ಬೆಂಗಳೂರು : ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ 205 ಕೆಜಿ ಈರುಳ್ಳಿ ಮಾರಾಟ ಮಾಡಿ ಗದಗದ ರೈತರೊಬ್ಬರೊಬ್ಬರ ಕೈಗೆ ಸಿಕ್ಕ ಹಣ ಕೇವ 8.36 ರೂಪಾಯಿ. ಇದು ಸಾಕಷ್ಟು ಆಘಾತಕಾರಿಯಾಗಿದೆ. ತನಗೆ ಆದ ಸಮಸ್ಯೆ ಬೇರೆ ಯಾವ ರೈತರಿಗೂ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಈರುಳ್ಳಿ ಮಾರಾಟದ ಬಿಲ್ ಅನ್ನು ತಿಮ್ಮಾಪುರ ಗ್ರಾಮದ ರೈತ ಪಾವಡೆಪ್ಪ ಹಳ್ಳಿಕೇರಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ಇದರ ಫೋಟೋ ವೈರಲ್ ಆಗುತ್ತಿದೆ.
ಯಶವಂತಪುರ ಮಾರುಕಟ್ಟೆಯಲ್ಲಿಈರುಳ್ಳಿ ಮಾರಾಟ ಮಾಡಲು ಸುಮಾರು 50 ರೈತರು 415 ಕಿಮೀ ನಿಂದ ಬರುತ್ತಾರೆ, ಕ್ವಿಂಟಾಲ್ ಈರುಳ್ಳಿಗೆ 500 ರು ಇದ್ದ ಬೆಲೆ ಏಕಾ ಏಕಿ 200 ರುಪಾಯಿಗೆ ಕುಸಿದಿದೆ. ಅಷ್ಟು ದೂರದಿಂದ ಬಂದು ಮತ್ತೆ ವಾಪಸ್ಸ ಊರಿಗೆ ಈರುಳ್ಳಿ ತೆಗೆದುಕೊಂಡು ಹೋಗವುದು ಕಷ್ಟ ಎಂದು ಮಾರಾಟ ಮಾಡಿದ್ದಾರೆ. ಬಿಲ್ ವಿತರಿಸಿದ ಸಗಟು ವ್ಯಾಪಾರಿ ಈರುಳ್ಳಿಯನ್ನು ಕ್ವಿಂಟಾಲ್ಗೆ 200 ರೂ. ಎಂದು ಮೌಲ್ಯೀಕರಿಸಿದ್ದಾರೆ. ಆದರೆ ಪೋರ್ಟರ್ ಶುಲ್ಕವಾಗಿ 24 ರೂ., ಸರಕು ಸಾಗಣೆಗೆ 377.64 ರೂ.ಗಳನ್ನು ಕಡಿತಗೊಳಿಸಿದ ನಂತರ ಪಾವಡೆಪ್ಪ ಹಳ್ಳಿಕೇರಿ ಅವರಿಗೆ 8.36 ರೂ.ಗಳನ್ನು ನೀಡಿದ್ದಾರೆ.
ಇದನ್ನೂ ಓದಿ : ಎಂಎಸ್ಪಿ ಖಾತರಿಗೆ ಆಗ್ರಹ: ದೆಹಲಿಯಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಸೇರಿದ ರೈತರು
“ಈ ವರ್ಷ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಗದಗದ ನಾವು ರೈತರು ಬಾಧಿತರಾಗಿದ್ದೇವೆ. ನಾವು ಬೆಳೆದ ಈರುಳ್ಳಿ ಗಾತ್ರದಲ್ಲಿ ಚಿಕ್ಕದಾಗಿದೆ. ಪುಣೆ ಮತ್ತು ತಮಿಳುನಾಡಿನಿಂದ ತಮ್ಮ ಉತ್ಪನ್ನಗಳನ್ನು ಯಶವಂತಪುರಕ್ಕೆ ತರುವ ರೈತರು ತಮ್ಮ ಬೆಳೆ ಉತ್ತಮವಾಗಿರುವುದರಿಂದ ಉತ್ತಮ ಬೆಲೆಯನ್ನು ಪಡೆಯುತ್ತಿದ್ದಾರೆ. ಆದರೂ ನಾವ್ಯಾರೂ ಬೆಲೆ ಇಷ್ಟು ಕಡಿಮೆ ಇರುತ್ತದೆ ಎಂದು ನಿರೀಕ್ಷಿಸಿರಲಿಲ್ಲ” ಎಂದು ನೊಂದ ರೈತ ಪಾವಡೆಪ್ಪ ಮಾಧ್ಯಮದ ಮುಂದೆ ಸಂಕಷ್ಟ ತೋಡಿಕೊಂಡಿದ್ದಾರೆ.
ರೈತರು ಬೆಳೆದ ಉತ್ಪನ್ನಗಳಿಗೆ ರಾಜ್ಯ ಸರಕಾರ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸದೆ ಇರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕೇವಲ 8 ರೂ ಪಡೆಯುವುದು ಎಂದರೆ ಯಾವ ನ್ಯಾಯ? ರೈತರ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.