ಕಿತ್ತೂರು ತಹಶೀಲ್ದಾರ್ ಲೋಕಾಯುಕ್ತ ಬಲೆಗೆ: 10 ಲಕ್ಷ ನಗದು ವಶ

ಬೆಳಗಾವಿ: ಜಮೀನು ಖಾತೆ ಬದಲಾವಣೆ ಸಂಬಂಧಿಸಿದಂತೆ ಲಂಚ ಸ್ವೀಕರಿಸುತ್ತಿದ್ದ ವೇಳೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಹಶೀಲ್ದಾರ್ ಸೋಮಲಿಂಗಪ್ಪ ಹಲಗಿ ಹಾಗೂ ಕೇಸ್ ವರ್ಕರ್ ಪ್ರಸನ್ನ ಜಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಶುಕ್ರವಾರ ₹2 ಲಕ್ಷ ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದ ತಹಶೀಲ್ದಾರ್‌ ಸೋಮಲಿಂಗಪ್ಪ ಹಲಗಿ ಹಾಗೂ  ಗುಮಾಸ್ತ ಜಿ.ಪ್ರಸನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಸೋಮಲಿಂಗಪ್ಪ ಮನೆ ಹಾಗೂ ಕಚೇರಿಯನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ತಡರಾತ್ರಿವರೆಗೂ ಪರಿಶೀಲನೆ ನಡೆಸಿದ್ದು, ಹಲವು ದಾಖಲೆಗಳು ಹಾಗೂ ₹10 ಲಕ್ಷಕ್ಕೂ ಅಧಿಕ ನಗದು ಪತ್ತೆ ಹಚ್ಚಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಹಶೀಲ್ದಾರ್ ಮನೆಯಲ್ಲಿಯೇ ಜಮೀನಿನ ಖಾತೆ ಬದಲಾವಣೆ ಮಾಡಲು 2 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು  ದಾಳಿ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಬೆಳಗಾವಿ ಎಸ್‍ಪಿ ಯಶೋಧಾ ವಂಟಗೂಡಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾಗಿ ಅಪೂರ್ಣ ಹುಲಗೂರ ತಂಡದ ಸಿಬ್ಬಂದಿ ಭಾಗಿಯಾಗಿದ್ದರು.

ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಖೋದನಾಪುರ ಗ್ರಾಮದ ರಾಜೇಂದ್ರ ಬಾಪುಸಾಜೇಬ ಇನಾಮದಾರ ತಮ್ಮ
ತಂದೆ ಬಾಪುಸಾಹೇಬ್ ಇನಾಮದಾರ ಅವರ ಹೆಸರಿನಲ್ಲಿದ್ದ 10 ಎಕರೆ ಜಮೀನಿನನ್ನು ತಮ್ಮ ಹೆಸರಿಗೆ ಖಾತಾ ಬದಲಾವಣೆ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಆರೋಪಿಗಳು ಇದಕ್ಕೆ ₹5 ಲಕ್ಷ ಲಂಚ ಕೇಳಿದ್ದರು. ಮುಂಗಡವಾಗಿ ₹2 ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ರೈತ ರಾಜೇಂದ್ರ ಇನಾಮದಾರ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಇಂದು ಬೆಳಿಗ್ಗೆ ಇಬ್ಬರನ್ನೂ ಬೆಳಗಾವಿಗೆ ಕರೆತಂದು, ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿದರು. ಬಳಿಕ ಲೋಕಾಯುಕ್ತ  ನ್ಯಾಯಾಧೀಶರ ಮನೆಗೆ ಆರೋಪಿತರನ್ನು ಕರೆದೊಯ್ದರು. ಅಲ್ಲಿಂದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.

ಜಮೀನಿನ ಖಾತಾ ಬದಲಾವಣೆಗಾಗಿ ರಾಜೇಂದ್ರ ಅವರಿಂದ ₹2 ಲಕ್ಷ ಲಂಚ ಪಡೆಯುತ್ತಿದ್ದ ವೇಳೆಯೇ ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಹಾಗೂ ಗುಮಾಸ್ತ ಜಿ.ಪ್ರಸನ್ನ ಲೋಕಾಯುಕ್ತರ ಬಲೆಗೆ ಬಿದ್ದರು.

ಆರೋಪಿಗಳ ಲಂಚ ಸ್ವೀಕಾರ ವಿಚಾರ ಹಾಗೂ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿರುವ ವಿಚಾರ ಗ್ರಾಮದಲ್ಲಿ ಕಾಳ್ಗಿಚ್ಚಿನಂತೆ ಹರಡಿತು.  ಇದರ ಬೆನ್ನಲ್ಲೆ ತಮ್ಮ ಜಮೀನಿನ ವಿಚಾರ ಇಷ್ಟು ದೊಡ್ಡ ಪ್ರಕರಣವಾಯಿತು ಎಂದು ಆಘಾತಗೊಂಡು ರಾಜೇಂದ್ರ ಅವರ ತಂದೆ ಬಾಪುಸಾಹೇಬ್ ಶುಕ್ರವಾರ ತಡರಾತ್ರಿ 1.30ರ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟದ್ದಾರೆ.

Donate Janashakthi Media

Leave a Reply

Your email address will not be published. Required fields are marked *