ಸುರತ್ಕಲ್‌ ಟೋಲ್‌ಗೇಟ್‌ ತೆರವಿಗೆ ಮೂರು ದಿನದಲ್ಲಿ ಆದೇಶ: ಜಿಲ್ಲಾಧಿಕಾರಿ ಭರವಸೆ

ಮಂಗಳೂರು: ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುಚ್ಚಲು ಆಗ್ರಹಿಸಿ ನಡೆಯುತ್ತಿರುವ ಹಗಲು ರಾತ್ರಿ ಧರಣಿ ಒಂದು ತಿಂಗಳು ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಹಾಗೂ ಟೋಲ್‌ಗೇಟ್ ತೆರವು ಆದ್ಯಾದೇಶ ಹೊರಟು ಹತ್ತು ದಿನಗಳು ದಾಟಿದರೂ ಟೋಲ್ ಸಂಗ್ರಹ ಮುಂದುವರೆದಿದೆ.

ಈ ಹಿನ್ನೆಲೆಯಲ್ಲಿ ಜಾತ್ಯಾತೀತ ಪಕ್ಷಗಳ ಜಂಟಿ ವೇದಿಕೆಯ ನಿಯೋಗ ಜಿಲ್ಲಾಧಿಕಾರಿಗಳ ಭೇಟಿ ಮಾಡಿದೆ ಎಂದು ಜಾತ್ಯಾತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ ತಿಳಿಸಿದ್ದಾರೆ.

ಟೋಲ್‌ ಸ್ಥಗಿತಗೊಳಿಸದಿರುವ ಕುರಿತು ಜಂಟಿ ವೇದಿಕೆಯ ನಿಯೋಗ ದ‌ಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್‌ ಎಂ. ಆರ್‌. ಅವರೊಂದಿಗೆ ಚರ್ಚಿಸಿದೆ. ನಿಯೋಗದಲ್ಲಿ ಭಾಗವಹಿಸಿದ ನಾವೆಲ್ಲ ಬೇಡಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದೇವು. ಇನ್ನು ಮೂರರಿಂದ ನಾಲ್ಕು ದಿನಗಳಲ್ಲಿ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸುತ್ತೇವೆ. ಹೆದ್ದಾರಿ ಇಲಾಖೆಯ ದೆಹಲಿ ಕಚೇರಿಯಿಂದ ಅಂತಿಮ ಪತ್ರ ಬರುವುದಿದೆ. ಅಲ್ಲಿಯವರಗೆ ಸಹಕರಿಸುವಂತೆ ವಿನಂತಿಸಿಕೊಂಡಿದ್ದಾರೆ ಎಂದು ಕೆ. ಯಾದವ ಶೆಟ್ಟಿ ತಿಳಿಸಿದ್ದಾರೆ.

ನಿಯೋಗದಲ್ಲಿ ಹಿನ್ನೆಲೆಯಲ್ಲಿ ಜಾತ್ಯಾತೀತ ಪಕ್ಷಗಳ ಜಂಟಿ ವೇದಿಕೆ ಅಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ, ಸಿಪಿಐ(ಎಂ) ಜಿಲ್ಲಾ ಮುಖಂಡ ಸುನಿಲ್ ಕುಮಾರ್ ಬಜಾಲ್, ಕಾಂಗ್ರೆಸ್ ಪಕ್ಷದ ಶಾಲೆಟ್ ಪಿಂಟೊ, ರಾಜ್ಯ ರೈತ ಸಂಘದ ಓಸ್ವಾಲ್ಡ್ ಫರ್ನಾಂಡೀಸ್, ಸನ್ನಿ ಡಿಸೋಜ, ದಲಿತ ಸಂಘರ್ಷ ಸಮಿತಿ,  ಜೆಡಿಎಸ್ ನ ವಸಂತ ಪೂಜಾರಿ, ಎಂ ದೇವದಾಸ್ ಮತ್ತಿತರರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *