ವಿಜಯನಗರ: ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ದಲಿತ ಪಿ.ಎಚ್ಡಿ ವಿದ್ಯಾರ್ಥಿಗಳಿಗೆ ಸುಮಾರು 30 ತಿಂಗಳಿನಿಂದ ಫೆಲೋಶಿಪ್ ಹಣ ಬಿಡುಗಡೆ ಮಾಡಿಲ್ಲ ಎಂದು ಹಲವು ಬಾರಿ ಪ್ರತಿಭಟನೆಗಳು ನಡೆದಿವೆ. ತೀವ್ರ ಪ್ರತಿಭಟನೆ ಬಳಿಕ ಸರ್ಕಾರ ಫಿಲೋಶಿಪ್ ಅನುದಾನವನ್ನು ಬಿಡುಗಡೆ ಮಾಡಿದೆ. ಆದರೆ, ಉಪಕುಲಪತಿಗಳು ವಿದ್ಯಾರ್ಥಿಗಳಿಗೆ ಫೆಲೋಶಿಪ್ ಬಿಡುಗಡೆ ಮಾಡಿಲ್ಲ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ), ಪ್ರತಿಭಟನೆ ನಡೆಸಿದೆ.
ಎಸ್ಎಫ್ಐ ರಾಜ್ಯ ಅಧ್ಯಕ್ಷ ಅಮರೇಶ ಕಡಗದ ಮಾತನಾಡಿ, ಪಿ.ಎಚ್ಡಿ ವ್ಯಾಸಂಗ ಮಾಡುತ್ತಿರುವ ದಲಿತ ವಿದ್ಯಾರ್ಥಿಗಳ ಹಣವನ್ನು ಬಿಡುಗಡೆ ಮಾಡಬೇಕೆಂದು ಎಸ್ಎಫ್ಐ ಹೋರಾಟ ನಡೆಸುತ್ತಾ ಬಂದಿದೆ. ಕೆಲವು ದಿನಗಳ ಹಿಂದೆ ಸರ್ಕಾರಿ ಕಾರ್ಯಕ್ರಮ ನಿಮಿತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನ್ನಡ ವಿಶ್ವವಿದ್ಯಾಲಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಪ್ರತಿಭಟನೆ ಮೂಲಕ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಡ ಹಾಕಲಾಯಿತು. ಇದರ ಪರಿಣಾಮ ಸ್ಥಳದಲ್ಲೇ ರೂ.25 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಘೋಷಿಸಿದರು.
ಸರ್ಕಾರ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಅನುದಾನದಲ್ಲಿ ಹಣ ಬಿಡುಗಡೆ ಮಾಡಿತು. ಆದರೆ ಆ ಹಣವನ್ನು ವಿದ್ಯಾರ್ಥಿಗಳ ಫೆಲೋಶಿಪ್ ಗೆ ಬಳಕೆ ಮಾಡಲು ಬರುವುದಿಲ್ಲ ಎಂದು ವಿಶ್ವವಿದ್ಯಾಲಯದ ಕುಲಪತಿಗಳು ತಿಳಿಸಿದರು. ಮತ್ತೆ ಎಲ್ಲಾ ಸಂಶೋಧನ ವಿದ್ಯಾರ್ಥಿಗಳು ಸಚಿವರ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಮುಖ್ಯಮಂತ್ರಿಗಳು ಘೋಷಣೆ ಮಾಡಿದ ಪ್ರಕಾರ 25 ಕೋಟಿ ಹಣ ಬಿಡುಗಡೆಗಾಗಿ ಮರು ಆದೇಶವನ್ನು ಮಾಡಿದರು. ಆ ಆದೇಶದ ಪ್ರಕಾರ 11 ಕೋಟಿ ಹಣವನ್ನು ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳಿಗೆ ಫೆಲೋಶಿಪ್ ಕೊಡಿ ಉಳಿದ ಹಣದಲ್ಲಿ ವಿಶ್ವವಿದ್ಯಾಲಯದ ನೌಕರರ ವೇತನ ಹಾಗೂ ವಿಶ್ವವಿದ್ಯಾಲಯಕ್ಕೆ ಬಳಕೆ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಸೂಚನೆ ಕೊಟ್ಟರು.
ಆದರೆ, ವಿಶ್ವವಿದ್ಯಾಲಯದ ಕುಲಪತಿಗಳು ನೌಕರರ ವೇತನ ಮಾತ್ರ ಬಿಡುಗಡೆ ಮಾಡಿದರೆ ವಿನಃ ಸುಮಾರು 30 ತಿಂಗಳನಿಂದ ಅನೇಕ ಭಾರಿ ಹೋರಾಟ ಮಾಡಿ ಫೆಲೋಶಿಪ್ ಬಿಡುಗಡೆಯಾಗುವುದೆಂದು ದಲಿತ ಸಮುದಾಯದ ಸಂಶೋಧನಾ ವಿದ್ಯಾರ್ಥಿ ಕಾದು ಕುಳಿತರೂ ಅನ್ಯವಾಗಿದೆ. ಕನ್ನಡ ವಿವಿ ಕುಲಪತಿಗಳ ದಲಿತ ವಿದ್ಯಾರ್ಥಿಗಳ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಇದಲ್ಲದೆ, ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಹಿಂಸೆ ಕೊಡುತ್ತಿರುವುದನ್ನು ಖಂಡಿಸಿದರು.
ದೇವರು ವರ ಕೊಟ್ಟರು ಪೂಜಾರಿ ವರ ಕೊಡಲಿಲ್ಲ ಎಂಬ ರೀತಿಯಲ್ಲಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದರು ಹಂಪಿ ಕನ್ನಡ ವಿವಿ ಉಪಕುಲಪತಿಗಳ ದಲಿತ ಸಮುದಾಯದ ವಿದ್ಯಾರ್ಥಿ ವಿರೋಧಿ ನೀತಿಯಿಂದಾಗಿ ನೂರಾರು ದಲಿತ ಸಮುದಾಯದ ಸಂಶೋಧನಾ ವಿದ್ಯಾರ್ಥಿಗಳು ಫೆಲೋಶಿಪ್ ಹಣದಿಂದ ಬಿಡುಗಡೆಯಾಗದೆ ವಂಚನೆಗೆ ಒಳಗಾಗಿದ್ದೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿಗೆ ಬಹಿರಂಗೊಂಡ ವರದಿಗಳಂತೆ, ಸರ್ಕಾರಿ ಇಲಾಖೆಯ ದಲಿತ ವಿರೋಧಿ ನಡೆ ವ್ಯಾಪಕಗೊಂಡಿದ್ದು, ಎಸ್ಸಿಪಿ, ಟಿಎಸ್ಪಿ ಅನುದಾನ ಸರಿಯಾಗಿ ಬಳಕೆ ಮಾಡದ ಅಧಿಕಾರಿಗಳ ಮೇಲೆ ಸರಕಾರ ಪ್ರಕರಣ ದಾಖಲು ಮಾಡವುದರ ಮೂಲಕ ಅಧಿಕಾರಿಗಳಿಗೆ ಎಚ್ಚರಿಕೆ ಕೊಡಬೇಕೆಂದು ಎಸ್ಎಫ್ಐ ಸಂಘಟನೆ ಮುಖ್ಯಮಂತ್ರಿಗಳಲ್ಲಿ ಒತ್ತಾಯ ಮಾಡುತ್ತದೆ. ಅಲ್ಲದೆ ಅನವಶ್ಯಕವಾಗಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಉಪಕುಲಪತಿಗಳ ಕಿರುಕುಳ ಕೊಡುವುದನ್ನು ಬಿಟ್ಟು ಎಲ್ಲಾ ವಿದ್ಯಾರ್ಥಿಗಳಿಗೆ ಹಣ ಬಿಡುಗಡೆ ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.