ಬೆಂಗಳೂರು: ಎರಡನೇ ಸ್ನಾತಕೋತ್ತರ ಪದವಿಗೆ ದಾಖಲಾಗುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶ ಕೋರಿ ಅರ್ಜಿ ಸಲ್ಲಿಸಿದರೆ ಕಡ್ಡಾಯವಾಗಿ ಅವಕಾಶ ನೀಡಬಾರದು ಎಂದು ಬೆಂಗಳೂರು ವಿಶ್ವವಿದ್ಯಾಲಯ ಸುತ್ತೋಲೆ ಹೊರಡಿಸಿದೆ.
ಒಂದು ಬಾರಿ ಸ್ನಾತಕೋತ್ತರ ಪದವಿ ಪಡೆಯುವಾಗ ಹಾಸ್ಟೆಲ್ ಸೌಲಭ್ಯ ಪಡೆದುಕೊಂಡಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಬೇರೊಂದು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪ್ರವೇಶ ಪಡೆದುಕೊಳ್ಳಲು ಹಾಸ್ಟೆಲ್ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದರೆ ಸರ್ಕಾರಿ ಆದೇಶದಂತೆ ಅವಕಾಶ ನೀಡಲು ಬರುವುದಿಲ್ಲ. ಆದ್ದರಿಂದ ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಎಲ್ಲ ಪ್ರಧಾನ ಕ್ಷೇಮಪಾಲಕರು ವಿದ್ಯಾರ್ಥಿಗಳ ವಿವರಗಳನ್ನು ಪರಿಶೀಲಿಸಿ ಮುಚ್ಚಳಿಕೆ ಬರೆದುಕೊಂಡು ಪ್ರವೇಶ ನೀಡಬೇಕು ಎಂದು ಕುಲಸಚಿವರು ಡಿಸೆಂಬರ್ 02ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಇದನ್ನು ಸೂಕ್ಷ್ಮವಾಗಿ ಪರಿಗಣಿಸಿ, ಪ್ರವೇಶ ನೀಡುವ ಸಮಯದಲ್ಲಿ ಎಲ್ಲ ದಾಖಲೆಗಳನ್ನು ಪರಿಶೀಲಿಸಬೇಕು. ಮೊದಲ ಪದವಿಯೇ, ಎರಡನೇ ಬಾರಿ ಪದವಿಗೆ ಪ್ರವೇಶ ಪಡೆಯುತ್ತಿದ್ದಾರೆಯೇ ಎನ್ನುವುದನ್ನು ಖಾತ್ರಿಪಡಿಸಬೇಕೆಂದು ಸೂಚನೆ ನೀಡಲಾಗಿದೆ.
ಬೆಂಗಳೂರು ವಿವಿಯ ಸುತ್ತೋಲೆಗೆ ಆಕ್ಷೇಪ ವ್ಯಕ್ತಪಡಿಸಿರುವ, ಎಸ್ಎಫ್ಐ ಮುಖಂಡ ಶಿವಕುಮಾರ್ ಮ್ಯಾಗಲಮನಿ ಮೊದಲ ವರ್ಷಕ್ಕೆ ಹಾಸ್ಟೆಲ್ ಸೌಲಭ್ಯವಿದೆ, ಎರಡನೇ ವರ್ಷಕ್ಕೆ ಹಾಸ್ಟೆಲ್ ಸೌಲಭ್ಯ ಇಲ್ಲ ಎನ್ನುವ ಬೆಂಗಳೂರು ವಿಶ್ವವಿದ್ಯಾಲಯದ ಆದೇಶ ಮೂರ್ಖತನದ್ದಾಗಿದೆ.
ಇದು ಅತ್ಯಂತ ಸ್ಪಷ್ಟವಾಗಿ ಸಂವಿಧಾನ ವಿರೋಧ ಕ್ರಮವಾಗಿದೆ. ಪ್ರವೇಶಾತಿಯನ್ನು ಪಡೆದು ಅಧ್ಯಾಯನ ಪೂರ್ಣಗೊಳ್ಳುವವರೆಗೂ ಹಾಸ್ಟೆಲ್ ಸೌಲಭ್ಯ ನೀಡಬೇಕಾದದ್ದು ವಿಶ್ವವಿದ್ಯಾಲಯದ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಯುಜಿಸಿ ಸೇರಿ ಅನೇಕ ಮಾರ್ಗಸೂಚಿ ಮತ್ತು ನಿಯಮಗಳಿವೆ. ಹೀಗಿದ್ದರೂ ಈ ಹಾಸ್ಟೆಲ್ ನಿರಾಕರಣೆ ದಲಿತ ವಿದ್ಯಾರ್ಥಿಗಳು ಮತ್ತು ಇತರೆ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ವಂಚಿಸುವ ಹುನ್ನಾರವಾಗಿದೆ ಎಂದು ಖಂಡಿಸಿದ್ದಾರೆ.
ಕೆಪಿಸಿಸಿ ವಕ್ತಾರ ರಮೇಶ್ ಬಾಬು ಬೆಂಗಳೂರು ವಿವಿ ಸುತ್ತೋಲೆಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಉನ್ನತ ಶಿಕ್ಷಣ ಸಚಿವರ ಸೂಚನೆಯಂತೆ ಸುತ್ತೋಲೆ ಹೊರಡಿಸಲಾಗಿದೆ. ಇಂತಹ ನಡೆ ಬಿಜೆಪಿಯ ದಲಿತ ವಿರೋಧಿ ಹಾಗೂ ದಲಿತರ ಶಿಕ್ಷಣಕ್ಕೆ ಅಡ್ಡಿಪಡಿಸುವ ಮನೋಸ್ಥಿತಿಯ ಗುಪ್ತ ಕಾರ್ಯಸೂಚಿ ಎಂದಿದ್ದಾರೆ.