ರಾಯಚೂರು: ಜಿಲ್ಲೆಯ ಸಿರವಾರ ಪೊಲೀಸ್ ಠಾಣೆ ಪಿಎಸ್ಐ ಗೀತಾಂಜಲಿ ಶಿಂಧೆ ವಿರುದ್ಧ ಒಂದಲ್ಲ ಒಂದು ಆರೋಪಗಳು ಕೇಳಿಬಂದಿದ್ದು, ಅವರನ್ನು ಕರ್ತವ್ಯಲೋಪದ ಆರೋಪದಡಿ ಅಮಾನತುಗೊಳಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಸಿರವಾರ ಆದೇಶ ನೀಡಿದ್ದಾರೆ.
ಪಿಎಸ್ಐ ತನ್ನ ಜವಾಬ್ದಾರಿಯುತ ಕರ್ತವ್ಯವನ್ನು ನಿರ್ವಹಿಸದೆ ಆರೋಪಗಳಿಗಷ್ಟೇ ಗುರಿಯಾಗಿದ್ದರು. ರೈತರೊಂದಿಗೆ ಅನುಚಿತವಾಗಿ ವರ್ತಿಸುವುದು. ಪೊಲೀಸ್ ಠಾಣೆಯಲ್ಲಿಯೇ ಅದ್ಧೂರಿ ಹುಟ್ಟು ಹಬ್ಬದ ಆಚರಣೆ ಹಲವು ಆರೋಪಗಳ ಕೇಳಿಬಂದವು. ಅಷ್ಟೇ ಅಲ್ಲದೆ, ಜಮೀನು ವಿಚಾರಕ್ಕೆ ಅನಾವಶ್ಯಕವಾಗಿ ತಲೆದೂರಿಸಿ ಮೂರು ತಿಂಗಳಿಂದ ತನ್ನನ್ನು ಕಿರುಕುಳ ನೀಡಿದ್ದಾರೆ. ತನ್ನ ಸಾವಿಗೆ ಪಿಎಸ್ಐ ಮೇಡಂ ಕಾರಣವೆಂದು ಆರೋಪಿಸಿ ತಾಯಣ್ಣ ಅನ್ನುವ ಯುವಕನೊಬ್ಬ ಪತ್ರವೊಂದು ಬರೆದು ಪರಾರಿಯಾಗಿರುವ ಘಟನೆಯೂ ನಡೆದಿದೆ.
ಯುವಕನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿರಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂತಿಮವಾಗಿ ಮೂರು ದಿನದಲ್ಲಿ ಯುವಕನನ್ನು ಪತ್ತೆಹಚ್ಚಿ ಮರಳಿ ಕರೆತರಲಾಗಿದೆ.
ಪಿಎಸ್ಐ ಗೀತಾಂಜಲಿ ವಿರುದ್ಧ ಇನ್ನೂ ಹಲವು ಆರೋಪಗಳು ಕೇಳಿಬರುತ್ತಿದ್ದು, ಕೆಲವರು ಖುದ್ದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಈವೆಲ್ಲವನ್ನು ಪರಿಶೀಲಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಅವರು ಗೀತಾಂಜಲಿ ಅವರನ್ನು ಅಮಾನತುಗೊಳಿಸಿದ್ದಾರೆ.