ಗಡಿ ವಿವಾದ ಮಹಾರಾಷ್ಟ್ರದಲ್ಲಿ ಉದ್ವಿಗ್ನ: ಬೆಳಗಾವಿಗೆ ಹೊರಡುವ 300ಕ್ಕೂ ಹೆಚ್ಚು ಬಸ್ಸುಗಳ ಸಂಚಾರ ಸ್ಥಗಿತ

ಬೆಳಗಾವಿ : ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ದೌಂಡ್ ಗ್ರಾಮದಲ್ಲಿ ಕೆಲವರು ಕರ್ನಾಟಕದ ಬಸ್ಸು​ಗಳಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಇದರಿಂದಾಗಿ ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುತ್ತಿದ್ದ 300ಕ್ಕೂ ಹೆಚ್ಚು ಬಸ್ಸುಗಳ ಸಂಚಾರ ತಾತ್ಕಾಲಿಕ ಸ್ಥಗಿತವಾಗಿದೆ.

ಮಹಾರಾಷ್ಟ್ರದಿಂದ ನಿತ್ಯ ಬೆಳಗಾವಿ, ಚಿಕ್ಕೋಡಿ ಸೇರಿದಂತೆ ರಾಜ್ಯದ ಹಲವು ಭಾಗಗಳಿಗೆ ಮಹಾರಾಷ್ಟ್ರ (ಎಮ್‌ಎಸ್‌ಆರ್‌ಟಿಸಿ) ಬಸ್​​ಗಳು ಸಂಚಾರ ಮಾಡುತ್ತವೆ. ಇನ್ನೂ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಎಂದಿನಂತೆ ಕರ್ನಾಟಕ ಸಾರಿಗೆ ಬಸ್​​ಗಳು ತೆರಳುತ್ತಿವೆ‌. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುತ್ತಿದ್ದ 300ಕ್ಕೂ ಅಧಿಕ ಬಸ್‌‌ಗಳ ಸಂಚಾರವನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.

ಬೆಳಗಾವಿಯಲ್ಲಿ ಕನ್ನಡ ಪರ ಹೋರಾಟಗಾರರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಮಹಾರಾಷ್ಟ್ರದ ಬಸ್‌ಗಳ ಮೇಲೆ ಬರಹ ಬರೆಯದಂತೆ ಹೋರಾಟಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಎರಡೂ ರಾಜ್ಯಗಳ ನಡುವಿನ ಸಂಚಾರಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಎರಡು ರಾಜ್ಯಗಳ ರಾಜಕೀಯ ನಾಯಕರು ಹೇಳಿಕೆ ನೀಡಿದ ಬೆನ್ನಲ್ಲೇ ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಗಡಿ ವಿವಾದದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ಖಂಡಿಸಿ ಮರಾಠ ಮಹಾಸಂಘ ಪ್ರತಿಭಟನೆ ನಡೆಸಿದೆ.

ಗಡಿ ವಿವಾದ ಕುರಿತು ಇತ್ತೀಚೆಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ‘ನಿಪ್ಪಾಣಿ, ಬೆಳಗಾವಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ’ ಎಂದು ಹೇಳಿಕೆ ನೀಡಿದ್ದರು.

ಫಡಣವೀಸ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಅಕ್ಕಲಕೋಟೆ ಕರ್ನಾಟಕದ ಭಾಗವಾಗಬೇಕು ಎಂಬುದು ನಮ್ಮ ಆಗ್ರಹ ಎಂದಿದ್ದಾರೆ. ಅಲ್ಲದೆ, ಫಡಣವೀಸ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ‘ಫಡಣವೀಸ್‌ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ಕನಸು ಎಂದಿಗೂ ನನಸಾಗುವುದಿಲ್ಲ. ರಾಜ್ಯದ ನೆಲ, ಜಲ, ಗಡಿ ರಕ್ಷಿಸಲು ನಮ್ಮ ಸರ್ಕಾರ ಕಟಿಬದ್ಧ’ ಎಂದು ಸ್ಪಷ್ಟಪಡಿಸಿದ್ದರು.

‘ರಾಜ್ಯದ ಒಂದಿಂಚು ಜಾಗವನ್ನೂ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಮಹಾರಾಷ್ಟ್ರದಲ್ಲಿರುವ ಕನ್ನಡ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂಬುದು ನಮ್ಮ ಆಗ್ರಹ. ಮಹಾರಾಷ್ಟ್ರ ಸರ್ಕಾರವು ಗಡಿ ವಿಚಾರದಲ್ಲಿ ಕ್ಯಾತೆ ತೆಗೆದು 2004ರಿಂದಲೂ ದಾವೆಗಳನ್ನು ಹೂಡುತ್ತಿದೆ. ಈವರೆಗೂ ಯಶಸ್ವಿಯಾಗಿಲ್ಲ. ಮುಂದೆಯೂ ಆಗುವುದಿಲ್ಲ’ ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *