು. ಬಂದ್‌ ಬೆಂಬಲಿಸಿ ಆಟೋ ಚಾಲಕರು ಮತ್ತು ಮಾಲೀಕರು ಬೆಂಬಲ ವ್ಯಕ್ತಪಡಿಸಿದ್ದ ಕಾರಣ ಆಟೋ ಮತ್ತು ಟ್ಯಾಕ್ಸಿಗಳ ಸಂಚಾರ  ವಿರಳವಾಗಿತ್ತು.

ಇದನ್ನು ಓದಿ: ಜನ ಪರ್ಯಾಯ ಬಜೆಟ್‌ ಅಧಿವೇಶನ: ಜನಪರವಾದ ಹಲವು ನಿರ್ಣಯಗಳು ಅಂಗೀಕಾರ

ಸಂಚಾರ ಮಾರ್ಗಗಳಲ್ಲಿಯೂ ಬದಲಾವಣೆ ಮಾಡಲಾಗಿತ್ತು. ಮೈಸೂರಿನಿಂದ ಬರುವ ವಾಹನಗಳನ್ನು ನಗರದ ಹೊರ ವಲಯದಲ್ಲಿರುವ ವಿ.ಸಿ. ಗೇಟ್ ಬಳಿ ತಡೆದು ಮಾರ್ಗ ಬದಲಾವಣೆ ಮಾಡಿ ತೆರಳುವಂತೆ ಸೂಚಿಸಲಾಗುತ್ತಿತ್ತು. ಬೆಂಗಳೂರು ಕಡೆಯಿಂದ ಬರುತ್ತಿದ್ದ ವಾಹನಗಳನ್ನು ಉಮ್ಮಡಹಳ್ಳಿ ಗೇಟ್, ಹೊಸಬೂದನೂರು ಬಳಿ ತಡೆದು ಮಾರ್ಗ ಬದಲಾಯಿಸಲಾಗಿತ್ತು. ಕೆಲವು ವಾಹನಗಳಿಗೆ ಮದ್ದೂರು ಬಳಿಯೇ ತಡೆದು ಬೇರೆ ಮಾರ್ಗದಲ್ಲಿ ಸಂಚರಿಸುವಂತೆ ವಾಹನ ಸವಾರರಿಗೆ ಸೂಚನೆ ನೀಡಲಾಗುತ್ತಿತ್ತು.

Donate Janashakthi Media

Leave a Reply

Your email address will not be published. Required fields are marked *