ದ.ರಾ.ಬೇಂದ್ರೆ
ಸಂಪುಟ – 06, ಸಂಚಿಕೆ 31, ಜುಲೈ 29, 2012
ಭೂಮಿ ತಾಯಿಯಾ
ಚೊಚ್ಚಿಲ ಮಗನನು
ಕಣ್ತೆರೆದೊಮ್ಮೆ
ನೋಡಿಹರೇನು?
ಮುಗಿಲೆಂಬುವದು
ಕಿಸಿದಿತು ಹಲ್ಲು!
ಬಂದಾ ಬೆಳೆಯು
ಮಿಡಿಚಿಯ ಮೇವು:
ಬಿತ್ತಿದ್ದಾಯಿತು
ಉತ್ತಿಹ ಮಣ್ಣು!
ದಿನವೂ ಸಂಜೆಗೆ
ಬೆವರಿನ ಜಳಕ,
ಉಸಿರಿನ ಕೂಳಿಗೆ
ಕಂಬನಿ ನೀರು!
ಹೊಟ್ಟೆಯು ಹತ್ತಿತು
ಬೆನ್ನಿನ ಬೆನ್ನು!
ಎದೆಯ ಗೂಡಿನೊಳು
ಚಿಂತೆಯ ಗೂಗಿ!
ಮಿದುಳಿನ ಮೂಲೆಗೆ
ಲೊಟ ಲೊಟ ಹಲ್ಲಿ
ಮೋರೆಯು ಸಾವನು
ಅಣಕಿಸುತಿಹುದು
ಕೊರಳಿಗೆ ಹತ್ತಿದೆ
ಸಾಲದ ಶೂಲ!
ಆದರು ಬರದೋ
ಯಮನಿಗೆ ಕರುಣ
ಉಸಿರಿಗೆ ಒಮ್ಮೆ
ಜನನಾ ಮರಣ
ನರಗಳ ನೂಲಿನ
ಪರೆಪರೆ ಚೀಲಾ
ತೆರೆ ತೆರೆಯಾಗಿದೆ
ಜಿರಿಜಿರಿಯಾಗಿದೆ;
ಅದರೊಳಗೊಂದು
ಎಲುವಿನ ಬಲೆಯು
ಟುಕು ಟುಕು ಡುಗು ಡುಗು
ಉಲಿಯುವ ನರಳುವ
ಜೀವದ ಜಂತು
ಹೊರಳುತ ಹೊರಳುತ;
ಜನುಮವೆಂಬುವಾ
ಕತ್ತಲೆಯಲ್ಲಿ
ಬಿದ್ದಿದೆ ಒಳಗೆ
ಹೇಗೋ ಬಂದು!
ಸಾವಿನ ಬೆಳಕದು
ಕಾಣುವುದೆಂದು?