‘ಟಿಪ್ಪು ನಿಜಕನಸುಗಳುʼ ಪುಸ್ತಕ ಮಾರಾಟ, ವಿತರಣೆ ಮಾಡದಂತೆ ಬೆಂಗಳೂರು ನ್ಯಾಯಾಲಯ ತಡೆ!

ಬೆಂಗಳೂರು: ಟಿಪ್ಪು ಸುಲ್ತಾನ್ ಕುರಿತಾದ ʻಟಿಪ್ಪು ನಿಜಕನಸುಗಳುʼ ಪುಸ್ತಕವನ್ನು ವಿತರಣೆ ಮತ್ತು ಮಾರಾಟ ಮಾಡುವುದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ. ಪುಸ್ತಕದಲ್ಲಿ ಹಿಂದಿನ ಮೈಸೂರು ಸಾಮ್ರಾಜ್ಯದ ಆಡಳಿತದ ಬಗ್ಗೆ ತಪ್ಪು ಮಾಹಿತಿ ಇದೆ ಎಂದು ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲಾಗಿತ್ತು.

ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಅವರು ಬರೆದಿರುವ ‘ಟಿಪ್ಪು ನಿಜಕನಸುಗಳು’ ಎಂಬ ಪುಸ್ತಕ ಮಾರಾಟ ಮತ್ತು ಮೈಸೂರಿನಲ್ಲಿ ನಾಟಕ ಪ್ರದರ್ಶನವನ್ನು ತಾತ್ಕಾಲಿಕವಾಗಿ ಪ್ರತಿಬಂಧಿಸಬೇಕು ಎಂದು ಕೋರಿ ನ್ಯಾಯಾಲಯದಲ್ಲಿ ಮಧ್ಯಂತರ ಅರ್ಜಿಯನ್ನು ಸಲ್ಲಿಸಲಾಗಿತ್ತು. ಬೆಂಗಳೂರು ನಿವಾಸಿಯಾದ ಜಿಲ್ಲಾ ವಕ್ಫ್‌ ಮಂಡಳಿಯ ಮಾಜಿ ಅಧ್ಯಕ್ಷ ರಫಿವುಲ್ಲಾ ಬಿ ಎಸ್‌ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು 15ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಜೆ ಆರ್‌ ಮೆಂಡೋನ್ಸಾ ಅವರ ನೇತೃತ್ವದ ಪೀಠವು ವಿಚಾರಣೆಯನ್ನು ನಡೆಸಿತು.

ಡಿಸೆಂಬರ್ 3ರವರೆಗೆ ಪುಸ್ತಕವನ್ನು ಮಾರಾಟ ಮಾಡದಂತೆ ಲೇಖಕ, ಪ್ರಕಾಶಕ ಅಯೋಧ್ಯೆ ಪ್ರಕಾಶನ ಮತ್ತು ರಾಷ್ಟ್ರೋತ್ಥಾನ ಮುದ್ರಾಣಾಲಯಕ್ಕೆ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಆದರೆ, ‘ಈ ತಡೆಯಾಜ್ಞೆಯ ಆದೇಶವು ಪ್ರತಿವಾದಿಗಳು ಪುಸ್ತಕಗಳನ್ನು ತಮ್ಮದೇ ಜವಾಬ್ದಾರಿಯಲ್ಲಿ ಮುದ್ರಿಸಲು ಮತ್ತು ಈಗಾಗಲೇ ಮುದ್ರಿಸಿದ ಪುಸ್ತಕಗಳನ್ನು ಸಂಗ್ರಹಿಸಲು ಅಡ್ಡಿಯಾಗುವುದಿಲ್ಲ’ ಎಂದು ನ್ಯಾಯಾಲಯ ಹೇಳಿದೆ.

ನಾಟಕದಲ್ಲಿ ವ್ಯಕ್ತಪಡಿಸಿರುವ ವಿಚಾರಗಳು ತಪ್ಪಾಗಿದ್ದು, ಟಿಪ್ಪು ಸುಲ್ತಾನ್ ಬಗ್ಗೆ ತಪ್ಪು ಮಾಹಿತಿಗಳು ಒಳಗೊಂಡಿವೆ. ಇದನ್ನು ಹಂಚಿಕೆ ಮಾಡಿದರೆ, ಕೋಮು ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇದ್ದು, ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವ ಅಪಾಯವಿದೆ. ಪ್ರತಿವಾದಿಗಳು ನ್ಯಾಯಾಲಯದ ಮುಂದೆ ಹಾಜರಾಗಲು ಬಾಕಿ ಇರುವಾಗ ಒಂದೊಮ್ಮೆ ಪುಸ್ತಕ ಹಂಚಿಕೆ ಮಾಡಿದರೆ ಅರ್ಜಿಯ ಉದ್ದೇಶ ಸೋಲಲಿದೆ. ಸಾಮಾನ್ಯವಾಗಿ ವಿವಾದ ಸೃಷ್ಟಿಸಿದ ಪುಸ್ತಕಗಳು ಬಹುಬೇಗ ಮಾರಾಟವಾಗುತ್ತವೆ. ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಇತಿಹಾಸದಿಂದ ಯಾವುದೇ ಬೆಂಬಲ ಅಥವಾ ಸಮರ್ಥನೆ ಇಲ್ಲದೆ ಪುಸ್ತಕದಲ್ಲಿ ಟಿಪ್ಪುವಿನ ಬಗ್ಗೆ ತಪ್ಪು ಮಾಹಿತಿ ಇದೆ ಎಂದು ಬಿ.ಎಸ್.ರಫೀವುಲ್ಲಾ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪುಸ್ತಕದಲ್ಲಿ ಬಳಸಿರುವ ‘ತುರುಕರು’ ಎಂಬ ಪದವು ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಕೃತಿಕಾರರು ಮತ್ತು ನಾಟಕಕ್ಕೆ ಮುನ್ನುಡಿ ಬರೆದಿರುವ ಲೇಖಕರು, ಮುನ್ನುಡಿಯಲ್ಲಿ ನಾಟಕವು ಸತ್ಯ ಸಂಗತಿಗಳು ಹಾಗೂ ಕರಾರುವಾಕ್‌ ಇತಿಹಾಸವನ್ನು ಆಧರಿಸಿದೆ. ಸಂಶೋಧನೆಯನ್ನು ಆಧರಿಸಿ ನಾಟಕ ರಚಿಸಲಾಗಿದ್ದು, ಟಿಪ್ಪು ಸುಲ್ತಾನ್‌ ಬಗ್ಗೆ ಸತ್ಯ ಸಂಗತಿಯನ್ನು ಬಯಲು ಮಾಡಲು ಪುಸ್ತಕ ಪ್ರಕಟಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಇಡೀ ಪುಸ್ತಕ ತಪ್ಪಿನಿಂದ ಕೂಡಿದ್ದು, ಇತಿಹಾಸದ ಬೆಂಬಲ ಅಥವಾ ಸಮರ್ಥನೆ ಇಲ್ಲ. ಕೃತಿಕಾರರು ಎಲ್ಲಿಂದ ಮಾಹಿತಿ ಪಡೆದಿದ್ದಾರೆ ಎಂಬುದು ಪುಸ್ತಕದಲ್ಲಿ ಉಲ್ಲೇಖಿಸಿಲ್ಲ. ಇತಿಹಾಸವನ್ನು ಸರಿಯಾಗಿ ಅರಿಯದೇ, ವಾಸ್ತವಿಕ ವಿಚಾರಗಳನ್ನು ಸ್ವಯಂ ವ್ಯಾಖ್ಯಾನ ಮಾಡುವ ಮೂಲಕ ಪುಸ್ತಕ ಪ್ರಕಾಶನ ಮಾಡಲಾಗಿದೆ. ಮಾನಹಾನಿಕಾರಿಯಾದ ಪದ ಮತ್ತು ಅಭಿವ್ಯಕ್ತಿಯನ್ನು ಪುಸ್ತಕ ಒಳಗೊಂಡಿದ್ದು, ಇದು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ನಾಟಕ ಪ್ರದರ್ಶನವು ತಡೆ ನೀಡಲು ನಿರಾಕರಿಸಿರುವ ನ್ಯಾಯಾಲಯವು “ಈ ನ್ಯಾಯಾಲಯದ ವ್ಯಾಪ್ತಿಯಲ್ಲಿ ನಾಟಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂಬ ಆತಂಕವಿಲ್ಲ. ಹೀಗಾಗಿ, ಏಕಪಕ್ಷೀಯವಾಗಿ ನಾಟಕ ಪ್ರದರ್ಶನಕ್ಕೆ ಪ್ರತಿಬಂಧಕಾದೇಶ ಮಾಡಲಾಗದು” ಎಂದು ಆದೇಶದಲ್ಲಿ ಹೇಳಿದೆ.

ನ್ಯಾಯಾಲಯವು ಮೂವರು ಪ್ರತಿವಾದಿಗಳಿಗೆ ತುರ್ತು ನೋಟಿಸು ಜಾರಿ ಮಾಡಿ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ಮುಂದೂಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *