ನವದೆಹಲಿ : ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿಯ ಮೂರು ಅವಧಿಗಳ ಆಡಳಿತವನ್ನು ಹಿಂದಿಕ್ಕಿ ಅಮ್ಆದ್ಮಿ ಪಕ್ಷ ಭರ್ಜರಿ ಬಹುಮತದಿಂದ ಅಧಿಕಾರ ಹಿಡಿದಿದೆ.
ದೇಶದ ರಾಜಧಾನಿ ದೆಹಲಿ ಮಹಾನಗರ ಪಾಲಿಕೆಯಲ್ಲಿನ 250 ಸ್ಥಾನಗಳಿದ್ದು, ಅಧಿಕಾರ ಹಿಡಿಯಲು 126 ಸ್ಥಾನಗಳನ್ನು ಗೆಲ್ಲಬೇಕಿದೆ. ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಮತ ಎಣಿಕೆಯಲ್ಲಿ ಬಿಜೆಪಿ ಮತ್ತು ಅಮ್ ಆದ್ಮಿಪಕ್ಷಗಳ ನಡುವೆ ರೋಚಕ ಪೈಪೊಟಿ ಮುಂದುವರೆದಿತ್ತು.
ಅಮ್ಆದ್ಮಿ ಪಕ್ಷ 134 ಕ್ಷೇತ್ರಗಳಲ್ಲಿ ಗೆಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿ 104ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, 15 ವರ್ಷಗಳಿಂದ ದೆಹಲಿಯ ಸ್ಥಳಿಯ ಆಡಳಿತದ ಮೇಲೆ ಹೊಂದಿದ್ದ ಹಿಡಿತವನ್ನು ಕಳೆದುಕೊಂಡಿದೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ 10ಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಕಳೆದ ಬಾರಿಯ ಪ್ರದರ್ಶನಕ್ಕಿಂತಲೂ ಕಳಪೆ ಸಾಧನೆ ಮಾಡಿದೆ. ಚುನಾವಣೋತ್ತರದಲ್ಲಿ ನಡೆದಿದ್ದ ಸಮೀಕ್ಷೆಯ ಪ್ರಕಾರ ಅಮ್ಆದ್ಮಿ ಸ್ಪಷ್ಟ ಬಹುಮತದೊಂದಿಗೆ ದೆಹಲಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ಅಂದಾಜುಗಳಿದ್ದವು. ನಿರೀಕ್ಷೆಯಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಅಮ್ಆದ್ಮಿ ಪಕ್ಷ ಗೆಲುವು ಸಾಧಿಸಿದೆ.
ಡಿ 4ರಂದು ನಡೆದಿದ್ದ ಚುನಾವಣೆಯಲ್ಲಿ 1349 ಅಭ್ಯರ್ಥಿಗಳು ಕಣದಲ್ಲಿದ್ದರು. ಚುನಾವಣಾ ಆಯೋಗ ಮತ ಎಣಿಕೆಗೆ 42 ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಿದ್ದಲ್ಲದೆ, ಬಿಗಿ ಬಂದೋಬಸ್ತ್ ಆಯೋಜಿಸಿತ್ತು. ಈ ಚುನಾವಣೆಯಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳು ಮಹಿಳಾ ಮತದಾರರ ಗಮನ ಸೆಳೆಯುವ ಯತ್ನ ನಡೆಸಿದ್ದವು.