ಮಂಗಳೂರು: ಭಾರಿ ಪ್ರತಿಭಟನೆ, ಅನಿರ್ದಿಷ್ಟಾವಧಿ ಹೋರಾಟದ ಹೋರಾಟದ ಬಳಿಕ ಇದೀಗ ಸುರತ್ಕಲ್ ಎನ್‌ಐಟಿಕೆ ಸಮೀಪದ ಟೋಲ್‌ಗೇಟ್ ಅನ್ನು ರದ್ದುಗೊಳಿಸುವ ಕುರಿತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದ್ದು, ಡಿಸೆಂಬರ್ 1 ರಿಂದ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಹೆಚ್ಚುವರಿ ದರ ವಸೂಲಿಯಾಗಲಿದೆ ಎಂದು ತಿಳಿಸಿದೆ.
ಸುರತ್ಕಲ್ ಟೋಲ್ ಅನ್ನು ರದ್ದುಗೊಳಿಸುವ ಬದಲಾಗಿ, ಅದನ್ನು ಹೆಜಮಾಡಿ ಟೋಲ್ ಜತೆ ವಿಲೀನಗೊಳಿಸಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದ್ದು, ಈ ಸಂಬಂಧ ಉಡುಪಿ ಜಿಲ್ಲಾಡಳಿತಕ್ಕೆ ಪ್ರಾಧಿಕಾರ ಪತ್ರ ಬರೆದಿದೆ.
ಸುರತ್ಕಲ್-ಬಿಸಿ ರೋಡ್ ನಡುವಿನ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಸಿದ್ದ ಇರ್ಕಾನ್ ಪರವಾಗಿ ಹೆದ್ದಾರಿ ಪ್ರಾಧಿಕಾರ ಸುರತ್ಕಲ್‌ನಲ್ಲಿಅಳವಡಿಸಿದ್ದ ಟೋಲ್ ಸಂಗ್ರಹವನ್ನು ಹೆಜಮಾಡಿ ನವಯುಗದ ಕಂಪನಿಯ ಟೋಲ್‌ಗೇಟ್ ಜತೆ ವಿಲೀನಗೊಳಿಸಲಾಗಿದೆ. ಸುರತ್ಕಲ್‌ನ ಸುಂಕ ದರವನ್ನೂ ಹೆಜಮಾಡಿ ಜತೆ ಸೇರ್ಪಡೆ ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿದೆ.
ಟೋಲ್ ಸಂಗ್ರಹ ಸಂದರ್ಭ ಕಾನೂನು ಸುವ್ಯವಸ್ಥೆಗೆ ತೊಡಕಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಹೆಜಮಾಡಿಯಲ್ಲಿ ದರ ಏರಿಕೆಯಾದ ಸುಂಕ ಸಂಗ್ರಹದಲ್ಲಿ ವ್ಯತ್ಯಯ ಉಂಟಾದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜತೆಗಿನ ರಾಜ್ಯ ಸರಕಾರದ ಒಪ್ಪಂದದಂತೆ ನಷ್ಟವನ್ನು ರಾಜ್ಯ ಸರಕಾರ ಭರಿಸಬೇಕಾಗುತ್ತದೆ. ಉಡುಪಿ ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಹಾಯ, ನೆರವು, ಪೊಲೀಸ್ ಭದ್ರತೆ ಒದಗಿಸಬೇಕು. ಇದು ಡಿಸೆಂಬರ್ 1ರ ಮಧ್ಯರಾತ್ರಿಯಿಂದಲೇ ಚಾಲ್ತಿಗೆ ಬರಲಿದೆ ಎಂದು ಉಡುಪಿ ಜಿಲ್ಲಾಡಳಿತಕ್ಕೆ ಬರೆದ ಪತ್ರದಲ್ಲಿ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಎಚ್‌ಎಸ್ ಲಿಂಗೇಗೌಡ ತಿಳಿಸಿದ್ದಾರೆ.
ಹೆಜಮಾಡಿ ಜತೆ ವಿಲೀನ ಬಳಿಕ ಪರಿಷ್ಕೃತ ದರ
ಕಾರು, ಜೀಪು, ವ್ಯಾನ್ ಸಹಿತ ಲಘು ವಾಹನ: ಸುರತ್ಕಲ್ ಟೋಲ್ ಏಕಮುಖ ಸಂಚಾರಕ್ಕೆ ಇದ್ದ ದರ 60, ಹೆಜಮಾಡಿ ದರ 40, ಇನ್ನು ಜಾರಿಯಾದ ಹೊಸ ದರ 100 ರೂ. – ಪ್ರವೇಶ ಮತ್ತು ವಾಪಸ್ಸಾತಿ ಸಂಚಾರ ದರ- 90 ಮತ್ತು 65 ಸೇರಿ 155 ರೂ. / 50 ಬಾರಿ ಸಂಚಾರದ ಮಾಸಿಕ ಪಾಸು ದರ 2,050 ಮತ್ತು 1,410 ಸೇರಿ 3,460 ರೂ.
ಲಘು ವಾಣಿಜ್ಯ ವಾಹನ, ಲಘು ಗೂಡ್ಸ್ ವಾಹನ/ ಮಿನಿ ಬಸ್: ಸುರತ್ಕಲ್ ಟೋಲ್ ಏಕಮುಖ ಸಂಚಾರಕ್ಕೆ ಇದ್ದ ದರ 100, ಹೆಜಮಾಡಿ ದರ 70, ಇನ್ನು ಜಾರಿಯಾದ ಹೊಸ ದರ 170 ರೂ. ಪ್ರವೇಶ ಮತ್ತು ವಾಪಸ್ಸಾತಿ ಸಂಚಾರ ದರ -150 ಮತ್ತು 100 ಸೇರಿ 250 ರೂ. / 50 ಬಾರಿ ಸಂಚಾರದ ಮಾಸಿಕ ಪಾಸು ದರ 3315 ಮತ್ತು 2275 ಸೇರಿ 5590 ರೂ.
ಬಸ್ ಅಥವಾ ಟ್ರಕ್(ಎರಡು ಆ್ಯಕ್ಸಿಲ್): ಸುರತ್ಕಲ್ ಟೋಲ್ ಏಕಮುಖ ಸಂಚಾರಕ್ಕೆ ಇದ್ದ ದರ 210, ಹೆಜಮಾಡಿ ದರ 145, ಇನ್ನು ಜಾರಿಯಾದ ಹೊಸ ದರ 355 ರೂ. – ಪ್ರವೇಶ ಮತ್ತು ವಾಪಸ್ಸಾತಿ ದರ- 310 ಮತ್ತು 215 ಸೇರಿ 525 ರೂ. / 50 ಬಾರಿ ಸಂಚಾರದ ಮಾಸಿಕ ಪಾಸು ದರ 6,940 ಮತ್ತು 4,765 ಸೇರಿ 11,705 ರೂ.
ಭಾರೀ ನಿರ್ಮಾಣ ಯಂತ್ರೋಪಕರಣಗಳು, ಬೃಹತ್ ಉಪಕರಣಗಳು ಮತ್ತು ಮಲ್ಟಿಆಕ್ಸಲ್ ವಾಹನ: ಸುರತ್ಕಲ್ ಟೋಲ್ ಏಕಮುಖ ಸಂಚಾರಕ್ಕೆ ಇದ್ದ ದರ 325, ಹೆಜಮಾಡಿ ದರ 225, ಇನ್ನು ಜಾರಿಯಾದ ಹೊಸ ದರ 550 ರೂ. – ಪ್ರವೇಶ ಮತ್ತು ವಾಪಸ್ಸಾತಿ ಸಂಚಾರ ದರ- 490 ಮತ್ತು 335 ಸೇರಿ 825 ರೂ. / 50 ಬಾರಿ ಸಂಚಾರದ ಮಾಸಿಕ ಪಾಸು ದರ 10,885 ಮತ್ತು 7,475 ಸೇರಿ 18,360 ರೂ.
7 ಅಥವಾ ಹೆಚ್ಚಿನ ಅತೀ ಗಾತ್ರದ ವಾಹನಗಳಿಗೆ: ಸುರತ್ಕಲ್ ಟೋಲ್ ಏಕಮುಖ ಸಂಚಾರಕ್ಕೆ ಇದ್ದ ದರ 400, ಹೆಜಮಾಡಿ ದರ 275, ಇನ್ನು ಜಾರಿಯಾದ ಹೊಸ ದರ 675 ರೂ.(ಮಾಸಿಕ ಪಾಸ್ 315 ರೂ.) – ಪ್ರವೇಶ ಮತ್ತು ವಾಪಸ್ಸಾತಿ ದರ – 595 ಮತ್ತು 410 ಸೇರಿ 1,005 ರೂ. / 50 ಬಾರಿ ಸಂಚಾರದ ಮಾಸಿಕ ಪಾಸು ದರ 13,250 ಮತ್ತು 9,100 ಸೇರಿ 22,350 ರೂ.
ಸುರತ್ಕಲ್ ಟೋಲ್ ಸಂಗ್ರಹಿಸಿದ ನೂರಾರು ಕೋಟಿ ಎಲ್ಲಿ?
ಟೋಲ್ ವಿಲೀನಗೊಳಿಸಿ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಪತ್ರ ಬರೆದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಅವರು, ಸುರತ್ಕಲ್ ಟೋಲ್ ದರವನ್ನು ಪೂರ್ತಿಯಾಗಿ ಸೇರಿಸಿ ಹೆಜಮಾಡಿಯಲ್ಲಿ ಸುಲಿಗೆ ನಡೆಸಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಇದು ತುಳುನಾಡಿನ ಜನತೆಗೆ ಎಸಗಿದ ಮಹಾ ಮೋಸ ಎಂದಿದ್ದಾರೆ. ಜನವಿರೋಧಿ ಸರಕಾರ ಮಾತ್ರ ಹೀಗೆ ಮಾಡಲು ಸಾಧ್ಯ. ಹಾಗಾದರೆ ಏಳು ವರ್ಷ ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಸಂಗ್ರಹಿಸಿದ ನೂರಾರು ಕೋಟಿ ರೂ.ಗೆ ಬೆಲೆಯೇ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಜನರ ಭಾವನೆ, ಕಷ್ಟ ಸುಖಗಳ ಬಗ್ಗೆ ಅರಿವಿಲ್ಲದ ಸಂಸದ, ಶಾಸಕರು ಮಾತ್ರ ಹೀಗೆ ನಡೆದುಕೊಳ್ಳಲು ಸಾಧ್ಯ. ಮತ ಹಾಕುವ ಇಲ್ಲಿನ ಜನರಿಗಿಂತ ನವಯುಗ ಟೋಲ್ ಕಂಪೆನಿಯ ಹಿತ ಮಾತ್ರ ಜನಪ್ರತಿನಿಧಿಗಳಿಗೆ ಮುಖ್ಯವಾಯಿತು. ಜನತೆ ಇದನ್ನು ಒಪ್ಪಬಾರದು. ಅವಿಭಜಿತ ಜಿಲ್ಲೆಯ ಜನ ಏಕಧ್ವನಿಯಾಗಿ ಈ ಅತ್ಯಂತ ಕೆಟ್ಟ ನಿರ್ಧಾರವನ್ನು ದೃಢವಾಗಿ ವಿರೋಧಿಸಬೇಕು. ಬಿಜೆಪಿ ಸಂಸದ, ಶಾಸಕರಿಗೆ ಆಡಳಿತ ನಡೆಸುವ ಯಾವುದೇ ಅನುಭವ ಇಲ್ಲ ಎಂಬುದು ಈಗ ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತಾಯಿತು ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
60 ಕಿಲೋ ಮೀಟರ್ ವ್ಯಾಪ್ತಿಯಲ್ಲಿ 4 ಟೋಲ್ ಗೇಟ್ಗಳು ಇದ್ದು, ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಸುರತ್ಕಲ್ ಟೋಲ್ ಗೇಟ್ ನಡೆಯುತ್ತಿದೆ ಎಂದು ಹೋರಾಟ ಮಾಡಲಾಗಿತ್ತು. ಟೋಲ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಟೋಲ್ ಗೇಟ್ ತೆರವು ಮಾಡಬೇಕೆಂದು ಪ್ರತಿಭಟನೆ ನಡೆಸಿತ್ತು.
ಅಕ್ಟೋಬರ್ 28ರಿಂದ ಟೋಲ್‌ಗೇಟ್ ವಿರೋಧ ಸಮಿತಿ ಅಹೋರಾತ್ರಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿತ್ತು. ಟೋಲ್ ವಿರೋಧಿ ಹೋರಾಟ ಸಮಿತಿಯ ಸತತ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದಿದ್ದು ಟೋಲ್ ಗೇಟ್ನ್ನು ರದ್ದುಗೊಳಿಸಿತ್ತು.