ಒಳ ಮೀಸಲಾತಿ ಜಾರಿಗಾಗಿ ಪ್ರತಿಭಟನೆ: ಸಚಿವ ಸೋಮಣ್ಣ ವಿರುದ್ಧ ಘೋಷಣೆ-ಮುಖ್ಯಮಂತ್ರಿ ಬರಬೇಕೆಂದು ಆಗ್ರಹ

ಬೆಂಗಳೂರು: ಒಳ ಮೀಸಲಾತಿ ಜಾರಿಗೊಳಿಸಬೇಕೆಂದು ಹಮ್ಮಿಕೊಂಡಿರುವ ಧರಣಿ ಸ್ಥಳಕ್ಕೆ ಮುಖ್ಯಮಂತ್ರಿ, ಸಂಬಂಧಪಟ್ಟ ಸಚಿವರು ಆಗಮಿಸಿ ಲಿಖಿತ ಭರವಸೆ ನೀಡುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದ್ದು, ಹೋರಾಟ ತೀವ್ರಗೊಂಡಿದೆ.

ನಗರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿಗಳ ಸೂಚನೆಯಂತೆ ಮನವಿ ಪಡೆಯಲು ಧರಣಿ ಸ್ಥಳಕ್ಕೆ ಬಂದ ವಸತಿ ಸಚಿವ ವಿ ಸೋಮಣ್ಣ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.

ಸಚಿವ ವಿ. ಸೋಮಣ್ಣ ಆಗಮಿಸಿ ಭಾಷಣ ಮಾಡಲು ಮುಂದಾಗುತ್ತಿದ್ದಂತೆ, ಪ್ರತಿಭಟನಾಕಾರರು, ನಮ್ಮ ಬೇಡಿಕೆಗೆ ಸಂಬಂಧಪಡದೇ ಇರುವ ಸಚಿವ ಭರವಸೆಗಳು ನಮಗೆ ಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಸಚಿವರ ಭಾಷಣಕ್ಕೆ ಅಡ್ಡಿಪಡಿಸಿದರು.

ಸಚಿವರ ಭಾಷಣಕ್ಕೆ ಅಡ್ಡಿಪಡಿಸಿದ ಒಳ ಮೀಸಲಾತಿ ಹೋರಾಟಗಾರರು, ಮುಖ್ಯಮಂತ್ರಿಗಳು ಸ್ಥಳಕ್ಕೆ ಬರಬೇಕು ಎಂಬ ತಮ್ಮ ಬೇಡಿಕೆಯನ್ನು ಪುರುಚ್ಚರಿಸಿದರು. ಕಾರ್ಯಕರ್ತರ ಆಕ್ರೋಶಕ್ಕೆ ಮಣಿದ ಸಚಿವ ಸೋಮಣ್ಣ ಅಲ್ಲಿಂದ ತೆರಳಿದರು.

ಹೋರಾಟದ ನೇತೃತ್ವ ವಹಿಸಿರುವ ಅಂಬಣ್ಣ ಅರಲೀಕರ್ ಮಾತನಾಡಿ, “ಪೊಲೀಸ್ ಅಧಿಕಾರಿಗಳು ಕೂಡಲೇ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಮಾಹಿತಿ ನೀಡಬೇಕು. ಜನ ಚಳಿ, ಮಳೆಯಲ್ಲಿ ರಸ್ತೆಯಲ್ಲಿ ಕುಳಿತಿದ್ದಾರೆ, ಸಚಿವರು ಎಲ್ಲಿ ಬೆಚ್ಚಗೆ ಮಲಗಿದ್ದಾರೆ” ಎಂದು ಪ್ರಶ್ನಿಸಿದರು.

ಒಳ ಮೀಸಲಾತಿ ಜಾರಿಗಾಗಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಜನರು ಕಾಲ್ನಡಿಗೆ ಮೂಲಕ ಆಗಮಿಸಿದ್ದು, ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಒಳಮೀಸಲಾತಿಗಾಗಿ ಮೂರು ದಶಕಗಳಿಂದ ಹೋರಾಟ ನಡೆಯುತ್ತಿದೆ. ಆದರೆ ಯಾವುದೇ ಸರ್ಕಾರಗಳು ನ್ಯಾಯ ಕೊಡದೆ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಸರ್ಕಾರ ಸದಾಶಿವ ಆಯೋಗ ರಚನೆ ಮಾಡಿದರೆ, ಬಿಜೆಪಿ ಸರ್ಕಾರ ಆಯೋಗದ ವರದಿ ಸ್ವೀಕರಿಸಿದ್ದು ಬಿಟ್ಟರೆ ಬೇರೆನೂ ಮಾಡಲಿಲ್ಲ. ಜೆಡಿಎಸ್ ಅಧಿಕಾರದಲ್ಲಿದ್ದಾಗ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.

ರಾಜ್ಯ ಸರ್ಕಾರಕ್ಕೆ ಇರುವ ಅಧಿಕಾರವನ್ನು ಉಪಯೋಗಿಸಿ ಪ್ರತ್ಯೇಕವಾಗಿ ಮಾದಿಗ- ಮಾದಿಗ ಸಂಬಂಧಿತ ಜಾತಿಗಳಿಗೆ ಶೇ. 6% ಮೀಸಲಾತಿಯನ್ನು ಮತ್ತು ಕಳೆದ ತಿಂಗಳು ನೀಡಿದಂತಹ ಶೇ. 2%ಗೆ ಹೆಚ್ಚುವರಿ ಮೀಸಲಾತಿಯನ್ನು ನೀಡಿ ಮಸೂದೆಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.  ಹಿಂದುಳಿದ ವರ್ಗಗಳ ಕಾಂತರಾಜು ವರದಿಯನ್ನು ಬಿಡುಗಡೆ ಮಾಡಬೇಕು ಮತ್ತು ಅದನ್ನು ಯತ್ತವತ್ತಾಗಿ ಜಾರಿ ಮಾಡಬೇಕು. ಕರ್ನಾಟಕ ರಾಜ್ಯದಲ್ಲಿರುವ 43 ಸಾವಿರ ಪೌರಕಾರ್ಮಿಕರು ಮತ್ತು ವಾಹನ ಚಾಲಕರನ್ನು ಕಾಯಂಗೊಳಿಸಬೇಕು. ಪರಿಶಿಷ್ಟ ಜಾತಿಗಳ ಎಸ್ಸಿಪಿ/ಟಿಎಸ್ಸಿಪಿ ಅನುದಾನವನ್ನು ಸಮಪರ್ಕವಾಗಿ ವಿನಿಯೋಗಿಸಬೇಕು. ರಾಜ್ಯದಲ್ಲಿರುವ ಎಲ್ಲಾ ಪೌರ ಕಾರ್ಮಿಕರ ಸಾಲವನ್ನು ಮನ್ನಾ ಮಾಡಬೇಕು ಮತ್ತು ಇತರೆ ಪ್ರಮುಖ ಬೇಡಿಕೆಗಳು ಒಳಗೊಂಡಿವೆ.

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿನ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಬಿ.ಕೃಷ್ಣಪ್ಪ ಅವರ ಸಮಾಧಿ ಬಳಿಯಿಂದ ನವೆಂಬರ್‌ 28ರಂದು ಹೊರಟಿದ್ದ ಪಾದಯಾತ್ರೆ 360 ಕಿಲೋ ಮೀಟರ್ ಕ್ರಮಿಸಿ ಇಂದು ಬೆಂಗಳೂರಿಗೆ ತಲುಪಿತು. ಸ್ವಾತಂತ್ರ್ಯ ಉದ್ಯಾನ ಬಳಿ ಸಾವಿರಾರು ಜನ ಸಮಾವೇಶಗೊಂಡಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಎಲ್ಲೆಲ್ಲೂ ನೀಲಿ ಬಾವುಟಗಳು ರಾರಾಜಿಸುತ್ತಿವೆ.

ಸುರಿಯುವ ಮಳೆಯಲ್ಲಿ ಸಾವಿರಾರು ಪ್ರತಿಭಟನಾಕಾರರು ಧರಣಿ ಕುಳಿತು, ಹೋರಾಟದ ಹಾಡುಗಳನ್ನು ಹಾಡುತ್ತಾ ಮುಖ್ಯಮಂತ್ರಿಗಳು ಬರಬೇಕೆಂದು ಆಗ್ರಹಿಸಿದರು.

Donate Janashakthi Media

Leave a Reply

Your email address will not be published. Required fields are marked *